Saturday, April 05, 2008

ಹೊಸ ವರುಷ ತರಲಿ ನಮಗೆಲ್ಲ ಹರುಷ - ಪ್ರಕಾಶ ಸಿ. ರಾಜಗೋಳಿ, ಬೆಂಗಳೂರು

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ಲೇಖನದಲ್ಲಿ ನಾನು ಜಗತ್ತಿನಾದ್ಯಂತ ಆಚರಿಸಲ್ಪಡುವ ಹೊಸ ವರ್ಷದ ವಿವಿಧ ಆಚರಣೆಗಳು ಮತ್ತು ಅವುಗಳ ವಿಶೇಷತೆಗಳ ಬಗ್ಗೆ ವಿವರಿಸುವ ಅಲ್ಪ ಪ್ರಯತ್ನ ಮಾಡಿರುತ್ತೇನೆ.
ಹೊಸ ವರ್ಷದ ಆಚರಣೆಯ ಉಗಮ ಮತ್ತು ಇತಿಹಾಸ:
ನಾಲ್ಕು ಸಾವಿರ ವರ್ಷಗಳಷ್ಟು ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕ್ರಿ ಶ ಪೂ ೨೦೦೦ ದಲ್ಲಿ ಚಳಿಗಾಲದ ಮೊದಲ ಪಾಡ್ಯದ ದಿನ (ಸರಿ ಸುಮಾರು ಮಾರ್ಚ್ ೧ ನೆ ತಾರೀಖು) ಇದನ್ನು ಆಚರಿಸುತ್ತಿದ್ದರಂತೆ. ಆಗ ಹೊಸ ವರ್ಷದ ಆಚರಣೆ ಹನ್ನೂಂದು ದಿನಗಳದ್ದಾಗಿರುತ್ತಿತ್ತಂತೆ!!

ರೋಮನ್ ನಾಗರೀಕತೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸ ವರ್ಷದ ಆಚರಣೆಗೆ ನಾಂದಿ ಹಾಡಲಾಯಿತು. ಬೇರೆ ಬೇರೆ ರೋಮನ್ ದೊರೆಗಳಿಂದ ರೋಮನ್ ಕ್ಯಾಲೆಂಡರು ಬಹಳ ಬದಲಾವಣೆ ಕಂಡಿದ್ದರಿಂದ ಕ್ರಿ ಶ ಪೂ ೧೫೩ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಆರಂಭದ ದಿನ ಎಂದು ರೋಮನ್ ಸೆನೆಟು ನಿರ್ಧಾರ ಮಾಡಿತು. ದೊರೆ ಜ್ಯುಲಿಯಸ್ ಸೀಸರ್ ಕ್ರಿ ಶ ಪೂ ೪೬ ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಮೊದಲ ದಿನ ಎಂದು ನಿರ್ಧರಿಸಿ ಜ್ಯೂಲಿಯನ್ ಕ್ಯಾಲೆಂಡರಿಗೆ ನಾಂದಿ ಹಾಡಿದ. ರೋಮನ್ನರ ಹೊಸ ವರ್ಷಾಚರಣೆಗೆ ಕ್ಯಾಲೆಂಡುಸ್ ಎನ್ನುತ್ತಾರೆ. ಕ್ರಿಸ್ತನ ಜನ್ಮದಿಂದ ಉದಯಿಸಿದ ಕ್ರಿಸ್ತಿಯನ್ ಧರ್ಮ ರೋಮನ್ನರ ಹೊಸ ವರ್ಷದ ಆಚರಣೆಗೆ ಮೊದಮೊದಲು ವಿರೋಧ ವ್ಯಕ್ತಪಡಿಸಿದರೂ ಕ್ರಮೇಣ ತಮ್ಮ ಚರ್ಚಿನ ಆಚರಣೆಗಳಲ್ಲಿ ಅಳವಡಿಸಿಕೊಳ್ಳತೊಡಗಿದರು. ಹೊಸ ವರ್ಷವೆಂದಾಕ್ಷಣ ನಮಗೆ ನೆನಪಾಗುವದು ಆ ವರ್ಷದಲ್ಲಿ ಏನಾದರೂ ರೆಸಲುಶನ್ ಮಾಡಿಕೊಳ್ಳುವದು ಮತ್ತು ಅದನ್ನು ಪಾಲಿಸಲು ವರ್ಷವಿಡೀ ಹೆಣಗುವದು. ಉದಾಹರಣೆಗೆ ಧೂಮಪಾನ ಬಿಡುವದು, ಮಾಂಸಾಹಾರವನ್ನು ಬಿಡುವದು ಇತ್ಯಾದಿ. ಈ ರೀತಿಯ ಹೊಸ ವರ್ಷದ ರೆಸಲುಶನ್ (ನಿರ್ಧಾರ) ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಳೆಯದು. ಪ್ರಾಚೀನ ಬ್ಯಾಬಿಲೋನಿಯನ್ನರ ಹೆಸರಾಂತ ಹೊಸ ವರ್ಷದ ರೆಸಲುಶನ್ ಏನಾಗಿರುತ್ತಿತ್ತು ಗೊತ್ತೆ? ಕಡ ತಂದ ರೈತಕಿ ಸಾಮಾನುಗಳನ್ನು ಹಿಂದಿರುಗಿಸುವದು!!!!

ಪ್ರಾಚೀನ ಈಜಿಪ್ತಿನಲ್ಲಿ ಅಲ್ಲಿಯ ಜೀವನಾಡಿ ನೈಲ್ ನದಿಗೆ ಮಹಾಪೂರ ಬಂದಾಗ ಹೊಸ ವರ್ಷ ಆಚರಿಸುತ್ತಿದ್ದರಂತೆ!!! ಇದು ಸೆಪ್ಟೆಂಬರಿನ ಆಸುಪಾಸು ಬರುತ್ತಿತ್ತು. ಅವರು ಮಹಾಪೂರವನ್ನೇ ಏಕೆ ಆಯ್ದುಕೊಂಡಿದ್ದರು ಎಂದರೆ ನೈಲ್ ನದಿ ಉಕ್ಕಿ ಹರಿದರೆ ಮಾತ್ರ ಈಜಿಪ್ತಿನ ಬೆಂಗಾಡಿನಲ್ಲಿ ಜೀವಕಳೆ ಎಂಬ ಕಟುಸತ್ಯವನ್ನು ಆಗಿನವರು ಅರಿತಿದ್ದರು. ಹೊಸ ವರ್ಷದ ದಿನ ಅವರು ತಮ್ಮ ದೇವತೆ ಅಮೊನ್ ಆತನ ಹೆಂಡತಿ ಮತ್ತವನ ಮಗನ ಮೂರ್ತಿಗಳನ್ನು ಹಾಡುತ್ತ ಕುಣಿಯುತ್ತ ನೈಲ್ ನದಿಯಲ್ಲಿ ದೋಣಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಒಂದು ತಿಂಗಳಿನ ಆಚರಣೆಗಳ ನಂತರ ಮೂರ್ತಿಗಳನ್ನು ವಾಪಸ್ಸು ದೇವಾಲಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು.

ವರ್ಷದ ಆರಂಭದ ದಿನದಂದು ನವಜಾತ ಶಿಶುಗಳ ಪೆರೆಡು ಮಾಡುವ ಸಂಪ್ರದಾಯ ಗ್ರೀಕ್ ಮತ್ತು ಈಜಿಪ್ತಿಯನ್ ನಾಗರೀಕತೆಯಲ್ಲಿ ಇತ್ತಂತೆ. ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ ಎಂದು ಅವರು ಭಾವಿಸಿದ್ದರಂತೆ. ಹದಿನಾಲ್ಕನೆಯ ಶತಮಾನದಲ್ಲಿ ನವಜಾತ ಮಗುವಿನ ಬದಲಾಗಿ ಮಗುವಿನ ಚಿತ್ರವಿರುವ ಬ್ಯಾನರುಗಳನ್ನು ಬಳಸಿ ಹೊಸ ವರ್ಷ ಆಚರಿಸುವ ಪದ್ಧತಿ ಅಮೇರಿಕೆಯಲ್ಲಿ ಜಾರಿಗೆ ಬಂದಿತು. ಇದನ್ನು ಜರ್ಮನರು ಅಮೇರಿಕೆಗೆ ಪರಿಚಯಿಸಿದರು ಎನ್ನಲಾಗಿದೆ. ಹೊಸ ವರ್ಷದ ಮೊದಲ ದಿನ ತಾವು ಮಾಡುವ ಕಾರ್ಯಗಳು ಅಥವಾ ತಿನ್ನುವ ಪದಾರ್ಥಗಳು ವರ್ಷ ಪೂರ್ತಿಯ ಶುಭಾಶುಭಗಳಿಗೆ ಕಾರಣವಾಗುತ್ತವೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿತ್ತು.

ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪಧ್ಧತಿಯಿರುವ ಎಲ್ಲ ಸಂಸ್ಕೃತಿಗಳು ಹೊಸ ವರ್ಷದ ಆಚರಣೆ ಮಾಡುತ್ತವೆ. ನಾವು ವಾಸಿಸುವ ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರ್ಷದ ಕಾಲ ತೆಗೆದುಕೊಳ್ಳುತ್ತದೆ. ಹೀಗೆ ಪುನರಾವೃತ್ತಿಯಾಗುವ ಸಂದರ್ಭ ಸೂಚಿಸಲು ಹೊಸ ವರ್ಷದ ಆಚರಣೆ ಬಳಕೆಗೆ ಬಂತು.

ಜಗತ್ತಿನಾದ್ಯಂತ ಹೊಸ ವರ್ಷದ ವಿಭಿನ್ನ ಆಚರಣೆಗಳು:
ಜನೇವರಿ ೧ : ಜಾಗತಿಕವಾಗಿ ಮಾನ್ಯವಾಗಿರುವ ಗ್ರಿಗೋರಿಯನ್ ಕ್ಯಾಲೆಂಡರಿನ ಪ್ರಕಾರ ಹೊಸ ವರ್ಷದ ಆರಂಭದ ದಿನ ಜನೇವರಿ ೧. (ಜನೇವರಿ ಎನ್ನುವದು ರೋಮನ್ ದೇವತೆ ಜಾನುಸ್ಸನ ನೆನಪಿಗಾಗಿ ಇಡಲಾಗಿದೆ. ರೋಮನ್ನರ ಪ್ರಕಾರ ಜಾನುಸ್ ಎರಡು ತಲೆ ಹೊಂದಿದ್ದು ಒಂದು ತಲೆ ಹಿಂದೆ ಅಂದರೆ ಕಳೆದ ವರ್ಷವನ್ನು ಮತ್ತೆ ಇನ್ನೊಂದು ತಲೆ ಮುಂದಿನ ವರ್ಷವನ್ನು ನೋಡುತ್ತದಂತೆ) ಅಂದು ಸ್ನೇಹಿತರಿಗೆ ಬಂಧುಬಳಗದವರಿಗೆ ಶೇಕ್ ಹ್ಯಾಂಡ್ ಕೊಡುವದರ ಮೂಲಕ, ಫೊನಾಯಿಸುವದರ ಮೂಲಕ, ಈ ಮೇಲ್ ಕಳಿಸುವದರ ಮೂಲಕ, ಗ್ರೀಟಿಂಗ್ ಕಾರ್ಡ್ ಕಳಿಸುವದರ ಮೂಲಕ, ಗಿಫ಼್ಟಗಳನ್ನು ಕೊಡುವದರ ಮೂಲಕ ಹೊಸ ವರ್ಷವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ.

ಜಪಾನಿನಲ್ಲಿ ಜನೇವರಿ ೧ ರಂದೆ ಹೊಸ ವರ್ಷ ಆಚರಿಸಿದರೂ ಅದಕ್ಕೆ ತಮ್ಮದೇ ಚಾಪು ಮೂಡಿಸಿರುತ್ತಾರೆ. ಅಂದು ಅವರು ಸುಖ ಸಮೃದ್ಧಿಯ ದ್ಯೋತಕವಾಗಿ ಮತ್ತು ದುಷ್ಟ ಶಕ್ತಿಗಳನ್ನು ದೂರವಿಡಲು ಬಾಗಿಲಿಗೆ ಸ್ಟ್ರಾಗಳಿಂದ ಅಲಂಕೃತ ಹಗ್ಗವನ್ನು ಕಟ್ಟುತ್ತಾರೆ.

ರೊಶ್ ಹಸನ್ನಾ: ಜ್ಯೂ ಜನರ ಹೊಸ ವರ್ಷಾಚರಣೆಗೆ "ರೊಶ್ ಹಸನ್ನಾ" ಎನ್ನುತ್ತಾರೆ. ಅಂದು ಸಿನೆಗೊಗ್ ಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ಏರ್ಪಡಿಸುತ್ತಾರೆ. ಶೊಫ಼ರ್ ಎನ್ನುವ ವಾದ್ಯವನ್ನು ನುಡಿಸುತ್ತಾರಲ್ಲದೆ ಮಕ್ಕಳಿಗೆ ಸಿಹಿ ಹಂಚುತ್ತಾರೆ.

ಚೈನೀಸ್ ಹೊಸ ವರ್ಷ : ಪ್ರತಿ ವರ್ಷ ಜನೇವರಿ ೧೭ ರಿಂದ ಫ಼ೆಬ್ರುವರಿ ೧೯ ರ ನಡುವೆ ಬರುವ ಪಾಡ್ಯದ ದಿನವನ್ನು ಚೈನೀಯರು ಜಗತ್ತಿನಾದ್ಯಂತ "ಯುಆನ್ ಟ್ಯಾನ್"(ಹೊಸ ವರ್ಷದ ದಿನ) ಎಂದು ಆಚರಿಸುತ್ತಾರೆ. ಈ ದಿನ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಮದ್ದು ಸಿಡಿಸುವದು ಮತ್ತು ಪ್ರಭಾತ್ ಫೆರಿಗಳು (ಪೆರೆಡು) ಚೈನೀಸ್ ಹೊಸ ವರ್ಷಾಚರಣೆಯ ಪ್ರಮುಖ ಭಾಗಗಳು. ಸಾವಿರಾರು ಲ್ಯಾಂಟೀನುಗಳ ಮೆರವಣಿಗೆಗಳು ನೋಡುಗರಿಗೆ ಹಬ್ಬ ಎಂದು ಬಣ್ಣಿಸಲಾಗಿದೆ. ದುಷ್ಟ ಶಕ್ತಿಗಳನ್ನು ದೂರವಿರಿಸಲು ಅವರು ಮದ್ದು ಸಿಡಿಸುತ್ತಾರೆ.

ವಿಯೆಟ್ನಾಮ್ ಹೊಸ ವರ್ಷ : "ಟೆಟ್ ಗುಯೆನ್ ದಾನ್" ಎಂದು ಕರೆಯಲ್ಪಡುವ ವಿಯೆಟ್ನಾಮ್ ಹೊಸ ವರ್ಷ ಚೈನೀಸ್ ಹೊಸ ವರ್ಷದಂದೆ ಆಚರಿಸಲ್ಪಡುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ದೇವರು ವಾಸಿಸುತ್ತಾನೆ ಎಂದು ನಂಬುವ ವಿಯೆಟ್ನಾಮೀಯರು ಹೊಸ ವರ್ಷದ ದಿನ ಆ ದೇವರು ಸ್ವರ್ಗಕ್ಕೆ ಹೋಗಿ ಕಳೆದ ವರ್ಷ ತನ್ನನ್ನು ಹೇಗೆ ನೋಡಿಕೊಂಡರು ಎಂದು ತಿಳಿಸುತ್ತಾನೆ ಎಂದು ನಂಬುತ್ತಾರೆ. ಕಾರ್ಪ್ ಎನ್ನುವ ಮೀನಿನ ಬೆನ್ನ ಮೇಲೆ ದೇವರು ಸ್ವರ್ಗದತ್ತ ಪ್ರಯಾಣ ಮಾಡುತ್ತಾನೆ ಎಂದು ನಂಬಿಕೆ ಇರುವದರಿಂದ ಜೀವಂತ ಕಾರ್ಪ್ ಮೀನುಗಳನ್ನು ಕೆರೆ ಇಲ್ಲವೆ ನದಿಗೆ ಬಿಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹೊಸ ವರ್ಷದ ದಿನ ಆಗಮಿಸುವ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ನಸೀಬು ನಿರ್ಧಾರವಾಗುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ.

ಟಿಬೇಟಿಯನ್ ಹೊಸ ವರ್ಷ : ಜನೇವರಿಯಿಂದ ಮಾರ್ಚ ನಡುವೆ ಆಚರಿಸುವ ಟಿಬೇಟಿಯನ್ ಹೊಸ ವರ್ಷಕ್ಕೆ "ಲೊಸರ್" ಎನ್ನುತ್ತಾರೆ.

ಥಾಯ್‌ಲ್ಯಾಂಡ್ ಮತ್ತು ಕಾಂಬೊಡಿಯನ್ ಹೊಸ ವರ್ಷದ ಆಚರಣೆ ೧೩ ಏಪ್ರಿಲ್ ದಿಂದ ೧೫ ಏಪ್ರಿಲ್ ವರೆಗೆ ಇರುತ್ತದೆ.
ಸೆಪ್ಟೆಂಬರ್ ೧೧ ರಂದು ಇಥಿಯೋಪಿಯದ ಜನರು ಹೊಸ ವರ್ಷವನ್ನು "ಎಂಕುತತಾಷ್" ಎಂದು ಆಚರಿಸುತ್ತಾರೆ.
ಪರ್ಶಿಯಾ ಹೊಸ ವರ್ಷ : ಈಗಿನ ಇರಾನ್ ದೇಶದಲ್ಲಿ ಹೊಸ ವರ್ಷವನ್ನು ಮಾರ್ಚ್ ೨೧ ರಂದು ಆಚರಿಸುತ್ತಾರೆ. ಜಗತ್ತಿನಾದ್ಯಂತ ಪ್ರತಿ ವರ್ಷದ ಮೊಹರ್ರಂ ಮೊದಲ ದಿನದಂದು ಸುನ್ನಿ ಮುಸಲ್ಮಾನರು ಹೊಸ ವರ್ಷದ ಆಚರಣೆ ಮಾಡುತ್ತಾರೆ.

೧೩ನೆಯ ಶತಮಾನದವರೆಗೆ ಜರ್ಮನಿ ಮತ್ತು ಇಂಗ್ಲಂಡ್‌ನಲ್ಲಿ ಡಿಸೆಂಬರ್ ೨೫ನ್ನು ಹೊಸ ವರ್ಷದ ಆಚರಣೆಗೆ ಬಳಸುತ್ತಿದ್ದರು. ೧೪ ರಿಂದ ೧೬ ನೆಯ ಶತಮಾನದವರೆಗೆ ಈ ಪದ್ಧತಿ ಸ್ಪೇನ್ ದೇಶದಲ್ಲಿ ಬಳಕೆಯಲ್ಲಿತ್ತು.

ಶುಭ ಶುಕ್ರವಾರ ಅಥವಾ ಈಸ್ಟರ್ ಶನಿವಾರಗಳನ್ನು ಹೊಸ ವರ್ಷದ ಮೊದಲ ದಿನ ಎಂದು ಪರಿಗಣಿಸುವ ಪರಿಪಾಠ ಫ಼್ರಾನ್ಸಿನಲ್ಲಿ ೧೧ ರಿಂದ ೧೬ ನೆಯ ಶತಮಾನದವರೆಗೆ ಜಾರಿಯಲ್ಲಿತ್ತು ಎಂದು ದಾಖಲೆಗಳು ಹೇಳುತ್ತವೆ.

೧೪ನೆಯ ಶತಮಾನದಿಂದ ಗ್ರಿಗೋರಿಯನ್ ಕ್ಯಾಲೆಂಡರ್ ಅಳವಡಿಸಿಕೊಳ್ಳುವವರೆಗೆ ರಷಿಯದಲ್ಲಿ ಸೆಪ್ಟೆಂಬರ್ ೧ ರಂದು ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಪಶ್ಚಿಮದ ಸ್ವಿಡ್ಜರ್‌ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳಲ್ಲಿ ಸಂತ ಸಿಸ್ಟರ್‌ನ ಸ್ಮರಣಾರ್ಥ ಹೊಸ ವರ್ಷದ ಆಚರಣೆ ನಡೆಯುತ್ತದೆ. ಕ್ರಿ ಶ ೩೧೪ ರಲ್ಲಿ ಸಿಸ್ಟರ್ ಎನ್ನುವ ಸಂತನು ಸಮುದ್ರದ ದೈತ್ಯ ರಾಕ್ಷಸನನ್ನು ಬಂಧಿಸಿ ಜನರಿಗೊದಗಿದ ಸಂಕಷ್ಟಗಳಿಂದ ಪಾರುಮಾಡಿದ್ದನಂತೆ. ಹೀಗೆ ಬಂಧಿಸಲ್ಪಟ್ಟ ರಾಕ್ಷಸ ೧೦೦೦ ನೆಯ ಇಸವಿಯಲ್ಲಿ ಬಂಧಮುಕ್ತನಾಗಿ ಮತ್ತೆ ಕಂಟಕಪ್ರಾಯನಾಗುತ್ತಾನೆ ಎಂದು ನಂಬಲಾಗಿತ್ತು ಆದರೆ ಹಾಗೆ ಆಗದೆ ಇದ್ದಾಗ ಅಲ್ಲಿನ ಜನ ತಮ್ಮ ಹರ್ಷ ವ್ಯಕ್ತಪಡಿಸಲು ಮತ್ತು ಸಂತ ಸಿಸ್ಟರ್‌ನಿಗೆ ನಮಿಸಲು ಸಾಂಪ್ರದಾಯಿಕ ವೇಷ ಭೂಷಣಗಳಿಂದ ಹೊಸ ವರ್ಷವನ್ನು ಆಚರಿಸುತ್ತಾರೆ.

ಗ್ರೀಕ್ ದೇಶದಲ್ಲಿ ಹೊಸ ವರ್ಷವನ್ನು ಕಾರುಣ್ಯಮೂರ್ತಿ ಸಂತ ಬೆಸಿಲ್‌ನ ಸ್ಮರಣಾರ್ಥ ಆಚರಿಸುತ್ತಾರೆ.

ಸ್ಕಾಟ್‌ಲ್ಯಾಂಡಿನಲ್ಲಿ ಹೊಸ ವರ್ಷವನ್ನು "ಹೊಗ್ಮನೆ" ಎಂದು ಕರೆಯುತ್ತಾರೆ. ಅವತ್ತು ಕಳೆದ ವರ್ಷವನ್ನು ದಹಿಸಿ ಹೊಸ ವರ್ಷಕ್ಕೆ ಸ್ವಾಗತಿಸಲು ಟಾರಿನ ಡ್ರಮ್ಮುಗಳಿಗೆ ಬೆಂಕಿಯಿಟ್ಟು ರಸ್ತೆಗುಂಟ ಉರಳಿಸುತ್ತಾರೆ. ಸ್ಕಾಟಿಷ್ ಜನರು ಹೊಸ ವರ್ಷದ ದಿನ ಆಗಮಿಸುವ ಕಪ್ಪು ಕೂದಲಿನ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ಅದೃಷ್ಟ ಉಜ್ವಲವಾಗುತ್ತದೆ ಎಂದು ಬಲವಾಗಿ ನಂಬುತ್ತಾರೆ.

ಜಗತ್ತಿನಾದ್ಯಂತ ಹೊಸ ವರ್ಷದ ಆಚರಣೆ ಒಂದೇ ದಿನ ಇರದಿರುವದಕ್ಕೆ ಅವರು ಬಳಸುವ ಸೌರಮಾನ, ಚಂದ್ರಮಾನ ಅಥವ ಎರಡು ಸೇರಿರುವ ವಿಭಿನ್ನ ಕ್ಯಾಲೆಂಡರುಗಳೆ ಕಾರಣವಾಗಿವೆ.

ಹೊಸ ವರ್ಷಾಚರಣೆಯ ಅವಿಭಾಜ್ಯ ಅಂಗವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುವದು, ಮದ್ಯ ಸೇವಿಸುವದು, ಕುಣಿತ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವದು ಎಲ್ಲೆಡೆ ಸರ್ವೇ ಸಾಮಾನ್ಯವಾಗುತ್ತಿದೆ.

ಭರತಖಂಡದಲ್ಲಿ ಹೊಸ ವರ್ಷದ ಆಚರಣೆಗಳು:

"ವಿವಿಧತೆಯಲ್ಲಿ ಏಕತೆ" ನಮ್ಮ ಮೂಲ ಮಂತ್ರವಾಗಿರುವದರಿಂದ ನಮ್ಮಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಧರ್ಮಗಳಲ್ಲಿ ಹೊಸ ವರ್ಷದ ಆಚರಣೆಗಳು ವಿಭಿನ್ನವಾಗಿವೆ.

ಉತ್ತರ ಭಾರತದಲ್ಲಿನ ಹಿಂದೂಗಳಿಗೆ ದೀಪಗಳ ಹಬ್ಬ ದೀಪಾವಳಿ ಹೊಸ ವರ್ಷಾಚರಣೆಗೆ ಮೀಸಲು. ಪ್ರತಿವರ್ಷ ಅಕ್ಟೋಬರ್ ಕೊನೆಗೆ ಇಲ್ಲವೆ ನವೆಂಬರ್ ಆರಂಭಕ್ಕೆ ಬರುವ ಈ ಹಬ್ಬದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿಯ ಪೂಜೆಗೆ ಅಗ್ರಸ್ಥಾನ. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ರಾಮ ತನ್ನ ಮಡದಿ ಸೀತೆಯೊಡನೆ ದೀಪಾವಳಿ ದಿನದಂದು ತನ್ನ ರಾಜ್ಯಕ್ಕೆ ಪುನರಾಗಮಿಸಿದನೆಂದು ಹೇಳಲಾಗಿದೆ.

ಪಂಚನದಿಗಳ ಬೀಡು ಪಂಜಾಬಿನಲ್ಲಿ ಹೊಸ ವರ್ಷವನ್ನು "ಬೈಸಾಕಿ' ಹೆಸರಿನಿಂದ ಪ್ರತಿ ವರ್ಷ ಏಪ್ರಿಲ್ ೧೩ ರಂದು ಆಚರಿಸುತ್ತಾರೆ. ಇದು ಅಲ್ಲಿನ ಬೆಳೆಗಳ ಕೊಯ್ಲಿಗೆ (ಸುಗ್ಗಿ) ಸರಿ ಹೋಗುತ್ತದೆ. ಸಿಖ್ಖರಿಗೆ ಬೈಸಾಕಿ ಹಬ್ಬ ಸುಗ್ಗಿ ಮಾತ್ರವಾಗಿರದೆ ಸಿಖ್ಖ ಗುರು ಗೋವಿಂದಸಿಂಗರು ೧೬೯೯ ರಲ್ಲಿ ಧರ್ಮ ಸೇನೆ ಖಾಲ್ಸಾವನ್ನು ಸ್ಥಾಪಿಸಿದ್ದರಿಂದ ಅತಿ ಮಹತ್ವ ಪಡೆದಿದೆ.

ಕೇರಳದಲ್ಲಿ ಹೊಸ ವರ್ಷವನ್ನು "ವಿಶು" ಹೆಸರಿನಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಮಧ್ಯೆ ಆಚರಿಸುತ್ತಾರೆ. ಇದು ಮಲಯಾಳಿಗಳ ಮೊದಲ ತಿಂಗಳು "ಮೆದಮ್"ನ ಮೊದಲ ದಿನವೂ ಹೌದು. ಹೊಸ ವರ್ಷದ ಮುನ್ನಾ ದಿನ ಕೇರಳಿಗರು ತಾವು ಬೆಳೆದ ಭತ್ತ, ತೆಂಗಿನಕಾಯಿ, ಹಲಸಿನಹಣ್ಣು, ಅಡಕೆ, ಬಾಳೆ ಮುಂತಾದವನ್ನು ಸುಂದರವಾಗಿ ಅಲಂಕರಿಸುತ್ತಾರೆ. ಹೊಸ ವರ್ಷದ ದಿನ ಸೂರ್ಯೋದಯಕ್ಕೆ ಮೊದಲು ನಿನ್ನೆಯ ಅಲಂಕರಣಗಳನ್ನು ಮೊದಲು ನೋಡಿದರೆ ವರ್ಷ ಪೂರ್ತಿ ಶುಭವಾಗುತ್ತದೆ ಎನ್ನುವದು ಅವರ ನಂಬುಗೆ ಹೀಗಾಗಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪಡಸಾಲೆಗೆ ಬಂದು ಧವಸಧಾನ್ಯಗಳ ಸೊಬಗನ್ನು ಸವಿಯುತ್ತಾರೆ. ಕೇರಳದ ಪ್ರಸಿದ್ಧ ದೇವಾಲಯಗಳಾದ ಗುರುವಾಯೂರು, ಶಬರಿ ಮಲೈ ಮತ್ತು ಪದ್ಮನಾಭ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆಗಳಿರುತ್ತವೆ.

"ವರ್ಷಪಿರುಪ್ಪು" ಎಂದು ಹೊಸ ವರ್ಷವನ್ನು ತಮಿಳುನಾಡಿನಲ್ಲಿ ಆಚರಿಸುತ್ತಾರೆ. ಇದು ಏಪ್ರೀಲ್ ಮಧ್ಯಭಾಗದಲ್ಲಿ ಬರುತ್ತದೆ. ಬಾಗಿಲೆದುರು ರಂಗೋಲಿ, ಬಾಗಿಲಿಗೆ ತಳಿರು ತೋರಣ, ಮನೆಯಲ್ಲಿ ವಿಶೇಷ ಅಡುಗೆ, ಮನೆಯವರೆಲ್ಲರಿಗೆ ಹೊಸ ಬಟ್ಟೆ ಹೊಸ ವರ್ಷದ ವಿಶೇಷಗಳು. ನಾವು ಯುಗಾದಿಯಲ್ಲಿ ಬೇವು-ಬೆಲ್ಲದ ವಿನಿಮಯ ಮಾಡಿಕೊಳ್ಳುವಂತೆ ಅವರು "ಮಾಂಗಾಪಚಡಿ"ಯನ್ನು ಬಳಸುತ್ತಾರೆ. ವ್ಯಾಪಾರಿಗಳು ತಮ್ಮ ಹೊಸ ಖಾತಾ ಪುಸ್ತಕಗಳನ್ನು ಅಂದು ಆರಂಭಿಸುತ್ತಾರೆ.

ವೈಶಾಖ ಮಾಸದ ಮೊದಲ ದಿನವನ್ನು ಬೆಂಗಾಲಿಗಳು "ನಬ ಬರ್ಷ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ.ಇದನ್ನೆ "ಪೈಲಾ ಬೈಸಾಖ್" ಎಂದು ಬಾಂಗ್ಲಾದೇಶದಲ್ಲಿ ಆಚರಿಸುತ್ತಾರೆ. ಅಂದು ಸರಕಾರಿ ರಜಾದಿನವಾಗಿರುತ್ತದೆ.ಹಾಡು, ಕುಣಿತ, ಗಾಳಿಪಟ ಸ್ಪರ್ಧೆಗಳು, ಎತ್ತಿನ ಷರತ್ತುಗಳು ಈ ಆಚರಣೆಯ ಪ್ರಮುಖ ಆಕರ್ಷಣೆಗಳು. ಅಕ್ಕಿ ಹಿಟ್ಟಿನಿಂದ ಹಾಕಿದ ರಂಗೋಲಿಯ ಮಧ್ಯದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸ್ವಸ್ತಿಕದ ಮೇಲೆ ಮಣ್ಣಿನ ಮಡಕೆಯಿಟ್ಟು ಅದರಲ್ಲಿ ಗಂಗಾಜಲ ತುಂಬಿ ಮೇಲೆ ಮಾವಿನ ಎಲೆಗಳನ್ನು ಇಡುತ್ತಾರೆ ಮತ್ತು ಹೊಸ ವರ್ಷ ಶುಭ ತರಲಿ ಎಂದು ಮನಸಾ ಪ್ರಾರ್ಥಿಸುತ್ತಾರೆ. ನದಿಯಲ್ಲಿ ಮಿಂದು ಬೆಂಗಾಲಿ ವಿಶೇಷ ಉಡುಗೆ ತೊಟ್ಟ ಹೆಣ್ಣು ಮತ್ತು ಗಂಡು ಮಕ್ಕಳು ನಡೆಸುವ ಪ್ರಭಾತಫೇರಿ ಆಕರ್ಷಕವಾಗಿರುತ್ತದೆ. ಸಂಪತ್ತಿನ ದೇವತೆ ಲಕ್ಷ್ಮಿ ಮತ್ತು ವಿಘ್ನವಿನಾಶಕ ಗಣೇಶನ ಪೂಜೆಗಳೊಂದಿಗೆ ವ್ಯಾಪಾರಿಗಳು ಹೊಸ ವರ್ಷದ ಖಾತಾ ಕಿರ್ದಿ ಪುಸ್ತಕದಲ್ಲಿ ನೋಂದಣಿ ಆರಂಭಿಸುತ್ತಾರೆ. "ಶುಭೋ ನಬೊ ಬರ್ಷೋ" ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

"ನವ್ರೆಹ್" ಇದು ಕಾಶ್ಮೀರದ ಹೊಸ ವರ್ಷ. ಚೈತ್ರ ಮಾಸದ ಮೊದಲ ದಿನ ಇದು ಬರುತ್ತದೆ. ಈ ದಿನ ಸಪ್ತ ಋಷಿ ಸಂವತ್ಸರದ ಮೊದಲ ದಿನವೂ ಹೌದು. ಮೂಲ ಸಂಸ್ಕೃತದ "ನವ್ ವರ್ಷ"ದಿಂದ ನವ್ರೆಹ್ ಉದ್ಭವವಾಗಿದೆ. ಹೊಸ ವರ್ಷದ ಮುನ್ನಾ ದಿನ ಕಾಶ್ಮೀರಿ ಪಂಡಿತರು ವಿಚಾರ್ ನಾಗ್ ಎನ್ನುವ ಪುಷ್ಕರಣಿಯಲ್ಲಿ ಮಿಂದು ಪಾಪ ವಿಮೋಚನೆಗೆ ಪ್ರಾರ್ಥಿಸುತ್ತಾರೆ. ಅಕ್ಕಿ ಹಿಟ್ಟಿನಲ್ಲಿ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಿದ ಕೇಕನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಕಾಶ್ಮೀರಿ ಪಂಡಿತರ ಕುಲಗುರುಗಳಿಂದ ಪಂಚಾಂಗ ಪಠಣ ನಡೆಯುತ್ತದೆ. ಈ ಪಂಚಾಂಗವನ್ನು ಅಕ್ಕಿ ತುಂಬಿದ ಪಾತ್ರೆಯಲ್ಲಿ ಸುಗಂಧ ಪುಷ್ಪಗಳಿಂದ ಅಲಂಕರಿಸಿ ಮತ್ತೊಂದು ತಟ್ಟೆ ಮುಚ್ಚಿ ಮರುದಿನ ಮುಂಜಾನೆಯವರೆಗೆ ದೇವರೆದುರು ಇಡುತ್ತಾರೆ. ಸಮೃದ್ಧಿಯ ಸಂಕೇತವಾದ ಅಕ್ಕಿ ತುಂಬಿದ ಪಾತ್ರೆಯನ್ನು ಕಾಶ್ಮೀರಿಗಳು ಹೊಸ ವರ್ಷದ ದಿನ ವೀಕ್ಷಿಸುತ್ತಾರೆ. ಹೀಗೆ ಮಾಡುವದರಿಂದ ಮುಂಬರುವ ವರ್ಷ ಶುಭಪ್ರದವಾಗುತ್ತದೆ ಎಂದು ಅವರು ನಂಬುತ್ತಾರೆ. ಶೇರಿಕಾ ದೇವತೆಯ ಪೂಜೆ ಅವತ್ತಿನ ವಿಶೇಷ. ಹೊಸವರ್ಷದ ಮೊದಲ ದಿನದಿಂದ ಆರಂಭವಾಗುವ ನವರಾತ್ರಿ ಹಬ್ಬ ನಮ್ಮಲ್ಲಿನ ನಾಡಹಬ್ಬ ದಸರಾದಂತೆ ಉಪವಾಸ ವೃತಾಚರಣೆಗಳಂತೆ ಅಚರಿಸಲ್ಪಡುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ವೈಷ್ಣೋದೇವಿಯ ದರ್ಶನ ಪಡೆಯಲಾಗುತ್ತದೆ.

"ಚೇತಿಚಾಂದ್" ಎನ್ನುವದು ಸಿಂಧಿ ಜನರ ಹೊಸ ವರ್ಷ. ಇದು ನಮ್ಮಲ್ಲಿನ ಯುಗಾದಿ ಹಬ್ಬದಂದೇ ಬರುತ್ತದೆ. ಚೈತ್ರಮಾಸದ ಮೊದಲ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಸಿಂಧಿ ಭಾಷೆಯಲ್ಲಿ ಚೇತ್ ಎಂದರೆ ಚೈತ್ರ ಎಂದರ್ಥ. ಸಿಂಧಿಗಳು ತಮ್ಮ ಧರ್ಮಗುರು ಝುಲೆಲಾಲನ ಜನ್ಮದಿನವಾಗಿಯೂ 'ಚೇತಿಚಾಂದ್'ನ್ನು ಆಚರಿಸುತ್ತಾರೆ. ಅವತ್ತು ಎಲ್ಲ ಸಿಂಧಿಗಳು ಜೀವದಾಯಿನಿ ಸಿಂಧು (ನದಿ)ವನ್ನು ಪೂಜಿಸುತ್ತಾರೆ. ಕಂಚಿನ ಪಾತ್ರೆಯಲ್ಲಿ ದೀಪ ಬೆಳಗಿಸಿ ಹೂವಿನೊಡನೆ ನೀರಿನಲ್ಲಿ ತೇಲಿಬಿಡುವ ಪರಿಪಾಠವಿದೆ. ಅಂದು ಸಹಸ್ರಾರು ಸಿಂಧಿಗಳು ತಮ್ಮ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಸುತ್ತಾರೆ.

ಮಹಾರಾಷ್ಟ್ರೀಯರು "ಗುಡಿಪಾಡವಾ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಇದು ನಮ್ಮ ಯುಗಾದಿ ಹಬ್ಬದ ಅನ್ವರ್ಥ. ಹೋಳಿಗೆ, ಸೂಂಠಪಾಕ ಮತ್ತು ಉಸಳಿ ಅಂದಿನ ವಿಶೇಷ ಭಕ್ಷ್ಯಗಳು. ಬೇವು ಬೆಲ್ಲದ ವಿನಿಮಯ ಅಂದಿನ ವಿಶೇಷ. ಉದ್ದನೆ ಬಡಿಗೆಯ ಕೊನೆಗೆ ತಾಮ್ರದ ಇಲ್ಲವೆ ಬೆಳ್ಳಿಯ ತಂಬಿಗೆಯನ್ನು ಡಬ್ಬಹಾಕಿ ರೇಷ್ಮೆ ಇಲ್ಲವೆ ಖಾದಿ ಬಟ್ಟೆಯಿಂದ ಮತ್ತು ತೋರಣಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಹೀಗೆ ನಡೆಯುವ ಗುಡಿ ಪೂಜೆ ಅಂದಿನ ಶುಭಸೂಚಕ ದಿನದ ಪ್ರಮುಖ ಆಚರಣೆ. ಸಾಡೇತೀನ್ ಶುಭ ಮುಹೂರ್ತಗಳಲ್ಲಿ ಒಂದಾಗಿರುವ ಯುಗಾದಿಯ ದಿನ ಅನೇಕ ಶುಭ, ಮಂಗಲ ಕಾರ್ಯಗಳನ್ನು ಆರಂಭಿಸುತ್ತಾರೆ. ಶೆಟ್ಟರು ತಮ್ಮ ಖಾತೆ ಕಿರ್ದಿಯ ಹೊಸ ಲೆಖ್ಖ ಬರೆಯಲು ಅಂದಿನಿಂದ ಆರಂಬಿಸುತ್ತಾರೆ. ಬ್ರಹ್ಮ ಜಗತ್ತನ್ನು ನಿರ್ಮಿಸಿದ್ದು ಇದೇ ದಿನ ಮತ್ತು ಮರ್ಯಾದಾಪುರುಷ ರಾಮನು ವಾಲಿಯನ್ನು ಇದೇ ದಿನ ಸಂಹರಿಸಿದನೆಂದು ಹೇಳಲಾಗಿದೆ.

ಆಸ್ಸಾಮಿನ ಜನರು ಎಪ್ರಿಲ್ ಮತ್ತು ಮೇ ಮಧ್ಯದಲ್ಲಿ ಬರುವ ಹೊಸ ವರ್ಷವನ್ನು "ಗೊರುಬಿಹು" ಎಂಬುದಾಗಿ ಆಚರಿಸುತ್ತಾರೆ. ಅಲಂಕೃತ ದನಗಳ ಜಾತ್ರೆ ಅಂದಿನ ವಿಶೇಷ.

ಭಾರತಕ್ಕೆ ಜೆ.ಆರ್.ಡಿ ಟಾಟಾ, ಹೋಮಿ ಜಹಾಂಗೀರ್ ಭಾಭಾ, ರತನ್ ಟಾಟಾ ಮುಂತಾದ ಮೇಧಾವಿಗಳನ್ನು ನೀಡಿದ ಪಾರ್ಸಿ ಧರ್ಮೀಯರು ಹೊಸ ವರ್ಷವನ್ನು "ನವ್ರೊಜ಼್" ಹೆಸರಿನಿಂದ ಪ್ರತಿವರ್ಷ ಮಾರ್ಚ್ ೨೧ ರಂದು ಆಚರಿಸುತ್ತಾರೆ. ಈ ದಿನ ತಳಿರು ತೋರಣ ಕಟ್ಟುವದು, ರಂಗೋಲಿ ಹಾಕುವದು ಹೀಗೆ ಹಲವಾರು ಹಿಂದೂ ಹೊಸವರ್ಷದ ಆಚರಣೆಗಳನ್ನು ಪಾರ್ಸಿಗಳು ಅಳವಡಿಸಿಕೊಂಡಿದ್ದಾರೆ.

ಕೊನೆಯದಾಗಿ ಕರ್ನಾಟಕ ಮತ್ತು ಅಂಧ್ರಪ್ರದೇಶಗಳಲ್ಲಿ ಯುಗಾದಿಯಂದು ಹೊಸ ವರ್ಷದ ಆಚರಣೆ ನಡೆಯುತ್ತದೆ. ವರಕವಿ ಬೇಂದ್ರೆ ಹೇಳುವಂತೆ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..." ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಪಂಚಾಂಗ ಪಠಣ/ಶ್ರವಣ ಅಂದಿನ ಪ್ರಮುಖ ಆಕರ್ಷಣೆಗಳು.

ನಿಮಗೆಲ್ಲ ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಮುಂದಿನ ಯುಗಾದಿ ವಿಶೇಷಾಂಕದಲ್ಲಿ ಮತ್ತೆ ಭೇಟಿ ಆಗೋಣ.

No comments: