Monday, April 07, 2008

ಆರೋಗ್ಯ ಭಾಗ್ಯದ ಪ್ರಾಧಾನ್ಯತೆ - ಶ್ರೀನಿವಾಸ. ಆರ್. ಗುಡಿ. ವರ್ಜಿನಿಯಾ, ಯು.ಎಸ್.ಏ.

ಆರೋಗ್ಯವೇ ಭಾಗ್ಯ ಅಂತಾ ಯಾರಿಗೆ ತಾನೇ ಗೊತ್ತಿಲ್ಲ. ಆಂಗ್ಲ ಭಾಷೆಯಲ್ಲೂ ಅಂತಾರಲ್ಲ "Health is Wealth" ಅಂತ.
ಇಲ್ಲಿ ನಾನು ಪ್ರಸ್ತುತಪಡಿಸುತ್ತಿರುವ ವಿಚಾರಗಳು ಎಲ್ಲರಿಗೂ ತಿಳಿದಂತ ವಿಚಾರಗಳೇ. ಸಾಮಾನ್ಯವಾಗಿ ನಾವು ಈ ರೀತಿಯ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಹೀಗಾಗಿ ಯಾರು ಎಷ್ಟರಮಟ್ಟಿಗೆ ಆರೋಗ್ಯ-ಪ್ರಜ್ಞೆ ಹೊಂದಿದ್ದಾರೆ ಎಂಬುದು ತಿಳಿಯದ ವಿಷಯ. ಇರುವ ಅಲ್ಪ-ಸ್ವಲ್ಪ ಸಂಪರ್ಕ-ವಿನಿಮಯವನ್ನು ಅವಲೋಕಿಸಿದರೆ, ನನ್ನನ್ನು ಹಿಡಿದುಕೊಂಡು, ಬಹಳ ಜನರಿಗೆ ಇರತಕ್ಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಆದರೆ ನನ್ನಂತೆ ಯಾರಿಗೂ ಈ ತರದ ವಿಷಯಗಳತ್ತ ಗಮನಹರಿಸಲು ಸಮಯವೇ ಇಲ್ಲ! ಹೋಗಲಿ ಇಂದು ಗಮನ ಹರಿಸಿಯೇ ಬಿಡೋಣ ಅಂತ ಶುರು-ಹಚ್ಚಿಕೊಂಡ ಒಂದು ಚಿಂತನೆಯೇ ಈ ಲೇಖನ..!

ಇವತ್ತು ಆರೋಗ್ಯವೇ ಭಾಗ್ಯ ಅಂತ ಗೊತ್ತಿದ್ದರೂ ಕೂಡ ನಾವು ಅದನ್ನ ಸ್ವಲ್ಪ "ಲೈಟ್" ಆಗಿ ತೊಗೊತೆವಿ. ಎಲ್ಲವೂ ಸರಿ ನಡೆದಾಗ, ನಮ್ಮ ಆರೋಗ್ಯಕ್ಕೆನು ಆಗುತ್ತದೆ ಎಂಬ ಒಂದು ಹುಂಬ ಅಹಂಭಾವ ಮತ್ತು ಅಲಕ್ಷದ ಧೋರಣೆ. ನಮಗೆ ಈ ‘ಕೊನೆಯ ಆದ್ಯತೆ' ಆರೋಗ್ಯದ ಕಡೆ ಕಾಳಜಿ ಉಕ್ಕುವದು ಅನಾರೋಗ್ಯದಿಂದ ತೀರ ತೊಂದರೆಯಾಗಿ ಇನ್ನೇನು ಆಫೀಸಿಗೆ ಹೋಗಲಿಕ್ಕೆ ಆಗದು ಅಂದಾಗ ಮಾತ್ರ. ಕೆಟ್ಟಾಗ ಮಾತ್ರ ನೆನಪಾಗುವ ಆರೋಗ್ಯ, ಅದು ಕೆಡದಂತೆ ಕಾಪಾಡುವ ಯೋಚನೆಗಳು, ಯೋಜನೆಗಳು ನಮ್ಮ ತಲೆಯೊಳಗೆ ಬರುವದೇ ಇಲ್ಲ. ನಮ್ಮಲ್ಲಿ ಎಷ್ಟೋ ಜನರಿಗೆ ಆರೋಗ್ಯದ ಕಡೆ ತಲೆ ಕೆಡಸಿಕೊಳ್ಳದಿರುವದು, ವೈದ್ಯರು/ಆಸ್ಪತ್ರೆಗಳಿಗೆ ಭೇಟಿ ಕೊಡದೆ ಇರುವದು ಒಂದು ಹೆಮ್ಮೆಯ ವಿಷಯ! ಈ ‘ಆರೋಗ್ಯ-ಭಾಗ್ಯ' ವನ್ನು ನಾವು ಲೈಟ್ ಆಗಿ ತೆಗೆದುಕೊಂಡು ಅಲಕ್ಷ್ಯ ಮಾಡಿರುವದಾದರೂ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕಲು ನಮ್ಮ ಗಡಿಬಿಡಿಯ ಬದುಕಿನತ್ತ ಒಂದು ಇಣುಕು-ನೋಟ ಹಾಕಿ ಮತ್ತು ಇದಕ್ಕೆ ಏನಾದರೂ ಪರಿಹಾರ ಉಂಟೇ ಅಂತ ಹುಡುಕುವ ಒಂದು ಪ್ರಯತ್ನವನ್ನ ಮಾಡೋಣವೆ?
ಧನ್ಯವಾದಗಳು ಇಂದಿನ ಸ್ಪರ್ಧಾತ್ಮಕ ಮಾಹಿತಿ ತಂತ್ರಜ್ಞಾನ ಉದ್ದಿಮೆ ವಿಕಾಸಕ್ಕೆ, ಇವತ್ತು ನಮ್ಮ ಜೀವನಶೈಲಿ ಹೆಚ್ಚು-ಕಡಿಮೆ ನಮ್ಮ ಉದ್ಯೋಗ-ಶೈಲಿಯಿಂದ ನಿರ್ದೇಶಿಸಲ್ಪಡುತ್ತದೆ. ಈಗ ನಮ್ಮ ಪೀಳಿಗೆ ಮಾಡುವಷ್ಟು ಕೆಲಸ ಭಾರತದ ಇತಿಹಾಸದಲ್ಲಿ ಯಾವ ಪೀಳಿಗೆಯವರೂ ಮಾಡಿರಲಿಕ್ಕಿಲ್ಲ. ಬ್ರಿಟಿಷರು ನಮ್ಮನ್ನು ಆಳಿದಾಗ ಕೂಡ, ಇಷ್ಟು ದುಡಿದಿರಲಿಕ್ಕಿಲ್ಲ ಜನ! ಕೆಲಸದ ಅತಿ-ಹಾವಳಿಯಿಂದ ಜನರಿಗೆ ಸಾಮಾನ್ಯ ಕಾರ್ಯ-ಕೆಲಸಗಳಿಗೆ ಸಮಯ-ಸಂಯಮ ಇಲ್ಲವಾಗಿವೆ. ಎಷ್ಟು ಹೊತ್ತಿಗೆ ತಿನ್ನಬೇಕು, ಎಷ್ಟು ಗಂಟೆಗೆ ಮಲಗಬೇಕು/ಮಲಗಬಾರದು, ಸಿನಿಮಾ/ನಾಟಕಕ್ಕೆ ಹೊಗಬೇಕ/ಬೇಡವಾ, ವೈದ್ಯರ ಹತ್ತಿರ ಚೆಕ್-ಅಪ್‌ಗೆ ಹೊಗಬೇಕಾ/ಬೇಡವಾ , ಇನ್ನು ಅನೇಕ ಸಣ್ಣ-ಪುಟ್ಟ ವಿಷಯಗಳು ನಮ್ಮ ಉದ್ಯೋಗದಲ್ಲಿನ ಗಡಿಬಿಡಿ/ಪುರುಸೊತ್ತು, ಕಾರ್ಯದ ಒತ್ತಡಗಳನ್ನು ಅವಲಂಬಿಸಿರತಕ್ಕ ಅಂಶಗಳು. 'ಅಲೆಮಾರಿ-ಕನ್ಸಲ್ಟಂಟ್'ಗಳಾದರಂತು ಕೇಳುವದೇ ಬೇಡ, ತುರಿಸಿಕೊಳ್ಳುವದಕ್ಕು ಪುರುಸೊತ್ತು ಇರುವದಿಲ್ಲ! ಊರಿನಿಂದ-ಊರಿಗೆ, ಬೇರೆ ದೇಶ/ರಾಜ್ಯಗಳಿಗೆ ಪ್ರಯಾಣಿಸುತ್ತ ಉದ್ಯೋಗ, ವೈಯಕ್ತಿಕ, ಸಂಸಾರಿಕ ಮತ್ತು ಸಾಮಾಜಿಕ ಜೀವನ ಸಂಭಾಳಿಸುವ ಅವರ ಕಲಾತ್ಮಕ ಬದುಕಿನಲ್ಲಿ ಯಾವುದಕ್ಕೆ ಸಮಯ ಸಿಗುವದು/ಸಿಗದಿರುವದು ಎಂಬುದು ಬಹಳ ಸಂಕೀರ್ಣ ವಿಷಯ.


ಇಲ್ಲಿ ನಾನು ಕೊಡುತ್ತಿರುವ ವಿವರಣೆ ಸಾಮಾನ್ಯವಾಗಿ ಇಂದು ನಮ್ಮ I.T. ಉದ್ಯೋಗಗಳಲ್ಲಿ ಕಂಡುಬರತಕ್ಕ ಸನ್ನಿವೇಶ.
ಕೆಲವು ಸುಖ-ಪುರುಷರಿಗೆ/ಮಹಿಳೆಯರಿಗೆ ಇದು ಉತ್ಪ್ರೇಕ್ಷೆ ಅನಿಸಬಹುದು, ಅವರಿಗೆ ಎಲ್ಲ ಅಂಶಗಳು ಅನ್ವಯವಾಗಲಿಕ್ಕಿಲ್ಲ.
ಬೆಳಿಗ್ಗೆ ಬೇಗನೆ ಎದ್ದು ತಯಾರಾಗಿ, ಟ್ರಿಮ್ಮಾಗಿ ಹೊರಟರೂ, ರಸ್ತೆಯ ಮೇಲಿನ ವಿಶೇಷ ಮಮತೆಯಿಂದ, ದಿನದ ಒಂದಂಶ ರಸ್ತೆಯಲ್ಲೆ ಕಳೆದು, ಟ್ರಾಫ಼ಿಕ್ಕಿನ ಚಕ್ರವ್ಯೂಹವ ಭೇದಿಸಿ, ಆಫೀಸಿಗೆ ಆಗಮಿಸುವದರಲ್ಲಿ ಸುಸ್ತೋ-ಸುಸ್ತು! ಈ ‘ಕಮ್ಯೂಟ್'ನಲ್ಲಿ ಎಷ್ಟೋ ಜನ ತಮ್ಮ ಆಯುಷ್ಯದ ಮುಖ್ಯ ಭಾಗ ಸವೆಸುತ್ತಾರೆ ಅಂದರೆ ಅತಿಶಯೋಕ್ತಿ ಏನಲ್ಲ! ಈ ‘ಕಮ್ಯೂಟ್' ನಲ್ಲಿ, ಕೆಲವೊಂದು ವಾಹನ-ಭರಿತ ನಗರಗಳಲ್ಲಿ, ಮೂಗು/ಗಂಟಲು/ಶ್ವಾಸಕೋಶ/ಹೃದಯಗಳಿಗೆ ವಾಹನಗಳು ಥೂಕರಿಸುವ ಇಂಗಾಲದ ಡೈಯಾಕ್ಸೈಡ್ ಮತ್ತಿತರ ವಿಷಾನಿಲಗಳ ಯಥೇಚ್ಚ ಪೂರೈಕೆ! ಅಷ್ಟು ವಿಷವುಂಡ "ನಂಜುಂಡ" ಗಂಟಲನ್ನು ಕೆರಸುತ್ತ/ಕೆಮ್ಮುತ್ತ, ಸಾಯಂಕಾಲ/ರಾತ್ರಿಯವರೆಗೆ ಆಫೀಸಿನಲಿ ಗಣಕ-ಯಂತ್ರದ ಮುಂದೆ ತಪಸ್ಸು ಮಾಡಿದ್ದೇ ಮಾಡಿದ್ದು! ಸಾಲದೆ ಮನೆಗೆ ಬಂದು ಅದೇ ಗಣಕ-ಯಂತ್ರದ ಆರಾಧನೆ! ಇದೂ ಸಾಲದ್ದಕ್ಕೆ ನೂರೆಂಟು ಮೀಟಿಂಗ್‌ಗಳು, ಕಾನ್ಫರನ್ಸ್ ಕಾಲ್‌ಗಳು, ಕಾಡುವ ಪ್ರೊಡಕ್ಷನ್ ಸಮಸ್ಯೆಗಳು, ಮಜಾ ಮಾಡಬೇಕಾದ ರಜೆ ದಿನವು ಕೆಲಸದ ಸಜೆ! ಹೀಗೆ ಯಂತ್ರದ ಜೊತೆ ಕೆಲಸ ಮಾಡುತ್ತ ನಾವು ಯಂತ್ರಗಳಾಗುತ್ತಿರುವದನ್ನ ನಮ್ಮ ಪರಿವಾರದವರು ಆಕ್ಷೇಪಣೆ ಮಾಡಿದರೆ, ನಮಗೆ ಎಲ್ಲಿಲ್ಲದ ಕೋಪ!


ಅತ್ತ ಆಫೀಸಿನಲ್ಲಿ ಮೇಲಧಿಕಾರಿ ಅರ್ಥ ಮಾಡಿಕೊಳ್ಳಲಾರ, ಇತ್ತ ಮನೆಯವರು ಅಂಡರ್‌ಸ್ಟ್ಯಾಂಡಿಂಗ್ ಮಾಡಿಕೊಳ್ಳೊದಿಲ್ಲ ಎಂದು ದುಮುಗುಡುವಿಕೆ. ಆದೇ ತಾಪದ-ಲೂಪಿನಲಿ ಶಾಪ ಹಾಕುತ್ತ, ಮತ್ತದೇ ಕೀ-ಬೋರ್ಡ್ ಒತ್ತಿದ್ದೇ ಬಂತು, ಮತ್ತದೆ ಮಾನಿಟರನ್ನ ಕಣ್ಣು ಕೆಕ್ಕರಿಸಿ ದುರುಗುಟ್ಟಿ ನೋಡಿದ್ದೇ ಬಂತು. ಆ ಯಂತ್ರ ಕ್ಯಾಕರಿಸಿ ಉಗಳುವ ವಿಷಕಾರಿ ಎಲೆಕ್ಟ್ರೊ-ಮ್ಯಾಗ್ನೆಟಿಕ್ ತರಂಗಗಳೇ ನಮಗೆ ಪ್ರೀತಿಯ ಪ್ರಸಾದ! ಈ ಮಧ್ಯ ಕೆಲಸದದಲ್ಲಿ ಮೈಮರೆತು, ಕೈ-ಕಾಲು ಮತ್ತಿತರ ಎಲ್ಲ ಅಂಗಾಂಗಗಳಿಗೂ ವಿಪರೀತ ರೆಸ್ಟ್ ಕೊಟ್ಟು, ಏಸಿ ರೂಮ್ನಲ್ಲಿ ಬೆವರು ಬರದಂತೆ, ಬಂದ ಬೆವರೂ ಇಂಗಿ ಹೋಗುವಂತೆ ಕುರ್ಚಿಯಲ್ಲಿ ಕುಕ್ಕರಿಸಿ ಬಿಡುತ್ತೇವೆ.
ನಮ್ಮ ‘ಕುರ್ಚಿ-ಪ್ರೀತಿ' ರಾಜಕಾರಣಿಗಿಂತ ಮಿಗಿಲಾದದ್ದು! ಸುಮ್ಮನೆ ಏಕೆ ದೇಹಕ್ಕೆ ತೊಂದರೆ ಅಂತ ಕಾಳಜಿಯಿಂದನೊ
ಅಥವಾ ನಮ್ಮ ‘ತಾಂತ್ರಿಕ' ಬುದ್ಧಿಯ ‘ತಾಂತ್ರಿಕ ದೋಷ'ವೊ, ಒಟ್ಟಿನಲ್ಲಿ ನಾವು ಕುರ್ಚಿ ಬಿಟ್ಟು ಏಳುವದಿಲ್ಲ! ಇಷ್ಟೊಂದು ಐಷಾರಾಮಿ ಆದರೆ ಕೇಳಬೇಕೆ, ‘ಬೊಜ್ಜು' ಎಂಬ ‘ಕರೆಯದ ಅತಿಥಿ' ಬಂದು ಠಿಕಾಣಿ ಹೂಡುತ್ತಾರೆ! ಶ್ರೀಮಾನ್ ‘ಬೊಜ್ಜು' ಒಬ್ಬರೇ ಬರದೆ ಇನ್ನು ಬೇಡದ ಅತಿಥಿಗಳಾದ ‘ಜಡ', ‘ಆಲಸ್ಯ', ‘ರೋಗ-ರುಜಿನ' ಗಳನ್ನೂ ಸಹ ಗುಪ್ತವಾಗಿ ಕರೆತರುತ್ತಾರೆ.
ಇನ್ನು ಸ್ವಲ್ಪ ಔದ್ಯೋಗಿಕ-ಜೀವನ ಮರೆತು ನಮ್ಮ ವೈಯಕ್ತಿಕ-ಜೀವನದತ್ತ ನೋಡಿದರೆ, ಅತಿ-ಪ್ರಿಯವಾದ "ಹರೆಯವು" ನಮಗೆ ಹೇಳದೆ-ಕೇಳದೆ ಮರೆಯಾಗುತ್ತಿದೆ! ಶರವೇಗದಿಂದ ಮಧ್ಯಮ ವಯಸ್ಸು ಧಾವಿಸುತ್ತಿದ್ದರೂ, ಇನ್ನು ನಾವು ಚಿರ-ಯುವಕ "ದೇವಾನಂದ್" ತರ ಡೌಲು ಬಡೀತೇವೆ! ದಶಕಗಳ ಹಿಂದೆ ದೇಹಕ್ಕೆ ಕೊಟ್ಟ "ಕಾಟ/ಪೀಡೆ"ಗಳನ್ನು ಇಂದು ಕೊಡುವದರಲ್ಲಿ ಹಿಂದೆ-ಮುಂದೆ ನೋಡುವದಿಲ್ಲ. ಅತಿಯಾಗಿ ತಿನ್ನುವಿಕೆ, ಏನನ್ನು ತಿನ್ನದೆ ಇರುವಿಕೆ, ನಿದ್ದೆ-ಗೆಡುವದು, ಗಾಣದ ಎತ್ತಿನಂತೆ ಅತಿಯಾಗಿ ದುಡಿಯುವಿಕೆ, ಮಾನಸಿಕ ಒತ್ತಡಗಳನ್ನು ತಲೆಯ ಮೇಲೆ ಒಟ್ಟಿಕೊಳ್ಳುವಿಕೆ, "ಸ್ವಯಂ ವೈದ್ಯ" ರಾಗಿ ಬೇಕು-ಬೇಕಾದ ಮಾತ್ರೆ-ಔಷಧಿ ಸೇವನೆ, "ಹೆಂಡ್ಕುಡುಕ-ರತ್ನ" ರ ಅತಿ ಕುಡಿತ/ಸೇದುವಿಕೆ ಇತ್ಯಾದಿ, ಇತ್ಯಾದಿಗಳನ್ನು ಪ್ರಾಯಶಃ ಇನ್ನು ದೇಹ ತಡೆದುಕೊಳ್ಳಲಾರದು. ಇಷ್ಟಕ್ಕು ಮಿಕ್ಕಿ ನಾವು ನಮ್ಮ ದೇಹದ ಮೇಲೆ ಅತ್ಯಾಚಾರ ಮುಂದುವರಿಸಿದರೆ ವಿಧ-ವಿಧ ರೋಗಗಳಿಗೆ ನಮ್ಮ ದೇಹ ಒಡೆಯನಾಗುದರಲ್ಲಿ ಸಂದೇಹವೇ ಇಲ್ಲ. ಆಮೇಲೆ ವೈದ್ಯರು, ಆಸ್ಪತ್ರೆಗಳಿಗೆ ಆಲೆದಾಡುವದು ತಪ್ಪಿದ್ದಲ್ಲ. ಈ ವೈದ್ಯರು, ಆಸ್ಪತ್ರೆಗಳು ಅಂದರೆ ಯಾರಿಗೆ ತಾನೆ ಖುಶಿ?


ಒಂದು ಹೇಳಿಕೆ ಇದೆ ವೈದ್ಯರ ಬಗ್ಗೆ,
"ನಮೊ ಎಂಬೆ ಎಲೆ ವೈದ್ಯರಾಜನೆ,
ಯಮರಾಜನ ಹಿರಿ-ಸೋದರನೆ,
ಯಮ ಹೀರಿದರೆ ಪ್ರಾಣ ಮಾತ್ರವನು,
ನೀ ಸೆಳೆಯುವೆ ಕಾಂಚಾಣವನು"!


ವೈದ್ಯ ಮಹಾಶಯರು ಪ್ರಾಣ ಹಿಂಡುವರಲ್ಲದೆ, ಕಾಂಚಾಣವನ್ನು ಕಸಿದುಕೊಳ್ಳುವರೆಂಬ (ಕು)ಪ್ರಸಿದ್ಧಿ ಪಡೆದವರು !
ಕೆಲವು ಜನರ ರೋಗ-ಉಪಚಾರಕ್ಕೆ, ಆರೋಗ್ಯ-ವಿಮೆ ಸಹಾಯಕ್ಕೆ ಬರಬಹುದು, ಇನ್ನು ಕೆಲವರಿಗೆ ಕಂಪನಿಯವರು ವೆಚ್ಚದ ಹೊಣೆಹೊರಬಹುದು.. ಯಾರು ಕವರ್ ಮಾಡಿದರೂ, ಮಾಡದೆ ಇದ್ದರೂ ಅನುಭವಿಸುವವರು ನಾವೇ ತಾನೆ?
ಏನೊ ಗುಣಪಡಿಸುವ ರೋಗವಾದರೆ ಪರವಾಗಿಲ್ಲ, ಜೀವನ ಪೂರ್ತಿ ಔಷಧಿಯೊಂದಿಗೆ ಜೀವನ ಮಾಡುವ ರೋಗಗಳು ಗಂಟು ಬಿದ್ದರೆ ?? ತೀರ ಸಾಮಾನ್ಯವಾಗಿರುವ, ಹೃದಯ-ರೋಗ, ರಕ್ತದ-ಒತ್ತಡ, ಮಧು-ಮೇಹ, ಮೂತ್ರ-ಪಿಂಡದ ಕಾಹಿಲೆ etc. etc. ರೋಗಗಳ ಕಾಕ-ದೃಷ್ಟಿ ಬಿದ್ದರೆ!


ಈ ರೋಗಗಳಿಗೆ ಮುಖ್ಯ ಕಾರಣ ಎಲ್ಲರಿಗೂ ತಿಳಿದೇ ಇದೆ, ಟೆನ್ಶನ್ ಭರಿತ ಜೀವನ ಮತ್ತು ಕೊಲೆಸ್ಟರಾಲ್, ಇವತ್ತು ನಮ್ಮ ಜೀವನದಲ್ಲಿ ಹೇರಳವಾಗಿ ದೊರೆಯುವ ವಸ್ತುಗಳು! ನಾವು ಎಷ್ಟು ಹಣಗಳಿಸಿ ಏನು ಪ್ರಯೋಜನ, ವೃತ್ತಿ-ಜೀವನದಲ್ಲಿ ಎಷ್ಟು ಅಭ್ಯುದಯ ಸಾಧಿಸಿದರೆ ಏನು ಬಂತು, ನಮಗೆ ಆರೋಗ್ಯ ಎಂಬ ಭಾಗ್ಯವಿಲ್ಲದೆ ಹೋದರೆ! ಒಂದು ಗಾದೆಯಿದೆ ಕನ್ನಡದಲ್ಲಿ "ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ" ಅಂತ.. ಜೀವನದಲ್ಲಿ ಅತಿಯಾಗಿ ಕಷ್ಟಪಟ್ಟು ಗಳಿಸಿ, ಇನ್ನೇನು ಗಳಿಸಿದ್ದನ್ನ ಆನುಭವಿಸೋಣ ಅನ್ನುವಷ್ಟರಲ್ಲಿ, ಆರೋಗ್ಯ ಕೈ ಕೊಟ್ಟರೆ ನಾವು ಕಷ್ಟಪಟ್ಟಿದ್ದು ಏನು ಪ್ರಯೋಜನ? ಹೇಗೆ ನಾವು ಹಣಗಳಿಸಲು ಅಥವ ಕರಿಯರ್‌ನಲ್ಲಿ ಮುನ್ನುಗ್ಗಲು ಪ್ರಯತ್ನ ಪಡುತ್ತೇವೊ ಹಾಗೆಯೇ ಆರೋಗ್ಯದ ಭಾಗ್ಯ ಗಳಿಸಲು ಪ್ರಯತ್ನ ಪಡಲೇಬೇಕು. ಹಿತ-ಮಿತವಾದ ಆಹಾರ, ನಿದ್ರೆ, ವ್ಯಾಯಾಮ/ಯೋಗ ದೇಹ/ಮನಕ್ಕೆ ಬೇಕಾದ ಅವಶ್ಯಕತೆಗಳು.


ಒಂದು ಸಣ್ಣ ವಾಕಿಂಗಿನಿಂದ ನಮ್ಮ ದಿನಚರಿ ಆರಂಭಿಸಿದರೆ ಬೆಳಗಿನ ಝಾವದ ತಾಜಾ ಆಮ್ಲಜನಕ ನಮ್ಮ ದೇಹದ ನರ-ನಾಡಿಗಳಿಗೆ ಯಾವ ರೋಗ ಬರದಂತೆ ನಿರೋಧಕ ಶಕ್ತಿ ಕೊಟ್ಟೀತು! ಬೆಳಗಿನ ಝಾವ ಅಂದರೆ ಒಂದು ಘಟನೆ ನೆನಪಿಗೆ ಬಂತು. ಮೊನ್ನೆ ಗುರು ಆಮೆರಿಕಕ್ಕೆ ಬಂದಾಗ, ಇಲ್ಲಿ ಜನರು ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲಗಳ ಲೆಕ್ಕಿಸದೆ, ಸುಡುವ ಬಿಸಿಲು/ಕೊರೆವ ಛಳಿಯಲ್ಲು, ಓಡುವದನ್ನ ಕಂಡು, "ಹೊತ್ತು ಗೊತ್ತು ಇಲ್ಲ ಮುಂಡೆವಕ್ಕೆ, ಬ್ಯಾರೆ ಕೆಲಸ ಇಲ್ಲೇನು ಇವಕ್ಕ, ಶೀನಣ್ಣಾ" !? ಅಂತ ಉದ್ಗಾರಿಸಿದ!


ನನಗೂಇಲ್ಲಿ ಮೊದಲಿಗೆ ಬಂದಾಗ ಅದೆ ರೀತಿ ಅನಿಸುತಿತ್ತು. ಯಾಕಂದರೆ ನಮ್ಮ ಪ್ರಕಾರ ಈ ವಾಕಿಂಗ,ಜಾಗಿಂಗ್ ಎಲ್ಲ ಬೆಳಗಿನ ಸಮಯಕ್ಕೇ ಸೀಮಿತವಾದದ್ದು! ಬೆಳಿಗ್ಗೆ ಸಮಯ ಸಿಗದಿದ್ದರೆ, ಮುಂದೆ ಅದೇ ನೆಪದಿಂದ ಏನನ್ನು ಮಾಡದಿರುವದು, ಇದು ನಮ್ಮ ಅಂತರಾಳದ ಉದ್ದೇಶವಿರಬಹುದು! ಬೆಳಗಿನ ಸಮಯ ಶ್ರೇಯಸ್ಸರವಾದರೂ, ನಮಗೆ ಯಾವಾಗ ಸಮಯ ಸಿಕ್ಕುತ್ತೊ, ಆವಾಗ ಮಾಡುವದು ಒಳ್ಳೆಯದು.


ವ್ಯಾಯಾಮ ಶಾಲೆ/ಜಿಮ್‌ಗಳಿಗೆ ಸೇರಿಕೊಂಡು ಒಂದು ಅರ್ಧ ಗಂಟೆ ಕಸರತ್ತು ಮಾಡಿ, ಸ್ವಲ್ಪ ಕ್ಯಾಲರೀಸ್‌ನ ಸುಟ್ಟರೆ, ನಮ್ಮ ದೇಹದಲ್ಲಿ ಸಂಚಿತ ಆಗಿರುವ "ಬೊಜ್ಜು" ಸ್ವಲ್ಪ ಮಟ್ಟಿಗಾದರೂ ಕರಗುವ ಅವಕಾಶ ಸಿಕ್ಕೀತು! ಅಲ್ಲದೇ ನಮ್ಮ ದೇಹದ ಅಂಗಾಂಗಳು ಸ್ವಲ್ಪವಾದರೂ ಚೇತನ ಪಡೆದುಕೊಂಡಾವು!


ಸ್ವಲ್ಪ ನಮ್ಮ ‘ಕುರ್ಚಿ ಪ್ರೀತಿ' ಕಡಿಮೆ ಮಾಡಿ, ಗಂಟೆಗೊಮ್ಮೆ, ನೀರಿಗೊ, ಚಹಾ/ಕಾಫ಼ೀಯ ನೆವದಿಂದ ಎದ್ದು, ಅಕ್ಕ-ಪಕ್ಕದ ಸಹೋದ್ಯೋಗಿಗಳ ಜೊತೆ ಸ್ವಲ್ಪ ಹರಟೆ ಹೊಡದು (?), ಕಣ್ಣಿಗೆ ವಿಶ್ರಾಂತಿ ಕೊಟ್ಟರೆ, ವರ್ಷದಿಂದ ವರ್ಷಕ್ಕೆ ಕನ್ನಡಕದ ನಂಬರ್ ಹೆಚ್ಚಾಗಲಿಕ್ಕಿಲ್ಲ! ಬಿಟ್ಟು ಬಿಡದೆ ವರ್ಷಕ್ಕೆ ಒಮ್ಮೆ ಸಂಪೂರ್ಣ ದೇಹ ಚೆಕ್-ಅಪ್ ಮಾಡಿಸುವದು ಒಳ್ಳೆಯ ವಿಚಾರ. ಈ ತರದ ಚೆಕ್-ಅಪ್, ನಮ್ಮ ಸ್ವಾಸ್ಥ್ಯದಲ್ಲಿ ಏನಾದರು ಏರು-ಪೇರಿನ ಲಕ್ಷಣಗಳಿದ್ದರೆ ಒಂದು ಮುನ್ಸೂಚನೆ ಕೊಟ್ಟು, ಬರಲಿರುವ ಅಪಾಯ ಎದುರಿಸಲು ನಮ್ಮನ್ನು ಸಜ್ಜುಗೊಳಿಸಬಹುದು ಅನ್ನುವ ಯೋಚನೆ.


ಇದೆಲ್ಲ ಮಾಡಲು ಟೈಮ್ ಎಲ್ಲಿದೆ ಅಂತೀರ? ಟೈಮ್ ಮಡಿಕೊಳ್ಳಲೆಬೇಕು.. "ವಕ್ಥ್ ಹೋತಾ ನಹಿ, ನಿಕಾಲನಾ ಪಡತಾ
ಹೈ" ಅನ್ನೊ ತರ.. ನಮಗಾಗಿ ಅಲ್ಲದಿದ್ದರೂ ನಮ್ಮನ್ನೇ ನಂಬಿದ ಮಕ್ಕಳು/ಪರಿವಾರಕ್ಕೋಸ್ಕರವಾಗಿಯಾದರೂ ನಾವು
ಸ್ವಲ್ಪ ಟೈಮ್ ಫ಼್ರೀ ಮಾಡಿಕೊಳ್ಳಲೇಬೇಕು. ಈ ಐ.ಟಿ.ಯಲ್ಲಿ ಕೆಲವೊಂದು ಉದ್ಯೋಗಗಳು ಇಷ್ಟು ದುಡಿಸಿ ಬಿಡುತ್ತವೆ ಅಂದರೆ ಮತ್ತೆ ವ್ಯಾಯಾಮ ಮಾಡುವದಾಗಲಿ ಆರೋಗ್ಯದ ಕಡೆಗೆ ಲಕ್ಷ ಹರಿಸುವದಾಗಲೀ ಪ್ರ್ಯಾಕ್ಟಿಕಲಿ ಸಾಧ್ಯವೆ ಆಗುವದಿಲ್ಲ. ನಮಗೋ ಈ ಸಂಕೀರ್ಣಮಯ ಜಗತ್ತಿನಲ್ಲಿ ದೊಡ್ಡ ಗೊಂದಲ, ಜೀವನ ಮಾಡುವದಕ್ಕಾಗಿ ಹೊರಾಡಬೇಕೊ ಅಥವ ಹೊರಾಟ ಮಾಡುವದಕ್ಕಾಗಿ ಜೀವನ ಮಾಡಬೇಕೊ?
"ಕಾಯಕವೇ ಕೈಲಾಸ" ಎಂದು ಶರಣರು ಸಾರಿದ್ದರೂ ಈ ಬಂಡವಾಳ-ಶಾಹಿ ಸಂಸ್ಥೆಗಳಿಗೆ ಶರಣಾಗಿ ‘ಮೈ-ಕೈ-ಲಾಸ್' ಮಾಡಿಕೊಂಡು ದುಡಿಯವದರಲ್ಲಿ ಅರ್ಥವಿದೆಯೆ? "ಕೈ ಕೆಸರಾದರೆ ಬಾಯಿ ಮೊಸರು" ಎಂಬ ಗಾದೆ ನಿಜವಾದರೂ "ಕೆಸರಿನಲ್ಲಿಯೇ ಜೀವನ ಮಾಡು" ಅಂತ ಈ ಗಾದೆ ಬರೆದವರು ಹರಸಲಿಲ್ಲ. ಮೊಸರಿಗಾಗಿ ಕೆಸರು, ಜೀವನ ಮಾಡುವದಕ್ಕಾಗಿ ಹೋರಾಟ, ಇದನ್ನ ನಾವು ಸ್ಪಷ್ಟವಾಗಿ ತಿಳಕೊಬೇಕು.

ಈ ಬಂಡವಾಳಶಾಹಿ ಉದ್ಯೋಗಗಳು ಸ್ವಲ್ಪ ಜಾಸ್ತಿ ದುಡಿಸಿಕೊಂಡರು ಎಲ್ಲ ಕೆಲಸಗಳು ಅದೇ ರೀತಿ ಇರುವದಿಲ್ಲ.
ಬಂಡವಾಳಶಾಹಿ ಸಂಸ್ಕೃತಿಯ ಒಂದು ಮೆಚ್ಚಬೇಕಾದ ಅಂಶ ಅಂದರೆ ಇವತ್ತು ನಮಗೆ ಉದ್ಯೋಗದಲ್ಲಿ ಇರುವ ಅವಕಾಶಗಳು. ಸ್ವಲ್ಪ ಕಣ್ಣು ತೆರೆದು ನೋಡಿದರೆ ಬೇಕಾದಷ್ಟು ಕೆಲಸಗಳು ಗೋಚರಿಸುತ್ತವೆ. ನಮ್ಮ ಹಳೆಯ ತಲೆಮಾರಿನಂತೆ ನಾವು ಹಿಡಿದ ಕೆಲಸದಲ್ಲಿಯೇ ನಿವೃತ್ತಿ ಆಗಬೇಕೆನ್ನುವ ಕಡ್ಡಾಯ ನಿಯಮವೇನೂ ಇಲ್ಲ. ಸ್ವಲ್ಪ ಸಂಶೋಧನೆ ಮಾಡಿ, ಕಡಿಮೆ ಕೆಲಸ ಇರುವ ಕೆಲಸ ಆಯ್ಕೆ ಮಾಡಿಕೊಳ್ಳಬಹುದು. "ಜೀತ ಪದ್ಧತಿ" ಶತಮಾನದಿಂದಲು ನಡೆದು ಬಂದಿದೆ. ಕೆಲವೊಮ್ಮೆ ನೀಲಿ ಕಾಲರ್, ಕೆಲವೊಮ್ಮೆ ಬಿಳಿ ಕಾಲರ್!

ನಾವು ನಮಗೆ ಹಾಕಿಕೊಳ್ಳಬೇಕಾದ ಪ್ರಶ್ನೆ "ನಾವು ಜೀತ ಮಾಡಲೇಬೇಕ"? ಆಥವ ಬೇರೆ ಏನಾದರೂ ಮಾರ್ಗ ಉಂಟಾ?
ಇರಲಿ ನಾನು ವಿಷಯಾಂತರ ಮಾಡುತ್ತಿದ್ದೇನೆ.. ವಿಷಯ ಇಷ್ಟೆ, ಉದ್ಯೋಗ ಹೋದರೆ ಮತ್ತೆ ಪಡಕೊಬಹುದು, ಆರೋಗ್ಯ ಹೋದರೆ ಬರದು. ಒಂದು ದಶಕದ ಹಿಂದೆ ನಮಗೆ ಒಂದಿಷ್ಟು ಆರೋಗ್ಯ-ಪ್ರಜ್ಞೆ ಜಾಗೃತವಾಗಿದ್ದರೆ ಎಷ್ಟೊ ಚೆನ್ನಾಗಿರುತಿತ್ತು!
ಕಾಲ ಇನ್ನು ಮಿಂಚಿಲ್ಲ, ಆರೋಗ್ಯಕರ ಪ್ರಕೃತಿ ಹೊಂದಲು, ಸದೃಢ-ಕಾಯ ಬೆಳೆಸಿಕೊಳ್ಳಲು ಇನ್ನು ಅವಕಾಶವಿದೆ.
ಈಗ ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿದರೆ ಮುಂದೆ ಈ ವಿಷಯದ ಬಗ್ಗೆ ನಾವು ಹಳಹಳಿಸಬೇಕಾಗಿಲ್ಲ.
ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ವರುಷದಾ ಆರಂಭದಲಿ ನಮ್ಮ ಆರೋಗ್ಯ-ವರ್ಧನೆಗೆ ಒಂದು ಧೃಢ ಸಂಕಲ್ಪ ಮಾಡೊಣವೆ? ನಮ್ಮ ದೇಹ/ಮನಸ್ಸಿಗೆ ಆರೊಗ್ಯಕರ ಪ್ರವೃತ್ತಿಗಳನ್ನ ಬೆಳೆಸಿಕೊಳ್ಳುವತ್ತ, ಆರೋಗ್ಯ ಆಭಿವೃದ್ಧಿ ಯ ಕಡೆ ಮೊದಲ ಆದ್ಯತೆ ನೀಡೊಣವೆ?


ಆರೋಗ್ಯ-ಅಭಿವೃದ್ಧಿಯ ಚಿಂತನೆ ಮತ್ತು ಪ್ರಯತ್ನಗಳು, ಒಮ್ಮೆ ಹುರುಪು ಬಂದು ಮಾಡಿ ಮರೆಯುವ ಆರಂಭ-ಶೂರತನವಾಗದೆ, ಈ ಪತ್ರಿಕೆಯ ಹೆಸರಿನಂತೆ, ಇದೊಂದು "ನಿರಂತರ " ಪ್ರಕ್ರಿಯೆಯಾಗಬೇಕು , ನಮ್ಮ ಬದಲಾದ ಜೀವನ-ಶೈಲಿ ಆಗಬೇಕು. ಆಗಲೇ ಬದುಕಿಗೊಂದು ಅರ್ಥ.. !


ಸಕಲರಿಗೂ ಈ ಹೊಸ-ವರುಷ, 2008, ಆರೋಗ್ಯ-ಪೂರ್ಣ ವರುಷವಾಗಲಿ ಮತ್ತು ಆ ಆರೋಗ್ಯ-ಭಾಗ್ಯದ ಬೆಳಕಿನ ಹರುಷ ನಿಮ್ಮ ಬದುಕಿನ ಎಲ್ಲ ರಂಗಗಳಲ್ಲಿ ಪ್ರತಿಫಲಿಸಲಿ.

1 comment:

Rohit Ramachandraiah said...

ಅರುಣ್ ರವರೆ,

ಈಗಾಗಲೆ ಎರಡನೆ ಪಟ್ಟಿಯಲ್ಲಿ 'ನಿರಂತರ' ವನ್ನು ಸೇರಿಸಲಾಗಿದೆ. ನೋಡಿ, ಸಂ. ೫೬೧.

ವಂದನೆಗಳು,
ರೋಹಿತ್.