Tuesday, April 15, 2008

ಕ್ಷಣ ಕ್ಷಣ - ಪ್ರಕಾಶ ಸಿ ರಾಜಗೋಳಿ. ಬೆಂಗಳೂರು

ಸದ್ಯ ಬೆಂಗಳೂರಿನ ಐ.ಬಿ.ಎಮ್ ಇಂಡಿಯಾ ಸಂಸ್ಥೆಯಲ್ಲಿ ಎಸ್.ಏ.ಪಿ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸ್ಯಾಪ್ ರಾಜ ಕನ್ನಡದಲ್ಲಿ ಲೇಖನ ಬರೆಯುವ ಪ್ರಮುಖ ಹವ್ಯಾಸ ಹೊಂದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆಯಲ್ಲದೇ ಕೆಲ ಕಾರ್ಯಕ್ರಮಗಳು ಆಕಾಶವಾಣಿ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರಗೊಂಡಿವೆ. ದೀಪಾ ಅವರೊಂದಿಗೆ ವೈವಾಹಿಕ ಜೀವನ ನಡೆಸ್ಮತ್ತಿವ ರಾಜ್‌ಗೆ ಮಗ ದರ್ಶನ್ ಕಂಡರೆ ಇನ್ನಿಲ್ಲದ
ಸಂಭ್ರi .


ಪುರಾಣ ಪ್ರಸಂಗದಲ್ಲಿ ಸಮುದ್ರಮಥನ ನಡೆಯುವಾಗ ದೇವಾನುದೇವತೆಗಳೆಲ್ಲ ಅಮೃತಕ್ಕಾಗಿ ಹಾತೊರೆದರು... ಸೇವನೆ ಮಾಡಿದರು.... ಅಮರತ್ವ ಪಡೆದರು. ಆದರೆ ಸಮುದ್ರಮಥನದ ಬೈ ಪ್ರಾಡಕ್ಟ್ ಆದಂತಹ ಕಾರ್ಕೋಟಕ ವಿಷವನ್ನು ಏನು ಮಾಡುವದು ಎಂದು ದೇವಾನುದೇವತೆಗಳೆಲ್ಲ ಚಿಂತಾಕ್ರಾಂತರಾದ ಆ ಕ್ಷಣದಲ್ಲಿ ಭೋಳೆ ಶಂಕರ ಆ ವಿಷವನ್ನು ಆಪೋಷಣ ಮಾಡಲು ರೇಡಿಯಾಗದೇsss ಈ ಲೇಖನ ಬರೆಯಲು ನಾನಿರುತ್ತಿರಲಿಲ್ಲ!! ಓದಲು ನೀವಿರುತ್ತಿರಲಿಲ್ಲ!!! ಅಲ್ಲವೇ?
ಪ್ರಥಮವಂದ್ಯ ಗಣೇಶನ ಬುದ್ಧಿ ಸಾಮರ್ಥ್ಯವನ್ನು ಜಗತ್ತಿಗೆ ಸಾರಲು ಪರಮೇಶ್ವರ ಪಾರ್ವತಿಯರು ತಮ್ಮ ಮಕ್ಕಳಿಬ್ಬರಿಗೆ ವಿಶ್ವ ಪ್ರದಕ್ಷಿಣೆಯ ಸವಾಲು ಹಾಕಿದ ಆ ಕ್ಷಣದಲ್ಲಿ ಗಣಪತಿ ತನ್ನ ವಾಹನವಾದ ಇಲಿಯ ಇತಿಮಿತಿಗಳನ್ನರಿತು ಸರ್ವೇಶ್ವರ ಶಿವನ ಮತ್ತು ಆದಿಶಕ್ತಿ ಪಾರ್ವತಿಯರ ಸುತ್ತ ಸುತ್ತುವ ನಿರ್ಧಾರ ತೆಗೆದುಕೊಳ್ಳದೇ sss ಅಂದಿನಿಂದ ಇಂದಿನವರೆಗೆ ಗಣೇಶ ಬುದ್ಧಿಪ್ರದಾಯಕ ಎಂದೆನಿಸಿಕೊಳ್ಳುತ್ತಿರಲಿಲ್ಲವೇನೋ...
ರಾಮಾಯಣದಲ್ಲಿ ಸೀತೆಯು ತನಗೆ ಬಂಗಾರದ ಜಿಂಕೆ ಬೇಕು ಎಂದು ಆ ಕ್ಷಣದಲ್ಲಿ ಹಠ ಹಿಡಿಯದೇ sss ಮತ್ತು ಮೈದುನ ಲಕ್ಷ್ಮಣ ಹಾಕಿದ "ಲಕ್ಷ್ಮಣ ರೇಖೆ"ಯನ್ನು ಆ ಕ್ಷಣದಲ್ಲಿ ದಾಟದೇ ಇದ್ದಿದ್ದರೆ ರಾಮಾಯಣ ಯುದ್ಧವೇ ಆಗುತ್ತಿರಲಿಲ್ಲವೇನೋ.
ಮಹಾಭಾರತದಲ್ಲಿ ಮಯ ನಿರ್ಮಿತ ಅರಮನೆಯ ಚಮತ್ಕಾರಗಳಿಗೆ ಬಲಿಯಾಗಿ ದಾರಿ ಎಂದು ತಿಳಿದು ನೀರಲ್ಲಿ ಬಿದ್ದ ದುರ್ಯೋಧನನನ್ನು ನೋಡಿ ದ್ರೌಪದಿಯು ನಕ್ಕ ಕ್ಷಣದಲ್ಲಿ ಆತ ಅದು ತನ್ನ ಅತ್ತಿಗೆ ನಕ್ಕಿದ್ದಾಳೆ ಬಿಡು ಎಂದು ದೊಡ್ಡ ಮನಸ್ಸು sss.... ಇಡೀ ಮಹಾಭಾರತವೇ ನಡೆಯುತ್ತಿರಲಿಲ್ಲವೇನೋ.
ತನ್ನ ಸೋದರ ಸಂಬಂಧಿಗಳೊಂದಿಗೆ ಹೋರಾಡಲು ಅರ್ಜುನ ಕಪಟನಾಟಕ ಸೂತ್ರಧಾರಿ ಕೃಷ್ಣನ ಒಂದೇ ಮಾತಿಗೆ ತಕ್ಷಣವೇ ಒಪ್ಪಿ sss ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯ ರಚನೆಯೇ ಆಗುತ್ತಿರಲಿಲ್ಲವೇನೋ.
ಸಿಟ್ಟಿಗೆ ಹೆಸರಾದ ಜಮದಗ್ನಿ ಋಷಿಯು ತನ್ನ ಅರ್ಧಾಂಗಿ ಆದಿಶಕ್ತಿ ರೇಣುಕೆಯ ಮೇಲೆ ಕೋಪಗೊಂಡು ಆ ಕ್ಷಣದಲ್ಲಿ ಪರಶುರಾಮನಿಗೆ ಅವಳ ಶಿರಚ್ಛೇದದ ಆಜ್ಞೆ ನೀಡದೇ sss......... ಪರಶುರಾಮನ ಪಿತೃ ವಾಕ್ಯ ಪರಿಪಾಲನಾ ಮತ್ತು ಮೃತ ತಾಯಿಯನ್ನು ಮತ್ತೆ ಜೀವಂತಗೊಳಿಸಿಕೊಂಡ ನಿದರ್ಶನ ನಮ್ಮ ಮುಂದೆ ಇರುತ್ತಿರಲಿಲ್ಲವೇನೋ.
೧೨ ನೆಯ ಶತಮಾನದಲ್ಲಿ ನಡೆದ ಘಟನೆ: ನಗರ ವೀಕ್ಷಣೆಗೆ ಬಂದ ಮಂತ್ರಿ ಬಸವಣ್ಣನಿಗೆ ಅಂತ್ಯಜ ಡೋಹರ ಕಕ್ಕಯ್ಯ ಶರಣು ಎಂದಿದ್ದಕ್ಕೆ ಪ್ರತಿಯಾಗಿ ಬಸವಣ್ಣ ಶರಣು ಶರಣಾರ್ಥಿ ಎಂದಾಗ ಆ ಕ್ಷಣದಲ್ಲಿ ಆ ದಂಪತಿಗಳು ಮಾಡಿದ ಕಠೋರ
ನಿರ್ಧಾರ......... ಮತ್ತು ತನ್ಮೂಲಕ ಅವರ ದೇಹದ ಚರ್ಮದಿಂದ ತಯಾರಾದ ಪಾದುಕೆಗಳನ್ನು ಬಸವಣ್ಣ ಅವರ ಭಕ್ತಿಗೆ ಮೆಚ್ಚಿ ಆ ಕ್ಷಣದಲ್ಲಿ ತನ್ನ ತಲೆಯ ಮೇಲೆ ಇರಿಸಿಕೊಳ್ಳದೇ sss ಅಂತಹುದೊಂದು ಮಹಾನ್ ಘಟನೆಗೆ ಇತಿಹಾಸ ಸಾಕ್ಷಿಯಾಗುತ್ತಿರಲಿಲ್ಲವೇನೋ...
ಕನ್ನಡ ನಾಡಿನ ಕೆಚ್ಚೆದೆಯ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಪತಿಯ ಮರಣಾನಂತರ ವಾರಸು ಕಾಯಿದೆಯಡಿ ಕುಟಿಲ ಖ್ಯಾತಿಯ ಆಂಗ್ಲರು ರಾಜ್ಯ ಕಬಳಿಸಲು ಹೊಂಚಿಸಿದ ಆ ಕ್ಷಣದಲ್ಲಿ ಅವರ ಬೆದರಿಕೆಗಳಿಗೆ ಜಗ್ಗದೆ ಯುದ್ಧಕ್ಕೆ ಅಣಿಯಾಗದೆ sss......... ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ನಾಡು ಸಾಕ್ಷಿಯಾಗುತ್ತಿರಲಿಲ್ಲವೇನೋ (ಆದರೆ ವಿಪರ್ಯಾಸ ನೋಡಿ ಕಿತ್ತೂರು ಯುಧ್ಧವಾಗಿ(೧೮೨೪) ಎಷ್ಟೋ ವರ್ಷಗಳ ನಂತರ ಕ್ರಿ.ಶ.೧೮೫೭ರಲ್ಲಿ ನಡೆದ ಸಿಪಾಯಿ ದಂಗೆಯನ್ನು ನಾವೆಲ್ಲಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾನ್ಯ ಮಾಡಿದ್ದೇವೆ.)
ಅಮೇರಿಕೆಯ ಚಿಕ್ಯಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದ ನೆರೆದ ಜನರನ್ನು ಸಂಬೋಧಿಸಲು "ಅಕ್ಕ ತಂಗಿಯರೆ ಅಣ್ಣ ತಮ್ಮಂದಿರೆ" ಎಂಬುದಾಗಿ ಬಳಸದೆ sss ಅವರ ಮಹತ್ವ ವಿದೇಶೀಯರಿಗೆ ಗೊತ್ತಾಗುತ್ತಿರಲಿಲ್ಲವೇನೋ....
ಭಾರತದ ಅಣುಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಯಪಡಿಸಿದ ಪೋಖ್ರಾನ್ ಅಣು ಪರೀಕ್ಷೆಯ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಚಲವಾದ ನಿರ್ಧಾರವನ್ನು ಆ ಕ್ಷಣದಲ್ಲಿ ತೆಗೆದುಕೊಳ್ಳದೇ sss ಜಗತ್ತಿನ ದೊಡ್ಡಣ್ಣ ಅಮೇರಿಕಾಗೆ ನಮ್ಮ ಶಕ್ತಿ ಸಾಮರ್ಥ್ಯ ತಿಳಿಯುತ್ತಿರಲಿಲ್ಲವೇನೋ.....
ಆಯಾಯಾ ಕ್ಷಣದ ನಿರ್ಧಾರಗಳು ಯಾರನ್ನೇ ಆದರೂ ಎಂಥಾ ಇಕ್ಕಟ್ಟಿಗೆ, ಪೇಚಿಗೆ, ಆಪತ್ತಿಗೆ, ಸಂಭ್ರಮಕ್ಕೆ, ದುಃಖಕ್ಕೆ, ಸಂತಸಕ್ಕೆ ಸಿಕ್ಕಿಸುತ್ತವೆ ಹೇಳಲು ಬಾರದು.
ರಾತ್ರಿ ಊಟವಾದ ಮೇಲೆ ಏಕಾಂತದಲ್ಲಿ ಹೆಂಡತಿ ಗಂಡನ ಮನಸೆಳೆದು ತನ್ನ ರೇಶ್ಮೆ ಸೀರೆ, ಬಂಗಾರದ ಒಡವೆ, ವಜ್ರದ ಓಲೆ ಇತ್ಯಾದಿಗಳಿಗೆ ಬೇಡಿಕೆ ಸಲ್ಲಿಸಿದಾಗ ಆ ಕ್ಷಣದಲ್ಲಿ ಗಂಡ ಎನ್ನುವ ಪ್ರಾಣಿ ಎಚ್ಚೆತ್ತುಕೊಂಡರೆ ಸರಿ ಇಲ್ಲವಾದರೆ ಬೇಡಿಕೆ ಪೂರೈಸಲು ಹರಸಾಹಸ ಮಾಡುವದನ್ನು ನಾವೆಲ್ಲ ಅನುಭವಿಸಿದ್ದೇವೆ ಅಥವಾ ಅನುಭವಿಕರಿಂದ ತಿಳಿದುಕೊಂಡಿದ್ದೇವೆ.
ಪ್ರಿಯಕರನ ಮನೋಸ್ಥಿತಿ ಅರಿಯದೆ ಹಿಂದಿನಿಂದ ಬಂದು ತನ್ನ ಕೈಯಿಂದ ಅವನ ಕಣ್ಣು ಮುಚ್ಚಿ "ಪೆಹಚಾನ್ ಕೌನ್" ಎಂದ ಪ್ರಿಯತಮೆಗೆ ಅತ್ಮೀಯ ಇಲ್ಲವೆ ಸಿಡಿಮಿಡಿ ಮಾತುಗಳು ಸಿಗಬಹುದು. ಅದು ಆ ಕ್ಷಣ ಪ್ರಿಯಕರ ಪ್ರತಿಕ್ರಿಯಿಸುವ ರೀತಿಯ ಮೇಲೆ ನಿರ್ಧಾರಿತವಾಗುತ್ತದೆ.


ಹೊಟ್ಟೆ ಹಸಿದು ತಟ್ಟೆಯಲ್ಲಿರುವದನ್ನು ಗಬಗಬನೆ ತಿನ್ನುವಾಗ ತುತ್ತಿನಲ್ಲಿ ಬರುವ ಕಲ್ಲು, ಬೇಡವಾದ ಅತಿಥಿಯಂತೆ ಬರುವ ಕ್ರೆಡಿಟ್ ಕಾರ್ಡಿನವರ, ಬ್ಯಾಂಕಿನವರ ಮೊಬೈಲ್ ಕಾಲ್ಲು, ಇಂಪಾರ್ಟಂಟ್ ನ್ಯೂಸ್ ನೋಡುತ್ತಿರುವಾಗ ಮನೆಯ ಸದಸ್ಯರೊಬ್ಬರು ಬದಲಾಯಿಸುವ ಟಿವಿ ಚಾನೆಲ್ಲು, ಸೇಲ್ಸಮನ್ನುಗಳು ಬಾರಿಸುವ ಮನೆಯ ಕಾಲ್ ಬೆಲ್ಲು, ಬಾಗಿಲು ತೆಗೆದ ಹೆಂಡತಿಯ ಮುಖದ ಮೇಲಿನ ಡಲ್ಲು, ಕೋರಿಯರ್ ಇಲ್ಲವೆ ಪೋಸ್ಟಿನಲ್ಲಿ ಬರುವ ಕ್ರೆಡಿಟ್ ಕಾರ್ಡ್ ಬಿಲ್ಲು, ಅತಿ ಮುಖ್ಯ ಸಂದರ್ಭದ ಫೋಟೋ ತೆಗೆಯುತ್ತಿರುವಾಗ ಕೈಕೊಡುವ ಕ್ಯಾಮೆರಾ ಬ್ಯಾಟರಿ ಸೆಲ್ಲು, ಆ ಕ್ಷಣದಲ್ಲಿ ಎಷ್ಟೊಂದು ಪಿತ್ತ ನೆತ್ತಿಗೇರಿಸುತ್ತವೆ ಅಲ್ಲವೆ?
ಅವೆಲ್ಲ ಆ ಕ್ಷಣ ನಮ್ಮ ಮನಸ್ಸು ಪ್ರತಿಕ್ರಿಯಿಸುವ ರೀತಿಗೆ ಅನ್ವಯವಾಗಿರುತ್ತವೆ. "ಪ್ರೀತಿಗೆ ಕಣ್ಣಿಲ್ಲ" ಹಾಗೆ ಆಗುವದು ನಮ್ಮ ಮನದಾಳದಲ್ಲಿ ಉದ್ಭವಿಸುವ ವಿಚಾರಗಳಿಂದ ನಾವು ತೆಗೆದುಕೊಳ್ಳುವ ಆ ಕ್ಷಣದ ನಿರ್ಧಾರಗಳಿಂದ ಅಲ್ಲವೆ? ಒಂದು ಕ್ಷಣ ಯೋಚಿಸಿ ನೋಡಿ.


ಜೀವನವೆಂದ ಮೇಲೆ ಕಷ್ಟ ಕಾರ್ಪಣ್ಯಗಳು, ತೊಂದರೆಗಳು, ಸೋಲುಗಳು, ರೋಗ ರುಜಿನಗಳು ಬರುವದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ, ಆ ಕ್ಷಣಗಳಲ್ಲಿ ನಾವು ನಮ್ಮ ಬುದ್ಧಿಗೆ ದೆವ್ವ ಬಡಿದವರಂತೆ ಜೀವನದ ಮುಂದಿನ ಕ್ಷಣ ನಮ್ಮ ಪಾಲಿಗೆ ಇಲ್ಲ ಎಂದು ನಿರ್ಣಯಿಸಿ ಸೇಡಿನ ಕ್ರಮಗಳನ್ನು, ದೇಹದಂಡನೆ ಅಥವಾ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡರೆಽಽಽ ಜೀವನಕ್ಕೆ ಅರ್ಥವೆಂಬುದಿದೆಯೆ?
ಅತಿ ಸಂತಸವಾದಾಗ, ಅತಿ ದುಃಖವಾದಾಗ ಆ ಕ್ಷಣದಲ್ಲಿ ಅತಿ ಹೆಚ್ಚಿನ ರಕ್ತ ಪೊರೈಕೆ ನಮ್ಮ ಮೆದುಳಿಗೆ ಆಗುವದರಿಂದ ಬ್ಯಾಲನ್ಸ್ ಕಳೆದುಕೊಳ್ಳುವ ನಮ್ಮ ಮನಸ್ಸು ನಮ್ಮ ಕೈಯಿಂದ ಏನೆಲ್ಲಾ ಮಾಡಿಸುತ್ತದೆ ಒಂದು ಕ್ಷಣ ಯೋಚಿಸಿ ನೋಡಿ....
ಭಾರತ ಪಂದ್ಯ ಗೆದ್ದ ಖುಷಿಯಲ್ಲಿ ನಾಯಕ ಸೌರವ್ ಗಂಗೂಲಿ ಹಾಕಿಕೊಂಡ ಶರ್ಟು ಕಳಚಿ ಮೈದಾನದ ತುಂಬ ನೆರೆದ ಜನರ ಅರಿವೇ ಇಲ್ಲದೆ ಕೈಯಿಂದ ಅದನ್ನು ಸುತ್ತಿಸುತ್ತಾನೆ, ವಿಶ್ವ ಸುಂದರಿ ಐಶ್ವರ್ಯಾ ರೈ ತನಗೆ ಒಲಿಯುತ್ತಿಲ್ಲ ಎಂದು ಕಂಠ ಪೂರ್ತಿ ಕುಡಿದ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲೂ ಸರಿರಾತ್ರಿಯಲ್ಲಿ ಅವಳ ಮನೆಯೆದುರು ರಂಪಾಟ ಮಾಡುತ್ತಾನೆ,

ಶತಾಯ ಗತಾಯ ಚುನಾವಣೆ ಗೆಲ್ಲ ಬಯಸಿದ್ದ ಆಮ್ಚಿ ಮುಂಬೈ ಖ್ಯಾತಿಯ ಬಾಳ್ ಠಾಕ್ರೆ ಉತ್ತರ ಭಾರತೀಯರನ್ನು ಒಲಿಸಿಕೊಳ್ಳಲು ಬಹಿರಂಗ ಸಭೆಯೊಂದರಲ್ಲಿ ಸೇರಿದ ಜನಕ್ಕೆ ದೀರ್ಘದಂಡ ನಮಸ್ಕಾರ ಮಾಡುತ್ತಾನೆ, ವಾದವಿವಾದಗಳಲ್ಲಿ ತೊಡಗಿದ ತಮಿಳುನಾಡಿನ ವಿಧಾನಸಭೆಯಲ್ಲಿ ಬುದ್ಧಿಗೆ ಮಂಕು ಕವಿದ ಸದಸ್ಯನೊಬ್ಬ ಜಯಲಲಿತಾಳ ಸೀರೆ ಸೆಳೆಯಲು ಮುಂದಾಗಿ ಆಧುನಿಕ ದುಶ್ಯಾಸನ ಆಗಬಯಸುತ್ತಾನೆ......
"ಬ್ಯುಟಿ ಲೈಸ್ ಇನ್ ಬಿಹೋಲ್ಡರ್ಸ್ ಐಸ್" ಅನ್ನುವಂತೆ "ಸೌಂದರ್ಯ ನೋಡುಗನ ಕಣ್ಣಲ್ಲಿರುತ್ತದೆ" ಅದೇ ರೀತಿ ಆಯಾಯಾ ಸಂದರ್ಭಗಳಿಗನುಸಾರವಾಗಿ ಆಯಾಯಾ ಕ್ಷಣಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವದು ಆಯಾಯಾ ವ್ಯಕ್ತಿಗಳ ಮನಸ್ಸಿನಲ್ಲಿ ಅಡಗಿರುತ್ತದೆ ಮತ್ತು ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ. ಮುಂದೆ ಉಂಟಾಗುವ ಪರಿಣಾಮಗಳ ಬಗ್ಗೆ ಸ್ವಲ್ಪ ಯೋಚಿಸಿ ನಾವು ನಿರ್ಧಾರಗಳನ್ನು ಕೈಗೊಂಡರೆ ಬಾಳು ಬಂಗಾರವಾಗುತ್ತದೆ ಇಲ್ಲದೆ ಹೋದರೆ ನರಕವಾಗುತ್ತದೆ.
ಈ ಲೇಖನ ಓದಿದ ಮೇಲೆ ನಮ್ಮನ್ನೆಲ್ಲ ಒಟ್ಟಾಗಿಡಲು, ಸದಾ ಸಂಪರ್ಕದಲ್ಲಿರಿಸಲು ಹೆಣಗುವ ನಮ್ಮ ಟಿಪಿ ಬಳಗ ಯಾಹೂ ಗ್ರೂಪ್ ಹಾಗೂ ನಿರಂತರ ವಿಶೇಷಾಂಕಗಳು ಶ್ರಮಪಡುತ್ತಿರುವದು ಸೂಕ್ತ ಎಂದು ಒಂದು ಕ್ಷಣ ನಿಮಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ ಅನ್ನಿಸುತ್ತದೆ.

ವರುಷದ ಕಂದ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.


ವರುಷದ ಕಂದ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.
(ನಮ್ಮ ಮಗಳು ಸೌದಾಮಿನಿಗೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಬರೆದ ಕವನ)

ಮನೆಯ ಬೆಳಗಿದ ದೀಪಕೆ
ಮನವ ತಣಿಸುವ ಮೂರ್ತಿಗೆ
ನಮ್ಮ ಮನೆಯ ಪುಟ್ಟ ರತಿಗೆ
ವರುಷವಾಯಿತು ಇಂದಿಗೆ

ತನುವ ಕುಣಿಸಿ ಅತ್ತು ಕಾಡಿಸಿ
ನಮ್ಮ ಮಣಿಸಿ ಮುತ್ತು ಪೋಣಿಸಿ
ಸರವ ಧರಿಸಿದ ಮುಗುಧೆಗೆ
ವರುಷವಾಯಿತು ಇಂದಿಗೆ

ಮಿಂಚಿನಂತೆ ಹೊಳೆಯುತಿರುವ
ಸಂಚಿನಲ್ಲೇ ನಮ್ಮ ಸೆಳೆವ
ನಮ್ಮ ಮನೆಯ ಮಿಂಚುಳ್ಳಿಗೆ
ವರುಷವಾಯಿತು ಇಂದಿಗೆ

ಹರುಷ ಸುರಿಸುವ ಕಂದಗೆ
ಹೊಣೆಯ ಕಲಿಸಿದ ಬಾಲೆಗೆ
ನಮ್ಮ ಮನೆಯ ಚಾರುಲತೆಗೆ
ವರುಷವಾಯಿತು ಇಂದಿಗೆ

ನಮ್ಮ ಬಾಳಿನ ಗ್ರಂಥವ
ತನ್ನ ಹೆಸರಲಿ ಬರೆಯುತಿರುವ
ಈ ಪುಟ್ಟ ಕೃತಿಕರ್ತೃವಿಗೆ
ವರುಷವಾಯಿತು ಇಂದಿಗೆ

-0-

ಪರಮಾತ್ಮನ ಪರಿಚಯ - ಬ್ರಹ್ಮಕುಮಾರಿ ಮಾಲಾ (ಎಮ್.ಬಿ.ರಾಜಗೋಳಿ, ನಿವೃತ್ತ ಮುಖ್ಯೋಪಾಧ್ಯಾಯಿನಿ), ಯರಡಾಲ.


ಪ್ರಕಾಶ ಅವರ ಸೊದರತ್ತೆಯವರಾದ ಶ್ರೀಮತಿ ಎಮ್.ಬಿ. ರಾಜಗೋಳಿ ಇವರು ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆಯಾಗಿ ಕಳೆದ ಕೆಲವೇ ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಕ್ರಿಯ ಸದಸ್ಯರಾಗಿರುವ ಇವರು ಪರಮಪಿತ ಶಿವನ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.


ಇದೇನು ಹೊಸ ಮಾತಲ್ಲ. ಯಾರಿಗೆ ಪರಮಾತ್ಮನ ಪರಿಚಯ ಇಲ್ಲ ಮತ್ತು ಯಾರಿಗೆ ಗೊತ್ತಿಲ್ಲ. ಪರಮಾತ್ಮ ಅಂದರೆ ಕೊರಳಲ್ಲಿ ರುದ್ರಾಕ್ಷಿ ಸರ, ಜಡೆಯಲ್ಲಿ ಗಂಗೆ, ಕೈಯಲ್ಲಿ ತ್ರಿಶೂಲ, ಕೊರಳಿಗೆ ಸುತ್ತಿದ ಹಾವು, ಹುಲಿ ಚರ್ಮದ ಉಡುಗೆ ಪಕ್ಕದಲ್ಲಿ ಪಾರ್ವತಿ ಜೊತೆಗೆ ಗಣಪತಿ. ಈತನೆ ಪರಮಾತ್ಮ ಎನ್ನುತ್ತಾರೆ. ಬೇರೆ ಬೇರೆ ದೇವಾಲಯಗಳಿಗೆ ಹೋಗಿ ಹನುಮಾನ್, ಕೃಷ್ಣ, ಲಕ್ಷ್ಮಿ ಇವರುಗಳನ್ನು ದೇವರು ಎನ್ನುತ್ತಾರೆ. ಕಲ್ಲು, ಮಣ್ಣು, ಕಟ್ಟಿಗೆ ಮುಂತಾದವುಗಳಿಂದ ಮಾಡಿದ ಮೂರ್ತಿಗಳನ್ನು ದೇವರು ಎನ್ನುತ್ತಾರೆ. ಮಸೀದೆಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ದೇವರು ಎನ್ನುತ್ತಾರೆ. ಚರ್ಚುಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಕ್ರಿಸ್ತನನ್ನು ದೇವರು ಎನ್ನುತ್ತಾರೆ. ಗುರುದ್ವಾರಗಳಿಗೆ ಹೋಗಿ ಗ್ರಂಥಸಾಹಿಬ್ ಪಠಣ ಮಾಡಿ ಗುರುನಾನಕನನ್ನು ದೇವರು ಎನ್ನುತ್ತಾರೆ. ಅಹಿಂಸಾ ಪರಮೋಧರ್ಮ ಎಂದು ಹೇಳಿದ ಮಹಾವೀರನನ್ನು, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧನನ್ನು, ಕಾಯಕವೇ ಕೈಲಾಸ ಎಂದು ಹೇಳಿದ ಬಸವಣ್ಣನನ್ನು, ವಿವಿಧ ಸಿದ್ಧಾಂತ ಬೋಧಿಸಿದ ಆಚಾರ್ಯರನ್ನು, ಮಠಾಧಿಪತಿಗಳನ್ನು, ಸಂತರನ್ನು, ಸಾಧುಗಳನ್ನು ದೇವರೆನ್ನುತ್ತಾರೆ. ಹಾಗಾದರೆ ಇವರೆಲ್ಲರೂ ದೇವರಾ? ನಿಜವಾದ ದೇವರು ಯಾರು? ಆ ನಿಜವಾದ ಸತ್ಯವಾದ ಪರಮಪಿತ ಪರಮಾತ್ಮನ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಳ್ಳೋಣ ಬನ್ನಿ.
ಪರಮಪಿತ ಪರಮಾತ್ಮ ಎಂದರೆ ಈತನಿಗೆ ಯಾವ ತಂದೆ ತಾಯಿ ಇಲ್ಲ. ಈತನು ಯಾರ ಗರ್ಭದಿಂದಲೂ ಹುಟ್ಟಿಲ್ಲ. ಈತನಿಗೆ ಶರೀರ ಇಲ್ಲ. ಈತನು ಅಭೋಕ್ತ, ಅಯೋನಿಜ, ಅಶರೀರಿ, ಅಕಾಲ, ಜನನ ಮರಣ ರಹಿತ, ಧರ್ಮ-ಜಾತಿ-ವರ್ಣ-ವರ್ಗಬೇಧ ರಹಿತ ಜ್ಯೋತಿರ್ಬಿಂದು ಪರಮಾತ್ಮ ಸದಾ ಪವಿತ್ರ. ಈತನ ಹೆಸರು ಶಿವ. ಶಿವ ಎಂದರೆ ಸದಾ ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ. ದುಃಖ ದೂರ ಮಾಡಿ ಸುಖ ಕೊಡುವವನು. ದೇವರಿಗೆ ಹೆದರುವ ಕಾರಣ ಇಲ್ಲ. ಪರಮಾತ್ಮ ಆನಂದಸಾಗರ, ದಯಾಸಾಗರ, ಪ್ರೇಮಸಾಗರ. ಸಮುದ್ರದ ನೀರನ್ನೆಲ್ಲ ಮಸಿ (ಇಂಕ್) ಮಾಡಿ, ಆಕಾಶವನ್ನೆ ಹಾಳೆ (ಪೇಪರ್) ಮಾಡಿ, ಗಿಡಗಂಟಿಗಳನ್ನೆಲ್ಲ ಲೇಖನಿ (ಪೆನ್) ಮಾಡಿ ಬರೆದರೂ ಆತನ ಮಹಿಮೆ ತೀರುವದಿಲ್ಲ.
ಹಾಗಾದರೆ ಪರಮಾತ್ಮ ಜ್ಯೋತಿರ್ಬಿಂದು ಎಂದ ಹಾಗಾಯಿತು. ಈ ಜ್ಯೋತಿರ್ಬಿಂದು ಪರಮಾತ್ಮನ ಸ್ಥಾನ ಎಲ್ಲಿದೆ, ಆತ ಮಾಡುವ ಕೆಲಸವೇನು, ಯಾವಾಗ ಭೂಮಿಗೆ ಬರುತ್ತಾನೆ, ಹೇಗೆ ಬರುತ್ತಾನೆ, ಯಾರ ಮುಖಾಂತರ ತನ್ನ ಪರಿಚಯ ತಿಳಿಸುತ್ತಾನೆ. ಪರಮಾತ್ಮ ಎಂದರೆ ಇಡೀ ವಿಶ್ವಕ್ಕೆ ತಂದೆ ಆಗಿದ್ದಾರೆ.
ಭಕ್ತಿಯಿಂದ ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ ಎನ್ನುತ್ತಾರೆ ಇದರ ಅರ್ಥ ಏನು? ರಾಮ ರಾಜ್ಯ ರಾವಣ ರಾಜ್ಯಗಳ ಬಗ್ಗೆ ಮಾತಾಡುತ್ತಾರೆ ಇವು ಯಾವಾಗ ಇದ್ದವು? ಭಾರತದಲ್ಲಿ ಬಂಗಾರದ ಪಕ್ಷಿ ಇತ್ತಂತೆ ಹೌದೆ? ಶಿವನ ಜಯಂತಿ ಆಚರಿಸುತ್ತಾರೆ ಏಕೆ? ಆಗಿ ಹೋದ ನಾಲ್ಕು ಯುಗಗಳ ಬಗ್ಗೆ ಈಗಿರುವ ಕಲಿಯುಗದ ಬಗ್ಗೆ ಹೇಳುತ್ತಾರೆ ಅವೆಲ್ಲ ಏನು? ಹೆಣ್ಣು ದೇವತೆಗಳಿಗೆ ಹುಲಿ ಸಿಂಹಗಳೇ ಏಕೆ ವಾಹನಗಳು? ಶಿವಲಿಂಗದ ಮುಂದೆ ನಂದಿಯೇ ಏಕೆ? ಶಿವನಿಗೆ ತ್ರಿದಳವೆ (ಪತ್ರಿ) ಏಕೆ ಪ್ರೀತಿ? ಶಿವಭಕ್ತರು ವಿಭೂತಿಯನ್ನೇ ಏಕೆ ಧರಿಸಬೇಕು? ವಿಷ್ಣು ಭಕ್ತರು ನಾಮವನ್ನೇ ಏಕೆ ಹಚ್ಚಬೇಕು? ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವೇಕೆ ತಿಳಿದುಕೊಂಡಿಲ್ಲ. ನಾನು ಯಾರು? ಎಲ್ಲಿಂದ ಬಂದೆ? ಯಾಕೆ ಬಂದೆ? ಎಲ್ಲಿಗೆ ಹೋಗಬೇಕು? ಹಿಂದೆ ಎಷ್ಟು ಜನ್ಮಗಳನ್ನು ಪಡೆದೆ? ಮುಂದೆ ಎಷ್ಟು ಜನ್ಮಗಳನ್ನು ಪಡೆಯಲಿದ್ದೇನೆ? ಈ ನಿರಂತರ ಜನನ ಮರಣಗಳಿಗೆ ಕೊನೆ ಇದೆಯೆ? ಮುಕ್ತಿ ಎನ್ನುವದೊಂದು ಇದೆಯೆ?
ಬರೀ ನದಿಗೆ ಹೋಗಿ ಜಳಕ ಮಾಡಿ ದೇಹ ಶುದ್ಧಿ ಮಾಡಿಕೊಂಡರಾಯಿತೆ? ಹಸಿವಾದಾಗ ಊಟ ಮಾಡಿದರಾಯಿತೆ? ಈ ಶರೀರದ ಹಣೆಯ ಮಧ್ಯದಲ್ಲಿ ಜ್ಯೋತಿಸ್ವರೂಪ ಆತ್ಮ ಇದೆ. ಅದೇ ಜೀವ. ಈ ಜೀವಕ್ಕೆ ಊಟ ಯಾವಾಗ ಸಿಗುತ್ತದೆ ಅಂದರೆ ಪರಮಪಿತ ಪರಮಾತ್ಮನನ್ನು ನೆನಪು ಮಾಡಿಕೊಂಡಾಗ. ನಾವು ಪರಮಾತ್ಮನನ್ನು ಎಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇವೆಯೊ ಅಷ್ಟು ನಮ್ಮ ಆತ್ಮ ಶಕ್ತಿಶಾಲಿಯಾಗುತ್ತದೆ, ಖುಷಿಯಿಂದ ಸಂತೋಷದಿಂದ ಇರುತ್ತದೆ. ಜ್ಞಾನ ಬೇರೆ, ವಿಜ್ಞಾನ ಬೇರೆ, ಅಜ್ಞಾನ ಬೇರೆ. ಚಿಂತೆ ಬೇರೆ, ಚಿತೆ ಬೇರೆ ಅಂತರ ಬಿಂದು ಮಾತ್ರ. ಹಾಗೆಯೆ ಒಂದು ದೀಪಕ್ಕೆ ಎಣ್ಣೆ ಇಲ್ಲ ಅಂದರೆ ಹ್ಯಾಗೆ ಅದು ಮಂದವಾಗುತ್ತದೋ ಕಡಿಮೆ ಪ್ರಕಾಶ ಕೊಡುತ್ತದೋ ಅದೇ ರೀತಿ ಆತ್ಮವೆಂಬ ಜ್ಯೋತಿರ್ಬಿಂದುವಿಗೆ ಪರಮಾತ್ಮನ ನೆನಪು ಕಡಿಮೆ ಮಾಡಿದರೆ ಶಕ್ತಿ ಕುಂದುತ್ತದೆ. ನೆನಪು ಹೆಚ್ಚು ಮಾಡಿದಂತೆಲ್ಲ ಶಕ್ತಿ ಹೆಚ್ಚುತ್ತದೆ. ಆಗ ಆತ್ಮ ಜ್ಯೋತಿ ಪ್ರಕಾಶಮಾನವಾಗಿ ಹೊಳೆಯುತ್ತದೆ.
ಶಿವನಿಗೆ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾರೆ. ಗಾಂಧೀಜಿ ಕೇವಲ ಶಾಂತಿಗಾಗಿ ಪ್ರಾರ್ಥನೆ ಮಾಡಿದರು. ಅವರು ಮಹಾತ್ಮರೇನೋ ಅನ್ನಿಸಿಕೊಂಡರು ಆದರೆ ನಿಜವಾದ ಪರಮಾತ್ಮನ ಬಗ್ಗೆ ಅವರು ತಿಳಿಯಲಿಲ್ಲ.
ಹಾಗಾದರೆ ನಾವು ಹೇಳುವ ಪರಮಪಿತ ಪರಮಾತ್ಮ ಯಾವ ಯುಗದಲ್ಲಿ ಮತ್ತು ಯಾವಾಗ ಈ ಧರೆಗೆ ಬರುತ್ತಾನೆ? ಈಗ ನಾವಿರುವ ಸಂಗಮಯುಗದಲ್ಲಿ ನಾವು ಪರಮಾತ್ಮನ ನೆನಪು ಮಾಡಿಕೊಳ್ಳುವದರಿಂದ ಮುಂದೆ ಬರುವ ಸತ್ಯ ಯುಗದಲ್ಲಿ ದೇವತಾ ಪದವಿ ಪಡೆಯುತ್ತೇವೆ. ಹೀಗಿರುವ ಪರಮಾತ್ಮನನ್ನು ನೆನಪು ಮಾಡಿಕೊಳ್ಳುತ್ತ ಆ ಪರಮಾತ್ಮನಿಂದ ಸಿಗುವ ಆಸ್ತಿಗೆ ಅಧಿಕಾರಿ ಆಗೋಣ.

ಎಲ್ಲರಿಗೂ ಶುಭವಾಗಲಿ.

ಓಂ ಶಾಂತಿ .

ಹಬ್ಬಕ್ಕಾಗಿ ಒಂದಿಷ್ಟು ಖಾದ್ಯಗಳು. - ಶ್ರೀಮತಿ. ಮೀನಾಕ್ಷಿ ಅಂಗಡಿ, ಬೆಂಗಳೂರು.

ಟಿಪಿಬಳಗದ ಸಕ್ರಿಯ ಸದಸ್ಯ ಪ್ರಕಾಶ್ ರಾಜಗೋಳಿಯವರ ಸಹೋದರಿ ಶ್ರೀಮತಿ. ಮೀನಾಕ್ಷಿ ಇತಿಹಾಸದಲ್ಲಿ ಎಮ್.ಎ ಪದವಿಧರೆಯಾಗಿದ್ದು, ಅವರ ಅಣ್ನನಂತೆ ವಿವಿಧ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಅನಿಲ್ ಅಂಗಡಿ ಅವರನ್ನು ೨೦೦೫ರಲ್ಲಿ ಕೈ ಹಿಡಿದ ಇವರಿಗೆ ಮಗಳು ಅಂಕಿತಾ ಅಂದರೆ ಪಂಚಪ್ರಾಣ. ಇವರ ಹವ್ಯಾಸಗಳಲ್ಲಿ ಮುಖ್ಯವಾದವು ಎಂದರೆ ಪುಸ್ತಕ ಓದುವದು, ಟಿವಿ ನೋಡುವದು ಹಾಗೂ ಹೊಸರುಚಿ.

ಅವರು ಇದೀಗ ನಮ್ಮ "ನಿರಂತರ" ಬ್ಲಾಗ್‌ಗಾಗಿ ಉತ್ತರ ಕರ್ನಾಟಕದ ಕೆಲವು ಅಡುಗೆ ವಿಧಾನಗಳನ್ನು ಕಳಿಸಿದ್ದಾರೆ. ಇವು ಉತ್ತರ ಕರ್ನಾಟಕದವರಿಗೇನೂ ಹೊಸತಲ್ಲ. ಉಳಿದೆಲ್ಲರಿಗೂ ಅನೂಕೂಲವಾಗಲಿ ಎನ್ನುವ ದೃಷ್ಟಿಯಿಂದ ಇಲ್ಲಿ ಕಳಿಸಿದ್ದಾರೆ.

೧) ಬದನೆಕಾಯಿ ಎಣಗಾಯಿ (ಮುಳಗಾಯಿ ಪಲ್ಯ)
ಬೇಕಾಗುವ ಸಾಮಾನುಗಳು:
ಸಣ್ಣ ಗಾತ್ರದ ಬದನೆಕಾಯಿಗಳು ೧/೨ ಕಿಲೋ
೧ ಸಣ್ಣ ಬಟ್ಟಲು ಒಣ ಕೊಬ್ಬರಿ ತುರಿ.
೨ ಉಳ್ಳಾಗಡ್ಡಿ
೩ ಚಹಾ ಚಮಚ ಕೆಂಪು ಖಾರದ ಪುಡಿ
೨-೩ ಚಹಾ ಚಮಚ ಹುರಿದ ಶೇಂಗಾ ಪುಡಿ
೧/೨ ಚಹಾ ಚಮಚ ಜೀರಿಗೆ
೧ ಚಹಾ ಚಮಚ ಉಪ್ಪು
ಸ್ವಲ್ಪ ಹುಣಸೆ ರಸ
ಸ್ವಲ್ಪ ಬೆಲ್ಲ
೧ ಚಿಟಿಕೆ ಅರಿಷಿಣ ಪುಡಿ
ಎಣ್ಣೆ
ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು
ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು
ಸ್ವಲ್ಪ ಬೆಳ್ಳುಳ್ಳಿ
ತಯಾರಿಸುವ ವಿಧಾನ :
ಮೊದಲು ಜೀರಿಗೆ ಮತ್ತು ಒಣ ಕೊಬ್ಬರಿ ತುರಿ ಹುರಿದುಕೊಳ್ಳಿ. ನಂತರ ಹೆಚ್ಚಿದ ಉಳ್ಳಾಗಡ್ಡಿ, ಕೊತ್ತಂಬರಿ, ಕರಿಬೇವು ಮತ್ತು ಬೆಳ್ಳುಳ್ಳಿ ಎಣ್ಣೆಯಲ್ಲಿ ಕರಿಯಬೇಕು. ನಂತರ ಹುರಿದ ಜೀರಿಗೆ ಮತ್ತು ಕೊಬ್ಬರಿತುರಿ ಮಿಕ್ಸರ್‌ನಲ್ಲಿ ಪೌಡರ್ ಮಾಡಿ ಮತ್ತು ಕರಿದಿಟ್ಟ ಉಳ್ಳಾಗಡ್ಡಿ ಇತ್ಯಾದಿ ಪೇಸ್ಟ್ ಮಾಡಿ ಒಂದು ಪಾತ್ರೆಯಲ್ಲಿ ಇವನ್ನೆಲ್ಲ ಹಾಕಿ ಅದಕ್ಕೆ ಶೇಂಗಾ ಪುಡಿ, ಖಾರದ ಪುಡಿ, ಉಪ್ಪು, ಅರಿಷಿಣ, ಹುಣಸೆ ರಸ, ಬೆಲ್ಲ ಬೆರೆಸಿ ೧ ಚಹಾ ಚಮಚದಷ್ಟು ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಮಿಶ್ರಣ ರೆಡಿ ಮಾಡಿಟ್ಟುಕೊಳ್ಳಿ.
ಬದನೆಕಾಯಿಗಳನ್ನು ೪ ಭಾಗ ಮಾಡಿ ಹೆಚ್ಚಬೇಕು (ಇವು ಬಿಡಿ ಬಿಡಿ ಆಗದಂತೆ ಎಚ್ಚರ ವಹಿಸಿ) ನೀರಿನಲ್ಲಿ ಹಾಕಿ ತೊಳೆದು ಪ್ರತಿಯೊಂದು ಬದನೆಕಾಯಿಗೆ ಮಧ್ಯ ರೆಡಿ ಮಾಡಿದ ಮಿಶ್ರಣ ತುಂಬಿ ಎಣ್ಣೆಯಲ್ಲಿ ಸ್ವಲ್ಪ ಹುರಿದು ಕುದಿಸಲು ಇಡಿ. ಸ್ವಲ್ಪ ಬೆಂದ ಮೇಲೆ ಆರಿಸಿ ಸರ್ವ್ ಮಾಡಿ. ಇದು ರೊಟ್ಟಿ, ಮೊಸರು ಮತ್ತು ಚಟ್ನಿ ಜೊತೆ ತಿನ್ನಲು ಸರಿ.
೨) ಉದುರು ಬೇಳೆ:
ಬೇಕಾಗುವ ಸಾಮಾನುಗಳು:

ತೊಗರಿ ಬೇಳೆ ೧ ಲೋಟ
೨ ಉಳ್ಳಾಗಡ್ಡಿ
೭ ರಿಂದ ೮ ಹಸಿಮೆಣಸಿನಕಾಯಿ
೧/೨ ಚಹಾ ಚಮಚ ಜೀರಿಗೆ
೧ ಚಹಾ ಚಮಚ ಉಪ್ಪು
ಸ್ವಲ್ಪ ಹುಣಸೆ ರಸ
೧ ಚಿಟಿಕೆ ಅರಿಷಿಣ ಪುಡಿ
ಎಣ್ಣೆ
ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು
ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು
ಸ್ವಲ್ಪ ಬೆಳ್ಳುಳ್ಳಿ
ಸ್ವಲ್ಪ ಸಕ್ಕರೆ
ತಯಾರಿಸುವ ವಿಧಾನ :
ಮೊದಲು ತೊಗರಿ ಬೇಳೆಯನ್ನು ಉದುರಾಗಿ ಬೇಯಿಸಿ ಆರಿಸಿಟ್ಟುಕೊಳ್ಳಿ. ನಂತರ ಎಣ್ಣೆ ಕಾಯಲು ಇಟ್ಟು ಇದಕ್ಕೆ ಹೆಚ್ಚಿದ ಉಳ್ಳಾಗಡ್ಡಿ ಮತ್ತು ಕರಿಬೇವು ಹಾಕಿ ಫ಼್ರಾಯ್ ಮಾಡಿ ನಂತರ ಮೊದಲೆ ಮಾಡಿಟ್ಟುಕೊಂಡ ಚಿಲ್ಲಿ ಪೇಸ್ಟ್ (ಮೆಣಸಿನಕಾಯಿ, ಕೊತ್ತಂಬರಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಹಾಕಿ ಮಿಕ್ಸರಿನಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು) ಹಾಕಿ ಕಲಸಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಅರಿಶಿಣ ಸಕ್ಕರೆ ಹಾಕಿ ಸ್ವಲ್ಪ ಹುಣಸೆ ರಸ ಹಾಕಿ ಕುದಿಸಿರಿ. ಬೇಯಿಸಿದ ಬೇಳೆ ಹಾಕಿ ಕಲಸಿ ಸರ್ವ್ ಮಾಡಿ. ಇದನ್ನು ರೊಟ್ಟಿ ಇಲ್ಲವೆ ಚಪಾತಿಯ ಜೊತೆ ತಿನ್ನಬಹುದು.


೩) ಬದನೆಕಾಯಿ ಭರತ
ಬೇಕಾಗುವ ಸಾಮಾನುಗಳು:
೧ ದೊಡ್ಡ ಗಾತ್ರದ ಬದನೆಕಾಯಿ
೧ ಹೆಚ್ಚಿದ ಉಳ್ಳಾಗಡ್ಡಿ
೨-೩ ಹಸಿ ಮೆಣಸಿನಕಾಯಿ
ಸ್ವಲ್ಪ ಉಪ್ಪು
ಸ್ವಲ್ಪ ಸಕ್ಕರೆ
೧ ಚಿಟಿಕೆ ಅರಿಷಿಣ ಪುಡಿ
ಎಣ್ಣೆ
ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು
ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು
ಸ್ವಲ್ಪ ಬೆಳ್ಳುಳ್ಳಿ
ಲಿಂಬೆ ರಸ
ತಯಾರಿಸುವ ವಿಧಾನ :
ಬದನೆಕಾಯಿಯನ್ನು ಕೆಂಡದ ಮೇಲೆ ಸುಡಬೇಕು. ಕೆಂಡ ಇಲ್ಲದಿದ್ದಲ್ಲಿ ಗ್ಯಾಸ್ ಬರ್ನರ್ ಉಪಯೋಗಿಸಿ. ನಂತರ ಅದರ ಸಿಪ್ಪೆ ತೆಗೆದು ಅದರ ತಿರುಳನ್ನು ಮಾತ್ರ ತೆಗೆದಿಡಿ. ನಂತರ ಮಿಕ್ಸರಿನ ಸಣ್ಣ ಜಾರಿನಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಜೀರಿಗೆ, ಉಪ್ಪು ಸೇರಿಸಿ ಪೇಸ್ಟ್ ಮಾಡಿ ನಂತರ ಇದಕ್ಕೆ ಬದನೆಕಾಯಿ ತಿರುಳನ್ನು ಸೇರಿಸಿ ೧ ಚಿಟಿಕೆ ಸಕ್ಕರೆ, ಲಿಂಬೆ ರಸ ಸೇರಿಸಿ ರುಬ್ಬಿಕೊಂಡು ತೆಗೆದಿಡಿ. ಇದು ಬಿಸಿ ರೊಟ್ಟಿ, ತುಪ್ಪದ ಜೊತೆ ತಿನ್ನಲು ಸ್ವಾದಿಷ್ಟವಾಗಿರುತ್ತದೆ.

೪) ಜುನಕದ ವಡೆ
ಬೇಕಾಗುವ ಸಾಮಾನುಗಳು:
೧ ಲೋಟ ಜುನಕದ ಹಿಟ್ಟು ಅಥವ ೧ ಲೋಟ ಕಡಲೆ ಹಿಟ್ಟು
೧ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ
ಹಸಿ ಮೆಣಸಿನಕಾಯಿ ಪೇಸ್ಟ್
ಉಪ್ಪು
೧ ಚಿಟಿಕೆ ಅರಿಷಿಣ ಪುಡಿ
ಎಣ್ಣೆ
ಸ್ವಲ್ಪ ಬೆಲ್ಲ ಅಥವ ಸಕ್ಕರೆ
ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು
ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು
ಸ್ವಲ್ಪ ಹುಣಸೆ ರಸ
ಎಳ್ಳು ಅಥವ ಕಸಕಸಿ
ನೀರು
ತಯಾರಿಸುವ ವಿಧಾನ :
ಮೊದಲು ಎಣ್ಣೆ ಕರಿಯಲು ಇಟ್ಟು ಅದರಲ್ಲಿ ಉಳ್ಳಾಗಡ್ಡಿ, ಕರಿಬೇವು ಹಾಕಿ ಕರಿದು ನಂತರ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಫ಼್ರಾಯ್ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಷಿಣ, ಹುಣಸೆರಸ, ಬೆಲ್ಲ ಅಥವಾ ಸಕ್ಕರೆ ಸೇರಿಸಿ ೩/೪ ಲೋಟ ನೀರು ಹಾಕಿ ಕುದಿಸಿ. ನಂತರ ಕುದಿಯುತ್ತಿರುವಾಗಲೆ ಜುನಕದಹಿಟ್ಟು ಅಥವಾ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಚೆನ್ನಾಗಿ ಕಲಸಿ. ಇದು ಬಹಳ ಗಟ್ಟಿ ಅಥವಾ ಮೆದು ಆಗದಂತೆ ಮಧ್ಯಮವಾಗಿರಬೇಕು. ನಂತರ ಆರಿಸಿ ಹೋಳಿಗೆ ಮಣೆ ಅಥವಾ ಒಂದು ಸ್ಟೀಲ್ ತಟ್ಟೆಗೆ ಎಣ್ಣೆ ಸವರಿ ಇದನ್ನು ಸಮಾನಾಂತರವಾಗಿ ಹರಡಬೇಕು. ಇದರ ಮೇಲೆ ಎಳ್ಳು/ಕಸಕಸಿ ಉದುರಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.

೫) ಬಾಣ/ ಮೊಸರನ್ನ
ಬೇಕಾಗುವ ಸಾಮಾನುಗಳು:
೧ ಲೋಟ ದಪ್ಪ ಅಕ್ಕಿ
೧ ಲೋಟ ಮೊಸರು
೧ ಉಳ್ಳಾಗಡ್ಡಿ
೫-೬ ಎಸಳು ಬೆಳ್ಳುಳ್ಳಿ
ಉಪ್ಪು
ಶುಂಠಿ ಮತ್ತು ಕರಿಮೆಣಸಿನ ಪೌಡರು
ನೀರು
ತಯಾರಿಸುವ ವಿಧಾನ :
ಮೊದಲು ಬಹಳ ಮೆತ್ತಗೆ ದಪ್ಪ ಅಕ್ಕಿಯ ಅನ್ನವನ್ನು ಮಾಡಿ ಆರಿಸಿ ಒಂದು ಪಾತ್ರೆಗೆ ಹರಡಿ. ಇದಕ್ಕೆ ಮೊಸರು ಸೇರಿಸಿ ಕಲಸಿ ಬೇಕಿದ್ದರೆ ಮತ್ತೆ ಸ್ವಲ್ಪ ಉಪ್ಪು ಹಾಕಿ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ ಮತ್ತು ಬೆಳ್ಳುಳ್ಳಿ ಸೇರಿಸಿ. ಇದರ ಮೇಲೆ ಶುಂಠಿ ಮತ್ತು ಕರಿಮೆಣಸು ಕಾಳಿನ ಪೌಡರ್ (೧/೨ ಚಮಚ) ಉದುರಿಸಿ ಚೆನ್ನಾಗಿ ಕಲಸಿ ಉಂಡೆ ಕಟ್ಟಿ ಅಥವಾ ಹಾಗೆಯೇ ಸರ್ವ್ ಮಾಡಿ.

೬) ಶೇಂಗಾ ಹೋಳಿಗೆ
ಬೇಕಾಗುವ ಸಾಮಾನುಗಳು:

ಹುರಿದು ಸಿಪ್ಪೆ ತೆಗೆದ ಶೇಂಗಾ ಪೌಡರು ೧ ಪಾವು.
ಬೆಲ್ಲ ೧ ಪಾವು
೨ ಚಹದ ಚಮಚ ಹುರಿದ ಗಸಗಸೆ ಪೌಡರ್
೧ ಚಹದ ಚಮಚ ಯಾಲಕ್ಕಿ ಪೌಡರು
ಕನಕ: ೧/೪ ಕಿಲೊ ಮೈದಾ ಹಿಟ್ಟು, ಅಕ್ಕಿ ಹಿಟ್ಟು ೧ ಸೌಟು, ೨ ಚಹದ ಚಮಚ ಕಾಯಿಸಿದ ಎಣ್ಣೆ, ಉಪ್ಪು, ಅರಿಷಿಣ ಪುಡಿ, ತುಪ್ಪ ಸೇರಿಸಿ ತಯಾರಿಸಿದ್ದು.
ತಯಾರಿಸುವ ವಿಧಾನ :
ಮೊದಲು ಮೈದಾ ಹಿಟ್ಟಿಗೆ ಅಕ್ಕಿ ಹಿಟ್ಟು, ಅರಿಷಿಣ, ಎಣ್ಣೆ, ಉಪ್ಪು ಹಾಕಿ ನಾದಿ ಕನಕ ಮಾಡಿಟ್ಟುಕೊಳ್ಳಿ.
ಹೂರಣಕ್ಕೆ ಶೇಂಗಾ ಪೌಡರ್, ತುರಿದ ಬೆಲ್ಲ, ಗಸಗಸೆ ಪೌಡರ್, ಯಾಲಕ್ಕಿ ಪೌಡರ್ ಇವುಗಳನ್ನು ಹಾಕಿ ಚೆನ್ನಾಗಿ ಕಲಸಿ ಹೂರಣ ಸಿದ್ಧ ಪಡಿಸಿಕೊಳಿ. ನಂತರ ಕನಕ ತೆಗೆದುಕೊಂಡು ಅದರಲ್ಲಿ ಹೂರಣ ತುಂಬಿ ಅಕ್ಕಿ ಹಿಟ್ಟು ಹಚ್ಚಿ ಲಟ್ಟಿಸಬೇಕು. ತವೆಗೆ ಹಾಕಿ ಬೇಯಿಸಿ ತುಪ್ಪದ ಜೊತೆ ತಿನ್ನಲು ಕೊಡಿ.
- ೦ -

Saturday, April 12, 2008

ನಿಮ್ಮ ಮಕ್ಕಳಿಗಾಗಿ ಶ್ಲೋಕಗಳು - ಅರುಣ ಆರ್.ಯಾದವಾಡ, ಬೆಂಗಳೂರು


ಗುರು ಬೃಹ್ಮಗುರು ಬೃಹ್ಮ
ಗುರುರ್ ಬೃಹ್ಮ ಗುರುರ್ ವಿಷ್ಣು
ಗುರುರ್ ದೇವೊ ಮಹೇಶ್ವರ
ಗುರುರ್ ಸಾಕ್ಶಾತ್ ಪರಬೃಹ್ಮ ತಸ್ಮೈ ಶ್ರೀ ಗುರವೆ ನಮಃ

ಮೂಷಿಕ ವಾಹನ

ಮೂಷಿಕ ವಾಹನ ಮೋದಕ ಹಸ್ತಾ
ಚಾಮರ ಕರ್ಣ ವಿಲಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ

ಗಾಯತ್ರಿ ಮಹಾ ಮಂತ್ರ
ಓಂ ಭೂ ರ್ಬುವಸ್ಸುವಃ
ತತ್ಸ ವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್


ಅನ್ನಪೂರ್ಣೆಶ್ವರಿ ಮಂತ್ರ

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾನವಲ್ಲಭೆ
ಜ್ನಾನ ವೈರಾಗ್ಯ ಸಿದ್ಯರ್ಥಂ, ಭಿಕ್ಷಾಂದೇಹೀಚ ಪಾರ್ವತಿ
ಮಾತಾಚ ಪಾರ್ವತೀ ದೇವಿ, ಮಿತ ದೇವೊ ಮಹೇಶ್ವರಃ
ಭಾಂದವಾ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ


ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ,
ಸುಗಂಧಿಂ, ಪುಷ್ಟಿ ವರ್ಧನಂ
ಉರ್ವಾರುಕಮೇವ ಬಂಧನಾತ್
ಮೃತ್ಯೋರ್ಮುಕ್ಷೀಯ ಮಾಮೃತಾತ್

ಯಾ ಕುಂದೆಂದುಯಾ ಕುಂದೆಂದು
ಯಾ ಕುಂದೆಂದು ತುಷಾರಹಾರ ಧವಳಾ
ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾ ವರದಂದ ಮಂದಿತಾಕಾರ
ಯಾ ಶ್ವೇತ ಪದ್ಮಾಸನಾ
ಯಾ ಬೃಹ್ಮಾಚ್ಯುತ ಶಂಕರ ಪ್ರಭೃತಿಃಬಿಃ
ದೇವೈ ಸದಾ ಪೂಜಿತ
ಸಾ ಮಾಂ ಪಟ್ಟು ಸರವತೀ ಭಗವತೀ
ನಿಶೇಶ ಜಾದ್ಯಾಪಃ

ಅಪವಿತ್ರ ಪವಿತ್ರೋವಾ
ಅಪವಿತ್ರ ಪವಿತ್ರೋವಾ
ಸರ್ವಾವಸ್ಥಾ ಗತೋವಿವಾ
ಯಸ್ಮರೇತ್ ಪುಂಡರೀಕಾಕ್ಷಂ
ಸೌಭ್ಯಂತರಸ-ಶುಚಿ

Friday, April 11, 2008

ಉಡಿ ತುಂಬುವ ಮತ್ತು ನಾಮಕರಣ ಸಂದರ್ಭದಲ್ಲಿನ ಜಾನಪದ ಗೀತೆಗಳು.- ಶ್ರೀಮತಿ. ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ.

ಹೆಣ್ಣಿಗೆ ತಾಯ್ತನ ಒಂದು ಮಹದಾನಂದ ನೀಡುವ ಜೀವನದ ಘಟ್ಟ. ಯಾವದೇ ಸ್ತ್ರೀಯು ತಾನು ತಾಯಾಗಲಿರುವ ಸುದ್ದಿ ತಿಳಿದಾಗ ಮೊತ್ತ ಮೊದಲನೆಯದಾಗಿ ಈ ವಿಷಯವನ್ನು ತನ್ನ ಪತಿಯೊಂದಿಗೆ ಹಂಚಿಕೊಳ್ಳುತ್ತಾಳೆ. ದಂಪತಿಗಳಿಬ್ಬರಿಗೆ ತಾವು ತಂದೆ-ತಾಯಿಗಳಾಗುವ ವಿಷಯ ತಿಳಿದಾಗ ಅವರ ಆನಂದಕ್ಕೆ ಪಾರವೇ ಇರುವದಿಲ್ಲ.

ವಿಷಯ ತಿಳಿದ ಅವಳ ತಾಯಿ, ಮನೆ ಮಟ್ಟಕ್ಕೆ ಸೀಮಿತವಿರುವ ಕಳ್ಳ ಕುಬುಸ ಅಥವಾ ಸಂಕ್ಷಿಪ್ತ ಸೀಮಂತವನ್ನು ಮಾಡಿ ಸುಖಕರ ಹೆರಿಗೆಗೆ ಆಶೀರ್ವದಿಸುತ್ತಾಳೆ. ಆಮೇಲೆ ಈ ವಿಷಯವನ್ನು ಅಧಿಕೃತವಾಗಿ ಬೇರೆಯವರಿಗೆ ತಿಳಿಸಲಾಗುತ್ತದೆ. ಬಂಧುವರ್ಗದವರು, ಸ್ನೇಹಿತರು, ಆಪ್ತರು, ಹಿತೈಷಿಗಳು ದಂಪತಿಗಳಿಬ್ಬರಿಗೆ ಶುಭ ಹಾರೈಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ನಮ್ಮ ಮನೆಗಳಲ್ಲಾಗುವ ಶುಭ ಸಮಾರಂಭಗಳಿಗೆ ಬಂಧುಮಿತ್ರರನ್ನು ಕರೆಸಿ ಊಟ ಹಾಕಿಸಿ ಸುಖ ಹಂಚಿಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ನಮ್ಮ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಜಾನಪದ ಗೀತೆಗಳ ಕೆಲವು ಸ್ಯಾಂಪಲ್ಲುಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ಉಡಿ ತುಂಬುವ ಹಾಡು - ೧
ಒಂದೆಂಬು ತಿಂಗಳಿಗೆ ಒಂದೇನ ಬಯಸ್ಯಾಳ
ಒಂದೆಲೆ ವರದ ಎಳೆಹುಂಚಿ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೧

ಎರಡೆಂಬು ತಿಂಗಳಿಗೆ ಎರಡೇನ ಬಯಸ್ಯಾಳ
ಎರಡೆಲೆ ವರದ ಎಳೆಹುಣಸೆ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೨

ಮೂರೆಂಬು ತಿಂಗಳಿಗೆ ಮೂರೇನ ಬಯಸ್ಯಾಳ
ಮೂಡಲ ದಿಕ್ಕಿನ ಮಗಿಮಾವ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೩

ನಾಕೆಂಬು ತಿಂಗಳಿಗೆ ನಾಕೇನ ಬಯಸ್ಯಾಳ
ಕಾಕಿಯ ಹಣ್ಣು ಕೈತುಂಬ
ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೪

ಐದೆಂಬು ತಿಂಗಳಿಗೆ ಐದೇನ ಬಯಸ್ಯಾಳ
ಕೊಯ್ದ ಮಲ್ಲಿಗೆ ನೆನೆದಂಡೆ
ಕಟ್ಟೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೫

ಆರೆಂಬು ತಿಂಗಳಿಗೆ ಆರೇನ ಬಯಸ್ಯಾಳ
ಆರಾಕಿದ ಬಾನ ಕೆನಿಮಸರ
ಉಂಡೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೬

ಏಳೆಂಬು ತಿಂಗಳಿಗೆ ಏಳೇನ ಬಯಸ್ಯಾಳ
ಹಲಸಿನ ಹೋಳಿಗಿ ಗೆಣಸಿನ ಹೋಳಿಗಿ ಹೂರಣದ ಹೋಳಿಗಿ ಸಜ್ಜಕದ ಹೋಳಿಗಿ
ಇಷ್ಟು ದೀನಸ ಮಾಡಿ ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೭

ಎಂಟೆಂಬು ತಿಂಗಳಿಗೆ ಎಂಟೇನ ಬಯಸ್ಯಾಳ
ಕಂಟೆಲೆ ಎತ್ತ ಕರೆಬರಲಿ ಅಣ್ಣಯ್ಯ
ಹತ್ತೇನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೮

ಒಂಬತ್ತು ತಿಂಗಳಿಗೆ ತುಂಬ್ಯಾವ ದಿನಗೋಳ
ಸಂದಸಂದೆಲ್ಲಾ ಕಿರಿಬ್ಯಾನಿ
ಬಯಸೆನೆಂಬುವಳ ಗಂಡ ಮಗನ ಹಡದೆನೆಂಬುವಳ ೯
- o -

ಉಡಿ ತುಂಬುವ ಹಾಡು - ೨
ಬಾಳಿಕಾಯಿ ಬಾಳಫಲವ
ಜೋಡ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೧

ಲಿಂಬಿ ಹಣ್ಣು ರಂಭೆ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೨

ತೆಂಗಿನಕಾಯಿ ತೆಂಗ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೩

ಉತ್ತತ್ತಿ ಹಣ್ಣು ಮೈತ್ರಿ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೪

ಅತ್ತಿ ಹಣ್ಣು ಅತ್ತ ಫಲವ
ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ
ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೫

- o -
-
ಉಡಿ ತುಂಬುವ ಹಾಡು - ೩
ಬಾಳಿಕಾಯ್ಗಳ ತಂದು ಬಾಲ್ಯಾರ ಉಡಿಗಳ ತುಂಬಿ
ಬಾಲಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೧

ಲಿಂಬಿಕಾಯ್ಗಳ ತಂದು ರಂಬ್ಯಾರ ಉಡಿಗಳ ತುಂಬಿ
ರಂಬಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೨

ಉತ್ತತ್ತಿಕಾಯ್ಗಳ ತಂದು ಉತ್ತ್ಯಾರ ಉಡಿಗಳ ತುಂಬಿ
ಉತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೩

ತೆಂಗಿನಕಾಯ್ಗಳ ತಂದು ತಂಗ್ಯಾರ ಉಡಿಗಳ ತುಂಬಿ
ತಂಗಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೪

ಅತ್ತಿಕಾಯ್ಗಳ ತಂದು ಅತ್ತ್ಯಾರ ಉಡಿಗಳ ತುಂಬಿ
ಅತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫

ಆಲ ಸಮುದರ ದಾಟಿ ಕೀಲ ಸಮುದರ ದಾಟಿ ಎಲ್ಲಾ ಸಮುದರ ದಾಟಿ ನಿನ್ನ ತಂದೇವ ಸೀತಾ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫

ಆನೀಲೆ ಹೊನ್ನ ತರುವೆ ಒಂಟೀಲೆ ಜವಳಿ ತರುವೆ
ಬಂದ ಬೀಗರನೆಲ್ಲಾ ಸಿಂಗರಿಸಿ ನಾ ಕಳುವೆ
ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೬
-೦-
ಹೀಗೆ ಸೀಮಂತದ ಸಂಭ್ರಮ ಆಚರಿಸಿಕೊಂಡ ಮುತ್ತೈದೆ ಮುಂದೊಂದು ದಿನ ಮುದ್ದಾದ ಮಗುವಿಗೆ ಜನ್ಮ ನೀಡುತ್ತಾಳೆ.
ಮನೆಗೆ ಆಗಮಿಸಿದ ಹೊಸ ಅತಿಥಿಗೆ ಅಧಿಕೃತವಾಗಿ ಬರಮಾಡಿಕೊಳ್ಳುವದು ಆ ಮಗುವಿಗೆ ನಾಮಕರಣ ಮಾಡುವದರಿಂದ. ಇಂಥ ಸಂದರ್ಭದಲ್ಲೂ ನಮ್ಮಲ್ಲಿ ಅನೇಕ ಜಾನಪದ ಗೀತೆಗಳು ಬಳಕೆಯಲ್ಲಿವೆ.

ನಾಮಕರಣ ಸಂದರ್ಭದ ಹಾಡು
ಅಟ್ಟದ ಮ್ಯಾಲಿನ ತೊಟ್ಟಿಲ ತಗೊಂಡು
ಸೀರೆ ಸೆರಗಿಲೆ ಧೂಳಾ ಝಾಡಿಸಿ ಜೋ ಜೋ

ಅದಕ ಬೆಚ್ಚನ್ನ ಬಿಸಿನೀರ ಹೊಯ್ದಾಡಿ ತೊಳದ ಜೋ ಜೋ
ಗುಲಾಬಿ ಸಂಪಿಗಿ ಮಲ್ಲಿಗಿ ಜಾಜಿ ಹೂವ ತಂದ ಜೋ ಜೋ
ತೊಟ್ಟಿಲಾ ಶೃಂಗಾರ ಮಾಡಿರೆ ಜೋ ಜೋ
ಬಂಗಾರದ ತೊಟ್ಟಿಲ ಬೆಳ್ಳಿ ಸರಪಳಿಲೆ ತೂಗಿರೆ ಜೋ ಜೋ

ಹಾರೂರಗೇರ್‍ಯಾಗ ಹಾದ ಬಂದೆನವ್ವ
ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ

ಒಕ್ಕಲುಗೇರ್‍ಯಾಗ ಹೊಕ್ಕಬಂದೆನವ್ವ
ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ

ಅವರ ದೊಡ್ಡಪ್ಪನ ಕರೀರೆ ದೊರಕಿನ ಚೆಲುವರನ ಜೋ ಜೋ
ಅವರ ಹಡದಪ್ಪನ ಕರೀರೆ ಹಾರೂರಂತವನ ಜೋ ಜೋ

ಅವರ ಸೊದರತ್ತಿನ ಕರೀರೆ ಸೊಬಗಿನಗಿತ್ತಿಯನ ಜೋ ಜೋ
ಆಕಿ ಇನ್ನ ಕೂಗ್ಯಾಡಿ ಹೆಸರ ಇಡತಾಳ ಜೊ ಜೋ

ಬಟ್ಟಲ ಶ್ರೀಗಂಧ
ತೇಯ್ದ ಬಟ್ಟಲ ತುಂಬಿ
ಬೇಕ ಬೇಕ ಅಂತ ಹಚ್ಚಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಕೊಂಚಿಗಿ ಕುಲಾವಿ
ಗೊಂಚಲ ಬಿಳಿಮುತ್ತ
ಬೇಕ ಬೇಕ ಅಂತ ಕಟ್ಟಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಹಸರಂಗಿ ಹಾಲ್ಗಡಗ
ಕುಶಲದ ನಾಗಮುರಗಿ
ಬೇಕ ಬೇಕ ಅಂತ ಇಡಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ಪರಡಿ ಪಾಯಸ ಮಾಡಿ
ಬಳದ ಬಟ್ಟಲ ತುಂಬಿ
ಬೇಕ ಬೇಕ ಅಂತ ಉಣಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ

ನೀರಾಗ ನೆರಳಾಗಿ
ಸೂರ್ಯ ಚಂದ್ರಮ ನೋಡಿ
ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ
ಶ್ರೀಕೃಷ್ಣ ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ
- 0-

ಈ ರೀತಿಯಾಗಿ ನಮ್ಮಲ್ಲಿ ಪ್ರತಿಯೊಂದು ಸಂದರ್ಭಕ್ಕೂ ಹೊಂದುವಂತಿರುವ ಜಾನಪದ ಗೀತೆಗಳನ್ನು ಬಳಸಿ ಬೆಳೆಸಿ ಉಳಿಸಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಟಿ ಪಿ ಬಳಗದ ಎಲ್ಲ ಸದಸ್ಯರಿಗೆ ಮತ್ತು ಅವರ ಮನೆಯವರೆಲ್ಲರಿಗೂ ನನ್ನ ಶುಭಾಶಯಗಳು.

ಅಂಬಿಗನ ಹಾಡು - ಸಂಗ್ರಹ : ಶ್ರೀಮತಿ. ಶಾಂತಾ ಸಿ ರಾಜಗೋಳಿ, ಧಾರವಾಡ


ಹಿಂದಿನ ಕಾಲದಲ್ಲಿ ಹಳ್ಳ, ಹೊಳೆ, ನದಿಗಳನ್ನು ದಾಟಲು ಹರಿಗೋಲು, ನಾವು, ತೆಪ್ಪ ಮುಂತಾದವನ್ನು ಬಳಸುತ್ತಿದ್ದರು. ಈ ಹಾಡಿನಲ್ಲಿ ಅಂಬಿಗನ ಕಾಮುಕ ದೃಷ್ಟಿಗೆ ಬಲಿಯಾದ ಮಾನವಂತ ಹೆಣ್ಣೊಬ್ಬಳು ಯಾವ ರೀತಿ ಅವನನ್ನು ಮಾನ ಕಾಪಾಡಿಕೊಳ್ಳಲು ಬೇಡಿಕೊಳ್ಳುತ್ತಾಳೆ ಮತ್ತು ಕೊನೆಗೆ "ಪ್ರಾಣಕ್ಕಿಂತ ಮಾನ ಮುಖ್ಯ" ಎಂದು ಯಾವ ರೀತಿ ದಾರುಣ ಅಂತ್ಯ ಕಾಣುತ್ತಾಳೆ ಎನ್ನುವದನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ.


ಒಡೆವ ತೆಂಗಿನಕಾಯಿ ಮೇಲೆ ಹೂವಿನ ಹಾರ
ಅದನೆಲ್ಲಾ ನಿನಗೆ ಕೊಡುವೆನೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಮಸರ ಕಲಸಿದ ಬುತ್ತಿ ಎಸೆಳ ಲಿಂಬಿ ಹೊಳಾ
ಅದನೆಲ್ಲಾ ನಿನಗೆ ಕೊಡುವೆನೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಎಳ್ಳ ಹಚ್ಚಿದ ರೊಟ್ಟಿ ಎಣ್ಣೆ ಬದನಿಕಾಯಿ
ಅದನೆಲ್ಲಾ ನಿನಗೆ ಕೊಡುವೆನೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಅಕ್ಕ ತಂಗೆರು ಆರು ಮಂದಿ ನನ್ನ ಕೂಡಿ ಏಳು ಮಂದಿ
ಅವರೆಲ್ಲ ಹೊಳೆಯ ದಾಟಿದರೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಜರದ ರುಮಾಲಿನವರು ಅವರೆಲ್ಲ ನಮ್ಮ ಅಣ್ಣಗೊಳು
ಅವರೆಲ್ಲ ಹೊಳೆಯ ದಾಟಿದರೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಅತ್ತಿ ಮಾವರು ಹಾಕಿದಂತಾ ಆರುಸೇರು ಬಂಗಾರ
ಅದನೆಲ್ಲ ನಿನಗೆ ಕೊಡುವೆನು
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಅಷ್ಟು ದಾಗಿನ ಉಚ್ಚಿಕೊಂಡು ಸೀರಿ ಸೆರಗಿಗೆ ಕಟ್ಟಿಕೊಂಡು
ಅಂತರಲಿ ನಾವ ಜಿಗಿದಾಳೊ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ನಾರಿ ಮುಳುಗಿದಲ್ಲಿ ನಲವತ್ತು ಬಾರಿ ಮುಳುಗಿ
ನಾರಿ ನಿನ ಸೆರಗ ಸಿಗಲಿಲ್ಲಾ
ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...

ಕವನ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.

ವಿಷಯವೇಕೆ ಕವನಕೆ
ಮನದ ಭಾವ ರೂಪಕೆ


ಹೆಪ್ಪುಗಟ್ಟಿ ಕೂತ ನೆನಪು
ಚೆಲುವಿಗಿರುವ ಆ ಒನಪು
ಪ್ರಕೃತಿಯ ಈ ಸೊಬಗು
ನಾಳೆಗಳ ಹೊಸ ಬೆಳಗು

ಕಾಣುತಿರುವ ಹಗಲುಗನಸು
ಕಂಡ ಕನಸು ಆದ ನನಸು
ಆಗದಿರಲು ಬಂದ ಮುನಿಸು
ಜೀವನದ ಈ ಸೊಗಸು

ಎಲ್ಲ ಕುಳಿತು ಎದೆಯಲಿ
ಇಟ್ಟರೊಮ್ಮೆ ಕಚಗುಳಿ
ಕೊಟ್ಟಂತೆಯೆ ಆಹ್ವಾನ
ಬರೆಯಲೊಂದು ಕವನ!

Monday, April 07, 2008

ಆರೋಗ್ಯ ಭಾಗ್ಯದ ಪ್ರಾಧಾನ್ಯತೆ - ಶ್ರೀನಿವಾಸ. ಆರ್. ಗುಡಿ. ವರ್ಜಿನಿಯಾ, ಯು.ಎಸ್.ಏ.

ಆರೋಗ್ಯವೇ ಭಾಗ್ಯ ಅಂತಾ ಯಾರಿಗೆ ತಾನೇ ಗೊತ್ತಿಲ್ಲ. ಆಂಗ್ಲ ಭಾಷೆಯಲ್ಲೂ ಅಂತಾರಲ್ಲ "Health is Wealth" ಅಂತ.
ಇಲ್ಲಿ ನಾನು ಪ್ರಸ್ತುತಪಡಿಸುತ್ತಿರುವ ವಿಚಾರಗಳು ಎಲ್ಲರಿಗೂ ತಿಳಿದಂತ ವಿಚಾರಗಳೇ. ಸಾಮಾನ್ಯವಾಗಿ ನಾವು ಈ ರೀತಿಯ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಹೀಗಾಗಿ ಯಾರು ಎಷ್ಟರಮಟ್ಟಿಗೆ ಆರೋಗ್ಯ-ಪ್ರಜ್ಞೆ ಹೊಂದಿದ್ದಾರೆ ಎಂಬುದು ತಿಳಿಯದ ವಿಷಯ. ಇರುವ ಅಲ್ಪ-ಸ್ವಲ್ಪ ಸಂಪರ್ಕ-ವಿನಿಮಯವನ್ನು ಅವಲೋಕಿಸಿದರೆ, ನನ್ನನ್ನು ಹಿಡಿದುಕೊಂಡು, ಬಹಳ ಜನರಿಗೆ ಇರತಕ್ಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಆದರೆ ನನ್ನಂತೆ ಯಾರಿಗೂ ಈ ತರದ ವಿಷಯಗಳತ್ತ ಗಮನಹರಿಸಲು ಸಮಯವೇ ಇಲ್ಲ! ಹೋಗಲಿ ಇಂದು ಗಮನ ಹರಿಸಿಯೇ ಬಿಡೋಣ ಅಂತ ಶುರು-ಹಚ್ಚಿಕೊಂಡ ಒಂದು ಚಿಂತನೆಯೇ ಈ ಲೇಖನ..!

ಇವತ್ತು ಆರೋಗ್ಯವೇ ಭಾಗ್ಯ ಅಂತ ಗೊತ್ತಿದ್ದರೂ ಕೂಡ ನಾವು ಅದನ್ನ ಸ್ವಲ್ಪ "ಲೈಟ್" ಆಗಿ ತೊಗೊತೆವಿ. ಎಲ್ಲವೂ ಸರಿ ನಡೆದಾಗ, ನಮ್ಮ ಆರೋಗ್ಯಕ್ಕೆನು ಆಗುತ್ತದೆ ಎಂಬ ಒಂದು ಹುಂಬ ಅಹಂಭಾವ ಮತ್ತು ಅಲಕ್ಷದ ಧೋರಣೆ. ನಮಗೆ ಈ ‘ಕೊನೆಯ ಆದ್ಯತೆ' ಆರೋಗ್ಯದ ಕಡೆ ಕಾಳಜಿ ಉಕ್ಕುವದು ಅನಾರೋಗ್ಯದಿಂದ ತೀರ ತೊಂದರೆಯಾಗಿ ಇನ್ನೇನು ಆಫೀಸಿಗೆ ಹೋಗಲಿಕ್ಕೆ ಆಗದು ಅಂದಾಗ ಮಾತ್ರ. ಕೆಟ್ಟಾಗ ಮಾತ್ರ ನೆನಪಾಗುವ ಆರೋಗ್ಯ, ಅದು ಕೆಡದಂತೆ ಕಾಪಾಡುವ ಯೋಚನೆಗಳು, ಯೋಜನೆಗಳು ನಮ್ಮ ತಲೆಯೊಳಗೆ ಬರುವದೇ ಇಲ್ಲ. ನಮ್ಮಲ್ಲಿ ಎಷ್ಟೋ ಜನರಿಗೆ ಆರೋಗ್ಯದ ಕಡೆ ತಲೆ ಕೆಡಸಿಕೊಳ್ಳದಿರುವದು, ವೈದ್ಯರು/ಆಸ್ಪತ್ರೆಗಳಿಗೆ ಭೇಟಿ ಕೊಡದೆ ಇರುವದು ಒಂದು ಹೆಮ್ಮೆಯ ವಿಷಯ! ಈ ‘ಆರೋಗ್ಯ-ಭಾಗ್ಯ' ವನ್ನು ನಾವು ಲೈಟ್ ಆಗಿ ತೆಗೆದುಕೊಂಡು ಅಲಕ್ಷ್ಯ ಮಾಡಿರುವದಾದರೂ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕಲು ನಮ್ಮ ಗಡಿಬಿಡಿಯ ಬದುಕಿನತ್ತ ಒಂದು ಇಣುಕು-ನೋಟ ಹಾಕಿ ಮತ್ತು ಇದಕ್ಕೆ ಏನಾದರೂ ಪರಿಹಾರ ಉಂಟೇ ಅಂತ ಹುಡುಕುವ ಒಂದು ಪ್ರಯತ್ನವನ್ನ ಮಾಡೋಣವೆ?
ಧನ್ಯವಾದಗಳು ಇಂದಿನ ಸ್ಪರ್ಧಾತ್ಮಕ ಮಾಹಿತಿ ತಂತ್ರಜ್ಞಾನ ಉದ್ದಿಮೆ ವಿಕಾಸಕ್ಕೆ, ಇವತ್ತು ನಮ್ಮ ಜೀವನಶೈಲಿ ಹೆಚ್ಚು-ಕಡಿಮೆ ನಮ್ಮ ಉದ್ಯೋಗ-ಶೈಲಿಯಿಂದ ನಿರ್ದೇಶಿಸಲ್ಪಡುತ್ತದೆ. ಈಗ ನಮ್ಮ ಪೀಳಿಗೆ ಮಾಡುವಷ್ಟು ಕೆಲಸ ಭಾರತದ ಇತಿಹಾಸದಲ್ಲಿ ಯಾವ ಪೀಳಿಗೆಯವರೂ ಮಾಡಿರಲಿಕ್ಕಿಲ್ಲ. ಬ್ರಿಟಿಷರು ನಮ್ಮನ್ನು ಆಳಿದಾಗ ಕೂಡ, ಇಷ್ಟು ದುಡಿದಿರಲಿಕ್ಕಿಲ್ಲ ಜನ! ಕೆಲಸದ ಅತಿ-ಹಾವಳಿಯಿಂದ ಜನರಿಗೆ ಸಾಮಾನ್ಯ ಕಾರ್ಯ-ಕೆಲಸಗಳಿಗೆ ಸಮಯ-ಸಂಯಮ ಇಲ್ಲವಾಗಿವೆ. ಎಷ್ಟು ಹೊತ್ತಿಗೆ ತಿನ್ನಬೇಕು, ಎಷ್ಟು ಗಂಟೆಗೆ ಮಲಗಬೇಕು/ಮಲಗಬಾರದು, ಸಿನಿಮಾ/ನಾಟಕಕ್ಕೆ ಹೊಗಬೇಕ/ಬೇಡವಾ, ವೈದ್ಯರ ಹತ್ತಿರ ಚೆಕ್-ಅಪ್‌ಗೆ ಹೊಗಬೇಕಾ/ಬೇಡವಾ , ಇನ್ನು ಅನೇಕ ಸಣ್ಣ-ಪುಟ್ಟ ವಿಷಯಗಳು ನಮ್ಮ ಉದ್ಯೋಗದಲ್ಲಿನ ಗಡಿಬಿಡಿ/ಪುರುಸೊತ್ತು, ಕಾರ್ಯದ ಒತ್ತಡಗಳನ್ನು ಅವಲಂಬಿಸಿರತಕ್ಕ ಅಂಶಗಳು. 'ಅಲೆಮಾರಿ-ಕನ್ಸಲ್ಟಂಟ್'ಗಳಾದರಂತು ಕೇಳುವದೇ ಬೇಡ, ತುರಿಸಿಕೊಳ್ಳುವದಕ್ಕು ಪುರುಸೊತ್ತು ಇರುವದಿಲ್ಲ! ಊರಿನಿಂದ-ಊರಿಗೆ, ಬೇರೆ ದೇಶ/ರಾಜ್ಯಗಳಿಗೆ ಪ್ರಯಾಣಿಸುತ್ತ ಉದ್ಯೋಗ, ವೈಯಕ್ತಿಕ, ಸಂಸಾರಿಕ ಮತ್ತು ಸಾಮಾಜಿಕ ಜೀವನ ಸಂಭಾಳಿಸುವ ಅವರ ಕಲಾತ್ಮಕ ಬದುಕಿನಲ್ಲಿ ಯಾವುದಕ್ಕೆ ಸಮಯ ಸಿಗುವದು/ಸಿಗದಿರುವದು ಎಂಬುದು ಬಹಳ ಸಂಕೀರ್ಣ ವಿಷಯ.


ಇಲ್ಲಿ ನಾನು ಕೊಡುತ್ತಿರುವ ವಿವರಣೆ ಸಾಮಾನ್ಯವಾಗಿ ಇಂದು ನಮ್ಮ I.T. ಉದ್ಯೋಗಗಳಲ್ಲಿ ಕಂಡುಬರತಕ್ಕ ಸನ್ನಿವೇಶ.
ಕೆಲವು ಸುಖ-ಪುರುಷರಿಗೆ/ಮಹಿಳೆಯರಿಗೆ ಇದು ಉತ್ಪ್ರೇಕ್ಷೆ ಅನಿಸಬಹುದು, ಅವರಿಗೆ ಎಲ್ಲ ಅಂಶಗಳು ಅನ್ವಯವಾಗಲಿಕ್ಕಿಲ್ಲ.
ಬೆಳಿಗ್ಗೆ ಬೇಗನೆ ಎದ್ದು ತಯಾರಾಗಿ, ಟ್ರಿಮ್ಮಾಗಿ ಹೊರಟರೂ, ರಸ್ತೆಯ ಮೇಲಿನ ವಿಶೇಷ ಮಮತೆಯಿಂದ, ದಿನದ ಒಂದಂಶ ರಸ್ತೆಯಲ್ಲೆ ಕಳೆದು, ಟ್ರಾಫ಼ಿಕ್ಕಿನ ಚಕ್ರವ್ಯೂಹವ ಭೇದಿಸಿ, ಆಫೀಸಿಗೆ ಆಗಮಿಸುವದರಲ್ಲಿ ಸುಸ್ತೋ-ಸುಸ್ತು! ಈ ‘ಕಮ್ಯೂಟ್'ನಲ್ಲಿ ಎಷ್ಟೋ ಜನ ತಮ್ಮ ಆಯುಷ್ಯದ ಮುಖ್ಯ ಭಾಗ ಸವೆಸುತ್ತಾರೆ ಅಂದರೆ ಅತಿಶಯೋಕ್ತಿ ಏನಲ್ಲ! ಈ ‘ಕಮ್ಯೂಟ್' ನಲ್ಲಿ, ಕೆಲವೊಂದು ವಾಹನ-ಭರಿತ ನಗರಗಳಲ್ಲಿ, ಮೂಗು/ಗಂಟಲು/ಶ್ವಾಸಕೋಶ/ಹೃದಯಗಳಿಗೆ ವಾಹನಗಳು ಥೂಕರಿಸುವ ಇಂಗಾಲದ ಡೈಯಾಕ್ಸೈಡ್ ಮತ್ತಿತರ ವಿಷಾನಿಲಗಳ ಯಥೇಚ್ಚ ಪೂರೈಕೆ! ಅಷ್ಟು ವಿಷವುಂಡ "ನಂಜುಂಡ" ಗಂಟಲನ್ನು ಕೆರಸುತ್ತ/ಕೆಮ್ಮುತ್ತ, ಸಾಯಂಕಾಲ/ರಾತ್ರಿಯವರೆಗೆ ಆಫೀಸಿನಲಿ ಗಣಕ-ಯಂತ್ರದ ಮುಂದೆ ತಪಸ್ಸು ಮಾಡಿದ್ದೇ ಮಾಡಿದ್ದು! ಸಾಲದೆ ಮನೆಗೆ ಬಂದು ಅದೇ ಗಣಕ-ಯಂತ್ರದ ಆರಾಧನೆ! ಇದೂ ಸಾಲದ್ದಕ್ಕೆ ನೂರೆಂಟು ಮೀಟಿಂಗ್‌ಗಳು, ಕಾನ್ಫರನ್ಸ್ ಕಾಲ್‌ಗಳು, ಕಾಡುವ ಪ್ರೊಡಕ್ಷನ್ ಸಮಸ್ಯೆಗಳು, ಮಜಾ ಮಾಡಬೇಕಾದ ರಜೆ ದಿನವು ಕೆಲಸದ ಸಜೆ! ಹೀಗೆ ಯಂತ್ರದ ಜೊತೆ ಕೆಲಸ ಮಾಡುತ್ತ ನಾವು ಯಂತ್ರಗಳಾಗುತ್ತಿರುವದನ್ನ ನಮ್ಮ ಪರಿವಾರದವರು ಆಕ್ಷೇಪಣೆ ಮಾಡಿದರೆ, ನಮಗೆ ಎಲ್ಲಿಲ್ಲದ ಕೋಪ!


ಅತ್ತ ಆಫೀಸಿನಲ್ಲಿ ಮೇಲಧಿಕಾರಿ ಅರ್ಥ ಮಾಡಿಕೊಳ್ಳಲಾರ, ಇತ್ತ ಮನೆಯವರು ಅಂಡರ್‌ಸ್ಟ್ಯಾಂಡಿಂಗ್ ಮಾಡಿಕೊಳ್ಳೊದಿಲ್ಲ ಎಂದು ದುಮುಗುಡುವಿಕೆ. ಆದೇ ತಾಪದ-ಲೂಪಿನಲಿ ಶಾಪ ಹಾಕುತ್ತ, ಮತ್ತದೇ ಕೀ-ಬೋರ್ಡ್ ಒತ್ತಿದ್ದೇ ಬಂತು, ಮತ್ತದೆ ಮಾನಿಟರನ್ನ ಕಣ್ಣು ಕೆಕ್ಕರಿಸಿ ದುರುಗುಟ್ಟಿ ನೋಡಿದ್ದೇ ಬಂತು. ಆ ಯಂತ್ರ ಕ್ಯಾಕರಿಸಿ ಉಗಳುವ ವಿಷಕಾರಿ ಎಲೆಕ್ಟ್ರೊ-ಮ್ಯಾಗ್ನೆಟಿಕ್ ತರಂಗಗಳೇ ನಮಗೆ ಪ್ರೀತಿಯ ಪ್ರಸಾದ! ಈ ಮಧ್ಯ ಕೆಲಸದದಲ್ಲಿ ಮೈಮರೆತು, ಕೈ-ಕಾಲು ಮತ್ತಿತರ ಎಲ್ಲ ಅಂಗಾಂಗಗಳಿಗೂ ವಿಪರೀತ ರೆಸ್ಟ್ ಕೊಟ್ಟು, ಏಸಿ ರೂಮ್ನಲ್ಲಿ ಬೆವರು ಬರದಂತೆ, ಬಂದ ಬೆವರೂ ಇಂಗಿ ಹೋಗುವಂತೆ ಕುರ್ಚಿಯಲ್ಲಿ ಕುಕ್ಕರಿಸಿ ಬಿಡುತ್ತೇವೆ.
ನಮ್ಮ ‘ಕುರ್ಚಿ-ಪ್ರೀತಿ' ರಾಜಕಾರಣಿಗಿಂತ ಮಿಗಿಲಾದದ್ದು! ಸುಮ್ಮನೆ ಏಕೆ ದೇಹಕ್ಕೆ ತೊಂದರೆ ಅಂತ ಕಾಳಜಿಯಿಂದನೊ
ಅಥವಾ ನಮ್ಮ ‘ತಾಂತ್ರಿಕ' ಬುದ್ಧಿಯ ‘ತಾಂತ್ರಿಕ ದೋಷ'ವೊ, ಒಟ್ಟಿನಲ್ಲಿ ನಾವು ಕುರ್ಚಿ ಬಿಟ್ಟು ಏಳುವದಿಲ್ಲ! ಇಷ್ಟೊಂದು ಐಷಾರಾಮಿ ಆದರೆ ಕೇಳಬೇಕೆ, ‘ಬೊಜ್ಜು' ಎಂಬ ‘ಕರೆಯದ ಅತಿಥಿ' ಬಂದು ಠಿಕಾಣಿ ಹೂಡುತ್ತಾರೆ! ಶ್ರೀಮಾನ್ ‘ಬೊಜ್ಜು' ಒಬ್ಬರೇ ಬರದೆ ಇನ್ನು ಬೇಡದ ಅತಿಥಿಗಳಾದ ‘ಜಡ', ‘ಆಲಸ್ಯ', ‘ರೋಗ-ರುಜಿನ' ಗಳನ್ನೂ ಸಹ ಗುಪ್ತವಾಗಿ ಕರೆತರುತ್ತಾರೆ.
ಇನ್ನು ಸ್ವಲ್ಪ ಔದ್ಯೋಗಿಕ-ಜೀವನ ಮರೆತು ನಮ್ಮ ವೈಯಕ್ತಿಕ-ಜೀವನದತ್ತ ನೋಡಿದರೆ, ಅತಿ-ಪ್ರಿಯವಾದ "ಹರೆಯವು" ನಮಗೆ ಹೇಳದೆ-ಕೇಳದೆ ಮರೆಯಾಗುತ್ತಿದೆ! ಶರವೇಗದಿಂದ ಮಧ್ಯಮ ವಯಸ್ಸು ಧಾವಿಸುತ್ತಿದ್ದರೂ, ಇನ್ನು ನಾವು ಚಿರ-ಯುವಕ "ದೇವಾನಂದ್" ತರ ಡೌಲು ಬಡೀತೇವೆ! ದಶಕಗಳ ಹಿಂದೆ ದೇಹಕ್ಕೆ ಕೊಟ್ಟ "ಕಾಟ/ಪೀಡೆ"ಗಳನ್ನು ಇಂದು ಕೊಡುವದರಲ್ಲಿ ಹಿಂದೆ-ಮುಂದೆ ನೋಡುವದಿಲ್ಲ. ಅತಿಯಾಗಿ ತಿನ್ನುವಿಕೆ, ಏನನ್ನು ತಿನ್ನದೆ ಇರುವಿಕೆ, ನಿದ್ದೆ-ಗೆಡುವದು, ಗಾಣದ ಎತ್ತಿನಂತೆ ಅತಿಯಾಗಿ ದುಡಿಯುವಿಕೆ, ಮಾನಸಿಕ ಒತ್ತಡಗಳನ್ನು ತಲೆಯ ಮೇಲೆ ಒಟ್ಟಿಕೊಳ್ಳುವಿಕೆ, "ಸ್ವಯಂ ವೈದ್ಯ" ರಾಗಿ ಬೇಕು-ಬೇಕಾದ ಮಾತ್ರೆ-ಔಷಧಿ ಸೇವನೆ, "ಹೆಂಡ್ಕುಡುಕ-ರತ್ನ" ರ ಅತಿ ಕುಡಿತ/ಸೇದುವಿಕೆ ಇತ್ಯಾದಿ, ಇತ್ಯಾದಿಗಳನ್ನು ಪ್ರಾಯಶಃ ಇನ್ನು ದೇಹ ತಡೆದುಕೊಳ್ಳಲಾರದು. ಇಷ್ಟಕ್ಕು ಮಿಕ್ಕಿ ನಾವು ನಮ್ಮ ದೇಹದ ಮೇಲೆ ಅತ್ಯಾಚಾರ ಮುಂದುವರಿಸಿದರೆ ವಿಧ-ವಿಧ ರೋಗಗಳಿಗೆ ನಮ್ಮ ದೇಹ ಒಡೆಯನಾಗುದರಲ್ಲಿ ಸಂದೇಹವೇ ಇಲ್ಲ. ಆಮೇಲೆ ವೈದ್ಯರು, ಆಸ್ಪತ್ರೆಗಳಿಗೆ ಆಲೆದಾಡುವದು ತಪ್ಪಿದ್ದಲ್ಲ. ಈ ವೈದ್ಯರು, ಆಸ್ಪತ್ರೆಗಳು ಅಂದರೆ ಯಾರಿಗೆ ತಾನೆ ಖುಶಿ?


ಒಂದು ಹೇಳಿಕೆ ಇದೆ ವೈದ್ಯರ ಬಗ್ಗೆ,
"ನಮೊ ಎಂಬೆ ಎಲೆ ವೈದ್ಯರಾಜನೆ,
ಯಮರಾಜನ ಹಿರಿ-ಸೋದರನೆ,
ಯಮ ಹೀರಿದರೆ ಪ್ರಾಣ ಮಾತ್ರವನು,
ನೀ ಸೆಳೆಯುವೆ ಕಾಂಚಾಣವನು"!


ವೈದ್ಯ ಮಹಾಶಯರು ಪ್ರಾಣ ಹಿಂಡುವರಲ್ಲದೆ, ಕಾಂಚಾಣವನ್ನು ಕಸಿದುಕೊಳ್ಳುವರೆಂಬ (ಕು)ಪ್ರಸಿದ್ಧಿ ಪಡೆದವರು !
ಕೆಲವು ಜನರ ರೋಗ-ಉಪಚಾರಕ್ಕೆ, ಆರೋಗ್ಯ-ವಿಮೆ ಸಹಾಯಕ್ಕೆ ಬರಬಹುದು, ಇನ್ನು ಕೆಲವರಿಗೆ ಕಂಪನಿಯವರು ವೆಚ್ಚದ ಹೊಣೆಹೊರಬಹುದು.. ಯಾರು ಕವರ್ ಮಾಡಿದರೂ, ಮಾಡದೆ ಇದ್ದರೂ ಅನುಭವಿಸುವವರು ನಾವೇ ತಾನೆ?
ಏನೊ ಗುಣಪಡಿಸುವ ರೋಗವಾದರೆ ಪರವಾಗಿಲ್ಲ, ಜೀವನ ಪೂರ್ತಿ ಔಷಧಿಯೊಂದಿಗೆ ಜೀವನ ಮಾಡುವ ರೋಗಗಳು ಗಂಟು ಬಿದ್ದರೆ ?? ತೀರ ಸಾಮಾನ್ಯವಾಗಿರುವ, ಹೃದಯ-ರೋಗ, ರಕ್ತದ-ಒತ್ತಡ, ಮಧು-ಮೇಹ, ಮೂತ್ರ-ಪಿಂಡದ ಕಾಹಿಲೆ etc. etc. ರೋಗಗಳ ಕಾಕ-ದೃಷ್ಟಿ ಬಿದ್ದರೆ!


ಈ ರೋಗಗಳಿಗೆ ಮುಖ್ಯ ಕಾರಣ ಎಲ್ಲರಿಗೂ ತಿಳಿದೇ ಇದೆ, ಟೆನ್ಶನ್ ಭರಿತ ಜೀವನ ಮತ್ತು ಕೊಲೆಸ್ಟರಾಲ್, ಇವತ್ತು ನಮ್ಮ ಜೀವನದಲ್ಲಿ ಹೇರಳವಾಗಿ ದೊರೆಯುವ ವಸ್ತುಗಳು! ನಾವು ಎಷ್ಟು ಹಣಗಳಿಸಿ ಏನು ಪ್ರಯೋಜನ, ವೃತ್ತಿ-ಜೀವನದಲ್ಲಿ ಎಷ್ಟು ಅಭ್ಯುದಯ ಸಾಧಿಸಿದರೆ ಏನು ಬಂತು, ನಮಗೆ ಆರೋಗ್ಯ ಎಂಬ ಭಾಗ್ಯವಿಲ್ಲದೆ ಹೋದರೆ! ಒಂದು ಗಾದೆಯಿದೆ ಕನ್ನಡದಲ್ಲಿ "ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ" ಅಂತ.. ಜೀವನದಲ್ಲಿ ಅತಿಯಾಗಿ ಕಷ್ಟಪಟ್ಟು ಗಳಿಸಿ, ಇನ್ನೇನು ಗಳಿಸಿದ್ದನ್ನ ಆನುಭವಿಸೋಣ ಅನ್ನುವಷ್ಟರಲ್ಲಿ, ಆರೋಗ್ಯ ಕೈ ಕೊಟ್ಟರೆ ನಾವು ಕಷ್ಟಪಟ್ಟಿದ್ದು ಏನು ಪ್ರಯೋಜನ? ಹೇಗೆ ನಾವು ಹಣಗಳಿಸಲು ಅಥವ ಕರಿಯರ್‌ನಲ್ಲಿ ಮುನ್ನುಗ್ಗಲು ಪ್ರಯತ್ನ ಪಡುತ್ತೇವೊ ಹಾಗೆಯೇ ಆರೋಗ್ಯದ ಭಾಗ್ಯ ಗಳಿಸಲು ಪ್ರಯತ್ನ ಪಡಲೇಬೇಕು. ಹಿತ-ಮಿತವಾದ ಆಹಾರ, ನಿದ್ರೆ, ವ್ಯಾಯಾಮ/ಯೋಗ ದೇಹ/ಮನಕ್ಕೆ ಬೇಕಾದ ಅವಶ್ಯಕತೆಗಳು.


ಒಂದು ಸಣ್ಣ ವಾಕಿಂಗಿನಿಂದ ನಮ್ಮ ದಿನಚರಿ ಆರಂಭಿಸಿದರೆ ಬೆಳಗಿನ ಝಾವದ ತಾಜಾ ಆಮ್ಲಜನಕ ನಮ್ಮ ದೇಹದ ನರ-ನಾಡಿಗಳಿಗೆ ಯಾವ ರೋಗ ಬರದಂತೆ ನಿರೋಧಕ ಶಕ್ತಿ ಕೊಟ್ಟೀತು! ಬೆಳಗಿನ ಝಾವ ಅಂದರೆ ಒಂದು ಘಟನೆ ನೆನಪಿಗೆ ಬಂತು. ಮೊನ್ನೆ ಗುರು ಆಮೆರಿಕಕ್ಕೆ ಬಂದಾಗ, ಇಲ್ಲಿ ಜನರು ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲಗಳ ಲೆಕ್ಕಿಸದೆ, ಸುಡುವ ಬಿಸಿಲು/ಕೊರೆವ ಛಳಿಯಲ್ಲು, ಓಡುವದನ್ನ ಕಂಡು, "ಹೊತ್ತು ಗೊತ್ತು ಇಲ್ಲ ಮುಂಡೆವಕ್ಕೆ, ಬ್ಯಾರೆ ಕೆಲಸ ಇಲ್ಲೇನು ಇವಕ್ಕ, ಶೀನಣ್ಣಾ" !? ಅಂತ ಉದ್ಗಾರಿಸಿದ!


ನನಗೂಇಲ್ಲಿ ಮೊದಲಿಗೆ ಬಂದಾಗ ಅದೆ ರೀತಿ ಅನಿಸುತಿತ್ತು. ಯಾಕಂದರೆ ನಮ್ಮ ಪ್ರಕಾರ ಈ ವಾಕಿಂಗ,ಜಾಗಿಂಗ್ ಎಲ್ಲ ಬೆಳಗಿನ ಸಮಯಕ್ಕೇ ಸೀಮಿತವಾದದ್ದು! ಬೆಳಿಗ್ಗೆ ಸಮಯ ಸಿಗದಿದ್ದರೆ, ಮುಂದೆ ಅದೇ ನೆಪದಿಂದ ಏನನ್ನು ಮಾಡದಿರುವದು, ಇದು ನಮ್ಮ ಅಂತರಾಳದ ಉದ್ದೇಶವಿರಬಹುದು! ಬೆಳಗಿನ ಸಮಯ ಶ್ರೇಯಸ್ಸರವಾದರೂ, ನಮಗೆ ಯಾವಾಗ ಸಮಯ ಸಿಕ್ಕುತ್ತೊ, ಆವಾಗ ಮಾಡುವದು ಒಳ್ಳೆಯದು.


ವ್ಯಾಯಾಮ ಶಾಲೆ/ಜಿಮ್‌ಗಳಿಗೆ ಸೇರಿಕೊಂಡು ಒಂದು ಅರ್ಧ ಗಂಟೆ ಕಸರತ್ತು ಮಾಡಿ, ಸ್ವಲ್ಪ ಕ್ಯಾಲರೀಸ್‌ನ ಸುಟ್ಟರೆ, ನಮ್ಮ ದೇಹದಲ್ಲಿ ಸಂಚಿತ ಆಗಿರುವ "ಬೊಜ್ಜು" ಸ್ವಲ್ಪ ಮಟ್ಟಿಗಾದರೂ ಕರಗುವ ಅವಕಾಶ ಸಿಕ್ಕೀತು! ಅಲ್ಲದೇ ನಮ್ಮ ದೇಹದ ಅಂಗಾಂಗಳು ಸ್ವಲ್ಪವಾದರೂ ಚೇತನ ಪಡೆದುಕೊಂಡಾವು!


ಸ್ವಲ್ಪ ನಮ್ಮ ‘ಕುರ್ಚಿ ಪ್ರೀತಿ' ಕಡಿಮೆ ಮಾಡಿ, ಗಂಟೆಗೊಮ್ಮೆ, ನೀರಿಗೊ, ಚಹಾ/ಕಾಫ಼ೀಯ ನೆವದಿಂದ ಎದ್ದು, ಅಕ್ಕ-ಪಕ್ಕದ ಸಹೋದ್ಯೋಗಿಗಳ ಜೊತೆ ಸ್ವಲ್ಪ ಹರಟೆ ಹೊಡದು (?), ಕಣ್ಣಿಗೆ ವಿಶ್ರಾಂತಿ ಕೊಟ್ಟರೆ, ವರ್ಷದಿಂದ ವರ್ಷಕ್ಕೆ ಕನ್ನಡಕದ ನಂಬರ್ ಹೆಚ್ಚಾಗಲಿಕ್ಕಿಲ್ಲ! ಬಿಟ್ಟು ಬಿಡದೆ ವರ್ಷಕ್ಕೆ ಒಮ್ಮೆ ಸಂಪೂರ್ಣ ದೇಹ ಚೆಕ್-ಅಪ್ ಮಾಡಿಸುವದು ಒಳ್ಳೆಯ ವಿಚಾರ. ಈ ತರದ ಚೆಕ್-ಅಪ್, ನಮ್ಮ ಸ್ವಾಸ್ಥ್ಯದಲ್ಲಿ ಏನಾದರು ಏರು-ಪೇರಿನ ಲಕ್ಷಣಗಳಿದ್ದರೆ ಒಂದು ಮುನ್ಸೂಚನೆ ಕೊಟ್ಟು, ಬರಲಿರುವ ಅಪಾಯ ಎದುರಿಸಲು ನಮ್ಮನ್ನು ಸಜ್ಜುಗೊಳಿಸಬಹುದು ಅನ್ನುವ ಯೋಚನೆ.


ಇದೆಲ್ಲ ಮಾಡಲು ಟೈಮ್ ಎಲ್ಲಿದೆ ಅಂತೀರ? ಟೈಮ್ ಮಡಿಕೊಳ್ಳಲೆಬೇಕು.. "ವಕ್ಥ್ ಹೋತಾ ನಹಿ, ನಿಕಾಲನಾ ಪಡತಾ
ಹೈ" ಅನ್ನೊ ತರ.. ನಮಗಾಗಿ ಅಲ್ಲದಿದ್ದರೂ ನಮ್ಮನ್ನೇ ನಂಬಿದ ಮಕ್ಕಳು/ಪರಿವಾರಕ್ಕೋಸ್ಕರವಾಗಿಯಾದರೂ ನಾವು
ಸ್ವಲ್ಪ ಟೈಮ್ ಫ಼್ರೀ ಮಾಡಿಕೊಳ್ಳಲೇಬೇಕು. ಈ ಐ.ಟಿ.ಯಲ್ಲಿ ಕೆಲವೊಂದು ಉದ್ಯೋಗಗಳು ಇಷ್ಟು ದುಡಿಸಿ ಬಿಡುತ್ತವೆ ಅಂದರೆ ಮತ್ತೆ ವ್ಯಾಯಾಮ ಮಾಡುವದಾಗಲಿ ಆರೋಗ್ಯದ ಕಡೆಗೆ ಲಕ್ಷ ಹರಿಸುವದಾಗಲೀ ಪ್ರ್ಯಾಕ್ಟಿಕಲಿ ಸಾಧ್ಯವೆ ಆಗುವದಿಲ್ಲ. ನಮಗೋ ಈ ಸಂಕೀರ್ಣಮಯ ಜಗತ್ತಿನಲ್ಲಿ ದೊಡ್ಡ ಗೊಂದಲ, ಜೀವನ ಮಾಡುವದಕ್ಕಾಗಿ ಹೊರಾಡಬೇಕೊ ಅಥವ ಹೊರಾಟ ಮಾಡುವದಕ್ಕಾಗಿ ಜೀವನ ಮಾಡಬೇಕೊ?
"ಕಾಯಕವೇ ಕೈಲಾಸ" ಎಂದು ಶರಣರು ಸಾರಿದ್ದರೂ ಈ ಬಂಡವಾಳ-ಶಾಹಿ ಸಂಸ್ಥೆಗಳಿಗೆ ಶರಣಾಗಿ ‘ಮೈ-ಕೈ-ಲಾಸ್' ಮಾಡಿಕೊಂಡು ದುಡಿಯವದರಲ್ಲಿ ಅರ್ಥವಿದೆಯೆ? "ಕೈ ಕೆಸರಾದರೆ ಬಾಯಿ ಮೊಸರು" ಎಂಬ ಗಾದೆ ನಿಜವಾದರೂ "ಕೆಸರಿನಲ್ಲಿಯೇ ಜೀವನ ಮಾಡು" ಅಂತ ಈ ಗಾದೆ ಬರೆದವರು ಹರಸಲಿಲ್ಲ. ಮೊಸರಿಗಾಗಿ ಕೆಸರು, ಜೀವನ ಮಾಡುವದಕ್ಕಾಗಿ ಹೋರಾಟ, ಇದನ್ನ ನಾವು ಸ್ಪಷ್ಟವಾಗಿ ತಿಳಕೊಬೇಕು.

ಈ ಬಂಡವಾಳಶಾಹಿ ಉದ್ಯೋಗಗಳು ಸ್ವಲ್ಪ ಜಾಸ್ತಿ ದುಡಿಸಿಕೊಂಡರು ಎಲ್ಲ ಕೆಲಸಗಳು ಅದೇ ರೀತಿ ಇರುವದಿಲ್ಲ.
ಬಂಡವಾಳಶಾಹಿ ಸಂಸ್ಕೃತಿಯ ಒಂದು ಮೆಚ್ಚಬೇಕಾದ ಅಂಶ ಅಂದರೆ ಇವತ್ತು ನಮಗೆ ಉದ್ಯೋಗದಲ್ಲಿ ಇರುವ ಅವಕಾಶಗಳು. ಸ್ವಲ್ಪ ಕಣ್ಣು ತೆರೆದು ನೋಡಿದರೆ ಬೇಕಾದಷ್ಟು ಕೆಲಸಗಳು ಗೋಚರಿಸುತ್ತವೆ. ನಮ್ಮ ಹಳೆಯ ತಲೆಮಾರಿನಂತೆ ನಾವು ಹಿಡಿದ ಕೆಲಸದಲ್ಲಿಯೇ ನಿವೃತ್ತಿ ಆಗಬೇಕೆನ್ನುವ ಕಡ್ಡಾಯ ನಿಯಮವೇನೂ ಇಲ್ಲ. ಸ್ವಲ್ಪ ಸಂಶೋಧನೆ ಮಾಡಿ, ಕಡಿಮೆ ಕೆಲಸ ಇರುವ ಕೆಲಸ ಆಯ್ಕೆ ಮಾಡಿಕೊಳ್ಳಬಹುದು. "ಜೀತ ಪದ್ಧತಿ" ಶತಮಾನದಿಂದಲು ನಡೆದು ಬಂದಿದೆ. ಕೆಲವೊಮ್ಮೆ ನೀಲಿ ಕಾಲರ್, ಕೆಲವೊಮ್ಮೆ ಬಿಳಿ ಕಾಲರ್!

ನಾವು ನಮಗೆ ಹಾಕಿಕೊಳ್ಳಬೇಕಾದ ಪ್ರಶ್ನೆ "ನಾವು ಜೀತ ಮಾಡಲೇಬೇಕ"? ಆಥವ ಬೇರೆ ಏನಾದರೂ ಮಾರ್ಗ ಉಂಟಾ?
ಇರಲಿ ನಾನು ವಿಷಯಾಂತರ ಮಾಡುತ್ತಿದ್ದೇನೆ.. ವಿಷಯ ಇಷ್ಟೆ, ಉದ್ಯೋಗ ಹೋದರೆ ಮತ್ತೆ ಪಡಕೊಬಹುದು, ಆರೋಗ್ಯ ಹೋದರೆ ಬರದು. ಒಂದು ದಶಕದ ಹಿಂದೆ ನಮಗೆ ಒಂದಿಷ್ಟು ಆರೋಗ್ಯ-ಪ್ರಜ್ಞೆ ಜಾಗೃತವಾಗಿದ್ದರೆ ಎಷ್ಟೊ ಚೆನ್ನಾಗಿರುತಿತ್ತು!
ಕಾಲ ಇನ್ನು ಮಿಂಚಿಲ್ಲ, ಆರೋಗ್ಯಕರ ಪ್ರಕೃತಿ ಹೊಂದಲು, ಸದೃಢ-ಕಾಯ ಬೆಳೆಸಿಕೊಳ್ಳಲು ಇನ್ನು ಅವಕಾಶವಿದೆ.
ಈಗ ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿದರೆ ಮುಂದೆ ಈ ವಿಷಯದ ಬಗ್ಗೆ ನಾವು ಹಳಹಳಿಸಬೇಕಾಗಿಲ್ಲ.
ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ವರುಷದಾ ಆರಂಭದಲಿ ನಮ್ಮ ಆರೋಗ್ಯ-ವರ್ಧನೆಗೆ ಒಂದು ಧೃಢ ಸಂಕಲ್ಪ ಮಾಡೊಣವೆ? ನಮ್ಮ ದೇಹ/ಮನಸ್ಸಿಗೆ ಆರೊಗ್ಯಕರ ಪ್ರವೃತ್ತಿಗಳನ್ನ ಬೆಳೆಸಿಕೊಳ್ಳುವತ್ತ, ಆರೋಗ್ಯ ಆಭಿವೃದ್ಧಿ ಯ ಕಡೆ ಮೊದಲ ಆದ್ಯತೆ ನೀಡೊಣವೆ?


ಆರೋಗ್ಯ-ಅಭಿವೃದ್ಧಿಯ ಚಿಂತನೆ ಮತ್ತು ಪ್ರಯತ್ನಗಳು, ಒಮ್ಮೆ ಹುರುಪು ಬಂದು ಮಾಡಿ ಮರೆಯುವ ಆರಂಭ-ಶೂರತನವಾಗದೆ, ಈ ಪತ್ರಿಕೆಯ ಹೆಸರಿನಂತೆ, ಇದೊಂದು "ನಿರಂತರ " ಪ್ರಕ್ರಿಯೆಯಾಗಬೇಕು , ನಮ್ಮ ಬದಲಾದ ಜೀವನ-ಶೈಲಿ ಆಗಬೇಕು. ಆಗಲೇ ಬದುಕಿಗೊಂದು ಅರ್ಥ.. !


ಸಕಲರಿಗೂ ಈ ಹೊಸ-ವರುಷ, 2008, ಆರೋಗ್ಯ-ಪೂರ್ಣ ವರುಷವಾಗಲಿ ಮತ್ತು ಆ ಆರೋಗ್ಯ-ಭಾಗ್ಯದ ಬೆಳಕಿನ ಹರುಷ ನಿಮ್ಮ ಬದುಕಿನ ಎಲ್ಲ ರಂಗಗಳಲ್ಲಿ ಪ್ರತಿಫಲಿಸಲಿ.

ಬೀಸೂಕಲ್ಲಿನ ಪದಗಳು - ಶ್ರೀಮತಿ. ಶಾಂತಾ ಸಿ ರಾಜಗೋಳಿ. ಧಾರವಾಡ

ನನ್ನ ಅತ್ತೆಯವರು ದೇವರ ನೈವೇದ್ಯಕ್ಕೆ ಮಡಿಯಿಂದ ತಯಾರಿಸುತ್ತಿದ್ದ ಅಡುಗೆಗಳಿಗೆ ಸ್ವತಃ ಧಾನ್ಯಗಳನ್ನು ಬೀಸುತ್ತಿದ್ದಾಗ ಹೇಳುತ್ತಿದ್ದ ಕೆಲವು ಹಾಡುಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅವರ ಮೊಮ್ಮಗ ಪ್ರಕಾಶನ ಕುರಿತಾಗಿ ಅವರು ಬಹಳಷ್ಟು ಹಾಡುತ್ತಿದ್ದರು.

ಮಾಡಿಲ್ಲ ಮಳಿಯಿಲ್ಲ ಮ್ಯಾಗ ಗದ್ದಿನಿಲ್ಲ
ಮಾಳಗಿಮ್ಯಾಲ ಮಡನಿಂತು
ಮಾಳಗಿಮ್ಯಾಲ ಮಡನಿಂತು ನನ ಪರಕಾಶಿ
ನೀ ಓದಬಲ್ಲವ ನೀ ಒಡದೇಳೋ.......
(ಮಾಡಿಲ್ಲ-ಮೋಡವಿಲ್ಲ, ಗದ್ದಿನಿಲ್ಲ-ಗುಡುಗು)

ಸರಕಾರ ಅನ್ನೋದು ದರಕಾರ ನನಗಿಲ್ಲ
ಬರಕೊಳ್ಳೊ ಪರಕಾಶಿ ಮನಿಯಾಗ
ಬರಕೊಳ್ಳೊ ಪರಕಾಶಿ ಮನಿಯಾಗ ಇದ್ದಾಗ
ಸರಕಾರದ ಅಂಜಿಕಿ ನನಗಿಲ್ಲಾ.....
(ದರಕಾರ-ಹೆದರಿಕೆ, ಬರಕೊಳ್ಳೊ-ಓದಿದ, ಪರಕಾಶಿ -ಪ್ರಕಾಶ)

ಅವರ್‍ಯಾರ ಇವರ್‍ಯಾರ ಅವರಿಗೊಂಚಲದವರ
ಅವರ ನಮ್ಮವ್ವನ ತವರವರ
ಅವರ ನಮ್ಮವ್ವನ ತವರವರ ಬಂದರ
ಹಾಲಿನ್ಯಾಗ ಹಸ್ತ ತೊಳಿಸೇನ....

ಅವರೀ ಹೂವಿನಂಗ ಅವರ ಬಾಳ ಚಲುವರ
ಅವರವ್ವ ನಮ್ಮನಿಗೆ ಕಳವಳ್ಳ
ಅವರವ್ವ ನಮ್ಮನಿಗೆ ಕಳವಳ್ಳ ಅವರಿಲ್ದೆ
ಮಾಗಿಯ ಹೊತ್ತ ನಾ ಹ್ಯಾಂಗ ಕಳೀಯಲೆ...
(ಕಳವಳ್ಳ-ಕಳಿಸ್ತಾ ಇಲ್ಲ)

ಅತ್ತಿಗಿ ಅಣ್ಣನ ಮಡದಿ ಸಿಟ್ಟ ತಾಳವಳಲ್ಲ
ಅಕ್ಕತಪ್ಪಿ ನನ್ನ ಬೇದಾಳ
ಅಕ್ಕತಪ್ಪಿ ನನ್ನ ಬೇದಾಳ ನನ ಪರಕಾಶಿ
ತಪ್ಪಂದ ನನ್ನ ಕಾಲ ಹಿಡಿಸ್ಯಾನ....
(ಅಕ್ಕತಪ್ಪಿ-ಬೈ ಚಾನ್ಸ್, )

ಮಳಿಯ ಬಂದರ ನಾ ಮರದಹನಿಗೆ ನಿಂತೇನ
ಮಳಿಬಿಟ್ಟರೂ ಬಿಡದ ಮರದ ಹನಿ
ಮಳಿಬಿಟ್ಟರೂ ಬಿಡದ ಮರದ ಹನಿ ನನ್ನ ಹಡದವ್ವ
ನಾ ಬಿಟ್ಟರ ಬಿಡದ ನಿನ ಮನವ.....

ಅಂಜಬ್ಯಾಡ ಮನವ ಆನೀಯ ಬಲವೈತಿ
ಹಿಂದ ಗರ್ಜಿಸುವ ಹುಲಿ ಐತಿ
ಹಿಂದ ಗರ್ಜಿಸುವ ಹುಲಿ ಐತಿ ನನ ಪರಕಾಶಿ
ಸರಜಾ ನಿನಬಲವ ನನಗೈತಿ.....
(ಸರಜಾ-ಒಳ್ಳೆಯ ಗುಣದವ)

ಆಕಳ ಕರಬಿಟ್ಟ ನಾಕಮೂಲಿಗೆ ನಿಂತ
ಯಾಕ ಗೋಪೆವ್ವ ನೀ ತೊರಿವಲ್ಲಿ
ಯಾಕ ಗೋಪೆವ್ವ ನೀ ತೊರಿವಲ್ಲಿ ನನಕಂದ
ಆಡಿಬಂದ ಮಗ ಹಸದಾನ....


ಬೀಸೂಕಲ್ಲು : ಬೀಸುವ ಕಲ್ಲು- ಹಳ್ಳಿಗಳಲ್ಲಿ ಹಿಟ್ಟಿನ ಗಿರಣಿಗಳು ಬರುವ ಮೊದಲು, ಧಾನ್ಯಗಳನ್ನು ಬೀಸಲು ಉಪಯೋಗಿಸುತ್ತಿದ್ದ ಎರಡು ವೃತ್ತಾಕಾರದ ಚಪ್ಪಟೆ ಕಲ್ಲುಗಳಿಂದ ಮಾಡಿದ ಒಂದು ಸಾಧನ. ಈಗಲೂ ಹಳ್ಳಿಗಳಲ್ಲಿ ಈ ಬೀಸುವ ಕಲ್ಲನ್ನು ಮನೆ-ಮನೆಗಳಲ್ಲಿ ಕಾಣಬಹುದು.

Saturday, April 05, 2008

ಹೊಸ ವರುಷ ತರಲಿ ನಮಗೆಲ್ಲ ಹರುಷ - ಪ್ರಕಾಶ ಸಿ. ರಾಜಗೋಳಿ, ಬೆಂಗಳೂರು

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ಲೇಖನದಲ್ಲಿ ನಾನು ಜಗತ್ತಿನಾದ್ಯಂತ ಆಚರಿಸಲ್ಪಡುವ ಹೊಸ ವರ್ಷದ ವಿವಿಧ ಆಚರಣೆಗಳು ಮತ್ತು ಅವುಗಳ ವಿಶೇಷತೆಗಳ ಬಗ್ಗೆ ವಿವರಿಸುವ ಅಲ್ಪ ಪ್ರಯತ್ನ ಮಾಡಿರುತ್ತೇನೆ.
ಹೊಸ ವರ್ಷದ ಆಚರಣೆಯ ಉಗಮ ಮತ್ತು ಇತಿಹಾಸ:
ನಾಲ್ಕು ಸಾವಿರ ವರ್ಷಗಳಷ್ಟು ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕ್ರಿ ಶ ಪೂ ೨೦೦೦ ದಲ್ಲಿ ಚಳಿಗಾಲದ ಮೊದಲ ಪಾಡ್ಯದ ದಿನ (ಸರಿ ಸುಮಾರು ಮಾರ್ಚ್ ೧ ನೆ ತಾರೀಖು) ಇದನ್ನು ಆಚರಿಸುತ್ತಿದ್ದರಂತೆ. ಆಗ ಹೊಸ ವರ್ಷದ ಆಚರಣೆ ಹನ್ನೂಂದು ದಿನಗಳದ್ದಾಗಿರುತ್ತಿತ್ತಂತೆ!!

ರೋಮನ್ ನಾಗರೀಕತೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸ ವರ್ಷದ ಆಚರಣೆಗೆ ನಾಂದಿ ಹಾಡಲಾಯಿತು. ಬೇರೆ ಬೇರೆ ರೋಮನ್ ದೊರೆಗಳಿಂದ ರೋಮನ್ ಕ್ಯಾಲೆಂಡರು ಬಹಳ ಬದಲಾವಣೆ ಕಂಡಿದ್ದರಿಂದ ಕ್ರಿ ಶ ಪೂ ೧೫೩ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಆರಂಭದ ದಿನ ಎಂದು ರೋಮನ್ ಸೆನೆಟು ನಿರ್ಧಾರ ಮಾಡಿತು. ದೊರೆ ಜ್ಯುಲಿಯಸ್ ಸೀಸರ್ ಕ್ರಿ ಶ ಪೂ ೪೬ ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಮೊದಲ ದಿನ ಎಂದು ನಿರ್ಧರಿಸಿ ಜ್ಯೂಲಿಯನ್ ಕ್ಯಾಲೆಂಡರಿಗೆ ನಾಂದಿ ಹಾಡಿದ. ರೋಮನ್ನರ ಹೊಸ ವರ್ಷಾಚರಣೆಗೆ ಕ್ಯಾಲೆಂಡುಸ್ ಎನ್ನುತ್ತಾರೆ. ಕ್ರಿಸ್ತನ ಜನ್ಮದಿಂದ ಉದಯಿಸಿದ ಕ್ರಿಸ್ತಿಯನ್ ಧರ್ಮ ರೋಮನ್ನರ ಹೊಸ ವರ್ಷದ ಆಚರಣೆಗೆ ಮೊದಮೊದಲು ವಿರೋಧ ವ್ಯಕ್ತಪಡಿಸಿದರೂ ಕ್ರಮೇಣ ತಮ್ಮ ಚರ್ಚಿನ ಆಚರಣೆಗಳಲ್ಲಿ ಅಳವಡಿಸಿಕೊಳ್ಳತೊಡಗಿದರು. ಹೊಸ ವರ್ಷವೆಂದಾಕ್ಷಣ ನಮಗೆ ನೆನಪಾಗುವದು ಆ ವರ್ಷದಲ್ಲಿ ಏನಾದರೂ ರೆಸಲುಶನ್ ಮಾಡಿಕೊಳ್ಳುವದು ಮತ್ತು ಅದನ್ನು ಪಾಲಿಸಲು ವರ್ಷವಿಡೀ ಹೆಣಗುವದು. ಉದಾಹರಣೆಗೆ ಧೂಮಪಾನ ಬಿಡುವದು, ಮಾಂಸಾಹಾರವನ್ನು ಬಿಡುವದು ಇತ್ಯಾದಿ. ಈ ರೀತಿಯ ಹೊಸ ವರ್ಷದ ರೆಸಲುಶನ್ (ನಿರ್ಧಾರ) ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಳೆಯದು. ಪ್ರಾಚೀನ ಬ್ಯಾಬಿಲೋನಿಯನ್ನರ ಹೆಸರಾಂತ ಹೊಸ ವರ್ಷದ ರೆಸಲುಶನ್ ಏನಾಗಿರುತ್ತಿತ್ತು ಗೊತ್ತೆ? ಕಡ ತಂದ ರೈತಕಿ ಸಾಮಾನುಗಳನ್ನು ಹಿಂದಿರುಗಿಸುವದು!!!!

ಪ್ರಾಚೀನ ಈಜಿಪ್ತಿನಲ್ಲಿ ಅಲ್ಲಿಯ ಜೀವನಾಡಿ ನೈಲ್ ನದಿಗೆ ಮಹಾಪೂರ ಬಂದಾಗ ಹೊಸ ವರ್ಷ ಆಚರಿಸುತ್ತಿದ್ದರಂತೆ!!! ಇದು ಸೆಪ್ಟೆಂಬರಿನ ಆಸುಪಾಸು ಬರುತ್ತಿತ್ತು. ಅವರು ಮಹಾಪೂರವನ್ನೇ ಏಕೆ ಆಯ್ದುಕೊಂಡಿದ್ದರು ಎಂದರೆ ನೈಲ್ ನದಿ ಉಕ್ಕಿ ಹರಿದರೆ ಮಾತ್ರ ಈಜಿಪ್ತಿನ ಬೆಂಗಾಡಿನಲ್ಲಿ ಜೀವಕಳೆ ಎಂಬ ಕಟುಸತ್ಯವನ್ನು ಆಗಿನವರು ಅರಿತಿದ್ದರು. ಹೊಸ ವರ್ಷದ ದಿನ ಅವರು ತಮ್ಮ ದೇವತೆ ಅಮೊನ್ ಆತನ ಹೆಂಡತಿ ಮತ್ತವನ ಮಗನ ಮೂರ್ತಿಗಳನ್ನು ಹಾಡುತ್ತ ಕುಣಿಯುತ್ತ ನೈಲ್ ನದಿಯಲ್ಲಿ ದೋಣಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಒಂದು ತಿಂಗಳಿನ ಆಚರಣೆಗಳ ನಂತರ ಮೂರ್ತಿಗಳನ್ನು ವಾಪಸ್ಸು ದೇವಾಲಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು.

ವರ್ಷದ ಆರಂಭದ ದಿನದಂದು ನವಜಾತ ಶಿಶುಗಳ ಪೆರೆಡು ಮಾಡುವ ಸಂಪ್ರದಾಯ ಗ್ರೀಕ್ ಮತ್ತು ಈಜಿಪ್ತಿಯನ್ ನಾಗರೀಕತೆಯಲ್ಲಿ ಇತ್ತಂತೆ. ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ ಎಂದು ಅವರು ಭಾವಿಸಿದ್ದರಂತೆ. ಹದಿನಾಲ್ಕನೆಯ ಶತಮಾನದಲ್ಲಿ ನವಜಾತ ಮಗುವಿನ ಬದಲಾಗಿ ಮಗುವಿನ ಚಿತ್ರವಿರುವ ಬ್ಯಾನರುಗಳನ್ನು ಬಳಸಿ ಹೊಸ ವರ್ಷ ಆಚರಿಸುವ ಪದ್ಧತಿ ಅಮೇರಿಕೆಯಲ್ಲಿ ಜಾರಿಗೆ ಬಂದಿತು. ಇದನ್ನು ಜರ್ಮನರು ಅಮೇರಿಕೆಗೆ ಪರಿಚಯಿಸಿದರು ಎನ್ನಲಾಗಿದೆ. ಹೊಸ ವರ್ಷದ ಮೊದಲ ದಿನ ತಾವು ಮಾಡುವ ಕಾರ್ಯಗಳು ಅಥವಾ ತಿನ್ನುವ ಪದಾರ್ಥಗಳು ವರ್ಷ ಪೂರ್ತಿಯ ಶುಭಾಶುಭಗಳಿಗೆ ಕಾರಣವಾಗುತ್ತವೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿತ್ತು.

ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪಧ್ಧತಿಯಿರುವ ಎಲ್ಲ ಸಂಸ್ಕೃತಿಗಳು ಹೊಸ ವರ್ಷದ ಆಚರಣೆ ಮಾಡುತ್ತವೆ. ನಾವು ವಾಸಿಸುವ ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರ್ಷದ ಕಾಲ ತೆಗೆದುಕೊಳ್ಳುತ್ತದೆ. ಹೀಗೆ ಪುನರಾವೃತ್ತಿಯಾಗುವ ಸಂದರ್ಭ ಸೂಚಿಸಲು ಹೊಸ ವರ್ಷದ ಆಚರಣೆ ಬಳಕೆಗೆ ಬಂತು.

ಜಗತ್ತಿನಾದ್ಯಂತ ಹೊಸ ವರ್ಷದ ವಿಭಿನ್ನ ಆಚರಣೆಗಳು:
ಜನೇವರಿ ೧ : ಜಾಗತಿಕವಾಗಿ ಮಾನ್ಯವಾಗಿರುವ ಗ್ರಿಗೋರಿಯನ್ ಕ್ಯಾಲೆಂಡರಿನ ಪ್ರಕಾರ ಹೊಸ ವರ್ಷದ ಆರಂಭದ ದಿನ ಜನೇವರಿ ೧. (ಜನೇವರಿ ಎನ್ನುವದು ರೋಮನ್ ದೇವತೆ ಜಾನುಸ್ಸನ ನೆನಪಿಗಾಗಿ ಇಡಲಾಗಿದೆ. ರೋಮನ್ನರ ಪ್ರಕಾರ ಜಾನುಸ್ ಎರಡು ತಲೆ ಹೊಂದಿದ್ದು ಒಂದು ತಲೆ ಹಿಂದೆ ಅಂದರೆ ಕಳೆದ ವರ್ಷವನ್ನು ಮತ್ತೆ ಇನ್ನೊಂದು ತಲೆ ಮುಂದಿನ ವರ್ಷವನ್ನು ನೋಡುತ್ತದಂತೆ) ಅಂದು ಸ್ನೇಹಿತರಿಗೆ ಬಂಧುಬಳಗದವರಿಗೆ ಶೇಕ್ ಹ್ಯಾಂಡ್ ಕೊಡುವದರ ಮೂಲಕ, ಫೊನಾಯಿಸುವದರ ಮೂಲಕ, ಈ ಮೇಲ್ ಕಳಿಸುವದರ ಮೂಲಕ, ಗ್ರೀಟಿಂಗ್ ಕಾರ್ಡ್ ಕಳಿಸುವದರ ಮೂಲಕ, ಗಿಫ಼್ಟಗಳನ್ನು ಕೊಡುವದರ ಮೂಲಕ ಹೊಸ ವರ್ಷವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ.

ಜಪಾನಿನಲ್ಲಿ ಜನೇವರಿ ೧ ರಂದೆ ಹೊಸ ವರ್ಷ ಆಚರಿಸಿದರೂ ಅದಕ್ಕೆ ತಮ್ಮದೇ ಚಾಪು ಮೂಡಿಸಿರುತ್ತಾರೆ. ಅಂದು ಅವರು ಸುಖ ಸಮೃದ್ಧಿಯ ದ್ಯೋತಕವಾಗಿ ಮತ್ತು ದುಷ್ಟ ಶಕ್ತಿಗಳನ್ನು ದೂರವಿಡಲು ಬಾಗಿಲಿಗೆ ಸ್ಟ್ರಾಗಳಿಂದ ಅಲಂಕೃತ ಹಗ್ಗವನ್ನು ಕಟ್ಟುತ್ತಾರೆ.

ರೊಶ್ ಹಸನ್ನಾ: ಜ್ಯೂ ಜನರ ಹೊಸ ವರ್ಷಾಚರಣೆಗೆ "ರೊಶ್ ಹಸನ್ನಾ" ಎನ್ನುತ್ತಾರೆ. ಅಂದು ಸಿನೆಗೊಗ್ ಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ಏರ್ಪಡಿಸುತ್ತಾರೆ. ಶೊಫ಼ರ್ ಎನ್ನುವ ವಾದ್ಯವನ್ನು ನುಡಿಸುತ್ತಾರಲ್ಲದೆ ಮಕ್ಕಳಿಗೆ ಸಿಹಿ ಹಂಚುತ್ತಾರೆ.

ಚೈನೀಸ್ ಹೊಸ ವರ್ಷ : ಪ್ರತಿ ವರ್ಷ ಜನೇವರಿ ೧೭ ರಿಂದ ಫ಼ೆಬ್ರುವರಿ ೧೯ ರ ನಡುವೆ ಬರುವ ಪಾಡ್ಯದ ದಿನವನ್ನು ಚೈನೀಯರು ಜಗತ್ತಿನಾದ್ಯಂತ "ಯುಆನ್ ಟ್ಯಾನ್"(ಹೊಸ ವರ್ಷದ ದಿನ) ಎಂದು ಆಚರಿಸುತ್ತಾರೆ. ಈ ದಿನ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಮದ್ದು ಸಿಡಿಸುವದು ಮತ್ತು ಪ್ರಭಾತ್ ಫೆರಿಗಳು (ಪೆರೆಡು) ಚೈನೀಸ್ ಹೊಸ ವರ್ಷಾಚರಣೆಯ ಪ್ರಮುಖ ಭಾಗಗಳು. ಸಾವಿರಾರು ಲ್ಯಾಂಟೀನುಗಳ ಮೆರವಣಿಗೆಗಳು ನೋಡುಗರಿಗೆ ಹಬ್ಬ ಎಂದು ಬಣ್ಣಿಸಲಾಗಿದೆ. ದುಷ್ಟ ಶಕ್ತಿಗಳನ್ನು ದೂರವಿರಿಸಲು ಅವರು ಮದ್ದು ಸಿಡಿಸುತ್ತಾರೆ.

ವಿಯೆಟ್ನಾಮ್ ಹೊಸ ವರ್ಷ : "ಟೆಟ್ ಗುಯೆನ್ ದಾನ್" ಎಂದು ಕರೆಯಲ್ಪಡುವ ವಿಯೆಟ್ನಾಮ್ ಹೊಸ ವರ್ಷ ಚೈನೀಸ್ ಹೊಸ ವರ್ಷದಂದೆ ಆಚರಿಸಲ್ಪಡುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ದೇವರು ವಾಸಿಸುತ್ತಾನೆ ಎಂದು ನಂಬುವ ವಿಯೆಟ್ನಾಮೀಯರು ಹೊಸ ವರ್ಷದ ದಿನ ಆ ದೇವರು ಸ್ವರ್ಗಕ್ಕೆ ಹೋಗಿ ಕಳೆದ ವರ್ಷ ತನ್ನನ್ನು ಹೇಗೆ ನೋಡಿಕೊಂಡರು ಎಂದು ತಿಳಿಸುತ್ತಾನೆ ಎಂದು ನಂಬುತ್ತಾರೆ. ಕಾರ್ಪ್ ಎನ್ನುವ ಮೀನಿನ ಬೆನ್ನ ಮೇಲೆ ದೇವರು ಸ್ವರ್ಗದತ್ತ ಪ್ರಯಾಣ ಮಾಡುತ್ತಾನೆ ಎಂದು ನಂಬಿಕೆ ಇರುವದರಿಂದ ಜೀವಂತ ಕಾರ್ಪ್ ಮೀನುಗಳನ್ನು ಕೆರೆ ಇಲ್ಲವೆ ನದಿಗೆ ಬಿಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹೊಸ ವರ್ಷದ ದಿನ ಆಗಮಿಸುವ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ನಸೀಬು ನಿರ್ಧಾರವಾಗುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ.

ಟಿಬೇಟಿಯನ್ ಹೊಸ ವರ್ಷ : ಜನೇವರಿಯಿಂದ ಮಾರ್ಚ ನಡುವೆ ಆಚರಿಸುವ ಟಿಬೇಟಿಯನ್ ಹೊಸ ವರ್ಷಕ್ಕೆ "ಲೊಸರ್" ಎನ್ನುತ್ತಾರೆ.

ಥಾಯ್‌ಲ್ಯಾಂಡ್ ಮತ್ತು ಕಾಂಬೊಡಿಯನ್ ಹೊಸ ವರ್ಷದ ಆಚರಣೆ ೧೩ ಏಪ್ರಿಲ್ ದಿಂದ ೧೫ ಏಪ್ರಿಲ್ ವರೆಗೆ ಇರುತ್ತದೆ.
ಸೆಪ್ಟೆಂಬರ್ ೧೧ ರಂದು ಇಥಿಯೋಪಿಯದ ಜನರು ಹೊಸ ವರ್ಷವನ್ನು "ಎಂಕುತತಾಷ್" ಎಂದು ಆಚರಿಸುತ್ತಾರೆ.
ಪರ್ಶಿಯಾ ಹೊಸ ವರ್ಷ : ಈಗಿನ ಇರಾನ್ ದೇಶದಲ್ಲಿ ಹೊಸ ವರ್ಷವನ್ನು ಮಾರ್ಚ್ ೨೧ ರಂದು ಆಚರಿಸುತ್ತಾರೆ. ಜಗತ್ತಿನಾದ್ಯಂತ ಪ್ರತಿ ವರ್ಷದ ಮೊಹರ್ರಂ ಮೊದಲ ದಿನದಂದು ಸುನ್ನಿ ಮುಸಲ್ಮಾನರು ಹೊಸ ವರ್ಷದ ಆಚರಣೆ ಮಾಡುತ್ತಾರೆ.

೧೩ನೆಯ ಶತಮಾನದವರೆಗೆ ಜರ್ಮನಿ ಮತ್ತು ಇಂಗ್ಲಂಡ್‌ನಲ್ಲಿ ಡಿಸೆಂಬರ್ ೨೫ನ್ನು ಹೊಸ ವರ್ಷದ ಆಚರಣೆಗೆ ಬಳಸುತ್ತಿದ್ದರು. ೧೪ ರಿಂದ ೧೬ ನೆಯ ಶತಮಾನದವರೆಗೆ ಈ ಪದ್ಧತಿ ಸ್ಪೇನ್ ದೇಶದಲ್ಲಿ ಬಳಕೆಯಲ್ಲಿತ್ತು.

ಶುಭ ಶುಕ್ರವಾರ ಅಥವಾ ಈಸ್ಟರ್ ಶನಿವಾರಗಳನ್ನು ಹೊಸ ವರ್ಷದ ಮೊದಲ ದಿನ ಎಂದು ಪರಿಗಣಿಸುವ ಪರಿಪಾಠ ಫ಼್ರಾನ್ಸಿನಲ್ಲಿ ೧೧ ರಿಂದ ೧೬ ನೆಯ ಶತಮಾನದವರೆಗೆ ಜಾರಿಯಲ್ಲಿತ್ತು ಎಂದು ದಾಖಲೆಗಳು ಹೇಳುತ್ತವೆ.

೧೪ನೆಯ ಶತಮಾನದಿಂದ ಗ್ರಿಗೋರಿಯನ್ ಕ್ಯಾಲೆಂಡರ್ ಅಳವಡಿಸಿಕೊಳ್ಳುವವರೆಗೆ ರಷಿಯದಲ್ಲಿ ಸೆಪ್ಟೆಂಬರ್ ೧ ರಂದು ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಪಶ್ಚಿಮದ ಸ್ವಿಡ್ಜರ್‌ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳಲ್ಲಿ ಸಂತ ಸಿಸ್ಟರ್‌ನ ಸ್ಮರಣಾರ್ಥ ಹೊಸ ವರ್ಷದ ಆಚರಣೆ ನಡೆಯುತ್ತದೆ. ಕ್ರಿ ಶ ೩೧೪ ರಲ್ಲಿ ಸಿಸ್ಟರ್ ಎನ್ನುವ ಸಂತನು ಸಮುದ್ರದ ದೈತ್ಯ ರಾಕ್ಷಸನನ್ನು ಬಂಧಿಸಿ ಜನರಿಗೊದಗಿದ ಸಂಕಷ್ಟಗಳಿಂದ ಪಾರುಮಾಡಿದ್ದನಂತೆ. ಹೀಗೆ ಬಂಧಿಸಲ್ಪಟ್ಟ ರಾಕ್ಷಸ ೧೦೦೦ ನೆಯ ಇಸವಿಯಲ್ಲಿ ಬಂಧಮುಕ್ತನಾಗಿ ಮತ್ತೆ ಕಂಟಕಪ್ರಾಯನಾಗುತ್ತಾನೆ ಎಂದು ನಂಬಲಾಗಿತ್ತು ಆದರೆ ಹಾಗೆ ಆಗದೆ ಇದ್ದಾಗ ಅಲ್ಲಿನ ಜನ ತಮ್ಮ ಹರ್ಷ ವ್ಯಕ್ತಪಡಿಸಲು ಮತ್ತು ಸಂತ ಸಿಸ್ಟರ್‌ನಿಗೆ ನಮಿಸಲು ಸಾಂಪ್ರದಾಯಿಕ ವೇಷ ಭೂಷಣಗಳಿಂದ ಹೊಸ ವರ್ಷವನ್ನು ಆಚರಿಸುತ್ತಾರೆ.

ಗ್ರೀಕ್ ದೇಶದಲ್ಲಿ ಹೊಸ ವರ್ಷವನ್ನು ಕಾರುಣ್ಯಮೂರ್ತಿ ಸಂತ ಬೆಸಿಲ್‌ನ ಸ್ಮರಣಾರ್ಥ ಆಚರಿಸುತ್ತಾರೆ.

ಸ್ಕಾಟ್‌ಲ್ಯಾಂಡಿನಲ್ಲಿ ಹೊಸ ವರ್ಷವನ್ನು "ಹೊಗ್ಮನೆ" ಎಂದು ಕರೆಯುತ್ತಾರೆ. ಅವತ್ತು ಕಳೆದ ವರ್ಷವನ್ನು ದಹಿಸಿ ಹೊಸ ವರ್ಷಕ್ಕೆ ಸ್ವಾಗತಿಸಲು ಟಾರಿನ ಡ್ರಮ್ಮುಗಳಿಗೆ ಬೆಂಕಿಯಿಟ್ಟು ರಸ್ತೆಗುಂಟ ಉರಳಿಸುತ್ತಾರೆ. ಸ್ಕಾಟಿಷ್ ಜನರು ಹೊಸ ವರ್ಷದ ದಿನ ಆಗಮಿಸುವ ಕಪ್ಪು ಕೂದಲಿನ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ಅದೃಷ್ಟ ಉಜ್ವಲವಾಗುತ್ತದೆ ಎಂದು ಬಲವಾಗಿ ನಂಬುತ್ತಾರೆ.

ಜಗತ್ತಿನಾದ್ಯಂತ ಹೊಸ ವರ್ಷದ ಆಚರಣೆ ಒಂದೇ ದಿನ ಇರದಿರುವದಕ್ಕೆ ಅವರು ಬಳಸುವ ಸೌರಮಾನ, ಚಂದ್ರಮಾನ ಅಥವ ಎರಡು ಸೇರಿರುವ ವಿಭಿನ್ನ ಕ್ಯಾಲೆಂಡರುಗಳೆ ಕಾರಣವಾಗಿವೆ.

ಹೊಸ ವರ್ಷಾಚರಣೆಯ ಅವಿಭಾಜ್ಯ ಅಂಗವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುವದು, ಮದ್ಯ ಸೇವಿಸುವದು, ಕುಣಿತ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವದು ಎಲ್ಲೆಡೆ ಸರ್ವೇ ಸಾಮಾನ್ಯವಾಗುತ್ತಿದೆ.

ಭರತಖಂಡದಲ್ಲಿ ಹೊಸ ವರ್ಷದ ಆಚರಣೆಗಳು:

"ವಿವಿಧತೆಯಲ್ಲಿ ಏಕತೆ" ನಮ್ಮ ಮೂಲ ಮಂತ್ರವಾಗಿರುವದರಿಂದ ನಮ್ಮಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಧರ್ಮಗಳಲ್ಲಿ ಹೊಸ ವರ್ಷದ ಆಚರಣೆಗಳು ವಿಭಿನ್ನವಾಗಿವೆ.

ಉತ್ತರ ಭಾರತದಲ್ಲಿನ ಹಿಂದೂಗಳಿಗೆ ದೀಪಗಳ ಹಬ್ಬ ದೀಪಾವಳಿ ಹೊಸ ವರ್ಷಾಚರಣೆಗೆ ಮೀಸಲು. ಪ್ರತಿವರ್ಷ ಅಕ್ಟೋಬರ್ ಕೊನೆಗೆ ಇಲ್ಲವೆ ನವೆಂಬರ್ ಆರಂಭಕ್ಕೆ ಬರುವ ಈ ಹಬ್ಬದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿಯ ಪೂಜೆಗೆ ಅಗ್ರಸ್ಥಾನ. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ರಾಮ ತನ್ನ ಮಡದಿ ಸೀತೆಯೊಡನೆ ದೀಪಾವಳಿ ದಿನದಂದು ತನ್ನ ರಾಜ್ಯಕ್ಕೆ ಪುನರಾಗಮಿಸಿದನೆಂದು ಹೇಳಲಾಗಿದೆ.

ಪಂಚನದಿಗಳ ಬೀಡು ಪಂಜಾಬಿನಲ್ಲಿ ಹೊಸ ವರ್ಷವನ್ನು "ಬೈಸಾಕಿ' ಹೆಸರಿನಿಂದ ಪ್ರತಿ ವರ್ಷ ಏಪ್ರಿಲ್ ೧೩ ರಂದು ಆಚರಿಸುತ್ತಾರೆ. ಇದು ಅಲ್ಲಿನ ಬೆಳೆಗಳ ಕೊಯ್ಲಿಗೆ (ಸುಗ್ಗಿ) ಸರಿ ಹೋಗುತ್ತದೆ. ಸಿಖ್ಖರಿಗೆ ಬೈಸಾಕಿ ಹಬ್ಬ ಸುಗ್ಗಿ ಮಾತ್ರವಾಗಿರದೆ ಸಿಖ್ಖ ಗುರು ಗೋವಿಂದಸಿಂಗರು ೧೬೯೯ ರಲ್ಲಿ ಧರ್ಮ ಸೇನೆ ಖಾಲ್ಸಾವನ್ನು ಸ್ಥಾಪಿಸಿದ್ದರಿಂದ ಅತಿ ಮಹತ್ವ ಪಡೆದಿದೆ.

ಕೇರಳದಲ್ಲಿ ಹೊಸ ವರ್ಷವನ್ನು "ವಿಶು" ಹೆಸರಿನಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಮಧ್ಯೆ ಆಚರಿಸುತ್ತಾರೆ. ಇದು ಮಲಯಾಳಿಗಳ ಮೊದಲ ತಿಂಗಳು "ಮೆದಮ್"ನ ಮೊದಲ ದಿನವೂ ಹೌದು. ಹೊಸ ವರ್ಷದ ಮುನ್ನಾ ದಿನ ಕೇರಳಿಗರು ತಾವು ಬೆಳೆದ ಭತ್ತ, ತೆಂಗಿನಕಾಯಿ, ಹಲಸಿನಹಣ್ಣು, ಅಡಕೆ, ಬಾಳೆ ಮುಂತಾದವನ್ನು ಸುಂದರವಾಗಿ ಅಲಂಕರಿಸುತ್ತಾರೆ. ಹೊಸ ವರ್ಷದ ದಿನ ಸೂರ್ಯೋದಯಕ್ಕೆ ಮೊದಲು ನಿನ್ನೆಯ ಅಲಂಕರಣಗಳನ್ನು ಮೊದಲು ನೋಡಿದರೆ ವರ್ಷ ಪೂರ್ತಿ ಶುಭವಾಗುತ್ತದೆ ಎನ್ನುವದು ಅವರ ನಂಬುಗೆ ಹೀಗಾಗಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪಡಸಾಲೆಗೆ ಬಂದು ಧವಸಧಾನ್ಯಗಳ ಸೊಬಗನ್ನು ಸವಿಯುತ್ತಾರೆ. ಕೇರಳದ ಪ್ರಸಿದ್ಧ ದೇವಾಲಯಗಳಾದ ಗುರುವಾಯೂರು, ಶಬರಿ ಮಲೈ ಮತ್ತು ಪದ್ಮನಾಭ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆಗಳಿರುತ್ತವೆ.

"ವರ್ಷಪಿರುಪ್ಪು" ಎಂದು ಹೊಸ ವರ್ಷವನ್ನು ತಮಿಳುನಾಡಿನಲ್ಲಿ ಆಚರಿಸುತ್ತಾರೆ. ಇದು ಏಪ್ರೀಲ್ ಮಧ್ಯಭಾಗದಲ್ಲಿ ಬರುತ್ತದೆ. ಬಾಗಿಲೆದುರು ರಂಗೋಲಿ, ಬಾಗಿಲಿಗೆ ತಳಿರು ತೋರಣ, ಮನೆಯಲ್ಲಿ ವಿಶೇಷ ಅಡುಗೆ, ಮನೆಯವರೆಲ್ಲರಿಗೆ ಹೊಸ ಬಟ್ಟೆ ಹೊಸ ವರ್ಷದ ವಿಶೇಷಗಳು. ನಾವು ಯುಗಾದಿಯಲ್ಲಿ ಬೇವು-ಬೆಲ್ಲದ ವಿನಿಮಯ ಮಾಡಿಕೊಳ್ಳುವಂತೆ ಅವರು "ಮಾಂಗಾಪಚಡಿ"ಯನ್ನು ಬಳಸುತ್ತಾರೆ. ವ್ಯಾಪಾರಿಗಳು ತಮ್ಮ ಹೊಸ ಖಾತಾ ಪುಸ್ತಕಗಳನ್ನು ಅಂದು ಆರಂಭಿಸುತ್ತಾರೆ.

ವೈಶಾಖ ಮಾಸದ ಮೊದಲ ದಿನವನ್ನು ಬೆಂಗಾಲಿಗಳು "ನಬ ಬರ್ಷ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ.ಇದನ್ನೆ "ಪೈಲಾ ಬೈಸಾಖ್" ಎಂದು ಬಾಂಗ್ಲಾದೇಶದಲ್ಲಿ ಆಚರಿಸುತ್ತಾರೆ. ಅಂದು ಸರಕಾರಿ ರಜಾದಿನವಾಗಿರುತ್ತದೆ.ಹಾಡು, ಕುಣಿತ, ಗಾಳಿಪಟ ಸ್ಪರ್ಧೆಗಳು, ಎತ್ತಿನ ಷರತ್ತುಗಳು ಈ ಆಚರಣೆಯ ಪ್ರಮುಖ ಆಕರ್ಷಣೆಗಳು. ಅಕ್ಕಿ ಹಿಟ್ಟಿನಿಂದ ಹಾಕಿದ ರಂಗೋಲಿಯ ಮಧ್ಯದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸ್ವಸ್ತಿಕದ ಮೇಲೆ ಮಣ್ಣಿನ ಮಡಕೆಯಿಟ್ಟು ಅದರಲ್ಲಿ ಗಂಗಾಜಲ ತುಂಬಿ ಮೇಲೆ ಮಾವಿನ ಎಲೆಗಳನ್ನು ಇಡುತ್ತಾರೆ ಮತ್ತು ಹೊಸ ವರ್ಷ ಶುಭ ತರಲಿ ಎಂದು ಮನಸಾ ಪ್ರಾರ್ಥಿಸುತ್ತಾರೆ. ನದಿಯಲ್ಲಿ ಮಿಂದು ಬೆಂಗಾಲಿ ವಿಶೇಷ ಉಡುಗೆ ತೊಟ್ಟ ಹೆಣ್ಣು ಮತ್ತು ಗಂಡು ಮಕ್ಕಳು ನಡೆಸುವ ಪ್ರಭಾತಫೇರಿ ಆಕರ್ಷಕವಾಗಿರುತ್ತದೆ. ಸಂಪತ್ತಿನ ದೇವತೆ ಲಕ್ಷ್ಮಿ ಮತ್ತು ವಿಘ್ನವಿನಾಶಕ ಗಣೇಶನ ಪೂಜೆಗಳೊಂದಿಗೆ ವ್ಯಾಪಾರಿಗಳು ಹೊಸ ವರ್ಷದ ಖಾತಾ ಕಿರ್ದಿ ಪುಸ್ತಕದಲ್ಲಿ ನೋಂದಣಿ ಆರಂಭಿಸುತ್ತಾರೆ. "ಶುಭೋ ನಬೊ ಬರ್ಷೋ" ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

"ನವ್ರೆಹ್" ಇದು ಕಾಶ್ಮೀರದ ಹೊಸ ವರ್ಷ. ಚೈತ್ರ ಮಾಸದ ಮೊದಲ ದಿನ ಇದು ಬರುತ್ತದೆ. ಈ ದಿನ ಸಪ್ತ ಋಷಿ ಸಂವತ್ಸರದ ಮೊದಲ ದಿನವೂ ಹೌದು. ಮೂಲ ಸಂಸ್ಕೃತದ "ನವ್ ವರ್ಷ"ದಿಂದ ನವ್ರೆಹ್ ಉದ್ಭವವಾಗಿದೆ. ಹೊಸ ವರ್ಷದ ಮುನ್ನಾ ದಿನ ಕಾಶ್ಮೀರಿ ಪಂಡಿತರು ವಿಚಾರ್ ನಾಗ್ ಎನ್ನುವ ಪುಷ್ಕರಣಿಯಲ್ಲಿ ಮಿಂದು ಪಾಪ ವಿಮೋಚನೆಗೆ ಪ್ರಾರ್ಥಿಸುತ್ತಾರೆ. ಅಕ್ಕಿ ಹಿಟ್ಟಿನಲ್ಲಿ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಿದ ಕೇಕನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಕಾಶ್ಮೀರಿ ಪಂಡಿತರ ಕುಲಗುರುಗಳಿಂದ ಪಂಚಾಂಗ ಪಠಣ ನಡೆಯುತ್ತದೆ. ಈ ಪಂಚಾಂಗವನ್ನು ಅಕ್ಕಿ ತುಂಬಿದ ಪಾತ್ರೆಯಲ್ಲಿ ಸುಗಂಧ ಪುಷ್ಪಗಳಿಂದ ಅಲಂಕರಿಸಿ ಮತ್ತೊಂದು ತಟ್ಟೆ ಮುಚ್ಚಿ ಮರುದಿನ ಮುಂಜಾನೆಯವರೆಗೆ ದೇವರೆದುರು ಇಡುತ್ತಾರೆ. ಸಮೃದ್ಧಿಯ ಸಂಕೇತವಾದ ಅಕ್ಕಿ ತುಂಬಿದ ಪಾತ್ರೆಯನ್ನು ಕಾಶ್ಮೀರಿಗಳು ಹೊಸ ವರ್ಷದ ದಿನ ವೀಕ್ಷಿಸುತ್ತಾರೆ. ಹೀಗೆ ಮಾಡುವದರಿಂದ ಮುಂಬರುವ ವರ್ಷ ಶುಭಪ್ರದವಾಗುತ್ತದೆ ಎಂದು ಅವರು ನಂಬುತ್ತಾರೆ. ಶೇರಿಕಾ ದೇವತೆಯ ಪೂಜೆ ಅವತ್ತಿನ ವಿಶೇಷ. ಹೊಸವರ್ಷದ ಮೊದಲ ದಿನದಿಂದ ಆರಂಭವಾಗುವ ನವರಾತ್ರಿ ಹಬ್ಬ ನಮ್ಮಲ್ಲಿನ ನಾಡಹಬ್ಬ ದಸರಾದಂತೆ ಉಪವಾಸ ವೃತಾಚರಣೆಗಳಂತೆ ಅಚರಿಸಲ್ಪಡುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ವೈಷ್ಣೋದೇವಿಯ ದರ್ಶನ ಪಡೆಯಲಾಗುತ್ತದೆ.

"ಚೇತಿಚಾಂದ್" ಎನ್ನುವದು ಸಿಂಧಿ ಜನರ ಹೊಸ ವರ್ಷ. ಇದು ನಮ್ಮಲ್ಲಿನ ಯುಗಾದಿ ಹಬ್ಬದಂದೇ ಬರುತ್ತದೆ. ಚೈತ್ರಮಾಸದ ಮೊದಲ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಸಿಂಧಿ ಭಾಷೆಯಲ್ಲಿ ಚೇತ್ ಎಂದರೆ ಚೈತ್ರ ಎಂದರ್ಥ. ಸಿಂಧಿಗಳು ತಮ್ಮ ಧರ್ಮಗುರು ಝುಲೆಲಾಲನ ಜನ್ಮದಿನವಾಗಿಯೂ 'ಚೇತಿಚಾಂದ್'ನ್ನು ಆಚರಿಸುತ್ತಾರೆ. ಅವತ್ತು ಎಲ್ಲ ಸಿಂಧಿಗಳು ಜೀವದಾಯಿನಿ ಸಿಂಧು (ನದಿ)ವನ್ನು ಪೂಜಿಸುತ್ತಾರೆ. ಕಂಚಿನ ಪಾತ್ರೆಯಲ್ಲಿ ದೀಪ ಬೆಳಗಿಸಿ ಹೂವಿನೊಡನೆ ನೀರಿನಲ್ಲಿ ತೇಲಿಬಿಡುವ ಪರಿಪಾಠವಿದೆ. ಅಂದು ಸಹಸ್ರಾರು ಸಿಂಧಿಗಳು ತಮ್ಮ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಸುತ್ತಾರೆ.

ಮಹಾರಾಷ್ಟ್ರೀಯರು "ಗುಡಿಪಾಡವಾ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಇದು ನಮ್ಮ ಯುಗಾದಿ ಹಬ್ಬದ ಅನ್ವರ್ಥ. ಹೋಳಿಗೆ, ಸೂಂಠಪಾಕ ಮತ್ತು ಉಸಳಿ ಅಂದಿನ ವಿಶೇಷ ಭಕ್ಷ್ಯಗಳು. ಬೇವು ಬೆಲ್ಲದ ವಿನಿಮಯ ಅಂದಿನ ವಿಶೇಷ. ಉದ್ದನೆ ಬಡಿಗೆಯ ಕೊನೆಗೆ ತಾಮ್ರದ ಇಲ್ಲವೆ ಬೆಳ್ಳಿಯ ತಂಬಿಗೆಯನ್ನು ಡಬ್ಬಹಾಕಿ ರೇಷ್ಮೆ ಇಲ್ಲವೆ ಖಾದಿ ಬಟ್ಟೆಯಿಂದ ಮತ್ತು ತೋರಣಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಹೀಗೆ ನಡೆಯುವ ಗುಡಿ ಪೂಜೆ ಅಂದಿನ ಶುಭಸೂಚಕ ದಿನದ ಪ್ರಮುಖ ಆಚರಣೆ. ಸಾಡೇತೀನ್ ಶುಭ ಮುಹೂರ್ತಗಳಲ್ಲಿ ಒಂದಾಗಿರುವ ಯುಗಾದಿಯ ದಿನ ಅನೇಕ ಶುಭ, ಮಂಗಲ ಕಾರ್ಯಗಳನ್ನು ಆರಂಭಿಸುತ್ತಾರೆ. ಶೆಟ್ಟರು ತಮ್ಮ ಖಾತೆ ಕಿರ್ದಿಯ ಹೊಸ ಲೆಖ್ಖ ಬರೆಯಲು ಅಂದಿನಿಂದ ಆರಂಬಿಸುತ್ತಾರೆ. ಬ್ರಹ್ಮ ಜಗತ್ತನ್ನು ನಿರ್ಮಿಸಿದ್ದು ಇದೇ ದಿನ ಮತ್ತು ಮರ್ಯಾದಾಪುರುಷ ರಾಮನು ವಾಲಿಯನ್ನು ಇದೇ ದಿನ ಸಂಹರಿಸಿದನೆಂದು ಹೇಳಲಾಗಿದೆ.

ಆಸ್ಸಾಮಿನ ಜನರು ಎಪ್ರಿಲ್ ಮತ್ತು ಮೇ ಮಧ್ಯದಲ್ಲಿ ಬರುವ ಹೊಸ ವರ್ಷವನ್ನು "ಗೊರುಬಿಹು" ಎಂಬುದಾಗಿ ಆಚರಿಸುತ್ತಾರೆ. ಅಲಂಕೃತ ದನಗಳ ಜಾತ್ರೆ ಅಂದಿನ ವಿಶೇಷ.

ಭಾರತಕ್ಕೆ ಜೆ.ಆರ್.ಡಿ ಟಾಟಾ, ಹೋಮಿ ಜಹಾಂಗೀರ್ ಭಾಭಾ, ರತನ್ ಟಾಟಾ ಮುಂತಾದ ಮೇಧಾವಿಗಳನ್ನು ನೀಡಿದ ಪಾರ್ಸಿ ಧರ್ಮೀಯರು ಹೊಸ ವರ್ಷವನ್ನು "ನವ್ರೊಜ಼್" ಹೆಸರಿನಿಂದ ಪ್ರತಿವರ್ಷ ಮಾರ್ಚ್ ೨೧ ರಂದು ಆಚರಿಸುತ್ತಾರೆ. ಈ ದಿನ ತಳಿರು ತೋರಣ ಕಟ್ಟುವದು, ರಂಗೋಲಿ ಹಾಕುವದು ಹೀಗೆ ಹಲವಾರು ಹಿಂದೂ ಹೊಸವರ್ಷದ ಆಚರಣೆಗಳನ್ನು ಪಾರ್ಸಿಗಳು ಅಳವಡಿಸಿಕೊಂಡಿದ್ದಾರೆ.

ಕೊನೆಯದಾಗಿ ಕರ್ನಾಟಕ ಮತ್ತು ಅಂಧ್ರಪ್ರದೇಶಗಳಲ್ಲಿ ಯುಗಾದಿಯಂದು ಹೊಸ ವರ್ಷದ ಆಚರಣೆ ನಡೆಯುತ್ತದೆ. ವರಕವಿ ಬೇಂದ್ರೆ ಹೇಳುವಂತೆ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..." ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಪಂಚಾಂಗ ಪಠಣ/ಶ್ರವಣ ಅಂದಿನ ಪ್ರಮುಖ ಆಕರ್ಷಣೆಗಳು.

ನಿಮಗೆಲ್ಲ ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಮುಂದಿನ ಯುಗಾದಿ ವಿಶೇಷಾಂಕದಲ್ಲಿ ಮತ್ತೆ ಭೇಟಿ ಆಗೋಣ.

Wednesday, April 02, 2008

ನಾವು..ಮತ್ತು ನಮ್ಮ ನಂಬಿಕೆಗಳು - ಅರುಣ ಆರ್. ಯಾದವಾಡ, ಬೆಂಗಳೂರು.

ನಮ್ಮ ಕಡೆ ಉತ್ತರ ಕರ್ನಾಟಕದಲ್ಲಿ ಕೆಲವು ನಂಬಿಕೆಗಳು ಪ್ರಚಲಿತದಲ್ಲಿವೆ.ಇಂಥ ನಂಬಿಕೆಗಳು ಜಗತ್ತಿನ ಎಲ್ಲಾ ಭಾಗಗಳಲ್ಲಿ ಇರಬಹುದು..ಇರುತ್ತವೆ. ಇವು ಮೂಢ ನಂಬಿಕೆಗಳೊ ಅಥವಾ ರೂಢ ನಂಬಿಕೆಗಳೊ ಎಂಬುದರ ಬಗ್ಗೆ ಇಲ್ಲಿ ಚರ್ಚೆ ಇಲ್ಲ.ಆದರೆ ಇಂಥ ಎಲ್ಲಾ ನಂಬಿಕೆಗಳನ್ನೇ ಅನುಸರಿಸಿಕೊಂಡೇ ನಾವೆಲ್ಲಾ ಬೆಳೆದು ಬಂದಿದ್ದೇವೆ. ಈಗ ತಿರುಗಿ ನೋಡಿದರೆ ಎಷ್ಟೊಂದು ಆಶ್ಚರ್ಯವಾಗುತ್ತದೆ. ಎಷ್ಟೊ ಸಲ ನಾವು ಯಾವುದನ್ನೂ ಪ್ರಶ್ನೆ ಮಾಡದೆಯೇ ಹಾಗೆಯೇ ಅನುಸರಿಸಿಕೊಂಡು ಬಂದಿದ್ದೇವೆ. ಇಂಥ ವಿಷಯಗಳ ಕಡೆಗೆ ಇದೊಂದು ಅಚ್ಚರಿಯ ನೋಟ.
೧. ಸಂಜೆ ಆದ ಮೇಲೆ ಹುಣಿಸೆ ಹಣ್ಣು ತಿನ್ನಬಾರದು.
೨. ಸಂಜೆ ಆದ ಮೇಲೆ ಉಗುರು ಕತ್ತರಿಸಿಕೊಳ್ಳಬಾರದು.
೩. ಸಂಜೆ ಆದ ಮೇಲೆ 'ಉಪ್ಪು' ಎನ್ನುವ ಶಬ್ದ ಉಪಯೋಗಿಸಬಾರದು. ಅದರ ಬದಲು "ಸಕ್ಕರೆ" ಅಥವಾ "ಋತಿ"
ಅನ್ನುವ ಶಬ್ದಗಳನ್ನು ಉಪಯೋಗಿಸಬಹುದು.
೪. ಸಂಜೆ ಹೊತ್ತಿನಲ್ಲಿ ಎಲ್ಲರೂ ಮಾತನಾಡುತ್ತ ಕುಳಿತಾಗ ಹಲ್ಲಿ ನುಡಿದರೆ ಆ ಮಾತು ಸತ್ಯವಾಗುತ್ತದೆ.
೫. ಮನೆಯಲ್ಲಿ ಯಾರಿಗಾದರೂ ಬಿಕ್ಕಳಿಕೆ ಬಂದರೆ , ಅವರನ್ನು ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ.
೬. ಮನೆಯ ಮಾಳಿಗೆ ಮೇಲಿನ ಕಾಗೆ ಸ್ವಲ್ಪ ಜಾಸ್ತಿ ಹೊತ್ತು ಕಾ ಕಾ ಅಂತಾ ಕೂಗಿದರೆ ಊ ರಿನಿಂದ ಯಾರೋ ಬರುತ್ತಾರೆ ಅಂತಾ ಅರ್ಥ.
೭. ಮನೆಯಲ್ಲಿ ಆಕಸ್ಮಿಕವಾಗಿ ಹಂದಿಯೊಂದು ಒಳ ಬಂದರೆ ಅದು ವಿಷ್ಣು ದೇವತೆ ಮನೆಯೊಳಗೆ ಬಂದಂತೆ.
೮. ಮನೆಯಲ್ಲಿ 'ಆಸ್ತಿಕ ದುರಾಯಿ' ಅಂತಾ ಬರೆದರೆ ಹಾವು, ಹುಳು, ಹುಪ್ಪಡಿ ಇತ್ಯಾದಿ ಮನೆಯಲ್ಲಿ ಬರುವದಿಲ್ಲ.
೯. ಮನೆಯಲ್ಲಿ ದೋಸೆ ಮಾಡಿದರೆ, ಮೊದಲನೇ ದೋಸೆಯನ್ನು ಮನೆಯ ಹಿರಿಯ ಮಗ/ಮಗಳ ಬೆನ್ನಿಗೆ ಮೆಲ್ಲಗೆ ತಟ್ಟಿ ಮನೆಯ ಮಾಳಿಗೆಯ ಮೇಲೆ ಚೆಲ್ಲಬೇಕು.
೧೦. ಮನೆಯಲ್ಲಿ ಅಡುಗೆ ಮಾಡುವಾಗ ಮೊದಲು ಮಾಡಿದ ಬಿಸಿ ರೊಟ್ಟಿಯನ್ನು ಮನೆಯ ಮೊದಲ ಮಗನಿಗೆ ಬಡಿಸಬಾರದು. ಹಾಗೆಯೇ ಕೊನೆಗೆ ಮಾಡಿದ ರೊಟ್ಟಿಯನ್ನು ಕೊನೆಯ ಮಗನಿಗೆ ಬಡಿಸಬಾರದು.

೧೧. ಮನೆಯಲ್ಲಿ ಕೊನೆಯ ಮಗನ ಮದುವೆಯನ್ನು ಕೊನೆಗೆ ಮಾಡಬಾರದು.
೧೨. ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮೇಲೆ ಶೀನಬಾರದು. ಹಾಗೆ ಮಾಡಿದ್ದೇ ಆದಲ್ಲಿ ಹೊಸ್ತಿಲಿಗೆ ಹಾಗೂ ಚೌಕಟ್ಟಿನ ಮೇಲ್ಭಾಗಕ್ಕೆ ನೀರು ಚಿಮುಕಿಸಿ ಮಡಿ ಮಾಡಬೆಕು.
೧೩. ಹೊಸ ಮನೆಯ ಗೃಹಪ್ರವೇಶದ ದಿನ ಮನೆಯೊಳಗೆ ಕರೆ ತಂದ ಆಕಳು ಮನೆಯಲ್ಲಿ ಸಗಣಿ ಹಾಕಿದರೆ ಅಥವಾ ಮೂತ್ರ ಮಾಡಿದರೆ ಅದು ಶುಭ ಸಂಕೇತ. ಅಡುಗೆ ಮನೆಯೊಳಗೆ ಮಾಡಿದರಂತೂ ಅದು ಇನ್ನೂ ಉತ್ತಮ.
೧೪. ಹೊರಗಡೆ ಹೋಗುವಾಗ ಮುಖ್ಯ ದ್ವಾರದ ಚೌಕಟ್ಟು ತಲೆಗೆ ಬಡಿದರೆ, ಹೊರಗೆ ಹೋಗಬಾರದು. ಸ್ವಲ್ಪ ಹೊತ್ತು ಒಳಗೆ ಕುಳಿತು ನೀರು ಕುಡಿದು ಆಮೇಲೆ ಹೋಗಬೇಕು.
೧೫. ಮನೆಮಗಳು ತಲೆದಿಂಬಿನ ಮೇಲೆ ಕುಳಿತಿದ್ದರೆ ಅವಳ ಅಪ್ಪ ಸಿಕ್ಕಾ ಪಟ್ಟೆ ಸಾಲ ಮಾಡುತ್ತಾನೆ.
೧೬. ಮಂಗಳವಾರ ಹಾಗೂ ಶುಕ್ರವಾರ ದಿನ ಮನೆಯಲ್ಲಿ ಸ್ತ್ರೀಯರು ದುಃಖಿಸಿದರೆ ಒಳ್ಳೆಯದಾಗುವದಿಲ್ಲ.
೧೭. ತುಂಬಿದ ಕೊಡ ಹೊತ್ತುಕೊಂಡು ಮುತ್ತೈದೆಯೊಬ್ಬಳು ಎದುರಿಗೆ ಬಂದರೆ ಅದು ಶುಭ ಸೂಚನೆ.
೧೮. ಪುರುಷರಿಗೆ ಬಲಗಣ್ಣು ಹಾಗೂ ಸ್ತ್ರೀಯರಿಗೆ ಎಡಗಣ್ಣು ಹಾರಿದರೆ ಒಳ್ಳೆಯದು.
೧೯. ಶವಯಾತ್ರೆಯೊಂದು ಎದುರಿಗೆ ಬಂದರೆ ಅದು ಶುಭ ಸೂಚನೆ.
೨೦. ರಾತ್ರಿ ಹೊತ್ತು ನಾಯಿ ಅಳುತ್ತಿದ್ದರೆ ಅದು ಏನೋ ಅಶುಭದ ಸಂಕೇತ.
೨೧. ಶ್ರಾವಣ ಮಾಸದಲ್ಲಿ ಹೇರ್ ಕಟ್/ಶೇವಿಂಗ್ ಮಾಡಿಸಿಕೊಳ್ಳಬಾರದು.
೨೨. ದಾರಿಯಲ್ಲಿ ಲಿಂಬೆ ಹಣ್ಣು ಕಂಡರೆ , ಅದನ್ನು ದಾಟಿ ಹೋಗಬಾರದು.
೨೩. ನಿಮ್ಮ ಹುಟ್ಟಿದ ದಿನ ಅಥವಾ ಅಮವಾಸ್ಯೆಯ ದಿನ ಹೇರ್ ಕಟ್ ಮಾಡಿಸಿಕೊಳ್ಳಬಾರದು.
೨೪. ಮೈ ಮೇಲೆ ಆಕಸ್ಮಾತ್ ಹಲ್ಲಿ ಬಿದ್ದರೆ ಕೂಡಲೆ ಬೇವಿನ ಮರ ನೋಡಬೆಕು.
೨೫. ಗರ್ಭಿಣಿ ಹೆಣ್ಣು ಮಗಳು ಯಾವದೇ ಹಾವನ್ನು ನೋಡಿದರೆ ಅದು ಕುರುಡು ಆಗುತ್ತದೆ.
೨೬. ಗರ್ಭಿಣಿ ಹೆಣ್ಣು ಮಗಳು ನದಿ, ಪರ್ವತಗಳನ್ನು ದಾಟಿ ಯಾವದೇ ಊ ರಿಗೆ ಪ್ರಯಾಣ ಬೆಳೆಸಬಾರದು.
೨೭. ಗರ್ಭಿಣಿ ಸ್ತ್ರೀಯರಲ್ಲಿ ಮಗುವಿನ ಅಲುಗಾಟ ಎಡಗಡೆಗೆ ಜಾಸ್ತಿ ಇದ್ದರೆ ಹೆಣ್ಣು ಮಗು ಆಗುತ್ತದೆ ಅಂತಾ ಭಾವನೆ.
೨೮. ಹೋಮ ನಡೆಸುವದನ್ನು ನೋಡುವದು ಗರ್ಭಿಣಿ ಸ್ತ್ರೀಯರಿಗೆ ನಿಷಿದ್ಧ.
೨೯. ಗರ್ಭಿಣಿ ಸ್ತ್ರೀಯರ ಮುಖದ ಬಣ್ಣ ಕಪ್ಪಗಾಗುತ್ತಿದ್ದರೆ ಅವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ.
೩೦. ಗರ್ಭಿಣಿ ಸ್ತ್ರೀಯರು ಗಾಯತ್ರಿ ಮಂತ್ರವನ್ನು ನುಡಿಯಬಾರದು. ಹಾಗೆ ಮಾಡಿದರೆ ಗರ್ಭಪಾತ ಆಗುವ ಸಂಭವ ಜಾಸ್ತಿ.
೩೧. ಇಬ್ಬರು ನಾದಿನಿಯರು ಗರ್ಭಿಣಿಯಾಗಿದ್ದರೆ ಪರಸ್ಪರ ನೋಡಬಾರದು ಹಾಗು ಒಂದೇ ಸಮಾರಂಭದಲ್ಲಿ ಭೆಟ್ಟಿ ಆಗಬಾರದು.
೩೨. ಮೂರು ಗಂಡು ಮಕ್ಕಳ ಮೆಲೆ ಒಂದು ಹೆಣ್ಣು ಮಗು ಆದರೆ ಅಥವಾ ಮೂರು ಹೆಣ್ಣು ಮಕ್ಕಳ ಮೇಲೆ ಒಂದು ಗಂಡು ಮಗು ಆಗುವದು ಒಳ್ಳೆಯದಲ್ಲ.
೩೩. ಗ್ರಹಣ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಒಳ್ಳೆಯದಲ್ಲ. ಅದಕ್ಕೆ ಶಾಂತಿ ಮಾಡಿಸಬೇಕು.
೩೪. ಯಾರಿಗಾದರೂ ಮಕ್ಕಳು ಆಗದಿದ್ದರೆ ಇನ್ನೊಬ್ಬರ ಮನೆಯಲ್ಲಿನ ಗಣೇಶನ ಮೂರ್ತಿಯನ್ನು ಕಳವು ಮಾಡಿದರೆ ಮಗು
ಅಗುತ್ತದೆ.
೩೫. ಬೆಳಗಿನ ಜಾವ ಬರುವ ಕನಸುಗಳು ಸತ್ಯವಾಗುತ್ತವೆ.
೩೬. ಚಿಕ್ಕ ಮಕ್ಕಳು ಊಟ, ನೀರು ಬಿಟ್ಟು ಹಠ ಮಾಡುತ್ತಿದ್ದರೆ, ಕಾಲ್ದುಳಿ ಮಾಡಿ ದೃಷ್ಟಿ ತೆಗೆದರೆ ಸಮಸ್ಯೆ ಪರಿಹಾರವಾಗುತ್ತದೆ. (ಕಾಲ್ದುಳಿ ಅನ್ನುವದು ಮಕ್ಕಳು ಊಟ ಮಾಡದೇ ಅರ್ಧಕ್ಕೆ ಬಿಟ್ಟ ತಟ್ಟೆಯಲ್ಲಿ ಮಾಡುವ ಒಂದು ಸಣ್ಣ ಪ್ರಯೋಗ.)
೩೭. ಕೆಟ್ಟದ್ದನ್ನೇನನ್ನೋ ನೋಡಿ ಮಕ್ಕಳು ರಾತ್ರಿ ಹೊತ್ತು ಭಯ ಪಡುತ್ತಿದ್ದರೆ ಕಡಚಿಯನ್ನು ಒಲೆಯಲ್ಲಿ ಚೆನ್ನಾಗಿ ಕಾಯಿಸಿ, ನಂತರ ಅದನ್ನು ನೀರಲ್ಲಿ ಅದ್ದಿ ಹೊರತೆಗೆಯಬೇಕು. ಆ ನೀರು ಆರಿದ ಮೇಲೆ ಮಕ್ಕಳು ಕುಡಿದರೆ ರಾತ್ರಿ ಹೊತ್ತು ಯಾವದೇ ಭಯವಿಲ್ಲದೇ ನಿದ್ರಿಸುತ್ತವೆ. (ಕಡಚಿ ಅಂದರೆ ಚಪಾತಿ, ರೊಟ್ಟಿ ಇತ್ಯಾದಿಗಳನ್ನು ಹೆಂಚಿನ ಮೇಲೆ ಬೇಯಿಸುವಾಗ ಅವುಗಳನ್ನು ತಿರುವಿ ಹಾಕಲು ಉಪಯೋಗಿಸುವ ಸಾಧನ.)
೩೮. ಈರುಳ್ಳಿ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಯಾವದೇ ಅಂಗಡಿಯವನು ಕೈಯಲ್ಲಿ ತೂರುತ್ತಾ ತನ್ನ ಏರುತ್ತದೆ.
೩೯. ಆಕಸ್ಮಿಕವಾಗಿ ಯಾವದೇ ಹಾವೊಂದು ಯಾರದೇ ಎದೆಯ ಮೇಲೆ ಹಾಯ್ದು ದಾಟಿ ಹೋದರೆ, ಆ ವ್ಯಕ್ತಿಯು ಮುಂದೆ ಜೀವನದಲ್ಲಿ ರಾಜನಾಗುತ್ತಾನೆ ಅಥವಾ ಜೀವನದಲ್ಲಿ ವ್ಯಕ್ತಿಯಾಗುತ್ತಾನೆ.
೪೦. ಬೆಕ್ಕನ್ನು ಸಾಯಿಸುವದು ಮಹಾಪಾಪದ ಕೆಲಸ. ಆ ಪಾಪ ಆಮೇಲೆ ಚಿನ್ನದ ಬೆಕ್ಕನ್ನು ಮಾಡಿ ಪೂಜೆ ಮಾಡಿದರೂ
ಪರಿಹಾರವಾಗುವದಿಲ್ಲ.
೪೧. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಹೋದ ಕೆಲಸ ಸಾಧಿಸುವದಿಲ್ಲ.
೪೨. ಮೂರು ಜನ ಕೂಡಿ ಎಲ್ಲಿಯೂ ಹೊರಗೆ ಹೋಗಬಾರದು. ಹಾಗೆ ಹೋದರೆ ಅಂದುಕೊಂಡ ಕೆಲಸ ಆಗುವದಿಲ್ಲ.
ಹಾಗೆ ಹೊಗಲೇಬೇಕೆಂದಿದ್ದರೆ, ಜೊತೆಗೆ ಒಂದು ಕಲ್ಲನ್ನೊ ಇಲ್ಲ ಅಡಿಕೆಯನ್ನೊ ತೆಗೆದುಕೊಂಡು ಹೋಗಬೆಕು.
೪೩. ನೀವು ಯಾವುದೇ ಊ ರಿಗೆ ಹೋದರೆ, ೯ನೇ ದಿನ ಮರಳಿ ಪ್ರಯಾಣ ಮಾಡಬಾರದು.
೪೪. ಮಂಗಳವಾರ ದಿನ ಮಗಳನ್ನು (ಗಂಡನ ಮನೆಗೆ ಅಥವಾ ಇನ್ನಾವುದೇ ಮನೆಗೆ) ಹೊರಗೆ ಕಳಿಸಬಾರದು. ಹಾಗೆಯೇ
ಶುಕ್ರವಾರ ದಿನ ಸೊಸೆಯನ್ನು ಹೊರಗೆ ಕಳಿಸಬಾರದು.
೪೫. ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಕೂಡದು.
೪೬. ಮನೆಯಲ್ಲಿ ತೊಲೆಗಳ ಕೆಳಗೆ ಅಂದರೆ ಬೀಮ್‌ಗಳ ಕೆಳಗೆ ಮಲಗಕೂಡದು. ಹಾಗೆ ಮಾಡಿದರೆ ಕೆಟ್ಟ ಕನಸುಗಳು ಬೀಳುತ್ತವೆ.
೪೭. ಮಳೆರಾಯ ಬೇಗನೆ ಬರದೆ ಇದ್ದರೆ, ಕತ್ತೆ ಪೂಜೆ ಮಾಡಿದರೆ ಮಳೆ ಆಗುತ್ತದೆ.
೪೮. ಯಾರದರೂ ಹೊರಗಡೆ ಹೋಗುವಾಗ ಎಲ್ಲಿ ಹೋಗುತ್ತಿದ್ದಿರೆಂದು ಕೇಳಬಾರದು. ಹಾಗೆ ಕೇಳಿದರೆ, ಹೋದ ಕೆಲಸ
ಕೈಗೂಡುವದಿಲ್ಲ.
೪೯. ಕುಕ್ಕರುಗಾಲು ಹಾಕಿಕೊಂಡು ಕೈಯಲ್ಲಿ ತಟ್ಟೆ ಹಿಡಿದುಕೊಂಡು ಊ ಟ ಮಾಡುತ್ತಿದ್ದರೆ, ಎರಡು ಕಾಲುಗಳು ಅಥವಾ ಕಾಲ್ಬೆರಳುಗಳು ಕ್ರಾಸ್ ಆಗಿರಕೂಡದು. ಅದು ಅರಿಷ್ಟ ಅಥವಾ ಅವಲಕ್ಷಣದ ಸಂಕೇತ.
೫೦. ಚಿಕ್ಕ ಮಕ್ಕಳಲ್ಲಿ ಹಲ್ಲುಗಳು ಬಿದ್ದಾಗ ಹೊಸ ಹಲ್ಲು ಬೇಗ ಬರಲೆಂದು ಯಾರಿಗೂ ಕಾಣದ ಹಾಗೆ ಮನೆ ಮಾಳಿಗೆಯ
ಮೇಲೆ ಎಸೆಯಬೇಕು.
೫೧. ಶಿವರಾತ್ರಿ ಹಬ್ಬದ ದಿನ ಯಾರಾದರು ಸತ್ತರೆ (ಸಾಮಾನ್ಯ ಸಾವು) ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.
೫೨. ನಿಮ್ಮ ಮನೆಯ ಹಿತ್ತಿಲಲ್ಲಿ ಬಾಳೆ ಗಿಡ ಬೆಳೆದಿದ್ದರೆ, ಅದು ಗೊನೆ ಬಿಡುವಾಗ ಮಾಡುವ ಸದ್ದು ಮನೆಯ ಮಂದಿ
ಕೇಳಿಸಿಕೊಳ್ಳುವದು ಒಳ್ಳೆಯದಲ್ಲ.
೫೩. ಬಿಲ್ವ ಪತ್ರಿ ಗಿಡವನ್ನು ಕೇವಲ ಸ್ವಾಮಿಗಳು ಅಂದರೆ ಜಂಗಮರು ಮಾತ್ರ (ಉದಾ: ಆನಂದ ಹಿರೇಮಠ, ಗಿರೀಶ ಮೆಟಗುಡ್ಡಮಠ ಅವರು) ತಮ್ಮ ಮನೆಗಳಲ್ಲಿಅಥವಾ ಮಠಗಳಲ್ಲಿ, ದೇವಸ್ಥಾನಗಳಲ್ಲಿ ನೆಡಬಹುದು. ಉಳಿದವರು ತಮ್ಮ ಮನೆಗಳಲ್ಲಿ ನೆಡುವ ಹಾಗಿಲ್ಲ.
೫೪. ಮನೆಯ ಹಿತ್ತಿಲಲ್ಲಿ ಯಾವುದೇ ಗಿಡಕ್ಕೆ ಜೇನು ಕಟ್ಟಿದರೆ ಒಳ್ಳೆಯ ಲಕ್ಷಣವಲ್ಲ.