Monday, April 07, 2008

ಬೀಸೂಕಲ್ಲಿನ ಪದಗಳು - ಶ್ರೀಮತಿ. ಶಾಂತಾ ಸಿ ರಾಜಗೋಳಿ. ಧಾರವಾಡ

ನನ್ನ ಅತ್ತೆಯವರು ದೇವರ ನೈವೇದ್ಯಕ್ಕೆ ಮಡಿಯಿಂದ ತಯಾರಿಸುತ್ತಿದ್ದ ಅಡುಗೆಗಳಿಗೆ ಸ್ವತಃ ಧಾನ್ಯಗಳನ್ನು ಬೀಸುತ್ತಿದ್ದಾಗ ಹೇಳುತ್ತಿದ್ದ ಕೆಲವು ಹಾಡುಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅವರ ಮೊಮ್ಮಗ ಪ್ರಕಾಶನ ಕುರಿತಾಗಿ ಅವರು ಬಹಳಷ್ಟು ಹಾಡುತ್ತಿದ್ದರು.

ಮಾಡಿಲ್ಲ ಮಳಿಯಿಲ್ಲ ಮ್ಯಾಗ ಗದ್ದಿನಿಲ್ಲ
ಮಾಳಗಿಮ್ಯಾಲ ಮಡನಿಂತು
ಮಾಳಗಿಮ್ಯಾಲ ಮಡನಿಂತು ನನ ಪರಕಾಶಿ
ನೀ ಓದಬಲ್ಲವ ನೀ ಒಡದೇಳೋ.......
(ಮಾಡಿಲ್ಲ-ಮೋಡವಿಲ್ಲ, ಗದ್ದಿನಿಲ್ಲ-ಗುಡುಗು)

ಸರಕಾರ ಅನ್ನೋದು ದರಕಾರ ನನಗಿಲ್ಲ
ಬರಕೊಳ್ಳೊ ಪರಕಾಶಿ ಮನಿಯಾಗ
ಬರಕೊಳ್ಳೊ ಪರಕಾಶಿ ಮನಿಯಾಗ ಇದ್ದಾಗ
ಸರಕಾರದ ಅಂಜಿಕಿ ನನಗಿಲ್ಲಾ.....
(ದರಕಾರ-ಹೆದರಿಕೆ, ಬರಕೊಳ್ಳೊ-ಓದಿದ, ಪರಕಾಶಿ -ಪ್ರಕಾಶ)

ಅವರ್‍ಯಾರ ಇವರ್‍ಯಾರ ಅವರಿಗೊಂಚಲದವರ
ಅವರ ನಮ್ಮವ್ವನ ತವರವರ
ಅವರ ನಮ್ಮವ್ವನ ತವರವರ ಬಂದರ
ಹಾಲಿನ್ಯಾಗ ಹಸ್ತ ತೊಳಿಸೇನ....

ಅವರೀ ಹೂವಿನಂಗ ಅವರ ಬಾಳ ಚಲುವರ
ಅವರವ್ವ ನಮ್ಮನಿಗೆ ಕಳವಳ್ಳ
ಅವರವ್ವ ನಮ್ಮನಿಗೆ ಕಳವಳ್ಳ ಅವರಿಲ್ದೆ
ಮಾಗಿಯ ಹೊತ್ತ ನಾ ಹ್ಯಾಂಗ ಕಳೀಯಲೆ...
(ಕಳವಳ್ಳ-ಕಳಿಸ್ತಾ ಇಲ್ಲ)

ಅತ್ತಿಗಿ ಅಣ್ಣನ ಮಡದಿ ಸಿಟ್ಟ ತಾಳವಳಲ್ಲ
ಅಕ್ಕತಪ್ಪಿ ನನ್ನ ಬೇದಾಳ
ಅಕ್ಕತಪ್ಪಿ ನನ್ನ ಬೇದಾಳ ನನ ಪರಕಾಶಿ
ತಪ್ಪಂದ ನನ್ನ ಕಾಲ ಹಿಡಿಸ್ಯಾನ....
(ಅಕ್ಕತಪ್ಪಿ-ಬೈ ಚಾನ್ಸ್, )

ಮಳಿಯ ಬಂದರ ನಾ ಮರದಹನಿಗೆ ನಿಂತೇನ
ಮಳಿಬಿಟ್ಟರೂ ಬಿಡದ ಮರದ ಹನಿ
ಮಳಿಬಿಟ್ಟರೂ ಬಿಡದ ಮರದ ಹನಿ ನನ್ನ ಹಡದವ್ವ
ನಾ ಬಿಟ್ಟರ ಬಿಡದ ನಿನ ಮನವ.....

ಅಂಜಬ್ಯಾಡ ಮನವ ಆನೀಯ ಬಲವೈತಿ
ಹಿಂದ ಗರ್ಜಿಸುವ ಹುಲಿ ಐತಿ
ಹಿಂದ ಗರ್ಜಿಸುವ ಹುಲಿ ಐತಿ ನನ ಪರಕಾಶಿ
ಸರಜಾ ನಿನಬಲವ ನನಗೈತಿ.....
(ಸರಜಾ-ಒಳ್ಳೆಯ ಗುಣದವ)

ಆಕಳ ಕರಬಿಟ್ಟ ನಾಕಮೂಲಿಗೆ ನಿಂತ
ಯಾಕ ಗೋಪೆವ್ವ ನೀ ತೊರಿವಲ್ಲಿ
ಯಾಕ ಗೋಪೆವ್ವ ನೀ ತೊರಿವಲ್ಲಿ ನನಕಂದ
ಆಡಿಬಂದ ಮಗ ಹಸದಾನ....


ಬೀಸೂಕಲ್ಲು : ಬೀಸುವ ಕಲ್ಲು- ಹಳ್ಳಿಗಳಲ್ಲಿ ಹಿಟ್ಟಿನ ಗಿರಣಿಗಳು ಬರುವ ಮೊದಲು, ಧಾನ್ಯಗಳನ್ನು ಬೀಸಲು ಉಪಯೋಗಿಸುತ್ತಿದ್ದ ಎರಡು ವೃತ್ತಾಕಾರದ ಚಪ್ಪಟೆ ಕಲ್ಲುಗಳಿಂದ ಮಾಡಿದ ಒಂದು ಸಾಧನ. ಈಗಲೂ ಹಳ್ಳಿಗಳಲ್ಲಿ ಈ ಬೀಸುವ ಕಲ್ಲನ್ನು ಮನೆ-ಮನೆಗಳಲ್ಲಿ ಕಾಣಬಹುದು.

No comments: