Friday, April 11, 2008

ಉಡಿ ತುಂಬುವ ಮತ್ತು ನಾಮಕರಣ ಸಂದರ್ಭದಲ್ಲಿನ ಜಾನಪದ ಗೀತೆಗಳು.- ಶ್ರೀಮತಿ. ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ.

ಹೆಣ್ಣಿಗೆ ತಾಯ್ತನ ಒಂದು ಮಹದಾನಂದ ನೀಡುವ ಜೀವನದ ಘಟ್ಟ. ಯಾವದೇ ಸ್ತ್ರೀಯು ತಾನು ತಾಯಾಗಲಿರುವ ಸುದ್ದಿ ತಿಳಿದಾಗ ಮೊತ್ತ ಮೊದಲನೆಯದಾಗಿ ಈ ವಿಷಯವನ್ನು ತನ್ನ ಪತಿಯೊಂದಿಗೆ ಹಂಚಿಕೊಳ್ಳುತ್ತಾಳೆ. ದಂಪತಿಗಳಿಬ್ಬರಿಗೆ ತಾವು ತಂದೆ-ತಾಯಿಗಳಾಗುವ ವಿಷಯ ತಿಳಿದಾಗ ಅವರ ಆನಂದಕ್ಕೆ ಪಾರವೇ ಇರುವದಿಲ್ಲ.

ವಿಷಯ ತಿಳಿದ ಅವಳ ತಾಯಿ, ಮನೆ ಮಟ್ಟಕ್ಕೆ ಸೀಮಿತವಿರುವ ಕಳ್ಳ ಕುಬುಸ ಅಥವಾ ಸಂಕ್ಷಿಪ್ತ ಸೀಮಂತವನ್ನು ಮಾಡಿ ಸುಖಕರ ಹೆರಿಗೆಗೆ ಆಶೀರ್ವದಿಸುತ್ತಾಳೆ. ಆಮೇಲೆ ಈ ವಿಷಯವನ್ನು ಅಧಿಕೃತವಾಗಿ ಬೇರೆಯವರಿಗೆ ತಿಳಿಸಲಾಗುತ್ತದೆ. ಬಂಧುವರ್ಗದವರು, ಸ್ನೇಹಿತರು, ಆಪ್ತರು, ಹಿತೈಷಿಗಳು ದಂಪತಿಗಳಿಬ್ಬರಿಗೆ ಶುಭ ಹಾರೈಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ನಮ್ಮ ಮನೆಗಳಲ್ಲಾಗುವ ಶುಭ ಸಮಾರಂಭಗಳಿಗೆ ಬಂಧುಮಿತ್ರರನ್ನು ಕರೆಸಿ ಊಟ ಹಾಕಿಸಿ ಸುಖ ಹಂಚಿಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ನಮ್ಮ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಜಾನಪದ ಗೀತೆಗಳ ಕೆಲವು ಸ್ಯಾಂಪಲ್ಲುಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ಉಡಿ ತುಂಬುವ ಹಾಡು - ೧
ಒಂದೆಂಬು ತಿಂಗಳಿಗೆ ಒಂದೇನ ಬಯಸ್ಯಾಳ
ಒಂದೆಲೆ ವರದ ಎಳೆಹುಂಚಿ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೧

ಎರಡೆಂಬು ತಿಂಗಳಿಗೆ ಎರಡೇನ ಬಯಸ್ಯಾಳ
ಎರಡೆಲೆ ವರದ ಎಳೆಹುಣಸೆ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೨

ಮೂರೆಂಬು ತಿಂಗಳಿಗೆ ಮೂರೇನ ಬಯಸ್ಯಾಳ
ಮೂಡಲ ದಿಕ್ಕಿನ ಮಗಿಮಾವ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೩

ನಾಕೆಂಬು ತಿಂಗಳಿಗೆ ನಾಕೇನ ಬಯಸ್ಯಾಳ
ಕಾಕಿಯ ಹಣ್ಣು ಕೈತುಂಬ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೪

ಐದೆಂಬು ತಿಂಗಳಿಗೆ ಐದೇನ ಬಯಸ್ಯಾಳ
ಕೊಯ್ದ ಮಲ್ಲಿಗೆ ನೆನೆದಂಡೆ
ಕಟ್ಟೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೫

