Saturday, November 04, 2006

ಕೆನಡಾ! ಕೆನಡಾ!!


ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ

ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಭಾರತ, ಸ್ವಿಟ್ಜರ್-ಲ್ಯಾಂಡ್, ಸೌತ್-ಆಫ್ರಿಕಾ ಮತ್ತು ಅಮೇರಿಕಾ ದೇಶಗಳಲ್ಲಿ ತಮ್ಮ ವೃತ್ತಿ ಜೀವನವನ್ನ ನಡೆಸಿದ ಇವರು, ಈಗ ಕೆನಡಾದಲ್ಲಿ ನೆಲೆಸಿದ್ದಾರೆ.





ಸುಮಾರು ೧೮ ತಿಂಗಳುಗಳಿಂದ ಕೆನಡಾಕ್ಕೆ ವಲಸೆಗಾಗಿ ಕಾಣುತ್ತಿದ್ದ ಕನಸು ಕೊನೆಗೂ ನನಸಾಯಿತು. ನಿರೀಕ್ಷೆಗೂ ಮೀರಿ, ನಾವು ಇಲ್ಲಿಗೆ ಬರುವ ಮೊದಲೇ ನನ್ನ ಕೆಲಸವೂ ಖಚಿತಗೊಂಡಿದ್ದರಿಂದ, ಏನೂ ತೊಂದರೆ ಇಲ್ಲದೇ ಬ್ರಿಟೀಶ್ ಕೊಲಂಬಿಯಾ ಪ್ರಾಂತದ, ವ್ಯಾಂಕೂವರ್ ನಗರದಲ್ಲಿ ಜೀವನ ಆರಂಭಿಸಿದೆವು.

ನಾವು ಇಲ್ಲಿಗೆ ಬಂದಾಗ, ಕೆಲ ವಿಸ್ಮಯಗಳು ನಮ್ಮನ್ನ ಸ್ವಾಗತಿಸಿದವು. ಅದರಲ್ಲಿ ಮುಖ್ಯವಾಗಿ, ಇಲ್ಲಿನ ಭಾರತೀಯರ ಜನಸಂಖ್ಯೆ, ಅದರಲ್ಲೂ ಸಿಖ್ಖರ ಜನಸಂಖ್ಯೆ. ಬಂದ ಮೇಲೆ ಅನೇಕ ದಿನಗಳು ನಮಗೆ ಸರದಾರ್ಜಿಗಳನ್ನ ಬಿಟ್ಟರೆ ಬೇರೆಯವರೊಡನೆ ವ್ಯವಹರಿಸುವ ಸಂದರ್ಭವೇ ಬರಲಿಲ್ಲ!! ಬಂದಿಳಿದ ಕೂಡಲೇ, ವಿಮಾನ ನಿಲ್ದಾಣದಲ್ಲಿ ನಮ್ಮ ಸಾಮಾನುಗಳನ್ನು ಎತ್ತಿಹಾಕಲು ಸಹಾಯಕ್ಕೆ (ಪೊರ್ಟರ್) ಬಂದವನು ಸರ್ದಾರ್ಜಿ, ಟ್ಯಾಕ್ಸಿ ಕರೆದಾಗ ಬಂದವನು ಸರ್ದಾರ್ಜಿ, ಬಂದಿಳಿದ ತಕ್ಷಣ ಇಳಿದುಕೊಳ್ಳಲು ಒಂದು ತಂಗುದಾಣದಲ್ಲಿ (ಮೋಟೆಲ್) ಕೊಠಡಿಯೊಂದನ್ನ ಕಾಯ್ದಿರಿಸಿದ್ದೆ, ಅಲ್ಲಿ ಹೋಗಿ ನೋಡಿದರೆ, ಅದರ ಮಾಲೀಕ ಸರ್ದಾರ್ಜಿ. ಕಾರು ಬಾಡಿಗೆ (ರೆಂಟಲ್ ಕಾರ್) ಮಾಡಲು ಎಂಟರ್ ಪ್ರೈಸ್ ಕಾರ್ ರೆಂಟಲ್ ಎಂಬ ಪ್ರಸಿದ್ಧ, ಕಂಪನಿಯ ಆಫೀಸ್‌ಗೆ ಹೋದೆ. ಅಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತ(ಕ್ಲರ್ಕ್)ನೂ ಸರ್ದಾರ್ಜಿ. ಎರಡು ದಿನದ ಬಳಿಕ ನಮಗಿಷ್ಟವಾಗುವಂತ ಬಾಡಿಗೆ ಮನೆ ಸಿಕ್ಕಿತು. ಅದರ ಒಡೆಯನೂ ಸರ್ದಾರ್ಜಿ. ಮಾರನೇ ದಿನ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಹೋದೆ, ಅಲ್ಲಿ ಒಬ್ಬ ಚೈನಾದ ವ್ಯಕ್ತಿಯನ್ನು ಬಿಟ್ಟರೆ ಮಿಕ್ಕವರೆಲ್ಲ- ಮ್ಯಾನೇಜರ್ ನಿಂದ ಹಿಡಿದು ಎಲ್ಲರೂ ಭಾರತೀಯರು!! ಒಂದು ವಾರದ ಬಳಿಕ ನಾನು ಕೆಲಸಕ್ಕೆ ಹಾಜರಾದೆ, ಅಲ್ಲಿ ಬಂದ ನಂತರ ನನಗೆ ಗೊತ್ತಾಯಿತು, ನನ್ನ ಮ್ಯಾನೇಜರ್ ಕೂಡ ಸರ್ದಾರ್ಜಿ!!!

ನಾನು ಈ ಮೇಲಿನ ತುಣುಕನ್ನು, ನನ್ನವರಿಗೆಲ್ಲ ಈ-ಮೈಲ್ ಬರೆದು ತಿಳಿಸಿದಾಗ, ಬಹಳಷ್ಟು ಸ್ನೇಹಿತರು ಸರದಾರ್ಜಿ ಜೋಕ್ಸ್‌ಗಳನ್ನು ಜ್ಞಾಪಿಸಿಕೊಂಡರು. ನಾನೂ ನಕ್ಕು ಸುಮ್ಮನಾಗಿದ್ದೆ. ಆದರೆ ಕಾಲ ಕ್ರಮೇಣ ಯೋಚಿಸಿದಾಗ ಇದು ಹಾಸ್ಯ ಚಟಾಕಿ ಮಾಡಿ ಮರೆತುಬಿಡುವ ವಿಷಯವಲ್ಲ ಎನಿಸತೊಡಗಿತು. ಸಿಖ್ಖರು ಇಲ್ಲಿ ಬೆಳೆದು, ಅಭಿವೃದ್ಧಿ ಹೊಂದಿರುವುದು ಕಲ್ಪಿಸಲಸಾಧ್ಯವಾದುದು. ಇಲ್ಲೊಂದು ಮಿನಿ ಪಂಜಾಬನ್ನೇ ಅವರು ಸೃಷ್ಠಿಸಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ನಾವು ಕನ್ನಡಿಗರೂ ಈ ದಿಶೆಯಲ್ಲಿ ಪರಿಶೋಧಿಸಿ, ಒಳಿತು-ಕೆಡುಕುಗಳ ಬಗ್ಗೆ ಸಮಾಂತರವಾಗಿ ಪರಾಮರ್ಷಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎನಿಸತೊಡಗಿತು.

ಸಿಖ್ಖರು ಇಲ್ಲಿ ಎಲ್ಲಾ ಕಡೆಗಳಲ್ಲಿಯೂ, ಎಲ್ಲಾ ತರಹದ ವ್ಯವಹಾರ, ವ್ಯಾಪಾರ, ಕೆಲಸಗಳಲ್ಲಿ ತೊಡಗಿದ್ದಾರೆ. ತಮ್ಮ ನಾಡಿನಲ್ಲಿರುವಂತೆಯೇ ಇಲ್ಲಿಯೂ ತಮ್ಮ ವೈಯಕ್ತಿಕ, ಧಾರ್ಮಿಕ ಮತ್ತು ವ್ಯಾವಹಾರಿಕ ಜೀವನವನ್ನು ತಮ್ಮ ತಂದೆ, ತಾಯಿ, ಸಹೋದರ, ಸಹೋದರಿ, ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ನಡೆಸುತ್ತಾರೆ. ಅಮೇರಿಕದಲ್ಲಿರುವ ಭಾರತೀಯ ಸಂಜಾತರಂತೆ, ಇಲ್ಲಿರುವ ಭಾರತೀಯರು ಕೇವಲ ಉನ್ನತ ಮಟ್ಟದ ಕೆಲಸ ಕಾರ್ಯಗಳಲ್ಲಿ ಮಾತ್ರ ತೊಡಗಿಲ್ಲ. ಇವರು ಎಲ್ಲಾ ತರಹದ ಕೆಲಸ, ವ್ಯವಹಾರಗಳಲ್ಲಿದ್ದಾರೆ. ಬಹುಪಾಲು ಟ್ಯಾಕ್ಸಿ ಚಾಲಕರು ಸರ್ದಾರ್ಜಿಗಳು, ಹೋಟೆಲ್, ಮೋಟೆಲ್, ಬ್ಯಾಂಕ್ ಕ್ಲರ್ಕ್ ನಿಂದಾ ಹಿಡಿದು ಮ್ಯಾನೇಜರ್ ವರೆಗೆ, ರಿಯಲ್ ಎಸ್ಟೇಟ್, ಪ್ಲಂಬಿಂಗ್, ಕಾರ್ಪೆಟ್ಟಿಂಗ್, ಆಟೊಮೊಬೈಲ್ ಮೆಕ್ಯಾನಿಕ್, ಹೇರ್ ಡ್ರೆಸರ್ಸ್, ಸೆಕ್ಯುರಿಟಿ, ಎಲ್ಲಾ ತರಹದ ಸರಕಾರಿ ಕೆಲಸಗಳು, ಔಷಧಿ ಅಂಗಡಿಗಳು, ವೈದ್ಯರು, ಅನೇಕ ಕಂಪನಿಗಳಲ್ಲಿ ಕೆಳಮಟ್ಟದ ಕೆಲಸದಿಂದ ಹಿಡಿದು ಉನ್ನತ ಮಟ್ಟದ ಸ್ಥಾನಗಳಲ್ಲಿಯೂ ಅವರಿದ್ದಾರೆ. ಅವರು ಮಾಡದ ವ್ಯವಹಾರಗಳೇ ಇಲ್ಲ ಎನ್ನಬಹುದು. ಅವರು ಇದನ್ನೆಲ್ಲಾ ಹೇಗೆ ಸಾಧಿಸಿದರು?? ಹೇಗೆ? ಹೇಗೆ?? ಹೇಗೆ??? ಈ ಪ್ರಶ್ನೆ ನನ್ನ ಕಾಡತೊಡಗಿತು. ಸಿಖ್ಖರು ಈ ರೀತಿಯ ಪ್ರಾಭಲ್ಯಕ್ಕೆ ಕಾರಣಗಳನ್ನ ಹುಡುಕ ತೊಡಗಿದೆ. ಅದಕ್ಕೆಂದೇ ಈ ಲೇಖನ!

ಮೊದಲನೆಯದಾಗಿ ಸಿಖ್ಖರಿಗೆ ಕೆನಡಾ ದೇಶದಲ್ಲಿ ಇರುವ ಸಾಧ್ಯತೆಗಳ ಬಗ್ಗೆ ತುಂಬಾ ಚೆನ್ನಾಗಿ ಅರಿವಿದೆ, ತಮ್ಮ ಜನಗಳಿಗೆ ಕೆನಡಾಕ್ಕೆ ವಲಸೆ ಬರಲು ಅವರು ಸಹಾಯ ಮಾಡುತ್ತಾರೆ ಮತ್ತು ಎಲ್ಲಿದ್ದರೂ ತಮ್ಮ ವೈಯಕ್ತಿಕ ಮತ್ತು ಧಾರ್ಮಿಕ ನಿಲುವುಗಳನ್ನ ಬಿಡದೇ ಕೊಂಡೊಯ್ಯುತ್ತಾರೆ.

ಈ ಕೆಳಗಿನ ವಿಷಯಗಳು ಈ ಲೇಖನ ಬರೆಯುವ ವೇಳೆಯಲ್ಲಿ (ನವೆಂಬರ್ 1, 2006) ಕೆನಡಾದಲ್ಲಿ ಚಲಾವಣೆಯಲ್ಲಿರುವ ವಿಧೇಯಕಗಳು. ಇವು ನಮ್ಮೆಲ್ಲರಿಗೂ ಹೊಸತಿರಬಹುದು, ಆದರೆ ಸಿಖ್ಖರಿಗೆ ಇಂತಹ ವಿಷಯಗಳ ಅರಿವಾಗಿ ಮತ್ತು ಅದರ ಉಪಯೋಗವನ್ನು ಪಡೆದು ಶತಮಾನವೇ ಕಳೆದಿದೆ ಎನ್ನಬಹುದು.

ಸಾಧ್ಯತೆಗಳು

  • ನಾಲ್ಕೈದು ವರ್ಷಗಳ ಕೆಲಸದ ಅನುಭವಿರುವ ಮತ್ತು ಇಂಗ್ಲೀಷ್ ಅಥವಾ ಫ್ರೆಂಚ್ ಚೆನ್ನಾಗಿ ಮಾತಾಡ ಬಲ್ಲ ಎಲ್ಲ ಪದವೀಧರರು, ಕೆನಡಾ ದೇಶದ ಪರ್ಮನೆಂಟ್ ರೆಸಿಡೆಂಟ್ (ಪಿ.ಆರ್.) ಪಡೆಯಲು ಸ್ಕಿಲ್ಡ್ ವರ್ಕರ್ ವರ್ಗದಡಿ ಅರ್ಹರಾಗಿರುತ್ತಾರೆ


  • ಮನವಿದಾರನ/ಳ ಪತ್ನಿ/ಪತಿ-ಯೂ ಪದವೀಧರೆಯಾಗಿದ್ದರೆ ಅರ್ಹತೆಯ ಮಟ್ಟ ಹೆಚ್ಚುತ್ತದೆ


  • ಪಿ.ಆರ್. ಮನವಿ ಮಾನ್ಯವಾದ ನಂತರ, ಒಂದುವೇಳೆ ಅಭ್ಯರ್ಥಿ ಒಳ್ಳೆ ಬೇಡಿಕೆ ಇರುವ ತಂತ್ರಜ್ಞಾನದಲ್ಲಿ ಪರಿಣಿತಿ ಇದ್ದರೆ, ಈ ದೇಶಕ್ಕೆ ಬರುವ ಮೊದಲೇ ಕೆಲಸವನ್ನೂ ಖಚಿತಪಡಿಸಿಕೊಂಡು ಬರಬಹುದು. ಇಲ್ಲದಿದ್ದರೆ, ಇಲ್ಲಿಗೆ ಬಂದು, ಕೆಲಸ ಹುಡುಕ ಬಹುದು


  • ಕೆಲವು ನಿಬಂಧನೆಗಳಿವೆಯಾದರೂ ಒಮ್ಮೆ ಇಲ್ಲಿಗೆ ಬಂದ ನಂತರ, ತಂದೆ, ತಾಯಿ ಮತ್ತು ಅವರ ಮುಖಾಂತರ, ರಕ್ತ ಸಂಭಂದಿಗಳಿಗೆಲ್ಲಾ ಫ್ಯಾಮಿಲಿ ಪಿ.ಆರ್. ವರ್ಗದಡಿ ಸ್ಪಾನ್ಸರ್ ಮಾಡಬಹುದು. ಅವರಿಗೆ ಯಾವುದೇ ವಿಷೇಶ ಜ್ಞಾನದ (ಸಾಫ್ಟ್‌ವೇರ್, ಮೆಡಿಸಿನ್ ಇತ್ಯಾದಿ) ಅವಶ್ಯಕತೆ ಇಲ್ಲ.


  • ಕೇವಲ ಮೂರು ವರ್ಷ ಪಿ.ಆರ್. ನಲ್ಲಿ ಈ ದೇಶದಲ್ಲಿ ಇದ್ದ ನಂತರ ಇಲ್ಲಿಯ ಪ್ರಜೆಯಾಗಲು ಅರ್ಹತೆ ಸಿಗುತ್ತದೆ!!


  • ಈ ಮೇಲಿನ ಸೌಕರ್ಯಗಳನ್ನ ಚಾಚೂ ತಪ್ಪದೆ ಉಪಯೋಗಿಸಿಕೊಂಡಿರುವ ಸಿಖ್ಖರು, ಇಲ್ಲಿ ಪ್ರಭಲವಾಗಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ.

    ಪಿ.ಆರ್. ಪಡೆಯಲು ಇರುವ ಸಾಮಾನ್ಯ ಅಡಚಣೆಗಳು

    • ದೆಹಲಿಯಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ, ಸುಮಾರು 5 ವರ್ಷ


    • ಸರ್ಕಾರಿ ಶುಲ್ಕ, ವೈದ್ಯಕೀಯ ತಪಾಸಣೆ, ಅಂಚೆ ಖರ್ಚು ಇತ್ಯಾದಿಗಳೆಲ್ಲ ಸೇರಿ, ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 5೦,೦೦೦ ಖರ್ಚು ಬರುವುದು. ಆದರೆ ಸರ್ಕಾರಿ ಶುಲ್ಕವನ್ನು ಒಂದೇ ಸಲ ಕೊಡಬೇಕಾಗಿಲ್ಲ, ಈ ಕೆಳಗಿನಂತೆ ಕೊಡಬೇಕಾಗುವುದು


      • ಮನವಿಪತ್ರದೊಂದಿಗೆ ಕೊಡಬೇಕಾದ ಶುಲ್ಕ ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 22,೦೦೦


      • ಮನವಿಪತ್ರ ಮಾನ್ಯ ಮಾಡಿದ ನಂತರ ಇನ್ನೂ ಒಂದು ಶುಲ್ಕ ಕೊಡಬೇಕಾಗುವುದು ಅದು ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 2೦,೦೦೦. ಆದರೆ ಈ ವೇಳೆಗೆ ಪಿ.ಆರ್. ಸಿಗುವುದು ಖಚಿತವಾಗಿರುತ್ತದೆ


    • ಮನವಿಪತ್ರದ ಪ್ರಕ್ರಿಯೆಯ ಕೊನೆಯ ಹಂತದಲ್ಲಿ, ಅಭ್ಯರ್ಥಿ ತನ್ನಲ್ಲಿ 15,೦೦೦ ಕೆನೆಡಿಯನ್ ಡಾಲರ್ ನಷ್ಟು ಹಣವಿರುವುದನ್ನು ಖಚಿತಪಡಿಸುವ ಬ್ಯಾಂಕ್ ದಾಖಲೆಗಳನ್ನ ರಾಯಭಾರಿ ಕಛೇರಿಗೆ ಕಳಿಸಬೇಕು. ಅಭ್ಯರ್ಥಿ ಇಲ್ಲಿ ಬಂದ ತಕ್ಷಣ ಜೀವನ ಮಾಡಲು ಬೇಕಾಗುವ ಹಣವಿದೆ ಎಂದು ಖಚಿತಪಡಿಸಿಕೊಳ್ಳಲು ಈ ದಾಖಲೆ ಕೇಳುತ್ತಾರೆ


    • ಅನೇಕರು ಈ ಎಲ್ಲಾ ವ್ಯವಹಾರಗಳನ್ನು ವಕೀಲರ ಮೂಲಕ ಮಾಡಿಸುತ್ತಾರೆ. ಸಾಮಾನ್ಯವಾಗಿ ಮನವಿಪತ್ರದಲ್ಲಿರುವ ಎಲ್ಲರಿಗೂ ಸೇರಿ ವಕೀಲರು ಸುಮಾರು ರೂ 4೦,೦೦೦-7೦,೦೦೦ ಶುಲ್ಕ ವಿಧಿಸುತ್ತಾರೆ


    • ಸ್ಕಿಲ್ಡ್ ವರ್ಕರ್ ಪಿ.ಆರ್. , ಇಲ್ಲಿನ ಉದ್ಯೋಗ ಬೇಡಿಕೆಗಳಿಗಣುವಾಗಿ ನಡೆಯುವುದು. ಇಲ್ಲಿ ಕೊರತೆ ಇರುವ ಉದ್ಯೋಗಗಳಲ್ಲಿ ನಿಷ್ಣಾತರಾಗಿರುವವರಿಗೆ ಮಣೆ ಹಾಕುವರು.



    ಕೆಲವರಿಗೆ ಸಹಾಯಕವಾಗಬಹುದಾದ ಅಂಶಗಳು

    • ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ ಕೆಲ ದೇಶಗಳಲ್ಲಿ ಕಡಿಮೆ ಇದೆ. ಉದಾಹರಣೆಗೆ ಅಮೇರಿಕಾದಲ್ಲಿ ಸುಮಾರು ೧೮ ತಿಂಗಳು ತಗಲುವುದು. ಇದೇ ರೀತಿ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜೀಲ್ಯಾಂಡ್, ಸೌದಿ, ಮುಂತಾದ ದೇಶದಲ್ಲಿ ಅಭ್ಯರ್ಥಿ ಪ್ರಸ್ತುತ ಕೆಲಸ ಮಾಡುತ್ತಿದ್ದರೆ, ಆ ದೇಶಲ್ಲಿಯೇ ಮನವಿಪತ್ರ ಸಲ್ಲಿಸಬಹುದು ಮತ್ತು ಪಿ.ಆರ್.-ಅನ್ನು ಬೇಗ ಪಡೆಯಬಹುದು

    • ಈ ದೇಶಗಳಲ್ಲಿ ಮನವಿಪತ್ರ ಸಲ್ಲಿಸಿದ ನಂತರ, ಪಿ.ಆರ್. ಸಿಗುವ ಮೊದಲೇ ಆ ದೇಶದಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದರೆ?

      • ನನ್ನ ವಕೀಲನ ಪ್ರಕಾರ, ಈ ಸಂದರ್ಭದಲ್ಲಿ "ವಯಕ್ತಿಕ ಸಂದರ್ಶನ" ಕ್ಕೆ (ಪರ್ಸನಲ್ ಇಂಟರ್‌ವಿವ್) ರಾಯಭಾರಿ ಕಛೇರಿ, ವಿನಾಯಿತಿ ಕೊಟ್ಟಲ್ಲಿ ಎನೂ ತೊಂದರೆ ಇಲ್ಲ. ನನಗೂ ಆ ವಿನಾಯಿತು ಕೊಟ್ಟಿದ್ದರು. ಆದರೆ ಸಂದರ್ಶನಕ್ಕೆ ಕರೆದರೆ, ಕರೆದ ರಾಯಭಾರಿ ಕಛೇರಿಗೇ ಹೋಗಬೇಕಾಗುವುದು

      • ಇಲ್ಲವಾದಲ್ಲಿ ನಾವು ಎಲ್ಲಿರುವೆವೋ ಅಲ್ಲಿರುವ ರಾಯಭಾರಿ ಕಛೇರಿಗೆ ಮನವಿಪತ್ರವನ್ನು ಸ್ಥಳಾಂತರಿಸಲು ಕೇಳಿಕೊಳ್ಳಬಹುದು. ಅವರು ಮಾನ್ಯ ಮಾಡಲೂಬಹುದು. ಆದರೆ ಭಾರತಕ್ಕೇನಾದರೂ ಮನವಿಪತ್ರವನ್ನು ಸ್ಥಳಾಂತರಿಸಿದರೆ ಅಲ್ಲಿ ಅನೇಕ ದಿನ ತಗಲಿಕೊಳ್ಳುವ ಸಾಧ್ಯತೆ ಇದೆ

      • ಈ ಪರಿಸ್ಥಿತಿಯಲ್ಲಿ ವಕೀಲರ ಮುಖಾಂತರ ಮನವಿಪತ್ರ ಸಲ್ಲಿಸುವುದು ಒಳಿತು. ಸಾಮಾನ್ಯವಾಗಿ ಪತ್ರ ವ್ಯವಹಾರಗಳೆಲ್ಲಾ ವಕೀಲರ ಕಛೇರಿಯ ವಿಳಾಸದೊಂದಿಗೆ ಆಗುವದರಿಂದ, ಅಭ್ಯರ್ಥಿಯ ವಿಳಾಸ ಬದಲಾವಣೆಯಿಂದ ಆಗಬಹುದಾದ ತೊಂದರೆಗಳು ಬರಲಾರವು


    • ಒಂದುವೇಳೆ ಅಭ್ಯರ್ಥಿ ಕೆನಡಾ ದೇಶಕ್ಕೆ ವರ್ಕ್ ಪೆರ್ಮಿಟ್ ನಲ್ಲಿ ಬರುವ ಅವಕಾಶ ಒದಗಿ ಬಂದರೆ, ಅದರಂಥ ಸುಸಂದರ್ಭ ಇನ್ನೊಂದಿಲ್ಲ. ಏಕೆಂದರೆ, ಕೆನಡಾದಲ್ಲೇ ಮನವಿಪತ್ರ ಸಲ್ಲಿಸಿದಲ್ಲಿ, ಈ ಪ್ರಕ್ರಿಯೆ ೧ ವರ್ಷದಲ್ಲಿ ಮುಗಿಯುವುದು


    ಒಮ್ಮೆ ಇಲ್ಲಿಗೆ ಬಂದ ನಂತರ ಕುಟುಂಬವರ್ಗದವರಿಗೆ ನೀವೇನು ಮಾಡಬಹುದು?

  • ಪತಿ, ಪತ್ನಿಯರಿಬ್ಬರೂ ಅವರ ತಂದೆ ತಾಯಿಯರನ್ನು ಅತಿ ಸುಲಭವಾಗಿ ಕರೆಯಿಸಿಕೊಳ್ಳ ಬಹುದು, ಅವರು ಪಿ.ಆರ್. ಸಹ ಪಡೆಯಬಹುದು.

  • ಕೆಲವು ನಿಬಂಧನೆಗಳನ್ನು ಪಾಲಿಸಿ ತಮ್ಮ ರಕ್ತಸಂಬಂಧಿಗಳ ಪಿ.ಆರ್. ಗಾಗಿ ಸ್ಪಾನ್ಸರ್ ಮಾಡಬಹುದು.

  • ಅವರನ್ನು ವಿಸಿಟರ್ ವೀಸಾದಲ್ಲಿ ಕೆನಡಾಕ್ಕೆ ಕರೆಯಿಸಿ, ಇಲ್ಲಿ ಪಿ.ಆರ್. ಮನವಿಪತ್ರವನ್ನು ಸಲ್ಲಿಸಿ, ಬೇಗನೆ ಪಿ.ಆರ್. ಪಡೆಯಬಹುದು. ಆದರೆ ವಿಸಿಟರ್ ವೀಸಾದಲ್ಲಿರುವವರು ನೌಕರಿ ಮಾಡುವಂತಿಲ್ಲ. (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).

    ಏಕೆ ಬರಬೇಕು ಕೆನಡಾಕ್ಕೆ?

    "ಅಮೇರಿಕನ್ ಡ್ರೀಮ್" ಎನ್ನುವುದು ಚಿರಪರಿಚಿತ ನುಡಿ. ಅದರ ಒಳಿತು-ಕೆಡುಕು, ಸುಖ-ದು:ಖಗಳ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಅದು ಅವಕಾಶಗಳು ಮತ್ತು ವಯಕ್ತಿಕ ಆಯ್ಕೆಗೆ ಸಂಭಂದಪಟ್ಟ ವಿಚಾರವಾದರೂ, ನನಗನ್ನಿಸಿದ ಕೆಲ ಮಾತುಗಳನ್ನ ಲೇಖನದ ಕೊನೆಯಲ್ಲಿ ಬರೆದಿದ್ದೇನೆ. ಆದರೆ ಅಮೇರಿಕಾಕ್ಕೆ ಹೋಗಲು ಅನೇಕರು ಪ್ರಯತ್ನಪಡುವುದರಿಂದ, ಅಮೇರಿಕದ ಜೊತೆ ಈ ಕೆಳಗೆ ತುಲನೆ ಮಾಡುತ್ತಿದ್ದೇನೆ.

    ಯು.ಎಸ್.ಎ. ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ನಕಾರಾತ್ಮಕ ಅಂಶಗಳು:

  • ಕೆನಡಾ ತುಂಬಾ ದುಬಾರಿ. ನೌಕರಿಗಳಿಗೆ ಕೇಂದ್ರವೆನಿಸಿಕೊಂಡಿರುವ ಕೆನಡಾದ ನಗರಗಳಾದ ಟೊರಾಂಟೊ, ವ್ಯಾಂಕೂವರ್, ಮಾಂಟ್ರಿಯಾಲ್ ಮುಂತಾದವುಗಳು ತುಂಬಾ ದುಬಾರಿ ನಗರಗಳು. ಈ ನಗರಗಳು ನ್ಯೂಯಾರ್ಕ್, ಸ್ಯಾನ್-ಫ್ರ್ಯಾನ್ಸಿಸ್ಕೊ ಮುಂತಾದ ನಗರಗಳಿಗಿಂತ ತುಂಬ ಚಿಕ್ಕದಾದರೂ, ಖರ್ಚು ಈ ನಗರಗಳಿಗೆ ಸಮಾನ.

  • ಆದಾಯ ಮತ್ತು ಮಾರಾಟ ತೆರಿಗೆ ಅಮೇರಿಕಾಕ್ಕಿಂತ ಹೆಚ್ಚು

  • ಕಾರ್ ಇನ್ಶುರೆನ್ಸ್, ಬ್ಯಾಂಕ್ ಶುಲ್ಕ, ಅಂಚೆ ಇತ್ಯಾದಿ ಖಾಸಗಿ ಮತ್ತು ಸರ್ಕಾರೀ ಸೇವೆಗಳು ಅಮೇರಿಕಾಕ್ಕಿಂತ ದುಬಾರಿ

  • ಈ ಎಲ್ಲ ಕಾರಣಗಳಿಂದ ಅಮೇರಿಕಕ್ಕಿಂತ ಉಳಿತಾಯ ಸ್ವಲ್ಪ ಕಡಿಮೆ

  • ನಿತ್ಯ ಜೀವನ ಅಮೇರಿಕಾಕ್ಕಿಂತ ಮಂದ ಗತಿಯಲ್ಲಿ ಸಾಗುವುದು. ಉದಾ: ಅಮೇರಿಕಾದಲ್ಲಿ ಬ್ಯಾಂಕ್‌ಗಳು ಬೆಳಿಗ್ಗೆ 7:30ಕ್ಕೆ ತೆರೆಯುತ್ತಿದ್ದವು. ಆದರೆ ಇಲ್ಲಿ 10:೦೦ ಕ್ಕೆ ತೆರೆಯುತ್ತವೆ!! ಅಮೇರಿಕದ ಕೆಲ ವೆಬ್ ಸೈಟ್‌ಗಳು ಬಹಳ ಉತ್ಕೃಷ್ಠವಾಗಿವೆ. ಆದರೆ ಇಲ್ಲಿ ಅವು ಸಾಮಾನ್ಯವಾಗಿವೆ. ಉದಾ: ನೀವೇ ನೋಡಿ - walmart.com (USA), walmart.ca(Canada)

  • ಕೆಲವೇ ನೌಕರಿ ಕೇಂದ್ರಗಳು : ಟೊರಾಂಟೋ, ವ್ಯಾಂಕೂವರ್, ಮಾಂಟ್ರಿಯಾಲ್, ಒಟ್ಟಾವ, ಕ್ಯಾಲ್ಗರಿ, ಎಡ್ಮಂಟನ್, ವಿನ್ನಿಪೆಗ್ ಇತ್ಯಾದಿಗಳು ಮಾತ್ರ ಕೆನಡಾದ ನೌಕರಿ ಕೇಂದ್ರಗಳು. ಆದರೆ ಅಮೇರಿಕದಲ್ಲಿ ಅನೇಕ ಕೇಂದ್ರಗಳಿವೆ.

  • ನೌಕರಿಗಳ ಒಟ್ಟು ಸಂಖ್ಯೆ ಅಮೇರಿಕಕ್ಕಿಂತಲೂ ತುಂಬಾ ಕಡಿಮೆ. ಆದರೆ ಅದಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳೂ ಇಲ್ಲಿ ಕಡಿಮೆ

    ಯು.ಎಸ್.ಎ ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ಸಮ ಅಥವಾ ಸಕಾರಾತ್ಮಕ ಅಂಶಗಳು:

  • ಆರೋಗ್ಯ ಸುಪರ್ದು (ಹೆಲ್ತ್ ಕೇರ್) ತುಂಬಾ ಅಗ್ಗ, ಹೆಚ್ಚೂ ಕಡಿಮೆ ಪುಕ್ಕಟೆಯಾಗಿ ದೊರೆಯುವುದು.

  • ದೈನಂದಿಕ ಜೀವನ ಅಮೇರಿಕೆಯಂತೆಯೇ ಇರುವುದು

  • ಮೂಲಭೂತ ಸೌಕರ್ಯ ಸರಿ ಸುಮಾರು ಅಮೇರಿಕದಲ್ಲಿರುವಂತೆಯೇ ಇರುವುದು

  • ಮಕ್ಕಳ ವಿದ್ಯಾಭ್ಯಾಸ ಅಮೇರಿಕದಲ್ಲಿರುವಂತೆಯೇ ಇರುವುದು

  • ಕೆನಡಾದ ಪಿ.ಆರ್. , ಅಮೇರಿಕೆಯ ಗ್ರೀನ್ ಕಾರ್ಡ್‌ಗೆ ಸಮಾನ. ಗ್ರೀನ್ ಕಾರ್ಡ್‌ಗೆ ತುಲನೆ ಮಾಡಿದರೆ ಪಿ.ಆರ್. ಪಡೆಯುವುದು ಬಲು ಸುಲಭ. ಗ್ರೀನ್ ಕಾರ್ಡ್ ಪಡೆಯಲು ಅಮೇರಿಕದಲ್ಲೇ ವಾಸವಿರಬೇಕು, ಪಿ.ಆರ್ ಪಡೆಯಲು ಕೆನಡಾದಲ್ಲಿ ವಾಸವಿರಬೇಕೆಂದಿಲ್ಲ. ಯಾವುದೇ ದೇಶದಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಪಿ.ಆರ್. ಪಡೆದು ೩-೪ ವರ್ಷಗಳಲ್ಲಿ ಕೆನಡಾದ ಪ್ರಜೆಯಾಗಬಹುದು, ಗ್ರೀನ್ ಕಾರ್ಡ್ ಪಡೆಯುವುದು, ಅಮೇರಿಕಾ ಪ್ರಜೆಯಾಗುವುದು ಪ್ರಸಕ್ತ ದಿನಗಳಲ್ಲಿ ಮರೀಚಿಕೆಯೇ ಆಗಿದೆ.

  • ಕೆನಡಾ ಪ್ರಜೆಯಾದಮೇಲೆ, ಅಮೇರಿಕಾಕ್ಕೆ ಕೆಲಸವರಿಸಿ ಹೋಗುವುದು ಸುಲಭ (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).

  • ಸಾಫ್ಟ್‌ವೇರ್ ಮತ್ತು ಇನ್ನಿತರ ಉನ್ನತ ಪರಿಣಿತಿ ಇರುವವರನ್ನು ಬಿಟ್ಟರೆ, ಬೇರೆಯವರು ಅಮೇರಿಕ ಕನಸು ಕಾಣುವಂತೆಯೇ ಇಲ್ಲ. ಆದರೆ ಕೆನಡಾಕ್ಕೆ ಬೇರೆ ಬೇರೆ ವಿಧದಲ್ಲಿ ಎಲ್ಲತರದ ಉದ್ಯೋಗಸ್ತರು ಬರುವ ಸಾಧ್ಯತೆ ಇದೆ.

  • ಕೆನಡಾಕ್ಕೆ ತಂದೆ, ತಾಯಿ, ಕರೆಸಿ ಅವರೊಂದಿಗೆ ಜೀವಿಸುವುದು ತುಂಬ ಸುಲಭ. ಪ್ರಯತ್ನಿಸಿದರೆ ಸಹೋದರ, ಸಹೋದರಿಯರನ್ನೂ ಕರೆಸಲು - ಸಾಧ್ಯ. ಅಮೇರಿಕದಲ್ಲಿ ಅದು ಕಷ್ಟ (ಸಾಧ್ಯವೇ ಇಲ್ಲವೇನೊ??)

  • ಅಮೇರಿಕೆಗಿಂತಲೂ ಹೆಚ್ಚು ಸಂಕೀರ್ಣ ಸಮಾಜ. ಜಗತ್ತಿನ ಎಲ್ಲಾ ಮೂಲೆಗಳಿಂದ ಬಂದಿರುವ ಜನಗಳು ಇಲ್ಲಿ ಕಾಣಸಿಗುವರು

  • ಜನಸಂಖ್ಯೆಗೆ ಮಿಗಿಲಾದ ನೈಸರ್ಗಿಕ ಸಂಪನ್ಮೂಲ

    ನನ್ನದೊಂದೆರಡು ಪುಕ್ಕಟೆ ಉಪದೇಶ:

    ಹೊರದೇಶಕ್ಕೆ ಹೋಗುವವರು, ಹಣಗಳಿಸುತ್ತಾರೆ, ಅದರಿಂದ ಬೇರೆಯವರಿಗೇನೂ ಉಪಯೋಗವಿಲ್ಲವೆಂದು ಬಹಳಷ್ಟು ಜನ ಅಭಿಪ್ರಾಯ ಪಡುತ್ತಾರೆ. ಹೊರದೇಶಕ್ಕೆ ಹೋಗುವ ಅವಕಾಶವಿರುವವರೂ ಈ ರೀತಿಯ ಅಭಿಪ್ರಾಯದಿಂದ ಅಥವಾ ತಂದೆತಾಯಿಯರ ಜೊತೆಗಿರುವುದಕ್ಕೋಸ್ಕರ ಆ ಅವಕಾಶಗಳನ್ನು ತಳ್ಳಿಹಾಕುತ್ತಾರೆ. ಆದರೆ ಇದೆಲ್ಲವನ್ನೂ ಇಲ್ಲಿರುವ ಸಿಖ್ಖರು ಸುಳ್ಳಾಗಿಸಿದ್ದಾರೆ.

  • ಹೊರದೇಶದಿಂದ ತಮ್ಮ ನಾಡಿಗೆ ಸಿಗಬಹುದಾದ ಧನ ಸಹಾಯ, ಅದರಿಂದಾಗು ಅಭಿವೃದ್ಧಿಯನ್ನು ಯೋಚಿಸಬೇಕು. ನಮ್ಮ ನಾಡನ್ನ ಪ್ರಗತಿಗೊಳಿಸಲು ಇದೊಂದೇ ದಾರಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅವಕಾಶ ಇದ್ದರೆ, ಅದನ್ನು ಉಪಯೋಗಿಸಿ ನೀವೂ ಉದ್ಧಾರವಾಗುವದಲ್ಲದೆ, ನಿಮ್ಮ ಬಾಂಧವರಿಗೂ ಸಹಾಯ ಮಾಡಬಹುದು. ಅದರಿಂದ ನಿಮ್ಮ ನಾಡನ್ನ ಪ್ರಗತಿ ಪಥದಲ್ಲಿಡಲು ನಿಮ್ಮ ಅಳಿಲು ಸೇವೆಯಾಗುವುದು. ಇದನ್ನೇ ಇಲ್ಲಿರುವ ಸರ್ದಾರ್ಜಿಗಳು ಮಾಡುತ್ತಿರುವುದು. ಅವರು ಇಲ್ಲಿ ಮತ್ತು ನಮ್ಮ ದೇಶದಲ್ಲಿ ತುಂಬಾ ಪ್ರಭಲವಾಗಿ ಬೆಳೆದಿದ್ದಾರೆ. ನಾನು ಇಲ್ಲಿ ವಾಸಿಸುವ ಸ್ಥಳದ ಎಮ್.ಎಲ್.ಎ. ಸಹ ಸರ್ದಾರ್ಜಿ!! ಸರ್ದಾರ್ಜಿಗಳಲ್ಲಿ ಅನೇಕರು "ವಲಸೆ ಸಲಹೆಗಾರ/ವಕೀಲರ" (ಇಮಿಗ್ರೇಶನ್ ಕನ್‌ಸಲ್ಟಂಟ್/ಲಾಯರ್) ವೃತ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರದ ಶಾಸನ, ವಿಧಿ, ವಿಧಾನ, ಸೌಕರ್ಯಗಳನ್ನ ಬಲ್ಲವರಾಗಿರುವ ಇವರು, ಅದನ್ನು ಚತುರವಾಗಿ ಬಳಸಿಕೊಂಡು ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಬೇರೂರಿದ್ದಾರೆ. ಅವರ ಈ ಪ್ರಾಭಲ್ಯತೆಯಿಂದ, ಭಾರತ , ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಗಳ ಮೇಲೆ ಒತ್ತಡ ತರುವ ಶಕ್ತಿ ಅವರಿಗಿದೆ.

    ನೀವು ಬೇರೆ ಬೇರೆ ಅವಕಾಶಗಳಿಗೆ ಕಾತರಿಸುತ್ತಿದ್ದರೆ, ನಿಮ್ಮಲ್ಲಿ ಅಮೇರಿಕಕ್ಕೆ ಕೆಲಸದ ಖಚಿತ ಪ್ರಸ್ತಾಪ/ಒಡಂಬಡಿಕೆ ಇಲ್ಲವೇ ವಿಸಾ, ಗ್ರೀನ್ ಕಾರ್ಡ್ ಇದ್ದರೆ, ನೀವು ಕೆನಡಾ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಅಮೇರಿಕದಲ್ಲಿ ಖಂಡಿತವಾಗಿಯೂ ಹೆಚ್ಚಿನ ಹಣಗಳಿಸಿ, ಉಳಿಸಬಹುದು. ಇಲ್ಲದಿದ್ದರೆ ಕೆನಡಾ ನಿಜವಾಗಿಯೂ ಒಂದು ಒಳ್ಳೆಯ ಆಯ್ಕೆ.

    ಪಿ.ಆರ್. ಪಡೆಯಲು ನೀವು ಯಾವ ವಯಸ್ಸಿನಲ್ಲಿದ್ದರೂ ಸಮಯ ಸಂಧಿಸಿಲ್ಲ. ನನ್ನ ಮನೆ ಮಾಲಿಕ ಸುಮಾರು 15 ವರ್ಷಗಳ ಹಿಂದೆ ಬಂದಿದ್ದರಂತೆ. ಈಗ ಅವರಿಗೆ ಸುಮಾರು 65-70 ವರ್ಷವಿರಬೇಕು. ಅಂದರೆ, ಅವರು 50 ಕ್ಕೂ ಹೆಚ್ಚು ವರ್ಷವಯಸ್ಸಾದಾಗ ಇಲ್ಲಿಗೆ ಬಂದಿದ್ದಾರೆ! ಈಗ ಅವರ ಎಲ್ಲ ಮಕ್ಕಳೂ, ಮಕ್ಕಳ ಪತ್ನಿಯರೂ, ಪತ್ನಿಯರ ಸಹೋದರ ಸಹೋದರಿಯರು, ಅವರ ಪತಿ, ಪತ್ನಿಯರು, ಅವರ ತಂದೆ ತಾಯಿಯರು.. ಹೀಗೆ ಒಂದು ದೊಡ್ಡ ಕುಟುಂಬದ ಸರಪಳಿಯೇ ಇಲ್ಲಿದೆ.

    ಕೆನಡಾ ಸರ್ಕಾರ ಈ ವಿಧೇಯಕಗಳನ್ನ ಯಾವ ಕಾಲಕ್ಕೆ ಬದಲಿಸುವರೋ ಅಥವಾ ಹಿಂತೆಗೆದುಕೊಳ್ಳುವರೋ ತಿಳಿಯದು. ನೀವು ಬದಲಾವಣೆಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ಸಮಯ ವ್ಯಯಿಸಬೇಡಿ. ಇಂದೇ ಇಂಟರ್‌ನೆಟ್ ನಲ್ಲಿ ಪರಿಶೋಧನೆ ಪ್ರಾರಂಭಿಸಿ, ಮನವಿಪತ್ರ ಸಲ್ಲಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ.

    ಈ ವೆಬ್‌ಸೈಟ್ ಗಳೊಂದಿಗೆ ಪ್ರಾರಂಭಿಸಿ.
    http://www.cic.gc.ca/english/faq/index.html#resident
    http://www.cic.gc.ca/english/faq/index.html
    http://www.canadavisa.com/
    http://www.immigrationattorney.ca/ http://www.workopolis.ca

    ಇಲ್ಲಿ ಪ್ರಸ್ತುತಪಡಿಸಿದ ಎಲ್ಲಾ ವಿಷಯಗಳು ನನ್ನ ವಯಕ್ತಿಕ ಅಭಿಪ್ರಾಯ. ಇಲ್ಲಿ ಪ್ರಸ್ತಾಪಿಸಿರುವ ಶಾಸನ ವಿಧಿ ವಿಧಾನಗಳೆಲ್ಲ ಸರಿಯಿವೆ ಎಂಬ ಭರವಸೆ ಕೊಡುವುದಿಲ್ಲ.

    No comments: