Wednesday, November 01, 2006

ಫಾಸ್ಟ್ ಫಾರ್ವರ್ಡ್ >>


- ಮೃಣಾಲಿನಿ ಎಸ್. ಗುಡಿ, ಹರ್ನ್‌ಡಾನ್, ವಾಷಿಂಗ್ಟನ್ ಡಿ.ಸಿ. ಯು.ಎಸ್.ಏ

ಮೃಣಾಲಿನಿ ಅವರು ಶ್ರೀನಿವಾಸ ಗುಡಿ ಅವರ ಪತ್ನಿ ಮತ್ತು ಖ್ಯಾತ ಕನ್ನಡ ಸಾಹಿತಿ, ಕವಿ, ವಿಮರ್ಶಕರಾದ ಧಾರವಾಡದ ಶ್ರೀ ಸುಬ್ಬರಾವ ದೇಶಪಾಂಡೆ ಅವರ ಪುತ್ರಿ. ತಮ್ಮ ಪುತ್ರಿ ಮಹೀಯ ಆಟ-ಪಾಠ, ಆಫೀಸ ಕೆಲಸ ಹಾಗೂ ಮನೆಕೆಲಸ ಇವೆಲ್ಲದರ ನಡುವೆಯೂ ಸಮಯ ಉಳಿಸಿಕೊಂಡು ಒಂದು ಒಳ್ಳೆಯ ಬರಹವನ್ನು ನಮಗಾಗಿ ನೀಡಿದ್ದಾರೆ. ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿಯನ್ನು ಬೆಳೆಸಿಕೊಂಡಿರುವ ಮೃಣಾಲಿನಿ ಅವರು ಒಳ್ಳೆಯ ಗಾಯಕಿಯೂ ಹೌದು.




೨೫ ವರ್ಷಗಳ ಹಿಂದೆ...

ಅದೊಂದು ಊರು, ಇತ್ತ ಶಹರವೂ ಅಲ್ಲ, ಅತ್ತ ಹಳ್ಳಿಯೂ ಅಲ್ಲದ, ಶಾಂತವಾದ ಊರು. ಅಲ್ಲೊಂದು ದೊಡ್ದ ಮನೆ. ಮನೆ ತುಂಬ ಜನ. ಅಂಗಳದಲ್ಲಿ ಒಂದು ನಾಯಿ - ಬೊಗಳಿದರೆ ಅರ್ಧ ಊರು ನಡುಗಬೇಕು. ಮನೆಗೆ ಒಂದು ಹಿತ್ತಿಲ. ಹುಣಸೆ, ತೆಂಗು, ಮಾವು, ಹಲಸು ಹೀಗೆ ಹಲವಾರು ದೊಡ್ಡ ಮರಗಳಿಂದ ತುಂಬಿದ, ತರಹೇವಾರಿ ಹೂವುಗಳು, ಅವುಗಳ ಮೇಲೆ ಹಾರಡುವ ಸಣ್ಣ-ಸಣ್ಣ, ಬಣ್ಣ-ಬಣ್ಣದ ಚಿಟ್ಟೆಗಳಿಂದ ತುಂಬಿದ ಹಿತ್ತಲು. ಪಡಸಾಲೆಯಲ್ಲಿ ಅಜ್ಜ ಇವತ್ತಿನ ಪೇಪರ್ ಓದುತಿದ್ದಾರೆ. ಅಡುಗೆ ಮನೆಯಲ್ಲಿ ಅಜ್ಜಿ ಮತ್ತು ಅಜ್ಜಿಯ ಸೊಸೆ ಅಡುಗೆ ಮಾಡುತಿದ್ದಾರೆ. ಅಜ್ಜಿಯ ಮಗಳು(ಪುಟ್ಟಿಯ ತಾಯಿ) ಪೂಜ ಸಾಮಗ್ರಿ ತೊಳೆಯುತಿದ್ದಾರೆ. ಐದು ವರ್ಷದ ಪುಟ್ಟಿ ಎಂದಿನಂತೆ ಹಿತ್ತಿಲಲ್ಲಿ ಮಣ್ಣಿನಿಂದ ಆಟದ ಪಾತ್ರೆಗಳನ್ನು ಮಾಡಿ ತನ್ನ ಗೆಳತಿಯರೊಂದಿಗೆ "ಅಡುಗೆ-ಆಟ" ಆಡುತಿದ್ದಾಳೆ.

ಅಜ್ಜಿ : ಪುಟ್ಟಿ, ಒಳಗ ಬಾ. ಬೆಳಗ್ಗೆಯಿಂದ ಮಣ್ಣಾಗ ಆಡಲಿಕತ್ತಿ, ಊಟದ ಹೊತ್ತಾತು.
ಪುಟ್ಟಿ : ಬಂದೆ ಅಜ್ಜಿ, ಐದ ನಿಮಿಷ...

ಹತ್ತಾರು ಕರೆಗಳು ಮತ್ತು ಒಂದು ಕಾಲು ಗಂಟೆ ಆದಮೆಲೆ ಪುಟ್ಟಿ ಅವಸರದಿಂದ ಬಂದು ಗಬ-ಗಬನೆ ಊಟ ಮಾಡಿ, ಮತ್ತೆ ಆಟಕ್ಕೆ ಓಡುವಳು!

ಶಕು (ಅಜ್ಜಿಗೆ) : ಅವ್ವಾ, ಈ ಪುಟ್ಟಿಗೆ ಸ್ವಲ್ಪ ಮನಿ ಕೆಲಸ ಕಲಸು. ಯಾವಗ ನೊಡಿದರೂ ಹಿತ್ತಲದಾಗ ಆಡತಿರತಾಳ, ನಾಳೆ ಕೊಟ್ಟ ಮನ್ಯಾಗ ನಮಗ ಕೆಟ್ಟ ಹೆಸರು ಬರತದ.
ಅಜ್ಜಿ : ಶಕು, ಇನ್ನು ಸಣ್ಣಕಿ ಇದ್ದಾಳ, ಸ್ವಲ್ಪ ಆಡಲಿ ಬಿಡು.
ಅಜ್ಜಿ: ಅದು ಹೋಗಲಿ, ಅಕಿ ಕೂದಲಕ್ಕ ಸ್ವಲ್ಪ ಎಣ್ಣಿ ಕಾಣಿಸು, ಆ ಫ್ರಾಕ್-ಗೀಕು ಬಿಟ್ಟು ಒಂದು ಲಕ್ಷಣಾಗಿ ಇರೊ ಅರಿವಿ ಹಾಕವಾ. ಆಮೇಲೆ ಅಕಿದು ಅದೇನೋ ಹಾಡಿನ ಕ್ಲಾಸ್ ಅಂದ್ಯಲ್ಲ, ಎಲ್ಲಿಗೆ ಬಂತು?
ಶಕು: ಹೊಗಲಿಕತ್ತಾಳ, ಚಲೊ ಹಾಡತಾಳ ಅಂತ ಅವರ ಟೀಚರ್ ಹೇಳ್ಯಾರ.

ಹೀಗೆ ಸಂಭಾಷಣೆ ಸಾಗುವುದು...ಅಜ್ಜಿ ಹಲವಾರು ಸಲಹೆ-ಸೂಚನೆ ಕೊಡುತ್ತ ಅಡುಗೆ ಮುಂದುವರೆಸುವರು. ಶಕು ತಮ್ಮ ಅಮ್ಮನ ಮಾತಿಗೆ ಹೂಗುಡುತ್ತ ಕೆಲಸ ಮುಂದುವರೆಸುವಳು. ಸಂಜೆ. ಅಜ್ಜಿ ದೇವರ ಮುಂದೆ ದೀಪ ಹಚ್ಚಿ, ಕೈ ಮುಗಿಯುವ ಹೊತ್ತಿಗೆ ಪುಟ್ಟಿ ಮೈ-ಕೈ ಎಲ್ಲ ಮಣ್ಣು ಮಾಡಿಕೊಂಡು ಒಳಗೆ ಬರುವಳು. ಅಜ್ಜಿ ಅವಳಿಗೆ ಸ್ವಲ್ಪ ಪ್ರೀತಿಯಿಂದ ಗದ್ದರಿಸಿದಂತೆ ಮಾಡಿ, ಅವಳನ್ನು ಶುಭ್ರ ಮಾಡಿ, ಪುಟ್ಟಿಗೆ ಇಷ್ಟವಾದ "ಅರಳಿಟ್ಟು" ಕಲಿಸಿ ಕೊಡುವರು. ಆಮೇಲೆ, ಎಂದಿನಂತೆ ಪುಟ್ಟಿ ಅಜ್ಜನ ಹತ್ತಿರ ಐದರ ಮಗ್ಗಿ ಕಲಿಯುವಳು....ಅಜ್ಜಿ ತಮ್ಮ ಮನೆ ಸುತ್ತು-ಮುತ್ತಲಿನ ಜನರ ಜೊತೆ ಕುಳಿತು ದೇವರ ನಾಮ ಹೇಳುತ್ತ ಹತ್ತಿ ಬಸೆಯುವರು. ಅಜ್ಜಿಯ ಸೊಸೆ ಮತ್ತು ಶಕು ಅವರ ಜೊತೆ ಹಾಡುತ್ತ, ಇತ್ತ ಹರಟೆಯೂ ಹೊಡೆಯುತ್ತ ರಾತ್ರಿ ಅಡುಗೆಯ ತಯಾರಿ ಮಾಡುವರು....

ಅಂದು ರಾತ್ರಿ, ತುಂಬಿದ ಮನೆಯಲ್ಲಿ, ಸೋದರ ಮಾವಂದಿರು, ಚಿಕ್ಕಮ್ಮರ ಒಡನಾಟದಲಿ, ಅಜ್ಜ-ಅಜ್ಜಿಯರಿಂದ ಕತೆ ಹೇಳಿಸಿಕೊಳ್ಳುತ್ತ, ಅಲ್ಲಿಂದ ಇಲ್ಲಿ ಓಡುತ್ತ ತೊದಲು ಮಾತನಾಡುತ್ತ, ಎಲ್ಲರನು ನಗಿಸುತ್ತ, ಮಧ್ಯ-ರಾತ್ರಿ ಆದರೂ ಪುಟ್ಟಿ ಮಲಗಲು ತಯಾರಿಲ್ಲ. ಎಲ್ಲರ ಕಣ್ಮಣಿಯಾಗಿ, ಮೊದಲ ಮೊಮ್ಮಗುವಿಗೆ ಸಿಕ್ಕಿರುವ ಅಪೂರ್ವವಾದ ಪ್ರೀತಿಯ ಸವಿಯನ್ನು ನಿದ್ದೆಯಿಂದ ಹಾಳು ಮಾಡಿಕೊಳ್ಳಲು ಪುಟ್ಟಿ ತಯಾರಿಲ್ಲ.

ಶಕು(ಪುಟ್ಟಿಗೆ) :ಪುಟ್ಟಿ, ಎಲ್ಲಾರಿಗು ಸಾಕಗೇದ, ನಿದ್ದಿ ಬಂದದ, ನಡಿ ಇನ್ನ ಮಲಕೋಳೋಣ.
ಪುಟ್ಟಿ : ಊಹೂಂ, ನನಗ ಇನ್ನು ನಿದ್ದಿ ಬಂದಿಲ್ಲ, ನೀ ಬೇಕಾರ ಮಲಕೊ
ಶಕು : ಒಣಾ ಅಛ್ಚಾ ಭಾಳ ಆಗೇದ ನಿನಗ, ಮಲಕೋತಿಯೊ ಇಲ್ಲ ಒಂದು ಕಡಬು ಬೇಕೊ?

ಗದರಿಕೆಗೆ ಪುಟ್ಟಿ, ಹೊಯ್ಯ್ ಅಂತ ಅಳಲು ಶುರು ಮಾಡುವಳು.

(ರಮಿಸುವ ದನಿಯಲ್ಲಿ) ಅಜ್ಜಿ : ಪುಟ್ಟಿ ಅಳಬ್ಯಾಡಾ. ಏನು ಬೇಕು ಹೇಳು ನಿನಗ?
ಪುಟ್ಟಿ : ನನಗ ಕಡಬು ಬೇಕು, ಕಡಬು ಬೇಕು, ಅಂತ ಅಳುವ ದನಿಯ ತಾರಕಕ್ಕೇರಿಸುವಳು.
ಶಕು : ಸುಮ್ಮನ ಮಲಕೊ ಈಗ ರಾತ್ರಿಯಾಗೇದ, ಈಗ ಎಂತ ಕಡಬು ನಿನಗ?

ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿದ್ದರೂ ಅಜ್ಜಿ : ಅಯ್ಯ, ಸುಮ್ಮನಿರು ನೀನು, ಕೂಸು ಕೇಳತದ, ಮಾಡಿಕೊಟ್ಟರಾತು ಅಂತ ಹೂರಣದ ಕಡಬು ಮಾಡುವ ಸಿದ್ಧತೆ ನಡೆಸಿದರು. ಅಜ್ಜಿ ಕಷ್ಟ-ಪಟ್ಟು ಮಾಡಿದ ಕಡಬನ್ನು, ಒಂದರ್ಧ ಮುಟ್ಟಿದ ಶಾಸ್ತ್ರ ಮಾಡಿ, ಪುಟ್ಟಿ ಮಲಗಿಬಿಡುವಳು.
ಸರಿ ತಿನ್ನದೆ ಮಲಗಿದ ಪುಟ್ಟಿ ಕಂಡು ಮರುಗಿದ -

ಅಜ್ಜಿ: ಅಯ್ಯೊ, ಕೂಸು ಆಶಾಪಟ್ಟು ತಿನ್ನಲೇ ಇಲ್ಲ ನೋಡ ಪಾಪ!
೨ ತಿಂಗಳ ರಜೆ ಮುಗಿದು ಪುಟ್ಟಿ ತನ್ನ ಊರಿಗೆ ತಿರುಗಿ ಹೋಗುವ ಮುನ್ನ, ಅಜ್ಜಿ ಕಣ್ಣೀರು ಸೆರಗಿನ ತುದಿಯಿಂದ ಒರೆಸುತ್ತ ಹೇಳುವರು, "ಪುಟ್ಟಿ ಇದ್ದಷ್ಟು ದಿನಾ ಮನಿ ತುಂಬಿದಂಗ ಇತ್ತು, ಈಗ ಎಷ್ಟು ಭಣಾ-ಭಣಾ..."


ಫಾಸ್ಟ ಫಾರವರ್ಡ್ - ೧೦ ವರ್ಷಗಳ ಬಳಿಕ :


ಅಜ್ಜಿಗೆ ಸ್ವಲ್ಪ ವಯಸ್ಸಾಗಿದೆ. ಮೊದಲಿನಂತೆ ಸರ-ಸರನೆ ಕೆಲಸ ಸಾಗದು. ಅಜ್ಜ ತೀರ ಹಣ್ಣಾಗಿದ್ದಾರೆ. ನಾಯಿ ತನ್ನ ಸ್ಥಳ ಬಿಟ್ಟು ಸರಿಯಲಾರದಷ್ಟು ಹಣ್ಣಾಗಿದೆ. ಬೊಗಳಲು ಶಕ್ತಿ ಇಲ್ಲದೆ ಕುಂಯಿ-ಕುಂಯಿ ಎನ್ನುತ್ತ ಒಂದು ಮೂಲೆಯಲ್ಲಿ ಬಿದ್ದಿದೆ. ಪುಟ್ಟಿ ಈಗ ೧೫ ವರ್ಷದ ಹುಡುಗಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ಬಂದಿದ್ದಾಳೆ. ಇನ್ನೆರಡು ತಿಂಗಳಲ್ಲಿ ಕಾಲೇಜ್ ಮೆಟ್ಟಲು ಹತ್ತುವೆ ಅನ್ನುವ ಉತ್ಸಾಹದಲ್ಲಿದ್ದಾಳೆ. ಅಜ್ಜಿಗೆ ಮೊಮ್ಮಗಳು ಬಂದಿರುವ ಸಂಭ್ರಮ.

ಅಜ್ಜಿ : ಪುಟ್ಟಿ...
ಪುಟ್ಟಿ : ಅಜ್ಜಿ, ಪುಟ್ಟಿ ಅಂತೆಲ್ಲ ಕರೀಬ್ಯಾಡ. ನನ್ನ ಫ್ರೆಂಡ್ಸ್ ನಗತಾರ. ನನ್ನ ಹೆಸರು ಕರೀ...ದೇವಯಾನಿ ಅಂತ

ಅಜ್ಜಿ : ಹೋಗ, ನಿಮ್ಮಪ್ಪಗ ಬ್ಯಾರೆ ಹೆಸರು ಸಿಗಲಿಲ್ಲೇನು, ಎಂಥಾ ಅಪದ್ಧ ಹೆಸರು ಇಟ್ಟಾನ. ಅದನ್ನೇನು ಕರಿಯೋದ..
ಪುಟ್ಟಿ : ಒಟ್ಟ, ನನ್ನ ಪುಟ್ಟಿ ಅಂತ ಕರೀಬ್ಯಾಡ

ಅಜ್ಜಿ: ಆತು ತೊಗೋವಾ, ಅರಳಿಟ್ಟು ಕಲಿಸೇನಿ
ಪುಟ್ಟಿ (ಅರಳಿಟ್ಟು ತಿನ್ನುತ್ತ): ಅಜ್ಜಿ, ನೀನು ಎಷ್ಟು ಚಲೊ ಅರಳಿಟ್ಟು ಮಾಡತಿ. ಅಮ್ಮಗ ಹಿಂಗ ಬರಂಗಿಲ್ಲ. ನಿನ್ನ ಹಂಗ ಯಾರೂ ಅರಳಿಟ್ಟು ಮಾಡಂಗಿಲ್ಲ ನೋಡು

ಅಜ್ಜಿ: ಹೋಗ ಹುಚ್ಚಿ, ಅದರಗೇನು ಅದ ಮಹಾ, ಬ್ರಹ್ಮ ವಿದ್ಯಾ ..ಅಂದಂಗ ನಿನ್ನ ಹಾಡಿನ ಕ್ಲಾಸ್ ಹೆಂಗ ನಡದದ ಪುಟ್ಟಿ?
ಪುಟ್ಟಿ : ಹಾಡು ಬಿಟ್ಟೆ ಅಜ್ಜಿ, ಎಸ್.ಎಸ್.ಎಲ್.ಸಿಗೆ ಓದಬೇಕಿತ್ತಲ್ಲಾ...

ಅಜ್ಜಿ : ಎಂಥಾ ಕೆಲಸಾ ಮಾಡಿದ್ಯವ್ವಾ, ಹುಡುಗೀಗೆ ಒಂದು ನಾಲ್ಕು ಛಲೊ ಹಾಡು-ಹಸಿ ಬರಬೇಕು
ಪುಟ್ಟಿ : ಅಜ್ಜಿ, ಈಗಿನ ಕಾಲದಾಗ ಅವನೆಲ್ಲಾ ಯಾರು ಕೇಳತಾರ?

ಅಜ್ಜಿ : ನಮಗೇನು ಗೊತ್ತು ಬಿಡವಾ, ನಾವು ಹಳೇ ಕಾಲದವರು.

ಪುಟ್ಟಿ ೧ ತಿಂಗಳು ಅಜ್ಜಿ ಮನೆಯಲ್ಲಿ ಇದ್ದು ತಿರುಗಿ ತನ್ನ ಊರಿಗೆ ಹೊಗುವಳು. ಅಜ್ಜಿ ದುಖ-ಹೆಮ್ಮೆ ಮಿಶ್ರಿತ ಧ್ವನಿಯಲ್ಲಿ ಅಜ್ಜನ ಮುಂದೆ ಹೇಳುವರು," ನಮ್ಮ ಪುಟ್ಟಿ ಎಷ್ಟು ಚಂದ ಆಗ್ಯಾಳ್ರಿ, ಎಷ್ಟು ತಿಳುವಳಿಕಿ. ಅಕಿ ಇರೊ ಅಷ್ಟು ದಿನ ಹೆಂಗ ಕಳೀತೋ ಗೊತ್ತ ಆಗಲಿಲ್ಲ....."

ಫಾಸ್ಟ ಫಾರವರ್ಡ್ - ೮ ವರ್ಷದ ಬಳಿಕ:


ಅಜ್ಜ ತೀರಿಕೊಂಡು ವರ್ಷಗಳಾಗಿವೆ. ನಾಯಿಯೂ ಅಜ್ಜನ ಕಾವಲು ಕಾಯಲು ಅವರ ಹಿಂದೆ ಹೊಗಿದೆ. ಅಜ್ಜಿ ಈಗ ಏಕಾಂಗಿ,
ಆರೋಗ್ಯ ಕೆಟ್ಟಿದೆ. ಆದರೂ ನಗು-ನಗುತ್ತ ಎಲ್ಲರೊಂದಿಗೆ ಹರಟೆ ಹೊಡೆಯುತ್ತ, ಸೊಸೆಯರೊಂದಿಗೆ ಸಮಯ ಕಳೆಯುತ್ತಾರೆ.
ಪುಟ್ಟಿಯ ಮದುವೆ. ಮದುವೆ ಮನೆಯ ಗದ್ದಲ ತಾಳುವ ಶಕ್ತಿ ಇಲ್ಲದಿದ್ದರೂ ಅಜ್ಜಿ ಸಂಭ್ರಮದಿಂದ ಪುಟ್ಟಿಯ ಮದುವೆಗೆ ೧ ತಿಂಗಳು ಮುಂಚೆ ಬಂದಿರುವರು.

ಅಜ್ಜಿ : ಪುಟ್ಟಿ, ಈ ಸರ ಹಾಕಿಕೊಳ್ಳ, ನಮ್ಮ ಅವ್ವಂದು..
ಪುಟ್ಟಿ : ಅಜ್ಜಿ, ಅಷ್ಟು ಹಳೆ ಸ್ಟೈಲ್ ಯಾರು ಹಾಕ್ಕೋತಾರ?

ಅಜ್ಜಿ : ನಮಗೇನು ಗೊತ್ತಾಗಬೇಕವಾ, ನಾವು ಹಳೇ ಕಾಲದವರು. ಆತು, ನಿನಗ ಹೆಂಗ ಬೇಕೋ ಹಂಗ ಇದನ್ನ ಮುರಿಸಿ ಮಾಡಿಸಿಕೋ. ಅಂದಂಗ, ನಿನಗಂತ ಅರಳಿಟ್ಟು ತಂದೇನಿ, ನಿನ್ನ ಗಂಡನ ಮನಿಗೆ ತೊಗೊಂಡು ಹೋಗು...
ಪುಟ್ಟಿ : ಥ್ಯಾಂಕ್ಸ್ ಅಜ್ಜಿ!

ಅಜ್ಜಿ : ಹೋಗ, ನನಗ್ಯಕ ಥ್ಯಾಂಕ್ಸ್-ಪೀಂಕ್ಸ್ ಹೇಳತಿ..


ಪುಟ್ಟಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಳು. ಅಜ್ಜಿ ಅವಳ ಕಾರಿನ ಹಿಂದೆ ಹೋಗುತ್ತ ಅಳುವರು ಮತ್ತು ತಮ್ಮ ಮಗಳಿಗೆ ಸಮಾಧಾನ ಮಾಡುವರು, "ಅಳಬ್ಯಾಡ ಶಕು, ಹೆಣ್ಣು ಮಕ್ಕಳು ಅಂದರೆ ಹಿಂಗನವ, ಹಿಂಗ ಒಂದಲ್ಲ ಒಂದು ದಿನ ಗಂಡನ ಮನಿಗೆ ಹೋಗವರ, ನೀನೂ ಹಿಂಗ ಹೋಗಿದ್ದ್ಯವಾ ..."

ಫಾಸ್ಟ್ ಫಾರವರ್ಡ್ - ೧೦ ವರ್ಷದ ಬಳಿಕ:

ದೇವಯಾನಿ ಈಗ ತನ್ನ ಗಂಡ ಸೌರಭನೊಂದಿಗೆ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾಳೆ. ಅವಳಿಗೀಗ ಕಂಪ್ಯುಟರಿನ ಉದ್ಯೋಗ. ಬೆಳೆಸಿಕೊಂಡ ಹತ್ತಾರು ಹವ್ಯಾಸ, ವೀಕೇಂಡ ಟ್ರೆಕ್ಕಿಂಗ್/ಕ್ಯಾಂಪಿಂಗ್, ಕನ್ನಡ ಸಂಘ, ಜಿಮ್, ಕಿಟ್ಟಿ ಕ್ಲಬ್, ಮಗಳು ಸಮುದ್ಯತಾಳ ಹೋಮ್ ವರ್ಕ್, ಇತ್ಯಾದಿಗಳ ನಡುವೆ ಒಮ್ಮೊಮ್ಮೆ ಉಸಿರು ಬಿಡಲೂ ಆಗದಷ್ಟು ಕೆಲಸ, ಒಟ್ಟಿನಲ್ಲಿ ಬಿಡುವಿಲ್ಲದ ಓಟದ ಬದುಕು.
ಒಂದು ಮುಂಜಾನೆ. ಸೌರಭ ತನ್ನ ಬೊಜ್ಜು ಕರಗಿಸಲು ಜಿಮ್ಮಿಗೆ ಹೋಗಿದ್ದಾನೆ. ದೇವಯಾನಿ (ಗಡಿಬಿಡಿಯಿಂದ ಸೀರಿಯಲ್ ಮತ್ತು ಹಾಲು ಕಲೆಸುತ್ತ ತನ್ನ ೪ ವರ್ಷದ ಮಗಳಿಗೆ) -

Devyani : Samu, it's time for school, have your breakfast
Samu : I don't want it mommy, I want uttappa

Devyani : Samu, I am late for work. I have to pick up dry cleaning on my way. Eat this now, I will make uttappas over the weekend.


ಸಮು (ಗಂಟು ಮುಖ ಹಾಕಿಕೊಂಡು ) ಸೀರಿಯಲ್ ನೋಡುವಳು. ಫೋನ್ ಬಾರಿಸಿದ ಸದ್ದು.

ದೇವಯಾನಿ ಫೋನ್ ಎತ್ತಿ, "ದೇವಯಾನಿ ಹಿಯರ್". ಅತ್ತ ಕಡೆಯಿಂದ ಒಂದು ಕ್ಷಣ ಮೌನ, ಆಮೇಲೆ ಒಂದು ಕ್ಷೀಣ ಧ್ವನಿ, "ಪುಟ್ಟಿ, ನೀನ ಎನ?"
ದೇವಯಾನಿ "wrong number" ಅನ್ನಬೇಕೆಂದವಳು ಒಂದು ಕ್ಷಣ ತಡೆದು, "ಯಾರು?" ಅತ್ತ ಕಡೆಯಿಂದ,"ದೇವಯಾನಿ ಬೇಕಾಗಿತ್ತು"

ದೇವಯಾನಿ : "ಅಜ್ಜಿ?!!!"
ಅಜ್ಜಿ : "ಪುಟ್ಟಿ, ಹೆಂಗಿದ್ದಿಯವ್ವಾ? ನಿನ್ನ ನೆನಪು ಭಾಳ ಆಗಿತ್ತವಾ.ಅದಕ್ಕ ನಿಮ್ಮ ಮಾಮಾಗ ಫೋನ್ ಹಚ್ಚಿ ಕೊಡಪ ಅಂದೆ.."

ದೇವಯಾನಿ : ಅಜ್ಜಿ, ನಾನು ವಾಪಸ್ ಫೋನ್ ಮಾಡತೇನಿ, ನೀನು ಫೋನ್ ಇಡು
ಅಜ್ಜಿ : ಇರಲಿ, ಮಾತಾಡು

ದೇವಯಾನಿ : ಹೆಂಗಿದ್ದಿ ಅಜ್ಜಿ?
ಅಜ್ಜಿ : ಅರಾಮಿದ್ದೇನವ ಪುಟ್ಟಿ, ಸಮು ಹೆಂಗಿದ್ದಾಳ?

ದೇವಯಾನಿ : ಭಾಳ ತಿರಕಚ್ಛ ಆಗೇದ ಅಜ್ಜಿ ಅಕಿಗೆ, ನನ್ನ ಮಾತು ಒಟ್ಟ ಕೇಳಂಗಿಲ್ಲ
ಅಜ್ಜಿ : ಮಕ್ಕಳು ಹಂಗನವಾ. ನೊಡು ಪುಟ್ಟಿ, ಅಕಿನ್ನ ಬೈಯ್ಯಬ್ಯಾಡ ನೀನು

ದೇವಯಾನಿ : ಇಲ್ಲ ಅಜ್ಜಿ, ಆದರ ಭಾಳ ಹಟಾ ಮಾಡತಾಳ
ಅಜ್ಜಿ : ಪುಟ್ಟಿ..

ದೇವಯಾನಿ : ಹೇಳು ಅಜ್ಜಿ
ಅಜ್ಜಿ : ಯಾಕೋ ನಿನ್ನ ನೆನಪು ಭಾಳ ಆಗೇದವಾ, ಒಂದು ಸರ್ತಿ ಬಂದು ಹೋಗು

ದೇವಯಾನಿ : ಹೆಂಗ ಬರಲಿ ಅಜ್ಜಿ? ಈಗ ಸಮುನ್ನ ಸ್ಕೂಲ್ ಹಾಕಬೇಕು, ಸೌರಭಗ ಮತ್ತ ನನಗ ರಜಾ ಇಲ್ಲ
ಅಜ್ಜಿ : ಇರಲಿ ಬಿಡು. ನಿಮ್ಮದು ಮೊದಲು ನೊಡ್ರಿ. ಪುಟ್ಟಿ, ನಿನಗಂತ ಅರಳಿಟ್ಟು ಮಾಡೇನಿ, ಯಾರರ ಬರುವವರು ಇದ್ದರ ಹೇಳವಾ...


ದೇವಯಾನಿಗೆ ಮಾತೆ ಹೊರಡದು, ಕಣ್ಣಲ್ಲಿ ನೀರು. ಕೈಯಲ್ಲಿ ಫೋನ್ ಹಿಡಿದು ಸಮುನ್ನ ನೊಡುವಳು. ಸಮು ಇನ್ನು ಗಂಟು ಮುಖ ಹಾಕಿಕೊಂಡು ಸೀರಿಯಲ್ ತಿನ್ನುವ ಪ್ರಯತ್ನದಲ್ಲಿದಾಳೆ.

ದೇವಯಾನಿ : ಅಜ್ಜಿ, ಹೇಳತೇನಿ ತೊಗೋ
ಅಜ್ಜಿ : ಆತು, ನಾನು ಫೋನ್ ಇಡತೇನವಾ....


ಫೋನ್ ಇಟ್ಟ ತಕ್ಷಣ ದೇವಯಾನಿಯ ಮನಸು, ಹೇಳದೆ-ಕೇಳದೆ ವೇಗದಿಂದ ಫಾಸ್ಟ್-ಫಾರ್ವರ್ಡ್ ಅಗುತ್ತಿರುವ ಜೀವನದ ರೀಲನ್ನು ಸ್ವಲ್ಪ ಸ್ವಲ್ಪ ರಿವೈಂಡ್ ಮಾಡತೊಡಗಿತು. ಯಾವುದೇ ಆಧುನಿಕ ಅನುಕೂಲತೆ-ಸೌಲಭ್ಯಗಳೂ ಇಲ್ಲದ ಅಜ್ಜಿಯ ಮನೆ ಥಟ್ಟನೆ ನೆನಪಿಗೆ ಬಂತು. ಸುಣ್ಣ ಬಣ್ಣ ಕಾಣದ ಮನೆಯನ್ನು ಇನ್ನಷ್ಟು ಅಂದಗೊಳಿಸಲೆಂದೇ, ಭೋರೆಂದು ಸುರಿವ ಮಳೆ, ಆ ಮಳೆಗೆ ಅಲ್ಲಲ್ಲಿ ಸೋರುವ ಮನೆ, ಸೋರಿದಾಗ ನೀರು ಹರಿಯದಿರಲೆಂದು ಇಟ್ಟ ಕೊಡ, ಬಕೆಟ್ಟುಗಳು, ಸೋರಿಕೆಯ ಹಸಿ ಕಟ್ಟಿಗೆಯ ಉರಿಹಚ್ಚಿ, ಹೊಗೆ ಎಬ್ಬಿಸಿಕೊಂಡು, ಕೆಮ್ಮುತ್ತ, ಊದುಗೊಳವೆಯಿಂದ ಊದುತ್ತ ಮಾಡುವ ಅಜ್ಜಿಯ ಕಸರತ್ತು, ಆ ಹೊಗೆಗೆ ಕಪ್ಪಾಗಿ ಮಸಿ ಹಿಡಿದ ಕಟ್ಟಿಗೆ/ಇದ್ದಿಲು ಒಲೆಗಳು, ಪಕ್ಕದಲ್ಲಿಯೆ ಇರುವ ರುಬ್ಬಲು ಇರುವ ಕಲ್ಲಿನ ಕರಿ ಒಳ್ಳು, ಅದರ ಸಂಗಾತಿಗಳಾದ ಭಾರವಾದ ರುಬ್ಬು-ಗುಂಡು, ಹಾರೆ, ಕುಡಿವ ನೀರಿನ ತಾಮ್ರದ ದೊಡ್ದ ಹಂಡೆಗಳು ಮತ್ತು ಆ ಹಂಡೆಗಳ ತುಂಬಲು ಬೆಳಿಗ್ಗೆಯಿಂದಲೇ ಪಕ್ಕದ ಓಣಿಯ ಬಾವಿಯ ಸೇದುವ, ಸೋದರ ಮಾವಂದಿರು ಮತ್ತು ಚಿಕ್ಕಮ್ಮಂದಿರು!
ಬಡತನವಿದ್ದರೂ ವಿದ್ಯೆ-ದಾನ, ಅನ್ನ-ದಾನಕ್ಕೆ ಇಟ್ಟುಕೊಂಡ ವಾರಾನ್ನದ ಹುಡುಗರು, ಸಾಲದ್ದಕ್ಕೆ ಯಾವಗಲೂ ಇರುವ ಅತಿಥಿಗಳು, ಎಲ್ಲರಿಗು ಭಕ್ಕರಿ ಬಡಿಯುವಾಗ, ಹಬ್ಬ-ಹರಿದಿನಗಳಲ್ಲಿ ನಾನಾ ವಿಧದ ಪಂಚ-ಪಕ್ವಾನ್ನ ಮಾಡುವದರಲ್ಲಿ ಅಜ್ಜಿ ಎಂದೂ ಬೇಸರಗೊಂಡಿದ್ದೇ ಇಲ್ಲ, ಕೆಲಸ ಜಾಸ್ತಿಯಾಯಿತು ಅಂತ ಗೊಣಗಿದ್ದೇ ಇಲ್ಲ, ಮುಖ ಸಿಂಡರಿಸಿದ್ದಿಲ್ಲ. ಸದಾ ಕೆಲಸ ಮಾಡುತ್ತ, ದಣಿವಾದಾಗ ದೇವರ ನಾಮ-ಸ್ಮರಣೆ ಮಾಡುತ್ತ, 'ಅನ್ನ-ಪೂರ್ಣೇಶ್ವರಿ'ಯಾಗಿ ಜನರಿಗೆ ಉಣ-ಬಡಿಸುವದರಲ್ಲಿಯೆ ಸಂತೃಪ್ತಿ ಕಾಣುತ್ತಿದ್ದ ಅಜ್ಜಿ, ಅಜ್ಜ ಕೊನೆಕಾಲದಲ್ಲಿ ಅಸ್ಥಮಾ ಕಾಯಿಲೆಯಿಂದ ನರಳುತ್ತಿರುವಾಗ ಹಗಲಿರುಳು ಅಜ್ಜಿ ಮಾಡಿದ ಸೇವೆ, ಮನೆಯಲ್ಲಿ ಕೆಲಸ-ಕಾರ್ಪಣ್ಯಗಳನ್ನ ಬೇಸರಿಸಿದೆ ಮಾಡಿ, ಅಕ್ಕ-ಪಕ್ಕದವರಿಗೂ ಸಹಾಯವಾಗುತ್ತಿದ್ದ ಸೋದರಮಾವಂದಿರು, ಚಿಕ್ಕಮ್ಮಂದಿರು, ಇಷ್ಟಾಗಿಯು, ಮನೆಯಲ್ಲಿ ಯಾವಗಲು ಹರಟೆ, ನಗೆ-ಚಾಟಿಗೆ, ನಗೆಯ ಹೊಳೆ!

ಮತ್ತೆ ದೇವಯಾನಿಯ ಮನಸು ಇಂದಿನ ಬದುಕಿನತ್ತ ಇಣುಕಿತು. ಇಂದು ಎಲ್ಲ ಆಧುನಿಕ ಸೌಲಭ್ಯಗಳನ್ನ ಹೊಂದಿರುವ ಮನೆ, ಏರ್-ಕಂಡಿಷನರ್, ವಾಶರ್-ಡ್ರಾಯರ್, ಡಿಶ್-ವಾಶರ್, ಗ್ಯಾಸ್ ಸ್ಟೋವ್, ಮೈಕ್ರೊ-ವೇವ್, ರೆಫ್ರಿಜರೇಟರ್, ಮಿಕ್ಸಿ-ಗ್ರೈಂಡರ್, ಸಾಲದ್ದಕ್ಕೆ ಕಷ್ಟ ಆಗಬರದೆಂದೇ ಬಂದಿರುವ ಇನಸ್ಟಂಟ್-ಮಿಕ್ಸ್ ಗಳು. ಆದರೂ ಈ ಆರಾಮಗಳನ್ನ ಅನುಭವಿಸುವ ವ್ಯವಧಾನವಾಗಲಿ, ಸಂಯಮವಾಗಲಿ ಇಲ್ಲ. ನೀರು ತುಂಬುವದಿಲ್ಲ, ವಿದ್ಯುತ್ ಹೋಗುವದಿಲ್ಲ, ಬಸ್ಸಿಗೆ ಕಾಯುವ ಪ್ರಮೇಯವಿಲ್ಲ ಇತ್ಯಾದಿಗಳಿಂದ ಬದುಕು ಎಷ್ಟೇ ಸರಳಗೊಂಡಿದ್ದರೂ, ಏನೊ ಬದುಕಿನಲ್ಲಿ ಒಂದು ಬಿಗುಮಾನ, ಯಾಕೋ ಒಂದು ಟೆನ್ಷನ್, ನಗುವನಂತೂ ಹುಡುಕಿಕೊಂಡು ಹೋಗಬೇಕು! ಕೊರತೆಗಳಿದ್ದರೂ ಕೊರತೆಗಳಿಲ್ಲದಂತೆ ಬದುಕುತ್ತಿದ್ದ ಅಜ್ಜ-ಅಜ್ಜಿಯ ದಿನಗಳನ್ನ, ಕೊರತೆಗಳಿಲ್ಲದಿದ್ದರೂ ತೀವ್ರ ಕೊರತೆಯಿರುವಂತೆ ಬದುಕುತ್ತಿರುವ ಇಂದಿನ ದಿನಗಳನ್ನ ತುಲನೆಮಾಡಿ, ದೇವಯಾನಿಗೆ ಪಿಚ್ಚೆನಿಸಿತು. ಯಾವುದನು 'ಹಳೆಯದೆಂದು', 'ಓಲ್ಡ್-ಫ್ಯಾಶನ್' ಎಂದು ತಾತ್ಸಾರ ಮಾಡುತ್ತಿದ್ದಳೊ, ಅದರಿಂದ ಕಲಿಯಲು ಇರುವ ವಿಷಯಗಳೆಷ್ಟು ಅಂತ ಅಚ್ಚರಿ ಪಡುತ್ತ, ಅದರ ಬಗ್ಗೆ ಗೌರವಾದರಗಳನ್ನ ಹೆಚ್ಚಿಸಿಕೊಂಡು, ಸಮುನ್ನ ಹತ್ತಿರ ಬಂದು,

"samu, you don't have to eat that. Let me make uttapas for you.." ಅನ್ನುತ್ತ ಸೀರಿಯಲ್ ತೆಗೆದುಕೊಂಡು ಹೋಗುವಳು. ಫೋನ್ ಎತ್ತಿ ದೇವಯಾನಿ, , "Chris, I will be late to work. "

ಅನ್ನುತ್ತ ಫೋನ್ ಇಡುವಳು. ಸಮುವಿನ ಮುಖದ ಮೇಲೆ ದೊಡ್ಡ ಮುಗುಳ್ನಗೆ...

(ಪ್ರೇರಣೆ - ನಮ್ಮ ಅಜ್ಜಿ (ತಾಯಿಯ ತಾಯಿ) ಮತ್ತು ಆಪ್ತ ಸ್ನೇಹಿತೆ ರಾಜಿ ಮೋಹನ್ )

1 comment:

RAGHU KEELARA said...

thumba chennagide. idu nimma anubhavana..............