ಆರೆಂಬು ತಿಂಗಳಿಗೆ ಆರೇನ ಬಯಸ್ಯಾಳ
ಆರಾಕಿದ ಬಾನ ಕೆನಿಮಸರ
ಉಂಡೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೬

ಏಳೆಂಬು ತಿಂಗಳಿಗೆ ಏಳೇನ ಬಯಸ್ಯಾಳ
ಹಲಸಿನ ಹೋಳಿಗಿ ಗೆಣಸಿನ ಹೋಳಿಗಿ ಹೂರಣದ ಹೋಳಿಗಿ ಸಜ್ಜಕದ ಹೋಳಿಗಿ
ಇಷ್ಟು ದೀನಸ ಮಾಡಿ ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೭

ಎಂಟೆಂಬು ತಿಂಗಳಿಗೆ ಎಂಟೇನ ಬಯಸ್ಯಾಳ
ಕಂಟೆಲೆ ಎತ್ತ ಕರೆಬರಲಿ ಅಣ್ಣಯ್ಯ
ಹತ್ತೇನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೮

ಒಂಬತ್ತು ತಿಂಗಳಿಗೆ ತುಂಬ್ಯಾವ ದಿನಗೋಳ
ಸಂದಸಂದೆಲ್ಲಾ ಕಿರಿಬ್ಯಾನಿ
ಬಯಸೆನೆಂಬುವಳ ಗಂಡ ಮಗನ ಹಡದೆನೆಂಬುವಳ ೯
- o -

ಉಡಿ ತುಂಬುವ ಹಾಡು - ೨
ಬಾಳಿಕಾಯಿ ಬಾಳಫಲವ
ಜೋಡ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೧

ಲಿಂಬಿ ಹಣ್ಣು ರಂಭೆ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೨

ತೆಂಗಿನಕಾಯಿ ತೆಂಗ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೩

ಉತ್ತತ್ತಿ ಹಣ್ಣು ಮೈತ್ರಿ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೪

ಅತ್ತಿ ಹಣ್ಣು ಅತ್ತ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೫

- o -
-
ಉಡಿ ತುಂಬುವ ಹಾಡು - ೩
ಬಾಳಿಕಾಯ್ಗಳ ತಂದು ಬಾಲ್ಯಾರ ಉಡಿಗಳ ತುಂಬಿ
ಬಾಲಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೧

ಲಿಂಬಿಕಾಯ್ಗಳ ತಂದು ರಂಬ್ಯಾರ ಉಡಿಗಳ ತುಂಬಿ
ರಂಬಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೨

ಉತ್ತತ್ತಿಕಾಯ್ಗಳ ತಂದು ಉತ್ತ್ಯಾರ ಉಡಿಗಳ ತುಂಬಿ
ಉತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೩

ತೆಂಗಿನಕಾಯ್ಗಳ ತಂದು ತಂಗ್ಯಾರ ಉಡಿಗಳ ತುಂಬಿ
ತಂಗಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೪

ಅತ್ತಿಕಾಯ್ಗಳ ತಂದು ಅತ್ತ್ಯಾರ ಉಡಿಗಳ ತುಂಬಿ
ಅತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫

ಆಲ ಸಮುದರ ದಾಟಿ ಕೀಲ ಸಮುದರ ದಾಟಿ ಎಲ್ಲಾ ಸಮುದರ ದಾಟಿ ನಿನ್ನ ತಂದೇವ ಸೀತಾ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫

ಆನೀಲೆ ಹೊನ್ನ ತರುವೆ ಒಂಟೀಲೆ ಜವಳಿ ತರುವೆ
ಬಂದ ಬೀಗರನೆಲ್ಲಾ ಸಿಂಗರಿಸಿ ನಾ ಕಳುವೆ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೬
-೦-
ಹೀಗೆ ಸೀಮಂತದ ಸಂಭ್ರಮ ಆಚರಿಸಿಕೊಂಡ ಮುತ್ತೈದೆ ಮುಂದೊಂದು ದಿನ ಮುದ್ದಾದ ಮಗುವಿಗೆ ಜನ್ಮ ನೀಡುತ್ತಾಳೆ.
ಮನೆಗೆ ಆಗಮಿಸಿದ ಹೊಸ ಅತಿಥಿಗೆ ಅಧಿಕೃತವಾಗಿ ಬರಮಾಡಿಕೊಳ್ಳುವದು ಆ ಮಗುವಿಗೆ ನಾಮಕರಣ ಮಾಡುವದರಿಂದ. ಇಂಥ ಸಂದರ್ಭದಲ್ಲೂ ನಮ್ಮಲ್ಲಿ ಅನೇಕ ಜಾನಪದ ಗೀತೆಗಳು ಬಳಕೆಯಲ್ಲಿವೆ.

ನಾಮಕರಣ ಸಂದರ್ಭದ ಹಾಡು
ಅಟ್ಟದ ಮ್ಯಾಲಿನ ತೊಟ್ಟಿಲ ತಗೊಂಡು
ಸೀರೆ ಸೆರಗಿಲೆ ಧೂಳಾ ಝಾಡಿಸಿ ಜೋ ಜೋ

ಅದಕ ಬೆಚ್ಚನ್ನ ಬಿಸಿನೀರ ಹೊಯ್ದಾಡಿ ತೊಳದ ಜೋ ಜೋ
ಗುಲಾಬಿ ಸಂಪಿಗಿ ಮಲ್ಲಿಗಿ ಜಾಜಿ ಹೂವ ತಂದ ಜೋ ಜೋ
ತೊಟ್ಟಿಲಾ ಶೃಂಗಾರ ಮಾಡಿರೆ ಜೋ ಜೋ
ಬಂಗಾರದ ತೊಟ್ಟಿಲ ಬೆಳ್ಳಿ ಸರಪಳಿಲೆ ತೂಗಿರೆ ಜೋ ಜೋ

ಹಾರೂರಗೇರ್‍ಯಾಗ ಹಾದ ಬಂದೆನವ್ವ
ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ

ಒಕ್ಕಲುಗೇರ್‍ಯಾಗ ಹೊಕ್ಕಬಂದೆನವ್ವ
ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ

ಅವರ ದೊಡ್ಡಪ್ಪನ ಕರೀರೆ ದೊರಕಿನ ಚೆಲುವರನ ಜೋ ಜೋ
ಅವರ ಹಡದಪ್ಪನ ಕರೀರೆ ಹಾರೂರಂತವನ ಜೋ ಜೋ

ಅವರ ಸೊದರತ್ತಿನ ಕರೀರೆ ಸೊಬಗಿನಗಿತ್ತಿಯನ ಜೋ ಜೋ
ಆಕಿ ಇನ್ನ ಕೂಗ್ಯಾಡಿ ಹೆಸರ ಇಡತಾಳ ಜೊ ಜೋ

ಬಟ್ಟಲ ಶ್ರೀಗಂಧ
ತೇಯ್ದ ಬಟ್ಟಲ ತುಂಬಿ
ಬೇಕ ಬೇಕ ಅಂತ ಹಚ್ಚಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಕೊಂಚಿಗಿ ಕುಲಾವಿ
ಗೊಂಚಲ ಬಿಳಿಮುತ್ತ
ಬೇಕ ಬೇಕ ಅಂತ ಕಟ್ಟಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಹಸರಂಗಿ ಹಾಲ್ಗಡಗ
ಕುಶಲದ ನಾಗಮುರಗಿ
ಬೇಕ ಬೇಕ ಅಂತ ಇಡಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಪರಡಿ ಪಾಯಸ ಮಾಡಿ
ಬಳದ ಬಟ್ಟಲ ತುಂಬಿ
ಬೇಕ ಬೇಕ ಅಂತ ಉಣಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ನೀರಾಗ ನೆರಳಾಗಿ
ಸೂರ್ಯ ಚಂದ್ರಮ ನೋಡಿ
ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ
ಶ್ರೀಕೃಷ್ಣ ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ
- 0-

ಈ ರೀತಿಯಾಗಿ ನಮ್ಮಲ್ಲಿ ಪ್ರತಿಯೊಂದು ಸಂದರ್ಭಕ್ಕೂ ಹೊಂದುವಂತಿರುವ ಜಾನಪದ ಗೀತೆಗಳನ್ನು ಬಳಸಿ ಬೆಳೆಸಿ ಉಳಿಸಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಟಿ ಪಿ ಬಳಗದ ಎಲ್ಲ ಸದಸ್ಯರಿಗೆ ಮತ್ತು ಅವರ ಮನೆಯವರೆಲ್ಲರಿಗೂ ನನ್ನ ಶುಭಾಶಯಗಳು.

No comments: