Friday, November 10, 2006

ನನ್ನ ಕನ್ಯಾನ್ವೇಷಣೆಯ ಪ್ರಸಂಗಗಳು


- ರಾಜು. ಹಿರೇಗೌಡರ, ಹೆಚ್.ಎಸ್.ಆರ್.ಲೇಔಟ್, ಬೆಂಗಳೂರು


ನಮ್ಮ ನೆಚ್ಚಿನ ಮಿತ್ರ ’ಜೇಮ್ಸ್ ಬಾಂಡ್’ ರಾಜು ಹಿರೇಗೌಡರ ಅವರು ಬಿ.ವಿ.ಬಿಗಾಗಿ , ಬಿವಿಬಿ ಮಿತ್ರರಿಗಾಗಿ ಯಾವಾಗಲೂ ಮಿಡಿಯುವ ಒಬ್ಬ ಸಹೃದಯಿ ಸ್ನೇಹಿತ. ಪ್ರಸ್ತುತ ಐಟಿ ರಂಗದಲ್ಲಿ ’ಟೆಸ್ಟಿಂಗ್’ ಕ್ಷೇತ್ರದಲ್ಲಿ ಸಾಕಷ್ಟು ನೈಪ್ಯಣ್ಯತೆಯನ್ನು ಸಾಧಿಸಿರುವ ಇವರು , ತಮ್ಮ ವಿವಾಹ ಪೂರ್ವ ದಿನಗಳ ಕೆಲವು ವಿನೋದ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.


ಒಮ್ಮೆ ನಾನು ಕಮಡೊಳ್ಳಿಗೆ ಕನ್ಯಾ ನೋಡಾಕ್ಕಂತ ಹೋಗಿದ್ದೆ. ಕನ್ಯಾದ ಮನಿಯವರು ನನ್ನ ಇಂಟ್‌ರ್‌ವ್ಯೂ ಮಾಡಾಕ್ಕಂತ ಬೆಂಗಳೂರಿನಲ್ಲಿ ಎಚ್‌ಏಎಲ್‌ನಲ್ಲಿ ಕೆಲಸ ಮಾಡಿ ರಿಟೈರ್ ಆದ ಒಬ್ಬ ಮನುಷ್ಯಾನ್ನ ಕರಿಸಿದ್ದರು. ಹಂಗ ಮೊದಲು ನನ್ನ ಪರಿಚಯ ಮಾಡಿಕೊಟ್ಟ ಮೇಲೆ ನಮ್ಮ ಮಾತು ಕತೆ ಹೀಗೆ ಮುಂದುವರಿದಿತ್ತು.

ಬೆಂಗಳೂರ್ ಸ್ಪೆಷಲಿಸ್ಟ್ : ಸರ್, ನೀವು ಯಾವ ಫ್ಯಾಕ್ಟರಿ ಒಳಗ ಕೆಲಸ ಮಾಡತಿರಿ?

ನಾನು : ರೆಲ್-ಕ್ಯೂ ಸಾಫ್ಟ್‌ವೇರ್ ಅಂತರಿ.
ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಈಗ ಎಷ್ಟು ವರ್ಷ ಆತ್ರಿ ಅಲ್ಲಿ ಕೆಲಸ ಮಾಡಕ ಹತ್ತ??
ನಾನು : ಒಂದುವರಿ ವರ್ಷ ಸರ್..
ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಪಗಾರ ಎಷ್ಟು ಕೊಡತಾರ್ರಿ ನಿಮಗ??
ನಾನು : ಹದಿನಾಲ್ಕು ಸಾವಿರ್ ರೂಪಾಯಿರಿ ಸರ್.
ಬೆಂಗಳೂರ್ ಸ್ಪೆಷಲಿಸ್ಟ್ : ಅದೇನ್ ವರ್ಷದ ಪಗಾರ್ ಏನ್ರಿ, ಏನ್ ಮೂರ ತಿಂಗಳಿಗೊಮ್ಮೆನೊ ಇಲ್ಲಾ ಆರ ತಿಂಗಳಿಗೊಮ್ಮೆನೊ??

ನಾನು : ಇಲ್ಲರಿ ಇದು ಒಂದ ತಿಂಗಳ ಪಗಾರ್ರಿ..!
ನನ್ನ ಉತ್ತರ ಕೇಳಿ ಅವರು ಅಲ್ಲೇ ತಬ್ಬಿಬ್ಬು..!

- ೦-
ಇನ್ನೊಮ್ಮೆ ನಾನು ಬೇರೊಂದು ಕನ್ಯಾ ನೋಡಾಕ ಭದ್ರಾವತಿಗೆ ಹೋಗಿದ್ದೆ. ಆ ಕನ್ಯಾ ನನಗ ಮತ್ತು ನಮ್ಮ ಮನಿಯವರಿಗೆಲ್ಲಾ ಭಾಳ ಮನಸ್ಸಿಗೆ ಬಂದಿತ್ತು. ಹುಡುಗಿ ಅಪ್ಪಾ ದೊಡ್ಡ ಮನುಷ್ಯಾ..ಅವಾ ಒಂದು ಸ್ಕೂಲ್ ಸಹಾ ನಡೆಸುತ್ತಿದ್ದ, ಆದರ ಅವನಿಗೆ ಅದು ಹೇಗೊ ಏನೋ ನನಗೆ ಬ್ರೋಂಕೈಟಿಸ್ ಪ್ರಾಬ್ಲಮ್ ಇದ್ದದ್ದು ಗೊತ್ತ ಆಗಿತ್ತು. ಆದ್ರ ನನಗ ಅವನಿಗೆ ಗೊತ್ತ ಐತಿ ಅಂತಾ ಗೊತ್ತ ಇರಲಿಲ್ಲ. ಅವ್ರು ನನ್ನ ಟೆಸ್ಟ್ ಮಾಡಾಕ ಅಂತಾ ಒಂದ ಸಲಾ ಬೆಂಗಳೂರಾಗ ಒಂದ ಹೊಟೆಲ್‌ಗೆ ಬಾ ಅಂತಾ ಹೇಳಿದರು. ಬೇಕಂತಲೇ ಅವತ್ತ ಬೋಂಡಾ, ವಡಾ ಆರ್ಡರ್ ಮಾಡ್ಯಾರ. (ಎಣ್ಣೆಯಲ್ಲಿ ಕರಿದಿದ್ದ ಪದಾರ್ಥಗಳನ್ನು ತಿಂದರ ಬ್ರೋಂಕೈಟಿಸ್ ಇದ್ದವರಿಗೆ ಪ್ರಾಬ್ಲಮ್ ಆಗತೈತಿ ಅಂತಾ ಹಂಗ ಮಾಡಿದಾರ) ಆವತ್ತ ನನ್ನ ಹೊಟ್ಟೆ ಹಸಿದಿದ್ದಿಲ್ಲ. ಮತ್ತ ಬ್ಯಾರೆ ಮಂದಿ ಮುಂದ ಹೆಂಗ ತಿನಬೇಕು ಅಂತಾ ನಾನು ಒಲ್ಲೆ ಅಂದೆ. (ಆದ್ರ ಖರೇನ ತಿನ್ನಾಕ ನನಗ ಮನಸ್ಸು ಇತ್ತು.) ನಾನು ಇಲ್ಲಿ ಬೆಂಗಳೂರಾಗ ತಿನ್ನಲಿಲ್ಲ ಅಂತ ಹೇಳಿ ಮತ್ತೊಮ್ಮೆ ಟೆಸ್ಟ್ ಮಾಡಾಕ ನನಗ ಭದ್ರಾವತಿಗೆ ಬರಾಕ ಹೇಳಿದರು.
ನಾನೂ ಒಮ್ಮೆ ಫಿಕ್ಸ್ ಆಗುಕಿಂತ ಮೊದಲು ಒಂದ ಸಲಾ ಈ ಹುಡಗೀನ್ನ ಮಾತಾಡಸೋಣ ತಡಿ ಅಂತ ಅಂದುಕೊಂಡು ಹೂಂ ಅಂದೆ. ಒಂದ ಶನಿವಾರದ ದಿನ ಭದ್ರಾವತಿಗೆ ಹೋದೆ. ಹುಡುಗಿ ಮನ್ಯಾಗ ಬರೀ ಎಣ್ಣೆಯಲ್ಲಿ ಕರದಿದ್ದ ಊಟ. ಹೋಳಗಿ, ಶಂಡಗಿ, ಹಪ್ಪಳ ಇತ್ಯಾದಿ....ಮಾಡಿದ್ರು. ನಾನು ಊಟ ಮಾಡಿದೆ. ಹುಡುಗಿ ಅಪ್ಪಾ ನನ್ನನ್ನು ನೊಡಾಕ ಹತ್ತಿದ್ದಾ..!
ನನಗ ಏನರೆ ಆಗತೈತೇನು ಅಂತ. ಆದರ ನನಗ ಏನೂ ಆಗದೆ ಇದ್ದದ್ದು ನೋಡಿ ಅವಾ ಅಲ್ಲೇ ಬೆಸ್ತು ಬಿದ್ದಾ..!
ಆಮ್ಯಾಲ ಹುಡುಗಿ ಮಾತಾಡ್ಸಿ ನನ್ನ ಬಗ್ಗೆ ಎಲ್ಲ ಹೇಳಿದೆ, ನಾ ಹಿಂಗ ಹಂಗ ಅಂತ. ಹುಡ್ಗಿಗೆ ಅವಳ ಒಪೀನಿಯನ್ ಕೇಳಿದೆ ಮ್ಯಾರೇಜ್ ಬಗ್ಗೆ. ಅವಳು ಹೂಂ ಅಂದ್ಲು. ನನಗ ಯಾಕ ಡೌಟ್ ಬಂತು. ಅದಕ ನನ್ನ ಮೊಬೈಲ್ ನಂಬರ್ ಕೊಟ್ಟು, ಏನಾರ ಇದ್ರ ಫೋನ್ ಮಾಡು ಅಂತ ಹೇಳಿ ಬಂದೆ.

ಎರಡ ದಿವಸ ಆದ ಮ್ಯಾಲೆ ಹುಡುಗಿ ಕಡೆಯಿಂದ ಫೋನ್ ಬಂತು. "ಏನಂದ್ರ, ನೀವ ಇಷ್ಟೆಲ್ಲ ಫ್ರಾಂಕ್ ಆಗಿ ಹೇಳಿದ್ದಕ್ಕ ನನ್ಗೂ ನನ್ನ ಬಗ್ಗೆ ಫ್ರಾಂಕ್ ಆಗಿ ಹೇಳಬೇಕು ಅಂತ ಐತೆ" ಅಂದ್ಲು. ನಾ ಓಕೆ ಹೇಳ್ರಿ ಅಂದೆ. ಆವಾಗ ಅವ್ಳು "ನಾ ಒಂದ ಹುಡುಗನ್ನ ಲವ್ ಮಾಡಿದ್ದೆರಿ" ಅಂದ್ಳು. ನಾ ಹೇಳ್ದೆ " ಹೌದ..ನಿಮ್ಮ ಲವ್ ಕಂಟಿನ್ಯೂ ಆಗೈತೋ ಇಲ್ಲೊ ಹೇಳ್ರಿ". ಅದಕ್ಕ ಅವಳು "ಈಗ ಏನ್ ಇಲ್ಲ, ಆದ್ರ ಹುಡುಗ ಇನ್ನೂ ನನ್ನ ಬಿಟ್ಟಿಲ್ಲ , ನನ್ನ ಮದ್ವಿ ಆಗಬೇಕು ಅಂತಾನ. ನಂದೂ ನಿಮ್ದೂ ಏನಾರ ಮದ್ವಿ ಫಿಕ್ಸ್ ಆಗಿ ಎಂಗೇಜ್‌ಮೆಂಟ್‌ನ್ಯಾಗ ಅಥವಾ ಮದ್ವಿ ಒಳಗ ಅವ ಬಂದು ಗಲಾಟಿ ಮಾಡಬಹುದು ಅನಸ್ತೈತಿ" ಅಂದ್ಲು. ನಿಮಗ ಹಂಗ ಆಗೋದು ಬ್ಯಾಡ ಅಂದ್ರ ಮನೀಲಿ ಬ್ಯಾರೆ ಏನೋ ಹೇಳಿ ಇದನ್ನ ಕ್ಯಾನ್ಸಲ್ ಮಾಡಸರ್ರಿ ಅಂದ್ಲು.

ಆಮೇಲೆ ಎನ್ಕ್ವೈರಿ ಮಾಡಿದರ ಗೊತ್ತಾತು ಅವಳ್ಗೆ ಇನ್ನೂ ಅವನ ಮದವಿ ಆಗ ಬೇಕು ಅಂತ ಐತೆ ಅಂತ. ಕಡೀಕ ಮುಂದ ಹೋಗುವದು ಬ್ಯಾಡ ಅಂತ ಹೇಳಿ ಅದನ್ನ ಕ್ಯಾನ್ಸಲ್ ಮಾಡಿದ್ವಿ.
ಇದಾ ತರ ನಾ ಮನಸ್ ಮಾಡಿದ್ದ ಮೂರು ಕನ್ಯಾ ಕ್ಯಾನ್ಸಲ್ ಆದ್ವರಿ. ಈಕಿ ಒಬ್ಬಾಕಿನ ನಂಗ ಡೈರೆಕ್ಟ್ ಹೇಳಿದಳು, ಉಳಿದವ್ರದು ಬ್ಯಾರೆ ಕಡೀಂದ ಸುದ್ದಿ ಬಂದು ಕ್ಯಾನ್ಸಲ್ ಆತರಿ. ಒಟ್ಟ ಮೂರ್ ಸರಿ ಜೀವಂತ್ ಹೆಣ ಆಗೋದು ತಪ್ಪಿತು ನೋಡ್ರಿ.. !.

- ೦-
ಕಡೇಕ್ಕ ವೇದಾ ಹೆಂಗ ನಂಗ ಸಿಕ್ಕಳು ಹೇಳತೇನಿ ಕೇಳ್ರಿ.. !
ಒಂದ ಈ-ಮೇಲ್ ಐ.ಡಿ ಸಂಬಂಧ ವೇದ ನನಗ ಸಿಕ್ಕ್ಲು ಅಂದ್ರ ನಂಬ್ತೀರೇನು??
ನಾ ಐ-ಫ್ಲೆಕ್ಸ್ ಪ್ರಾಜೆಕ್ಟ್ ಮುಗಸಿ ರೆಲ್‌ಕ್ಯೂನ್ಯಾಗ ಕಾಲಿ ಅಡ್ಡಾಡತ್ತಿದ್ದಿನ್ರಿ, ಏನ್ರ ಕೆಲ್ಸ ಹಚ್ಗೊಳ್ಳೊನು ತಡಿ ಅಂತ, ನನಗ ಹೆಂಗ ಇದ್ರು ರೆಲ್ಕ್ಯೂ ಮೈಲ್ ಐ.ಡಿ ಇದ್ದಿದ್ದಿಲ್ಲ ಅದನ್ನರ ತಗೊಳ್ಳೊನು ಅಂತ ನಮ್ಮ ಅಡ್ಮಿನ್ ಮಂಜುನಾಥನ್ನ ಕೇಳಿದೆ.
ಅವರು ಅದಕ್ಕ ನೀ ಒಂದ ಈ-ಮೇಲ್ ರಿಕ್ವಿಸಿಶನ್ ಫಾರ್ಮ್ HR ಕಡೆ ಇಸಕೊಂಡು ಅವ್ರ ಸೈನ್ ಮಾಡ್ಸಿ ನನ್ಗ ಕೊಡರಿ, ಆಮೇಲೆ ನಾ ಐ.ಡಿ ಕ್ರಿಯೇಟ್ ಮಾಡತೇನಿ ಅಂತ ಹೇಳಿದ್ರು.
ಆತು ಅಂತ ನಮ್ಮ HR ಇರೊ ಆಫೀಸ್‌ಗೆ ಮಾರನೇ ದಿವಸ ಹೋಗಿ HR ಭೇಟಿ ಆಗಿ ಫಾರ್ಮ್ ಕೇಳ್ದೆ, ಅವನು ನನ್ನ ಕಡೆ ಫಾರ್ಮ್ ಇರೋದಿಲ್ಲ, ಅದೆಲ್ಲ ಅಡ್ಮಿನ್ ಕಡೇನ ಇರತವ ಅಂದ , ನನ್ನ ಪುಣ್ಯಕ್ಕ ಮಂಜುನಾಥ್ ನನ್ನ ಹಿಂದೇನ ಇದ್ದ , ಅವ ಯಾವ್ದೋ ಕೆಲ್ಸಕ್ಕ್ HR ಭೇಟಿಗೆ ಬಂದಿದ್ದ. ನಾ ಅವ್ರ ನೋಡಿ, ಸರ್ ಇವ್ರ ಕಡೆ ಆ ಫಾರ್ಮ್ ಇಲ್ಲ ಅಂತ ಅಂದೆ. ಆದಕ್ಕ ಅವ್ರು ತಮ್ಮ ಜೂನಿಯರ್‍ಗೆ ಹೇಳಿ ಅವ್ರ ಕಡೆ ಇದ್ದ ರೆಫರೆನ್ಸ್ ಫಾರ್ಮ್ ಕೊಟ್ಟು ಇದನ್ನ ಫಿಲ್ ಅಪ್ ಮಾಡಿ ಸೈನ್ ತೊಗೊಂಡು ಬರ್ರಿ ಅಂದ್ರು. ನಾ ಆತ್ರಿ ಅಂತ ಫಿಲ್ ಮಾಡಿ HR ಕಡೆ ತಗೊಂಡು ಹೋದೆ. HR ಏನೇನೋ ಕತಿ ಹೇಳಿ ನನ್ಗ ಸೈನ್ ಮಾಡಲಾರ್‍ದ ವಾಪಸ್ ಕಳಿಸಿದ.

ಬಾಗಲ್‌ದಾಗ ಮಂಜುನಾಥ್ ಕಾಯ್ತಾ ಇದ್ದರ, ನನ್ನ ನೋಡಿದವ್ರ ಎಲ್ರಿ ಫಾರ್ಮ್ ಕೊಡ್ರಿ, ನಾ ಈಗ ಕ್ರಿಯೇಟ್ ಮಾಡತೇನಿ ಅಂದ್ರು, ನಾ ಆಗಿದ್ದೆಲ್ಲ ಹೇಳ್ದೆ. ಅದ್ಕ ಅವರು ಹೀಗೆ ರಿ ಇವ್ರು ಯಾರನ್ನೂ ಚೆನ್ನಾಗಿ ನೋಡ್ಕೊಳ್ಳಲ್ಲ, ಅದಕ್ಕೆ ಎಲ್ರೂ ಈ ಕಂಪೆನಿ ಬಿಟ್ಟು ಬ್ಯಾರೆ ಕಡೆ ಹೊಂಟಾರ, ಮತ್ತ ಎಲ್ಲಿ ಚೊಲೊ ನೋಡಕೊಂತಾರೊ ಅಲ್ಲೆ ಹೊಗತಾರ , ನಮ್ಮ ಕಡೆ ಹಿಂಗ ಮನಿ ಮಾಡೋಕಿಂತ ಮೊದ್ಲ ಆ ಏರಿಯಾದಾಗಿನ ಜನ ಚೆನ್ನಾಗಿ ಇದ್ದಾರೊ ಇಲ್ಲೊ ಅಂತ ನೋಡಕೊಂಡ ಮನಿ ಮಾಡತಾರ ಅಂದ್ರು. ನಾ ಅವ್ರ್ನ ಕೇಳ್ದೆ "ನಿಮ್ದು ಯಾವ್ ಊರ್ ಸರ್?" ಅಂತ, ಅವರಂದ್ರು ನಮ್ದು ಭದ್ರಾವತಿ ಅಂತ. ನಾ ಒರಿಜಿನಲ್ ಭದ್ರಾವತೀನ ಸರ್ ಅಥವಾ ಬ್ಯಾರೆ ಅದ್ರ ಹತ್ರದ ಊರ ಅಂತ ಕೇಳ್ದೆ. ಅದಕಾ ಅವರು ನಮ್ದ ಭದ್ರಾವತೀನ ನೀವ ಯಾವಗಾರೆ ಅಲ್ಲಿ ಬಂದಿದ್ರೇನು ಅಂತ ಕೇಳಿದ್ರು. ನಾ ಅಂದೆ ಭಾಳಷ್ಟ್ ಅಲ್ಲ ಸರ್ ಕನ್ಯ ನೋಡಕ ಅಂತ ಬಂದಿದ್ದೆ. ಅದಕ ಅವರು ನಿಮ್ಮ ಮದ್ವಿ ಆಗಿಲ್ಲೇನ್ರಿ ಇನ್ನು ಅಂತ ಕೇಳಿದ್ರು. ಇಲ್ಲರಿ ಕನ್ಯ ಹುಡಕಾಕ ಹತ್ತೇನಿ ಅಂದೆ. ನಿಮ್ಮ ಕ್ಯಾಸ್ಟ್ ಯಾವದ್ರಿ ಅಂದ್ರು. ಹೇಳ್ದೆ.....ಬರ್ರಿ ಇಲ್ಲೆ ಒಂದ ನಿಮಿಷ ಅಂದೋರ ನನ್ನ ಅವರ್ ಕ್ಯಾಬಿನ್‌ಗೆ ಕರಕೊಂಡ ಹೋಗಿ ಒಂದ್ ಫೋನ್ ಮಾಡೇ ಬಿಟ್ರು.. ಫೋನ್ ಮಾಡಿದ್ದು ಯಾರಿಗೆ ಅಂದ್ರ ನನ್ನ ಹೆಣ್ತಿ ಅಕ್ಕಗ .... ಆಮೇಲೆ ನಾ ವೇದನ್ನ ನೋಡಿ ಮಾತು ಕತಿ ಎಲ್ಲಾ ಆಗಿ ನನ್ನ ಮದ್ವಿ ಆಗೇ ಹೋತು.. . !
ಹಿಂಗ ಜಸ್ಟ್ ಒಂದ ಈ ಮೇಲ್ ಐ.ಡಿ ಸಲುವಾಗಿ ನನ್ನ ಮದ್ವಿ ಆತು ನೋಡ್ರಿ.. !

1 comment:

Lexa Roséan said...
This comment has been removed by a blog administrator.