Friday, November 10, 2006

ನನ್ನ ಕನ್ಯಾನ್ವೇಷಣೆಯ ಪ್ರಸಂಗಗಳು


- ರಾಜು. ಹಿರೇಗೌಡರ, ಹೆಚ್.ಎಸ್.ಆರ್.ಲೇಔಟ್, ಬೆಂಗಳೂರು


ನಮ್ಮ ನೆಚ್ಚಿನ ಮಿತ್ರ ’ಜೇಮ್ಸ್ ಬಾಂಡ್’ ರಾಜು ಹಿರೇಗೌಡರ ಅವರು ಬಿ.ವಿ.ಬಿಗಾಗಿ , ಬಿವಿಬಿ ಮಿತ್ರರಿಗಾಗಿ ಯಾವಾಗಲೂ ಮಿಡಿಯುವ ಒಬ್ಬ ಸಹೃದಯಿ ಸ್ನೇಹಿತ. ಪ್ರಸ್ತುತ ಐಟಿ ರಂಗದಲ್ಲಿ ’ಟೆಸ್ಟಿಂಗ್’ ಕ್ಷೇತ್ರದಲ್ಲಿ ಸಾಕಷ್ಟು ನೈಪ್ಯಣ್ಯತೆಯನ್ನು ಸಾಧಿಸಿರುವ ಇವರು , ತಮ್ಮ ವಿವಾಹ ಪೂರ್ವ ದಿನಗಳ ಕೆಲವು ವಿನೋದ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.


ಒಮ್ಮೆ ನಾನು ಕಮಡೊಳ್ಳಿಗೆ ಕನ್ಯಾ ನೋಡಾಕ್ಕಂತ ಹೋಗಿದ್ದೆ. ಕನ್ಯಾದ ಮನಿಯವರು ನನ್ನ ಇಂಟ್‌ರ್‌ವ್ಯೂ ಮಾಡಾಕ್ಕಂತ ಬೆಂಗಳೂರಿನಲ್ಲಿ ಎಚ್‌ಏಎಲ್‌ನಲ್ಲಿ ಕೆಲಸ ಮಾಡಿ ರಿಟೈರ್ ಆದ ಒಬ್ಬ ಮನುಷ್ಯಾನ್ನ ಕರಿಸಿದ್ದರು. ಹಂಗ ಮೊದಲು ನನ್ನ ಪರಿಚಯ ಮಾಡಿಕೊಟ್ಟ ಮೇಲೆ ನಮ್ಮ ಮಾತು ಕತೆ ಹೀಗೆ ಮುಂದುವರಿದಿತ್ತು.

ಬೆಂಗಳೂರ್ ಸ್ಪೆಷಲಿಸ್ಟ್ : ಸರ್, ನೀವು ಯಾವ ಫ್ಯಾಕ್ಟರಿ ಒಳಗ ಕೆಲಸ ಮಾಡತಿರಿ?

ನಾನು : ರೆಲ್-ಕ್ಯೂ ಸಾಫ್ಟ್‌ವೇರ್ ಅಂತರಿ.
ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಈಗ ಎಷ್ಟು ವರ್ಷ ಆತ್ರಿ ಅಲ್ಲಿ ಕೆಲಸ ಮಾಡಕ ಹತ್ತ??
ನಾನು : ಒಂದುವರಿ ವರ್ಷ ಸರ್..
ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಪಗಾರ ಎಷ್ಟು ಕೊಡತಾರ್ರಿ ನಿಮಗ??
ನಾನು : ಹದಿನಾಲ್ಕು ಸಾವಿರ್ ರೂಪಾಯಿರಿ ಸರ್.
ಬೆಂಗಳೂರ್ ಸ್ಪೆಷಲಿಸ್ಟ್ : ಅದೇನ್ ವರ್ಷದ ಪಗಾರ್ ಏನ್ರಿ, ಏನ್ ಮೂರ ತಿಂಗಳಿಗೊಮ್ಮೆನೊ ಇಲ್ಲಾ ಆರ ತಿಂಗಳಿಗೊಮ್ಮೆನೊ??

ನಾನು : ಇಲ್ಲರಿ ಇದು ಒಂದ ತಿಂಗಳ ಪಗಾರ್ರಿ..!
ನನ್ನ ಉತ್ತರ ಕೇಳಿ ಅವರು ಅಲ್ಲೇ ತಬ್ಬಿಬ್ಬು..!

- ೦-
ಇನ್ನೊಮ್ಮೆ ನಾನು ಬೇರೊಂದು ಕನ್ಯಾ ನೋಡಾಕ ಭದ್ರಾವತಿಗೆ ಹೋಗಿದ್ದೆ. ಆ ಕನ್ಯಾ ನನಗ ಮತ್ತು ನಮ್ಮ ಮನಿಯವರಿಗೆಲ್ಲಾ ಭಾಳ ಮನಸ್ಸಿಗೆ ಬಂದಿತ್ತು. ಹುಡುಗಿ ಅಪ್ಪಾ ದೊಡ್ಡ ಮನುಷ್ಯಾ..ಅವಾ ಒಂದು ಸ್ಕೂಲ್ ಸಹಾ ನಡೆಸುತ್ತಿದ್ದ, ಆದರ ಅವನಿಗೆ ಅದು ಹೇಗೊ ಏನೋ ನನಗೆ ಬ್ರೋಂಕೈಟಿಸ್ ಪ್ರಾಬ್ಲಮ್ ಇದ್ದದ್ದು ಗೊತ್ತ ಆಗಿತ್ತು. ಆದ್ರ ನನಗ ಅವನಿಗೆ ಗೊತ್ತ ಐತಿ ಅಂತಾ ಗೊತ್ತ ಇರಲಿಲ್ಲ. ಅವ್ರು ನನ್ನ ಟೆಸ್ಟ್ ಮಾಡಾಕ ಅಂತಾ ಒಂದ ಸಲಾ ಬೆಂಗಳೂರಾಗ ಒಂದ ಹೊಟೆಲ್‌ಗೆ ಬಾ ಅಂತಾ ಹೇಳಿದರು. ಬೇಕಂತಲೇ ಅವತ್ತ ಬೋಂಡಾ, ವಡಾ ಆರ್ಡರ್ ಮಾಡ್ಯಾರ. (ಎಣ್ಣೆಯಲ್ಲಿ ಕರಿದಿದ್ದ ಪದಾರ್ಥಗಳನ್ನು ತಿಂದರ ಬ್ರೋಂಕೈಟಿಸ್ ಇದ್ದವರಿಗೆ ಪ್ರಾಬ್ಲಮ್ ಆಗತೈತಿ ಅಂತಾ ಹಂಗ ಮಾಡಿದಾರ) ಆವತ್ತ ನನ್ನ ಹೊಟ್ಟೆ ಹಸಿದಿದ್ದಿಲ್ಲ. ಮತ್ತ ಬ್ಯಾರೆ ಮಂದಿ ಮುಂದ ಹೆಂಗ ತಿನಬೇಕು ಅಂತಾ ನಾನು ಒಲ್ಲೆ ಅಂದೆ. (ಆದ್ರ ಖರೇನ ತಿನ್ನಾಕ ನನಗ ಮನಸ್ಸು ಇತ್ತು.) ನಾನು ಇಲ್ಲಿ ಬೆಂಗಳೂರಾಗ ತಿನ್ನಲಿಲ್ಲ ಅಂತ ಹೇಳಿ ಮತ್ತೊಮ್ಮೆ ಟೆಸ್ಟ್ ಮಾಡಾಕ ನನಗ ಭದ್ರಾವತಿಗೆ ಬರಾಕ ಹೇಳಿದರು.
ನಾನೂ ಒಮ್ಮೆ ಫಿಕ್ಸ್ ಆಗುಕಿಂತ ಮೊದಲು ಒಂದ ಸಲಾ ಈ ಹುಡಗೀನ್ನ ಮಾತಾಡಸೋಣ ತಡಿ ಅಂತ ಅಂದುಕೊಂಡು ಹೂಂ ಅಂದೆ. ಒಂದ ಶನಿವಾರದ ದಿನ ಭದ್ರಾವತಿಗೆ ಹೋದೆ. ಹುಡುಗಿ ಮನ್ಯಾಗ ಬರೀ ಎಣ್ಣೆಯಲ್ಲಿ ಕರದಿದ್ದ ಊಟ. ಹೋಳಗಿ, ಶಂಡಗಿ, ಹಪ್ಪಳ ಇತ್ಯಾದಿ....ಮಾಡಿದ್ರು. ನಾನು ಊಟ ಮಾಡಿದೆ. ಹುಡುಗಿ ಅಪ್ಪಾ ನನ್ನನ್ನು ನೊಡಾಕ ಹತ್ತಿದ್ದಾ..!
ನನಗ ಏನರೆ ಆಗತೈತೇನು ಅಂತ. ಆದರ ನನಗ ಏನೂ ಆಗದೆ ಇದ್ದದ್ದು ನೋಡಿ ಅವಾ ಅಲ್ಲೇ ಬೆಸ್ತು ಬಿದ್ದಾ..!
ಆಮ್ಯಾಲ ಹುಡುಗಿ ಮಾತಾಡ್ಸಿ ನನ್ನ ಬಗ್ಗೆ ಎಲ್ಲ ಹೇಳಿದೆ, ನಾ ಹಿಂಗ ಹಂಗ ಅಂತ. ಹುಡ್ಗಿಗೆ ಅವಳ ಒಪೀನಿಯನ್ ಕೇಳಿದೆ ಮ್ಯಾರೇಜ್ ಬಗ್ಗೆ. ಅವಳು ಹೂಂ ಅಂದ್ಲು. ನನಗ ಯಾಕ ಡೌಟ್ ಬಂತು. ಅದಕ ನನ್ನ ಮೊಬೈಲ್ ನಂಬರ್ ಕೊಟ್ಟು, ಏನಾರ ಇದ್ರ ಫೋನ್ ಮಾಡು ಅಂತ ಹೇಳಿ ಬಂದೆ.

ಎರಡ ದಿವಸ ಆದ ಮ್ಯಾಲೆ ಹುಡುಗಿ ಕಡೆಯಿಂದ ಫೋನ್ ಬಂತು. "ಏನಂದ್ರ, ನೀವ ಇಷ್ಟೆಲ್ಲ ಫ್ರಾಂಕ್ ಆಗಿ ಹೇಳಿದ್ದಕ್ಕ ನನ್ಗೂ ನನ್ನ ಬಗ್ಗೆ ಫ್ರಾಂಕ್ ಆಗಿ ಹೇಳಬೇಕು ಅಂತ ಐತೆ" ಅಂದ್ಲು. ನಾ ಓಕೆ ಹೇಳ್ರಿ ಅಂದೆ. ಆವಾಗ ಅವ್ಳು "ನಾ ಒಂದ ಹುಡುಗನ್ನ ಲವ್ ಮಾಡಿದ್ದೆರಿ" ಅಂದ್ಳು. ನಾ ಹೇಳ್ದೆ " ಹೌದ..ನಿಮ್ಮ ಲವ್ ಕಂಟಿನ್ಯೂ ಆಗೈತೋ ಇಲ್ಲೊ ಹೇಳ್ರಿ". ಅದಕ್ಕ ಅವಳು "ಈಗ ಏನ್ ಇಲ್ಲ, ಆದ್ರ ಹುಡುಗ ಇನ್ನೂ ನನ್ನ ಬಿಟ್ಟಿಲ್ಲ , ನನ್ನ ಮದ್ವಿ ಆಗಬೇಕು ಅಂತಾನ. ನಂದೂ ನಿಮ್ದೂ ಏನಾರ ಮದ್ವಿ ಫಿಕ್ಸ್ ಆಗಿ ಎಂಗೇಜ್‌ಮೆಂಟ್‌ನ್ಯಾಗ ಅಥವಾ ಮದ್ವಿ ಒಳಗ ಅವ ಬಂದು ಗಲಾಟಿ ಮಾಡಬಹುದು ಅನಸ್ತೈತಿ" ಅಂದ್ಲು. ನಿಮಗ ಹಂಗ ಆಗೋದು ಬ್ಯಾಡ ಅಂದ್ರ ಮನೀಲಿ ಬ್ಯಾರೆ ಏನೋ ಹೇಳಿ ಇದನ್ನ ಕ್ಯಾನ್ಸಲ್ ಮಾಡಸರ್ರಿ ಅಂದ್ಲು.

ಆಮೇಲೆ ಎನ್ಕ್ವೈರಿ ಮಾಡಿದರ ಗೊತ್ತಾತು ಅವಳ್ಗೆ ಇನ್ನೂ ಅವನ ಮದವಿ ಆಗ ಬೇಕು ಅಂತ ಐತೆ ಅಂತ. ಕಡೀಕ ಮುಂದ ಹೋಗುವದು ಬ್ಯಾಡ ಅಂತ ಹೇಳಿ ಅದನ್ನ ಕ್ಯಾನ್ಸಲ್ ಮಾಡಿದ್ವಿ.
ಇದಾ ತರ ನಾ ಮನಸ್ ಮಾಡಿದ್ದ ಮೂರು ಕನ್ಯಾ ಕ್ಯಾನ್ಸಲ್ ಆದ್ವರಿ. ಈಕಿ ಒಬ್ಬಾಕಿನ ನಂಗ ಡೈರೆಕ್ಟ್ ಹೇಳಿದಳು, ಉಳಿದವ್ರದು ಬ್ಯಾರೆ ಕಡೀಂದ ಸುದ್ದಿ ಬಂದು ಕ್ಯಾನ್ಸಲ್ ಆತರಿ. ಒಟ್ಟ ಮೂರ್ ಸರಿ ಜೀವಂತ್ ಹೆಣ ಆಗೋದು ತಪ್ಪಿತು ನೋಡ್ರಿ.. !.

- ೦-
ಕಡೇಕ್ಕ ವೇದಾ ಹೆಂಗ ನಂಗ ಸಿಕ್ಕಳು ಹೇಳತೇನಿ ಕೇಳ್ರಿ.. !
ಒಂದ ಈ-ಮೇಲ್ ಐ.ಡಿ ಸಂಬಂಧ ವೇದ ನನಗ ಸಿಕ್ಕ್ಲು ಅಂದ್ರ ನಂಬ್ತೀರೇನು??
ನಾ ಐ-ಫ್ಲೆಕ್ಸ್ ಪ್ರಾಜೆಕ್ಟ್ ಮುಗಸಿ ರೆಲ್‌ಕ್ಯೂನ್ಯಾಗ ಕಾಲಿ ಅಡ್ಡಾಡತ್ತಿದ್ದಿನ್ರಿ, ಏನ್ರ ಕೆಲ್ಸ ಹಚ್ಗೊಳ್ಳೊನು ತಡಿ ಅಂತ, ನನಗ ಹೆಂಗ ಇದ್ರು ರೆಲ್ಕ್ಯೂ ಮೈಲ್ ಐ.ಡಿ ಇದ್ದಿದ್ದಿಲ್ಲ ಅದನ್ನರ ತಗೊಳ್ಳೊನು ಅಂತ ನಮ್ಮ ಅಡ್ಮಿನ್ ಮಂಜುನಾಥನ್ನ ಕೇಳಿದೆ.
ಅವರು ಅದಕ್ಕ ನೀ ಒಂದ ಈ-ಮೇಲ್ ರಿಕ್ವಿಸಿಶನ್ ಫಾರ್ಮ್ HR ಕಡೆ ಇಸಕೊಂಡು ಅವ್ರ ಸೈನ್ ಮಾಡ್ಸಿ ನನ್ಗ ಕೊಡರಿ, ಆಮೇಲೆ ನಾ ಐ.ಡಿ ಕ್ರಿಯೇಟ್ ಮಾಡತೇನಿ ಅಂತ ಹೇಳಿದ್ರು.
ಆತು ಅಂತ ನಮ್ಮ HR ಇರೊ ಆಫೀಸ್‌ಗೆ ಮಾರನೇ ದಿವಸ ಹೋಗಿ HR ಭೇಟಿ ಆಗಿ ಫಾರ್ಮ್ ಕೇಳ್ದೆ, ಅವನು ನನ್ನ ಕಡೆ ಫಾರ್ಮ್ ಇರೋದಿಲ್ಲ, ಅದೆಲ್ಲ ಅಡ್ಮಿನ್ ಕಡೇನ ಇರತವ ಅಂದ , ನನ್ನ ಪುಣ್ಯಕ್ಕ ಮಂಜುನಾಥ್ ನನ್ನ ಹಿಂದೇನ ಇದ್ದ , ಅವ ಯಾವ್ದೋ ಕೆಲ್ಸಕ್ಕ್ HR ಭೇಟಿಗೆ ಬಂದಿದ್ದ. ನಾ ಅವ್ರ ನೋಡಿ, ಸರ್ ಇವ್ರ ಕಡೆ ಆ ಫಾರ್ಮ್ ಇಲ್ಲ ಅಂತ ಅಂದೆ. ಆದಕ್ಕ ಅವ್ರು ತಮ್ಮ ಜೂನಿಯರ್‍ಗೆ ಹೇಳಿ ಅವ್ರ ಕಡೆ ಇದ್ದ ರೆಫರೆನ್ಸ್ ಫಾರ್ಮ್ ಕೊಟ್ಟು ಇದನ್ನ ಫಿಲ್ ಅಪ್ ಮಾಡಿ ಸೈನ್ ತೊಗೊಂಡು ಬರ್ರಿ ಅಂದ್ರು. ನಾ ಆತ್ರಿ ಅಂತ ಫಿಲ್ ಮಾಡಿ HR ಕಡೆ ತಗೊಂಡು ಹೋದೆ. HR ಏನೇನೋ ಕತಿ ಹೇಳಿ ನನ್ಗ ಸೈನ್ ಮಾಡಲಾರ್‍ದ ವಾಪಸ್ ಕಳಿಸಿದ.

ಬಾಗಲ್‌ದಾಗ ಮಂಜುನಾಥ್ ಕಾಯ್ತಾ ಇದ್ದರ, ನನ್ನ ನೋಡಿದವ್ರ ಎಲ್ರಿ ಫಾರ್ಮ್ ಕೊಡ್ರಿ, ನಾ ಈಗ ಕ್ರಿಯೇಟ್ ಮಾಡತೇನಿ ಅಂದ್ರು, ನಾ ಆಗಿದ್ದೆಲ್ಲ ಹೇಳ್ದೆ. ಅದ್ಕ ಅವರು ಹೀಗೆ ರಿ ಇವ್ರು ಯಾರನ್ನೂ ಚೆನ್ನಾಗಿ ನೋಡ್ಕೊಳ್ಳಲ್ಲ, ಅದಕ್ಕೆ ಎಲ್ರೂ ಈ ಕಂಪೆನಿ ಬಿಟ್ಟು ಬ್ಯಾರೆ ಕಡೆ ಹೊಂಟಾರ, ಮತ್ತ ಎಲ್ಲಿ ಚೊಲೊ ನೋಡಕೊಂತಾರೊ ಅಲ್ಲೆ ಹೊಗತಾರ , ನಮ್ಮ ಕಡೆ ಹಿಂಗ ಮನಿ ಮಾಡೋಕಿಂತ ಮೊದ್ಲ ಆ ಏರಿಯಾದಾಗಿನ ಜನ ಚೆನ್ನಾಗಿ ಇದ್ದಾರೊ ಇಲ್ಲೊ ಅಂತ ನೋಡಕೊಂಡ ಮನಿ ಮಾಡತಾರ ಅಂದ್ರು. ನಾ ಅವ್ರ್ನ ಕೇಳ್ದೆ "ನಿಮ್ದು ಯಾವ್ ಊರ್ ಸರ್?" ಅಂತ, ಅವರಂದ್ರು ನಮ್ದು ಭದ್ರಾವತಿ ಅಂತ. ನಾ ಒರಿಜಿನಲ್ ಭದ್ರಾವತೀನ ಸರ್ ಅಥವಾ ಬ್ಯಾರೆ ಅದ್ರ ಹತ್ರದ ಊರ ಅಂತ ಕೇಳ್ದೆ. ಅದಕಾ ಅವರು ನಮ್ದ ಭದ್ರಾವತೀನ ನೀವ ಯಾವಗಾರೆ ಅಲ್ಲಿ ಬಂದಿದ್ರೇನು ಅಂತ ಕೇಳಿದ್ರು. ನಾ ಅಂದೆ ಭಾಳಷ್ಟ್ ಅಲ್ಲ ಸರ್ ಕನ್ಯ ನೋಡಕ ಅಂತ ಬಂದಿದ್ದೆ. ಅದಕ ಅವರು ನಿಮ್ಮ ಮದ್ವಿ ಆಗಿಲ್ಲೇನ್ರಿ ಇನ್ನು ಅಂತ ಕೇಳಿದ್ರು. ಇಲ್ಲರಿ ಕನ್ಯ ಹುಡಕಾಕ ಹತ್ತೇನಿ ಅಂದೆ. ನಿಮ್ಮ ಕ್ಯಾಸ್ಟ್ ಯಾವದ್ರಿ ಅಂದ್ರು. ಹೇಳ್ದೆ.....ಬರ್ರಿ ಇಲ್ಲೆ ಒಂದ ನಿಮಿಷ ಅಂದೋರ ನನ್ನ ಅವರ್ ಕ್ಯಾಬಿನ್‌ಗೆ ಕರಕೊಂಡ ಹೋಗಿ ಒಂದ್ ಫೋನ್ ಮಾಡೇ ಬಿಟ್ರು.. ಫೋನ್ ಮಾಡಿದ್ದು ಯಾರಿಗೆ ಅಂದ್ರ ನನ್ನ ಹೆಣ್ತಿ ಅಕ್ಕಗ .... ಆಮೇಲೆ ನಾ ವೇದನ್ನ ನೋಡಿ ಮಾತು ಕತಿ ಎಲ್ಲಾ ಆಗಿ ನನ್ನ ಮದ್ವಿ ಆಗೇ ಹೋತು.. . !
ಹಿಂಗ ಜಸ್ಟ್ ಒಂದ ಈ ಮೇಲ್ ಐ.ಡಿ ಸಲುವಾಗಿ ನನ್ನ ಮದ್ವಿ ಆತು ನೋಡ್ರಿ.. !

Tuesday, November 07, 2006

ಈಗಿನ ಜೀವನಾನ ಆರಾಮ್ ಐತಿ..ಮುಂದಿಂದು ಇನ್ನೂ ಕಠಿಣ ಇರಬಹುದು.. !

- ತಾಹೀರ್ ಏ. ಸನದಿ. ಬೆಂಗಳೂರು

ನಮ್ಮ ಬಳಗದ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ತಾಹೀರ್ ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಬೆಳಗಾವಿ ಹಾಗೂ ಧಾರವಾಡ ಜಿಲ್ಹೆಗಳಲ್ಲಿ. ಚಿಕ್ಕಂದಿನಿಂದಲೂ ಇದ್ದ ಟೇಬಲ್ ಟೆನ್ನಿಸ್ ಆಡುವ ಹವ್ಯಾಸ ಇವರನ್ನು ಕರೆತಂದಿದ್ದು ಧಾರವಾಡಕ್ಕೆ. ಅಲ್ಲಿ ಈ ಕ್ರೀಡೆಯಲ್ಲಿ ಸಾಕಷ್ಟು ಕೃಷಿ ಮಾಡಿದ ತಾಹೀರ್ ಅದರಲ್ಲಿ ಗಣನೀಯ ಯಶಸ್ಸನ್ನು ಕಂಡರು. ಜೆ.ಎಸ್.ಎಸ್. ಕಾಲೇಜು, ಧಾರವಾಡ ಹಾಗು ಹುಬ್ಬಳ್ಳಿಯ ಬಿ.ವಿ.ಬಿ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ತಾಹೀರ್ ಟೆಬಲ್ ಟೆನ್ನಿಸ್‌ನಲ್ಲಿ ರಾಜ್ಯ ಮಟ್ಟದ ಆಟಗಾರನಾಗಿ ಬೆಳೆದು ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಾಕಷ್ಟು ಸಲ ಪ್ರತಿನಿಧಿಸಿದ್ದಾರೆ. ಕಳೆದ ಸುಮಾರು ಒಂದು ದಶಕದಿಂದ ಸಾಫ್ಟವೇರ್ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಈಗ ಮುದ್ದಿನ ಮಡದಿ ಶ್ರೀಮತಿ ನೂರ್ ಹಾಗೂ ತಮ್ಮ ಅಯಾನ್‍ನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಗಿನ ಜೀವನ ಆರಾಮ್ ಐತಿ..ಮುಂದಿನ ಜೀವನ ಕಠಿಣ ಇರಬಹುದು”ಅಂತ ನಾ ಹೆಂಗ ನನ್ನ attitude ಬದಲ ಮಾಡಕೊಂಡೆ ಅಂತ ತಿಳಸಾಕ ಒಂದು ಸಣ್ಣ ಬರಹ.

ಮೊದಲು I-flex Soultions ಸೇರಿದಾಗ ಬೆಂಗಳೂರಿನಲ್ಲಿ ನಾನು ಗ್ಲೋಬಲ್ ಸಪೋರ್ಟ್‌ನಲ್ಲಿ ಸಪೋರ್ಟ್ ಟೀಮ್ ಮೆಂಬರ್ ಅಂತ ಆಗಿದ್ದೆ. ಆಗ ಇಲ್ಲಿ ಕೆಲಸದ ಒತ್ತಡ ಅಷ್ಟೇನೂ ಭಾಳ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಓಕೆ.. ನಾಲ್ಕಾರು ಜನ ಸೀನಿಯರ್ಸ್ ಒಟ್ಟಿಗೆ ಇರತಿದ್ದರು, ನನ್ನ ಕೈಯಾಗ ಎಷ್ಟು ಆಗತ್ತಿತ್ತೊ ಅಷ್ಟು ಮಾಡಿ ಇಲ್ಲಂದ್ರ ಅವ್ರಿಗೆ ಕೇಳೋದು. ಹಿಂಗ ನಡತಿತ್ತು ಜೀವನ.

ಆಮ್ಯಾಲೆ ಬಂತು ನೋಡ್ರಿ first assignment to Jhakartha .. ! ಇಲ್ಲಿ ಮಾತ್ರ ನಾನೊಬ್ಬನೇ 3 sites ನೋಡಿಕೊಳ್ಳಬೇಕಾಗಿತ್ತು. ಹೇಳೋವ್ರು ಕೇಳೋವ್ರು ಅಂತಾ ಯಾರೂ ಇರಲಿಲ್ಲ. ಆದ್ರ ಕೆಲಸ ಸ್ವಲ್ಪ ಒತ್ತಡ ತರುತ್ತಿತ್ತು. ಯಾಕಂದ್ರ ಒಬ್ಬನೆ ಇದ್ದೆ ನೋಡ್ರ್ರಿ. ಏನಾರ ಜಾಸ್ತಿ ಪ್ರಾಬ್ಲಮ್ ಆದ್ರ ಸತ್ತೇನೊ ಬದುಕೇನೋ ಅಂತ ಕೇಳಾಕ್ಕ ಸೈತ ಯಾರೂ ಇರಲಿಲ್ಲ. ಇಂಡಿಯಾಕ್ಕ್ ಫೋನ್ ಮಾಡಿ ಕೇಳಬೇಕಾಗತಿತ್ತು. ಆವಾಗ ನಾ ವಿಚಾರ್ ಮಾಡತಿದ್ದೆ “ಎಲಾ ಇವನ ಇಂಡಿಯಾದಾಗ ಎಷ್ಟೋ ಆರಾಮ್ ಇದ್ದೆ, ಇದ ಒಳ್ಳೇ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ”.

ಆಮ್ಯಾಗ ಬಂತು ಮುಂದಿನ ಅಸೈನ್‌ಮೆಂಟ್ ಮಲೇಶಿಯಾಕ್ಕ. ಕಸ್ಟಮರ್ ಮತ್ತ ಸಪೋರ್ಟ್ ಕೆಲಸ almost round the clock ನಡೀತಿತ್ತ. ವೀಕೆಂಡ್ಸ್ ಕೂಡ ಕೆಲಸ ಮಾಡಬೇಕಾಗಿತ್ತು. ಆಮ್ಯಾಲೆ ನಮ್ಮ ಹೊಸ ಪ್ರಾಡಕ್ಟ್ flexcubeಗೆ ಮೈಗ್ರೇಶನ್ ಬ್ಯಾರೇ ಶುರು ಆತು. ಹಿಂಗಾಗಿ ಮೈಗ್ರೇಶನ್ ಮತ್ತು ಸಪೋರ್ಟ್ ಎರಡೂ ನೋಡಕೊಬೇಕಾಗಿತ್ತು. ಕೆಲಸ ಭಾಳ್ ಅನಸ್ತಿತ್ತು. ಆವಾಗ್ ನನಗ ಅನಸಾಕ ಶುರು ಅತು..” ಎಲಾ ಇವನ.. ಝಕಾರ್ತದಾಗ ಎಷ್ಟ್ ಆರಾಮ್ ಇದ್ದೆ, ಇಲ್ಲಿ ಬಂದು ಒಳ್ಳೇ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ” ಅಂತ.

ಇನ್ನ ನೋಡ್ರಿ.. ಮುಂದಿನ ಅಸೈನ್‌ಮೆಂಟ್ ಆಫ್ರಿಕಾದಾಗ PM ಆಗಿ ಹೋಗು ಅಂದರು. ಈಗಂತೂ ತಲಿ ಒಡಕೊಳ್ಳುದು ಒಂದ ಬಾಕಿ. “ಇದೇನಪಾ ಪೂರ್ತಿ ಜವಾಬ್ದಾರಿ ಬಂದ್ ಬಿಟ್ತಲ್ಲ ಅಂತ.....ಝಕಾರ್ತ, ಮಲೇಶಿಯಾದಾಗ ಎಷ್ಟೋ ಆರಾಮ್ ಇತ್ತು ಇದೊಳ್ಳೆ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡೆ” ಅಂತ ಅಂದುಕೊಂಡೆ.

ಒಂದ ದಿನ ಹೀಂಗ ಕುಂತ ವಿಚಾರ ಮಾಡಿದೆ with flashback...! ಪ್ರತಿ ಹೊಸ ಅಸೈನ್‌ಮೆಂಟ್ ಸಿಕ್ಕಾಗನೂ ಹಿಂದಿನ ಅಸೈನ್‌ಮೆಂಟ್‌ನ ಚಲೊ ಇತ್ತು ಅನ್ನಸತಿತ್ತು. ಹಿಂಗಾದ್ರ ಸ್ವಲ್ಪ ತಡಿ ನಮ್ಮ attitudeನ ಚೇಂಜ್ ಮಾಡಿ ಬಿಡೊಣು ಅಂತ. ಇನ್ನ ಮ್ಯಾಲಿಂದ ಹೆಂಗ ವಿಚಾರ್ ಮಾಡೋದು ಅಂದ್ರ “ಈಗಿನ ಅಸೈನ್‌ಮೆಂಟ್ ಭಾಳ ಚಲೊ ಐತಿ, ಯಾಕಂದ್ರ ಮುಂದಿನ ಅಸೈನ್‌ಮೆಂಟ್ ಇದಕ್ಕಿಂತ ಕಠಿಣ ಇರತೈತಿ” . So ಅವತ್ತಿಂದ ನಾನು ಈ ಹೊಸಾ ಅಸೈನ್‌ಮೆಂಟ್‌ಗಳ ಬಗ್ಗೆ ಟೆನ್ಸನ್ ತುಗೊಳ್ಳುದು ಬಿಟ್ಟೆ. ಅದಕ್ಕ ನಾನು ನಿಮಗಾದರೂ ಹೇಳತೆನಿ.. “Don’t worry , be happy….. enjoy the current assignment..current day.. not the future..!”.

Saturday, November 04, 2006

ಕೆನಡಾ! ಕೆನಡಾ!!


ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ

ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಭಾರತ, ಸ್ವಿಟ್ಜರ್-ಲ್ಯಾಂಡ್, ಸೌತ್-ಆಫ್ರಿಕಾ ಮತ್ತು ಅಮೇರಿಕಾ ದೇಶಗಳಲ್ಲಿ ತಮ್ಮ ವೃತ್ತಿ ಜೀವನವನ್ನ ನಡೆಸಿದ ಇವರು, ಈಗ ಕೆನಡಾದಲ್ಲಿ ನೆಲೆಸಿದ್ದಾರೆ.





ಸುಮಾರು ೧೮ ತಿಂಗಳುಗಳಿಂದ ಕೆನಡಾಕ್ಕೆ ವಲಸೆಗಾಗಿ ಕಾಣುತ್ತಿದ್ದ ಕನಸು ಕೊನೆಗೂ ನನಸಾಯಿತು. ನಿರೀಕ್ಷೆಗೂ ಮೀರಿ, ನಾವು ಇಲ್ಲಿಗೆ ಬರುವ ಮೊದಲೇ ನನ್ನ ಕೆಲಸವೂ ಖಚಿತಗೊಂಡಿದ್ದರಿಂದ, ಏನೂ ತೊಂದರೆ ಇಲ್ಲದೇ ಬ್ರಿಟೀಶ್ ಕೊಲಂಬಿಯಾ ಪ್ರಾಂತದ, ವ್ಯಾಂಕೂವರ್ ನಗರದಲ್ಲಿ ಜೀವನ ಆರಂಭಿಸಿದೆವು.

ನಾವು ಇಲ್ಲಿಗೆ ಬಂದಾಗ, ಕೆಲ ವಿಸ್ಮಯಗಳು ನಮ್ಮನ್ನ ಸ್ವಾಗತಿಸಿದವು. ಅದರಲ್ಲಿ ಮುಖ್ಯವಾಗಿ, ಇಲ್ಲಿನ ಭಾರತೀಯರ ಜನಸಂಖ್ಯೆ, ಅದರಲ್ಲೂ ಸಿಖ್ಖರ ಜನಸಂಖ್ಯೆ. ಬಂದ ಮೇಲೆ ಅನೇಕ ದಿನಗಳು ನಮಗೆ ಸರದಾರ್ಜಿಗಳನ್ನ ಬಿಟ್ಟರೆ ಬೇರೆಯವರೊಡನೆ ವ್ಯವಹರಿಸುವ ಸಂದರ್ಭವೇ ಬರಲಿಲ್ಲ!! ಬಂದಿಳಿದ ಕೂಡಲೇ, ವಿಮಾನ ನಿಲ್ದಾಣದಲ್ಲಿ ನಮ್ಮ ಸಾಮಾನುಗಳನ್ನು ಎತ್ತಿಹಾಕಲು ಸಹಾಯಕ್ಕೆ (ಪೊರ್ಟರ್) ಬಂದವನು ಸರ್ದಾರ್ಜಿ, ಟ್ಯಾಕ್ಸಿ ಕರೆದಾಗ ಬಂದವನು ಸರ್ದಾರ್ಜಿ, ಬಂದಿಳಿದ ತಕ್ಷಣ ಇಳಿದುಕೊಳ್ಳಲು ಒಂದು ತಂಗುದಾಣದಲ್ಲಿ (ಮೋಟೆಲ್) ಕೊಠಡಿಯೊಂದನ್ನ ಕಾಯ್ದಿರಿಸಿದ್ದೆ, ಅಲ್ಲಿ ಹೋಗಿ ನೋಡಿದರೆ, ಅದರ ಮಾಲೀಕ ಸರ್ದಾರ್ಜಿ. ಕಾರು ಬಾಡಿಗೆ (ರೆಂಟಲ್ ಕಾರ್) ಮಾಡಲು ಎಂಟರ್ ಪ್ರೈಸ್ ಕಾರ್ ರೆಂಟಲ್ ಎಂಬ ಪ್ರಸಿದ್ಧ, ಕಂಪನಿಯ ಆಫೀಸ್‌ಗೆ ಹೋದೆ. ಅಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತ(ಕ್ಲರ್ಕ್)ನೂ ಸರ್ದಾರ್ಜಿ. ಎರಡು ದಿನದ ಬಳಿಕ ನಮಗಿಷ್ಟವಾಗುವಂತ ಬಾಡಿಗೆ ಮನೆ ಸಿಕ್ಕಿತು. ಅದರ ಒಡೆಯನೂ ಸರ್ದಾರ್ಜಿ. ಮಾರನೇ ದಿನ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಹೋದೆ, ಅಲ್ಲಿ ಒಬ್ಬ ಚೈನಾದ ವ್ಯಕ್ತಿಯನ್ನು ಬಿಟ್ಟರೆ ಮಿಕ್ಕವರೆಲ್ಲ- ಮ್ಯಾನೇಜರ್ ನಿಂದ ಹಿಡಿದು ಎಲ್ಲರೂ ಭಾರತೀಯರು!! ಒಂದು ವಾರದ ಬಳಿಕ ನಾನು ಕೆಲಸಕ್ಕೆ ಹಾಜರಾದೆ, ಅಲ್ಲಿ ಬಂದ ನಂತರ ನನಗೆ ಗೊತ್ತಾಯಿತು, ನನ್ನ ಮ್ಯಾನೇಜರ್ ಕೂಡ ಸರ್ದಾರ್ಜಿ!!!

ನಾನು ಈ ಮೇಲಿನ ತುಣುಕನ್ನು, ನನ್ನವರಿಗೆಲ್ಲ ಈ-ಮೈಲ್ ಬರೆದು ತಿಳಿಸಿದಾಗ, ಬಹಳಷ್ಟು ಸ್ನೇಹಿತರು ಸರದಾರ್ಜಿ ಜೋಕ್ಸ್‌ಗಳನ್ನು ಜ್ಞಾಪಿಸಿಕೊಂಡರು. ನಾನೂ ನಕ್ಕು ಸುಮ್ಮನಾಗಿದ್ದೆ. ಆದರೆ ಕಾಲ ಕ್ರಮೇಣ ಯೋಚಿಸಿದಾಗ ಇದು ಹಾಸ್ಯ ಚಟಾಕಿ ಮಾಡಿ ಮರೆತುಬಿಡುವ ವಿಷಯವಲ್ಲ ಎನಿಸತೊಡಗಿತು. ಸಿಖ್ಖರು ಇಲ್ಲಿ ಬೆಳೆದು, ಅಭಿವೃದ್ಧಿ ಹೊಂದಿರುವುದು ಕಲ್ಪಿಸಲಸಾಧ್ಯವಾದುದು. ಇಲ್ಲೊಂದು ಮಿನಿ ಪಂಜಾಬನ್ನೇ ಅವರು ಸೃಷ್ಠಿಸಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ನಾವು ಕನ್ನಡಿಗರೂ ಈ ದಿಶೆಯಲ್ಲಿ ಪರಿಶೋಧಿಸಿ, ಒಳಿತು-ಕೆಡುಕುಗಳ ಬಗ್ಗೆ ಸಮಾಂತರವಾಗಿ ಪರಾಮರ್ಷಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎನಿಸತೊಡಗಿತು.

ಸಿಖ್ಖರು ಇಲ್ಲಿ ಎಲ್ಲಾ ಕಡೆಗಳಲ್ಲಿಯೂ, ಎಲ್ಲಾ ತರಹದ ವ್ಯವಹಾರ, ವ್ಯಾಪಾರ, ಕೆಲಸಗಳಲ್ಲಿ ತೊಡಗಿದ್ದಾರೆ. ತಮ್ಮ ನಾಡಿನಲ್ಲಿರುವಂತೆಯೇ ಇಲ್ಲಿಯೂ ತಮ್ಮ ವೈಯಕ್ತಿಕ, ಧಾರ್ಮಿಕ ಮತ್ತು ವ್ಯಾವಹಾರಿಕ ಜೀವನವನ್ನು ತಮ್ಮ ತಂದೆ, ತಾಯಿ, ಸಹೋದರ, ಸಹೋದರಿ, ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ನಡೆಸುತ್ತಾರೆ. ಅಮೇರಿಕದಲ್ಲಿರುವ ಭಾರತೀಯ ಸಂಜಾತರಂತೆ, ಇಲ್ಲಿರುವ ಭಾರತೀಯರು ಕೇವಲ ಉನ್ನತ ಮಟ್ಟದ ಕೆಲಸ ಕಾರ್ಯಗಳಲ್ಲಿ ಮಾತ್ರ ತೊಡಗಿಲ್ಲ. ಇವರು ಎಲ್ಲಾ ತರಹದ ಕೆಲಸ, ವ್ಯವಹಾರಗಳಲ್ಲಿದ್ದಾರೆ. ಬಹುಪಾಲು ಟ್ಯಾಕ್ಸಿ ಚಾಲಕರು ಸರ್ದಾರ್ಜಿಗಳು, ಹೋಟೆಲ್, ಮೋಟೆಲ್, ಬ್ಯಾಂಕ್ ಕ್ಲರ್ಕ್ ನಿಂದಾ ಹಿಡಿದು ಮ್ಯಾನೇಜರ್ ವರೆಗೆ, ರಿಯಲ್ ಎಸ್ಟೇಟ್, ಪ್ಲಂಬಿಂಗ್, ಕಾರ್ಪೆಟ್ಟಿಂಗ್, ಆಟೊಮೊಬೈಲ್ ಮೆಕ್ಯಾನಿಕ್, ಹೇರ್ ಡ್ರೆಸರ್ಸ್, ಸೆಕ್ಯುರಿಟಿ, ಎಲ್ಲಾ ತರಹದ ಸರಕಾರಿ ಕೆಲಸಗಳು, ಔಷಧಿ ಅಂಗಡಿಗಳು, ವೈದ್ಯರು, ಅನೇಕ ಕಂಪನಿಗಳಲ್ಲಿ ಕೆಳಮಟ್ಟದ ಕೆಲಸದಿಂದ ಹಿಡಿದು ಉನ್ನತ ಮಟ್ಟದ ಸ್ಥಾನಗಳಲ್ಲಿಯೂ ಅವರಿದ್ದಾರೆ. ಅವರು ಮಾಡದ ವ್ಯವಹಾರಗಳೇ ಇಲ್ಲ ಎನ್ನಬಹುದು. ಅವರು ಇದನ್ನೆಲ್ಲಾ ಹೇಗೆ ಸಾಧಿಸಿದರು?? ಹೇಗೆ? ಹೇಗೆ?? ಹೇಗೆ??? ಈ ಪ್ರಶ್ನೆ ನನ್ನ ಕಾಡತೊಡಗಿತು. ಸಿಖ್ಖರು ಈ ರೀತಿಯ ಪ್ರಾಭಲ್ಯಕ್ಕೆ ಕಾರಣಗಳನ್ನ ಹುಡುಕ ತೊಡಗಿದೆ. ಅದಕ್ಕೆಂದೇ ಈ ಲೇಖನ!

ಮೊದಲನೆಯದಾಗಿ ಸಿಖ್ಖರಿಗೆ ಕೆನಡಾ ದೇಶದಲ್ಲಿ ಇರುವ ಸಾಧ್ಯತೆಗಳ ಬಗ್ಗೆ ತುಂಬಾ ಚೆನ್ನಾಗಿ ಅರಿವಿದೆ, ತಮ್ಮ ಜನಗಳಿಗೆ ಕೆನಡಾಕ್ಕೆ ವಲಸೆ ಬರಲು ಅವರು ಸಹಾಯ ಮಾಡುತ್ತಾರೆ ಮತ್ತು ಎಲ್ಲಿದ್ದರೂ ತಮ್ಮ ವೈಯಕ್ತಿಕ ಮತ್ತು ಧಾರ್ಮಿಕ ನಿಲುವುಗಳನ್ನ ಬಿಡದೇ ಕೊಂಡೊಯ್ಯುತ್ತಾರೆ.

ಈ ಕೆಳಗಿನ ವಿಷಯಗಳು ಈ ಲೇಖನ ಬರೆಯುವ ವೇಳೆಯಲ್ಲಿ (ನವೆಂಬರ್ 1, 2006) ಕೆನಡಾದಲ್ಲಿ ಚಲಾವಣೆಯಲ್ಲಿರುವ ವಿಧೇಯಕಗಳು. ಇವು ನಮ್ಮೆಲ್ಲರಿಗೂ ಹೊಸತಿರಬಹುದು, ಆದರೆ ಸಿಖ್ಖರಿಗೆ ಇಂತಹ ವಿಷಯಗಳ ಅರಿವಾಗಿ ಮತ್ತು ಅದರ ಉಪಯೋಗವನ್ನು ಪಡೆದು ಶತಮಾನವೇ ಕಳೆದಿದೆ ಎನ್ನಬಹುದು.

ಸಾಧ್ಯತೆಗಳು

  • ನಾಲ್ಕೈದು ವರ್ಷಗಳ ಕೆಲಸದ ಅನುಭವಿರುವ ಮತ್ತು ಇಂಗ್ಲೀಷ್ ಅಥವಾ ಫ್ರೆಂಚ್ ಚೆನ್ನಾಗಿ ಮಾತಾಡ ಬಲ್ಲ ಎಲ್ಲ ಪದವೀಧರರು, ಕೆನಡಾ ದೇಶದ ಪರ್ಮನೆಂಟ್ ರೆಸಿಡೆಂಟ್ (ಪಿ.ಆರ್.) ಪಡೆಯಲು ಸ್ಕಿಲ್ಡ್ ವರ್ಕರ್ ವರ್ಗದಡಿ ಅರ್ಹರಾಗಿರುತ್ತಾರೆ


  • ಮನವಿದಾರನ/ಳ ಪತ್ನಿ/ಪತಿ-ಯೂ ಪದವೀಧರೆಯಾಗಿದ್ದರೆ ಅರ್ಹತೆಯ ಮಟ್ಟ ಹೆಚ್ಚುತ್ತದೆ


  • ಪಿ.ಆರ್. ಮನವಿ ಮಾನ್ಯವಾದ ನಂತರ, ಒಂದುವೇಳೆ ಅಭ್ಯರ್ಥಿ ಒಳ್ಳೆ ಬೇಡಿಕೆ ಇರುವ ತಂತ್ರಜ್ಞಾನದಲ್ಲಿ ಪರಿಣಿತಿ ಇದ್ದರೆ, ಈ ದೇಶಕ್ಕೆ ಬರುವ ಮೊದಲೇ ಕೆಲಸವನ್ನೂ ಖಚಿತಪಡಿಸಿಕೊಂಡು ಬರಬಹುದು. ಇಲ್ಲದಿದ್ದರೆ, ಇಲ್ಲಿಗೆ ಬಂದು, ಕೆಲಸ ಹುಡುಕ ಬಹುದು


  • ಕೆಲವು ನಿಬಂಧನೆಗಳಿವೆಯಾದರೂ ಒಮ್ಮೆ ಇಲ್ಲಿಗೆ ಬಂದ ನಂತರ, ತಂದೆ, ತಾಯಿ ಮತ್ತು ಅವರ ಮುಖಾಂತರ, ರಕ್ತ ಸಂಭಂದಿಗಳಿಗೆಲ್ಲಾ ಫ್ಯಾಮಿಲಿ ಪಿ.ಆರ್. ವರ್ಗದಡಿ ಸ್ಪಾನ್ಸರ್ ಮಾಡಬಹುದು. ಅವರಿಗೆ ಯಾವುದೇ ವಿಷೇಶ ಜ್ಞಾನದ (ಸಾಫ್ಟ್‌ವೇರ್, ಮೆಡಿಸಿನ್ ಇತ್ಯಾದಿ) ಅವಶ್ಯಕತೆ ಇಲ್ಲ.


  • ಕೇವಲ ಮೂರು ವರ್ಷ ಪಿ.ಆರ್. ನಲ್ಲಿ ಈ ದೇಶದಲ್ಲಿ ಇದ್ದ ನಂತರ ಇಲ್ಲಿಯ ಪ್ರಜೆಯಾಗಲು ಅರ್ಹತೆ ಸಿಗುತ್ತದೆ!!


  • ಈ ಮೇಲಿನ ಸೌಕರ್ಯಗಳನ್ನ ಚಾಚೂ ತಪ್ಪದೆ ಉಪಯೋಗಿಸಿಕೊಂಡಿರುವ ಸಿಖ್ಖರು, ಇಲ್ಲಿ ಪ್ರಭಲವಾಗಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ.

    ಪಿ.ಆರ್. ಪಡೆಯಲು ಇರುವ ಸಾಮಾನ್ಯ ಅಡಚಣೆಗಳು

    • ದೆಹಲಿಯಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ, ಸುಮಾರು 5 ವರ್ಷ


    • ಸರ್ಕಾರಿ ಶುಲ್ಕ, ವೈದ್ಯಕೀಯ ತಪಾಸಣೆ, ಅಂಚೆ ಖರ್ಚು ಇತ್ಯಾದಿಗಳೆಲ್ಲ ಸೇರಿ, ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 5೦,೦೦೦ ಖರ್ಚು ಬರುವುದು. ಆದರೆ ಸರ್ಕಾರಿ ಶುಲ್ಕವನ್ನು ಒಂದೇ ಸಲ ಕೊಡಬೇಕಾಗಿಲ್ಲ, ಈ ಕೆಳಗಿನಂತೆ ಕೊಡಬೇಕಾಗುವುದು


      • ಮನವಿಪತ್ರದೊಂದಿಗೆ ಕೊಡಬೇಕಾದ ಶುಲ್ಕ ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 22,೦೦೦


      • ಮನವಿಪತ್ರ ಮಾನ್ಯ ಮಾಡಿದ ನಂತರ ಇನ್ನೂ ಒಂದು ಶುಲ್ಕ ಕೊಡಬೇಕಾಗುವುದು ಅದು ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 2೦,೦೦೦. ಆದರೆ ಈ ವೇಳೆಗೆ ಪಿ.ಆರ್. ಸಿಗುವುದು ಖಚಿತವಾಗಿರುತ್ತದೆ


    • ಮನವಿಪತ್ರದ ಪ್ರಕ್ರಿಯೆಯ ಕೊನೆಯ ಹಂತದಲ್ಲಿ, ಅಭ್ಯರ್ಥಿ ತನ್ನಲ್ಲಿ 15,೦೦೦ ಕೆನೆಡಿಯನ್ ಡಾಲರ್ ನಷ್ಟು ಹಣವಿರುವುದನ್ನು ಖಚಿತಪಡಿಸುವ ಬ್ಯಾಂಕ್ ದಾಖಲೆಗಳನ್ನ ರಾಯಭಾರಿ ಕಛೇರಿಗೆ ಕಳಿಸಬೇಕು. ಅಭ್ಯರ್ಥಿ ಇಲ್ಲಿ ಬಂದ ತಕ್ಷಣ ಜೀವನ ಮಾಡಲು ಬೇಕಾಗುವ ಹಣವಿದೆ ಎಂದು ಖಚಿತಪಡಿಸಿಕೊಳ್ಳಲು ಈ ದಾಖಲೆ ಕೇಳುತ್ತಾರೆ


    • ಅನೇಕರು ಈ ಎಲ್ಲಾ ವ್ಯವಹಾರಗಳನ್ನು ವಕೀಲರ ಮೂಲಕ ಮಾಡಿಸುತ್ತಾರೆ. ಸಾಮಾನ್ಯವಾಗಿ ಮನವಿಪತ್ರದಲ್ಲಿರುವ ಎಲ್ಲರಿಗೂ ಸೇರಿ ವಕೀಲರು ಸುಮಾರು ರೂ 4೦,೦೦೦-7೦,೦೦೦ ಶುಲ್ಕ ವಿಧಿಸುತ್ತಾರೆ


    • ಸ್ಕಿಲ್ಡ್ ವರ್ಕರ್ ಪಿ.ಆರ್. , ಇಲ್ಲಿನ ಉದ್ಯೋಗ ಬೇಡಿಕೆಗಳಿಗಣುವಾಗಿ ನಡೆಯುವುದು. ಇಲ್ಲಿ ಕೊರತೆ ಇರುವ ಉದ್ಯೋಗಗಳಲ್ಲಿ ನಿಷ್ಣಾತರಾಗಿರುವವರಿಗೆ ಮಣೆ ಹಾಕುವರು.



    ಕೆಲವರಿಗೆ ಸಹಾಯಕವಾಗಬಹುದಾದ ಅಂಶಗಳು

    • ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ ಕೆಲ ದೇಶಗಳಲ್ಲಿ ಕಡಿಮೆ ಇದೆ. ಉದಾಹರಣೆಗೆ ಅಮೇರಿಕಾದಲ್ಲಿ ಸುಮಾರು ೧೮ ತಿಂಗಳು ತಗಲುವುದು. ಇದೇ ರೀತಿ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜೀಲ್ಯಾಂಡ್, ಸೌದಿ, ಮುಂತಾದ ದೇಶದಲ್ಲಿ ಅಭ್ಯರ್ಥಿ ಪ್ರಸ್ತುತ ಕೆಲಸ ಮಾಡುತ್ತಿದ್ದರೆ, ಆ ದೇಶಲ್ಲಿಯೇ ಮನವಿಪತ್ರ ಸಲ್ಲಿಸಬಹುದು ಮತ್ತು ಪಿ.ಆರ್.-ಅನ್ನು ಬೇಗ ಪಡೆಯಬಹುದು

    • ಈ ದೇಶಗಳಲ್ಲಿ ಮನವಿಪತ್ರ ಸಲ್ಲಿಸಿದ ನಂತರ, ಪಿ.ಆರ್. ಸಿಗುವ ಮೊದಲೇ ಆ ದೇಶದಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದರೆ?

      • ನನ್ನ ವಕೀಲನ ಪ್ರಕಾರ, ಈ ಸಂದರ್ಭದಲ್ಲಿ "ವಯಕ್ತಿಕ ಸಂದರ್ಶನ" ಕ್ಕೆ (ಪರ್ಸನಲ್ ಇಂಟರ್‌ವಿವ್) ರಾಯಭಾರಿ ಕಛೇರಿ, ವಿನಾಯಿತಿ ಕೊಟ್ಟಲ್ಲಿ ಎನೂ ತೊಂದರೆ ಇಲ್ಲ. ನನಗೂ ಆ ವಿನಾಯಿತು ಕೊಟ್ಟಿದ್ದರು. ಆದರೆ ಸಂದರ್ಶನಕ್ಕೆ ಕರೆದರೆ, ಕರೆದ ರಾಯಭಾರಿ ಕಛೇರಿಗೇ ಹೋಗಬೇಕಾಗುವುದು

      • ಇಲ್ಲವಾದಲ್ಲಿ ನಾವು ಎಲ್ಲಿರುವೆವೋ ಅಲ್ಲಿರುವ ರಾಯಭಾರಿ ಕಛೇರಿಗೆ ಮನವಿಪತ್ರವನ್ನು ಸ್ಥಳಾಂತರಿಸಲು ಕೇಳಿಕೊಳ್ಳಬಹುದು. ಅವರು ಮಾನ್ಯ ಮಾಡಲೂಬಹುದು. ಆದರೆ ಭಾರತಕ್ಕೇನಾದರೂ ಮನವಿಪತ್ರವನ್ನು ಸ್ಥಳಾಂತರಿಸಿದರೆ ಅಲ್ಲಿ ಅನೇಕ ದಿನ ತಗಲಿಕೊಳ್ಳುವ ಸಾಧ್ಯತೆ ಇದೆ

      • ಈ ಪರಿಸ್ಥಿತಿಯಲ್ಲಿ ವಕೀಲರ ಮುಖಾಂತರ ಮನವಿಪತ್ರ ಸಲ್ಲಿಸುವುದು ಒಳಿತು. ಸಾಮಾನ್ಯವಾಗಿ ಪತ್ರ ವ್ಯವಹಾರಗಳೆಲ್ಲಾ ವಕೀಲರ ಕಛೇರಿಯ ವಿಳಾಸದೊಂದಿಗೆ ಆಗುವದರಿಂದ, ಅಭ್ಯರ್ಥಿಯ ವಿಳಾಸ ಬದಲಾವಣೆಯಿಂದ ಆಗಬಹುದಾದ ತೊಂದರೆಗಳು ಬರಲಾರವು


    • ಒಂದುವೇಳೆ ಅಭ್ಯರ್ಥಿ ಕೆನಡಾ ದೇಶಕ್ಕೆ ವರ್ಕ್ ಪೆರ್ಮಿಟ್ ನಲ್ಲಿ ಬರುವ ಅವಕಾಶ ಒದಗಿ ಬಂದರೆ, ಅದರಂಥ ಸುಸಂದರ್ಭ ಇನ್ನೊಂದಿಲ್ಲ. ಏಕೆಂದರೆ, ಕೆನಡಾದಲ್ಲೇ ಮನವಿಪತ್ರ ಸಲ್ಲಿಸಿದಲ್ಲಿ, ಈ ಪ್ರಕ್ರಿಯೆ ೧ ವರ್ಷದಲ್ಲಿ ಮುಗಿಯುವುದು


    ಒಮ್ಮೆ ಇಲ್ಲಿಗೆ ಬಂದ ನಂತರ ಕುಟುಂಬವರ್ಗದವರಿಗೆ ನೀವೇನು ಮಾಡಬಹುದು?

  • ಪತಿ, ಪತ್ನಿಯರಿಬ್ಬರೂ ಅವರ ತಂದೆ ತಾಯಿಯರನ್ನು ಅತಿ ಸುಲಭವಾಗಿ ಕರೆಯಿಸಿಕೊಳ್ಳ ಬಹುದು, ಅವರು ಪಿ.ಆರ್. ಸಹ ಪಡೆಯಬಹುದು.

  • ಕೆಲವು ನಿಬಂಧನೆಗಳನ್ನು ಪಾಲಿಸಿ ತಮ್ಮ ರಕ್ತಸಂಬಂಧಿಗಳ ಪಿ.ಆರ್. ಗಾಗಿ ಸ್ಪಾನ್ಸರ್ ಮಾಡಬಹುದು.

  • ಅವರನ್ನು ವಿಸಿಟರ್ ವೀಸಾದಲ್ಲಿ ಕೆನಡಾಕ್ಕೆ ಕರೆಯಿಸಿ, ಇಲ್ಲಿ ಪಿ.ಆರ್. ಮನವಿಪತ್ರವನ್ನು ಸಲ್ಲಿಸಿ, ಬೇಗನೆ ಪಿ.ಆರ್. ಪಡೆಯಬಹುದು. ಆದರೆ ವಿಸಿಟರ್ ವೀಸಾದಲ್ಲಿರುವವರು ನೌಕರಿ ಮಾಡುವಂತಿಲ್ಲ. (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).

    ಏಕೆ ಬರಬೇಕು ಕೆನಡಾಕ್ಕೆ?

    "ಅಮೇರಿಕನ್ ಡ್ರೀಮ್" ಎನ್ನುವುದು ಚಿರಪರಿಚಿತ ನುಡಿ. ಅದರ ಒಳಿತು-ಕೆಡುಕು, ಸುಖ-ದು:ಖಗಳ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಅದು ಅವಕಾಶಗಳು ಮತ್ತು ವಯಕ್ತಿಕ ಆಯ್ಕೆಗೆ ಸಂಭಂದಪಟ್ಟ ವಿಚಾರವಾದರೂ, ನನಗನ್ನಿಸಿದ ಕೆಲ ಮಾತುಗಳನ್ನ ಲೇಖನದ ಕೊನೆಯಲ್ಲಿ ಬರೆದಿದ್ದೇನೆ. ಆದರೆ ಅಮೇರಿಕಾಕ್ಕೆ ಹೋಗಲು ಅನೇಕರು ಪ್ರಯತ್ನಪಡುವುದರಿಂದ, ಅಮೇರಿಕದ ಜೊತೆ ಈ ಕೆಳಗೆ ತುಲನೆ ಮಾಡುತ್ತಿದ್ದೇನೆ.

    ಯು.ಎಸ್.ಎ. ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ನಕಾರಾತ್ಮಕ ಅಂಶಗಳು:

  • ಕೆನಡಾ ತುಂಬಾ ದುಬಾರಿ. ನೌಕರಿಗಳಿಗೆ ಕೇಂದ್ರವೆನಿಸಿಕೊಂಡಿರುವ ಕೆನಡಾದ ನಗರಗಳಾದ ಟೊರಾಂಟೊ, ವ್ಯಾಂಕೂವರ್, ಮಾಂಟ್ರಿಯಾಲ್ ಮುಂತಾದವುಗಳು ತುಂಬಾ ದುಬಾರಿ ನಗರಗಳು. ಈ ನಗರಗಳು ನ್ಯೂಯಾರ್ಕ್, ಸ್ಯಾನ್-ಫ್ರ್ಯಾನ್ಸಿಸ್ಕೊ ಮುಂತಾದ ನಗರಗಳಿಗಿಂತ ತುಂಬ ಚಿಕ್ಕದಾದರೂ, ಖರ್ಚು ಈ ನಗರಗಳಿಗೆ ಸಮಾನ.

  • ಆದಾಯ ಮತ್ತು ಮಾರಾಟ ತೆರಿಗೆ ಅಮೇರಿಕಾಕ್ಕಿಂತ ಹೆಚ್ಚು

  • ಕಾರ್ ಇನ್ಶುರೆನ್ಸ್, ಬ್ಯಾಂಕ್ ಶುಲ್ಕ, ಅಂಚೆ ಇತ್ಯಾದಿ ಖಾಸಗಿ ಮತ್ತು ಸರ್ಕಾರೀ ಸೇವೆಗಳು ಅಮೇರಿಕಾಕ್ಕಿಂತ ದುಬಾರಿ

  • ಈ ಎಲ್ಲ ಕಾರಣಗಳಿಂದ ಅಮೇರಿಕಕ್ಕಿಂತ ಉಳಿತಾಯ ಸ್ವಲ್ಪ ಕಡಿಮೆ

  • ನಿತ್ಯ ಜೀವನ ಅಮೇರಿಕಾಕ್ಕಿಂತ ಮಂದ ಗತಿಯಲ್ಲಿ ಸಾಗುವುದು. ಉದಾ: ಅಮೇರಿಕಾದಲ್ಲಿ ಬ್ಯಾಂಕ್‌ಗಳು ಬೆಳಿಗ್ಗೆ 7:30ಕ್ಕೆ ತೆರೆಯುತ್ತಿದ್ದವು. ಆದರೆ ಇಲ್ಲಿ 10:೦೦ ಕ್ಕೆ ತೆರೆಯುತ್ತವೆ!! ಅಮೇರಿಕದ ಕೆಲ ವೆಬ್ ಸೈಟ್‌ಗಳು ಬಹಳ ಉತ್ಕೃಷ್ಠವಾಗಿವೆ. ಆದರೆ ಇಲ್ಲಿ ಅವು ಸಾಮಾನ್ಯವಾಗಿವೆ. ಉದಾ: ನೀವೇ ನೋಡಿ - walmart.com (USA), walmart.ca(Canada)

  • ಕೆಲವೇ ನೌಕರಿ ಕೇಂದ್ರಗಳು : ಟೊರಾಂಟೋ, ವ್ಯಾಂಕೂವರ್, ಮಾಂಟ್ರಿಯಾಲ್, ಒಟ್ಟಾವ, ಕ್ಯಾಲ್ಗರಿ, ಎಡ್ಮಂಟನ್, ವಿನ್ನಿಪೆಗ್ ಇತ್ಯಾದಿಗಳು ಮಾತ್ರ ಕೆನಡಾದ ನೌಕರಿ ಕೇಂದ್ರಗಳು. ಆದರೆ ಅಮೇರಿಕದಲ್ಲಿ ಅನೇಕ ಕೇಂದ್ರಗಳಿವೆ.

  • ನೌಕರಿಗಳ ಒಟ್ಟು ಸಂಖ್ಯೆ ಅಮೇರಿಕಕ್ಕಿಂತಲೂ ತುಂಬಾ ಕಡಿಮೆ. ಆದರೆ ಅದಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳೂ ಇಲ್ಲಿ ಕಡಿಮೆ

    ಯು.ಎಸ್.ಎ ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ಸಮ ಅಥವಾ ಸಕಾರಾತ್ಮಕ ಅಂಶಗಳು:

  • ಆರೋಗ್ಯ ಸುಪರ್ದು (ಹೆಲ್ತ್ ಕೇರ್) ತುಂಬಾ ಅಗ್ಗ, ಹೆಚ್ಚೂ ಕಡಿಮೆ ಪುಕ್ಕಟೆಯಾಗಿ ದೊರೆಯುವುದು.

  • ದೈನಂದಿಕ ಜೀವನ ಅಮೇರಿಕೆಯಂತೆಯೇ ಇರುವುದು

  • ಮೂಲಭೂತ ಸೌಕರ್ಯ ಸರಿ ಸುಮಾರು ಅಮೇರಿಕದಲ್ಲಿರುವಂತೆಯೇ ಇರುವುದು

  • ಮಕ್ಕಳ ವಿದ್ಯಾಭ್ಯಾಸ ಅಮೇರಿಕದಲ್ಲಿರುವಂತೆಯೇ ಇರುವುದು

  • ಕೆನಡಾದ ಪಿ.ಆರ್. , ಅಮೇರಿಕೆಯ ಗ್ರೀನ್ ಕಾರ್ಡ್‌ಗೆ ಸಮಾನ. ಗ್ರೀನ್ ಕಾರ್ಡ್‌ಗೆ ತುಲನೆ ಮಾಡಿದರೆ ಪಿ.ಆರ್. ಪಡೆಯುವುದು ಬಲು ಸುಲಭ. ಗ್ರೀನ್ ಕಾರ್ಡ್ ಪಡೆಯಲು ಅಮೇರಿಕದಲ್ಲೇ ವಾಸವಿರಬೇಕು, ಪಿ.ಆರ್ ಪಡೆಯಲು ಕೆನಡಾದಲ್ಲಿ ವಾಸವಿರಬೇಕೆಂದಿಲ್ಲ. ಯಾವುದೇ ದೇಶದಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಪಿ.ಆರ್. ಪಡೆದು ೩-೪ ವರ್ಷಗಳಲ್ಲಿ ಕೆನಡಾದ ಪ್ರಜೆಯಾಗಬಹುದು, ಗ್ರೀನ್ ಕಾರ್ಡ್ ಪಡೆಯುವುದು, ಅಮೇರಿಕಾ ಪ್ರಜೆಯಾಗುವುದು ಪ್ರಸಕ್ತ ದಿನಗಳಲ್ಲಿ ಮರೀಚಿಕೆಯೇ ಆಗಿದೆ.

  • ಕೆನಡಾ ಪ್ರಜೆಯಾದಮೇಲೆ, ಅಮೇರಿಕಾಕ್ಕೆ ಕೆಲಸವರಿಸಿ ಹೋಗುವುದು ಸುಲಭ (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).

  • ಸಾಫ್ಟ್‌ವೇರ್ ಮತ್ತು ಇನ್ನಿತರ ಉನ್ನತ ಪರಿಣಿತಿ ಇರುವವರನ್ನು ಬಿಟ್ಟರೆ, ಬೇರೆಯವರು ಅಮೇರಿಕ ಕನಸು ಕಾಣುವಂತೆಯೇ ಇಲ್ಲ. ಆದರೆ ಕೆನಡಾಕ್ಕೆ ಬೇರೆ ಬೇರೆ ವಿಧದಲ್ಲಿ ಎಲ್ಲತರದ ಉದ್ಯೋಗಸ್ತರು ಬರುವ ಸಾಧ್ಯತೆ ಇದೆ.

  • ಕೆನಡಾಕ್ಕೆ ತಂದೆ, ತಾಯಿ, ಕರೆಸಿ ಅವರೊಂದಿಗೆ ಜೀವಿಸುವುದು ತುಂಬ ಸುಲಭ. ಪ್ರಯತ್ನಿಸಿದರೆ ಸಹೋದರ, ಸಹೋದರಿಯರನ್ನೂ ಕರೆಸಲು - ಸಾಧ್ಯ. ಅಮೇರಿಕದಲ್ಲಿ ಅದು ಕಷ್ಟ (ಸಾಧ್ಯವೇ ಇಲ್ಲವೇನೊ??)

  • ಅಮೇರಿಕೆಗಿಂತಲೂ ಹೆಚ್ಚು ಸಂಕೀರ್ಣ ಸಮಾಜ. ಜಗತ್ತಿನ ಎಲ್ಲಾ ಮೂಲೆಗಳಿಂದ ಬಂದಿರುವ ಜನಗಳು ಇಲ್ಲಿ ಕಾಣಸಿಗುವರು

  • ಜನಸಂಖ್ಯೆಗೆ ಮಿಗಿಲಾದ ನೈಸರ್ಗಿಕ ಸಂಪನ್ಮೂಲ

    ನನ್ನದೊಂದೆರಡು ಪುಕ್ಕಟೆ ಉಪದೇಶ:

    ಹೊರದೇಶಕ್ಕೆ ಹೋಗುವವರು, ಹಣಗಳಿಸುತ್ತಾರೆ, ಅದರಿಂದ ಬೇರೆಯವರಿಗೇನೂ ಉಪಯೋಗವಿಲ್ಲವೆಂದು ಬಹಳಷ್ಟು ಜನ ಅಭಿಪ್ರಾಯ ಪಡುತ್ತಾರೆ. ಹೊರದೇಶಕ್ಕೆ ಹೋಗುವ ಅವಕಾಶವಿರುವವರೂ ಈ ರೀತಿಯ ಅಭಿಪ್ರಾಯದಿಂದ ಅಥವಾ ತಂದೆತಾಯಿಯರ ಜೊತೆಗಿರುವುದಕ್ಕೋಸ್ಕರ ಆ ಅವಕಾಶಗಳನ್ನು ತಳ್ಳಿಹಾಕುತ್ತಾರೆ. ಆದರೆ ಇದೆಲ್ಲವನ್ನೂ ಇಲ್ಲಿರುವ ಸಿಖ್ಖರು ಸುಳ್ಳಾಗಿಸಿದ್ದಾರೆ.

  • ಹೊರದೇಶದಿಂದ ತಮ್ಮ ನಾಡಿಗೆ ಸಿಗಬಹುದಾದ ಧನ ಸಹಾಯ, ಅದರಿಂದಾಗು ಅಭಿವೃದ್ಧಿಯನ್ನು ಯೋಚಿಸಬೇಕು. ನಮ್ಮ ನಾಡನ್ನ ಪ್ರಗತಿಗೊಳಿಸಲು ಇದೊಂದೇ ದಾರಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅವಕಾಶ ಇದ್ದರೆ, ಅದನ್ನು ಉಪಯೋಗಿಸಿ ನೀವೂ ಉದ್ಧಾರವಾಗುವದಲ್ಲದೆ, ನಿಮ್ಮ ಬಾಂಧವರಿಗೂ ಸಹಾಯ ಮಾಡಬಹುದು. ಅದರಿಂದ ನಿಮ್ಮ ನಾಡನ್ನ ಪ್ರಗತಿ ಪಥದಲ್ಲಿಡಲು ನಿಮ್ಮ ಅಳಿಲು ಸೇವೆಯಾಗುವುದು. ಇದನ್ನೇ ಇಲ್ಲಿರುವ ಸರ್ದಾರ್ಜಿಗಳು ಮಾಡುತ್ತಿರುವುದು. ಅವರು ಇಲ್ಲಿ ಮತ್ತು ನಮ್ಮ ದೇಶದಲ್ಲಿ ತುಂಬಾ ಪ್ರಭಲವಾಗಿ ಬೆಳೆದಿದ್ದಾರೆ. ನಾನು ಇಲ್ಲಿ ವಾಸಿಸುವ ಸ್ಥಳದ ಎಮ್.ಎಲ್.ಎ. ಸಹ ಸರ್ದಾರ್ಜಿ!! ಸರ್ದಾರ್ಜಿಗಳಲ್ಲಿ ಅನೇಕರು "ವಲಸೆ ಸಲಹೆಗಾರ/ವಕೀಲರ" (ಇಮಿಗ್ರೇಶನ್ ಕನ್‌ಸಲ್ಟಂಟ್/ಲಾಯರ್) ವೃತ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರದ ಶಾಸನ, ವಿಧಿ, ವಿಧಾನ, ಸೌಕರ್ಯಗಳನ್ನ ಬಲ್ಲವರಾಗಿರುವ ಇವರು, ಅದನ್ನು ಚತುರವಾಗಿ ಬಳಸಿಕೊಂಡು ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಬೇರೂರಿದ್ದಾರೆ. ಅವರ ಈ ಪ್ರಾಭಲ್ಯತೆಯಿಂದ, ಭಾರತ , ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಗಳ ಮೇಲೆ ಒತ್ತಡ ತರುವ ಶಕ್ತಿ ಅವರಿಗಿದೆ.

    ನೀವು ಬೇರೆ ಬೇರೆ ಅವಕಾಶಗಳಿಗೆ ಕಾತರಿಸುತ್ತಿದ್ದರೆ, ನಿಮ್ಮಲ್ಲಿ ಅಮೇರಿಕಕ್ಕೆ ಕೆಲಸದ ಖಚಿತ ಪ್ರಸ್ತಾಪ/ಒಡಂಬಡಿಕೆ ಇಲ್ಲವೇ ವಿಸಾ, ಗ್ರೀನ್ ಕಾರ್ಡ್ ಇದ್ದರೆ, ನೀವು ಕೆನಡಾ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಅಮೇರಿಕದಲ್ಲಿ ಖಂಡಿತವಾಗಿಯೂ ಹೆಚ್ಚಿನ ಹಣಗಳಿಸಿ, ಉಳಿಸಬಹುದು. ಇಲ್ಲದಿದ್ದರೆ ಕೆನಡಾ ನಿಜವಾಗಿಯೂ ಒಂದು ಒಳ್ಳೆಯ ಆಯ್ಕೆ.

    ಪಿ.ಆರ್. ಪಡೆಯಲು ನೀವು ಯಾವ ವಯಸ್ಸಿನಲ್ಲಿದ್ದರೂ ಸಮಯ ಸಂಧಿಸಿಲ್ಲ. ನನ್ನ ಮನೆ ಮಾಲಿಕ ಸುಮಾರು 15 ವರ್ಷಗಳ ಹಿಂದೆ ಬಂದಿದ್ದರಂತೆ. ಈಗ ಅವರಿಗೆ ಸುಮಾರು 65-70 ವರ್ಷವಿರಬೇಕು. ಅಂದರೆ, ಅವರು 50 ಕ್ಕೂ ಹೆಚ್ಚು ವರ್ಷವಯಸ್ಸಾದಾಗ ಇಲ್ಲಿಗೆ ಬಂದಿದ್ದಾರೆ! ಈಗ ಅವರ ಎಲ್ಲ ಮಕ್ಕಳೂ, ಮಕ್ಕಳ ಪತ್ನಿಯರೂ, ಪತ್ನಿಯರ ಸಹೋದರ ಸಹೋದರಿಯರು, ಅವರ ಪತಿ, ಪತ್ನಿಯರು, ಅವರ ತಂದೆ ತಾಯಿಯರು.. ಹೀಗೆ ಒಂದು ದೊಡ್ಡ ಕುಟುಂಬದ ಸರಪಳಿಯೇ ಇಲ್ಲಿದೆ.

    ಕೆನಡಾ ಸರ್ಕಾರ ಈ ವಿಧೇಯಕಗಳನ್ನ ಯಾವ ಕಾಲಕ್ಕೆ ಬದಲಿಸುವರೋ ಅಥವಾ ಹಿಂತೆಗೆದುಕೊಳ್ಳುವರೋ ತಿಳಿಯದು. ನೀವು ಬದಲಾವಣೆಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ಸಮಯ ವ್ಯಯಿಸಬೇಡಿ. ಇಂದೇ ಇಂಟರ್‌ನೆಟ್ ನಲ್ಲಿ ಪರಿಶೋಧನೆ ಪ್ರಾರಂಭಿಸಿ, ಮನವಿಪತ್ರ ಸಲ್ಲಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ.

    ಈ ವೆಬ್‌ಸೈಟ್ ಗಳೊಂದಿಗೆ ಪ್ರಾರಂಭಿಸಿ.
    http://www.cic.gc.ca/english/faq/index.html#resident
    http://www.cic.gc.ca/english/faq/index.html
    http://www.canadavisa.com/
    http://www.immigrationattorney.ca/ http://www.workopolis.ca

    ಇಲ್ಲಿ ಪ್ರಸ್ತುತಪಡಿಸಿದ ಎಲ್ಲಾ ವಿಷಯಗಳು ನನ್ನ ವಯಕ್ತಿಕ ಅಭಿಪ್ರಾಯ. ಇಲ್ಲಿ ಪ್ರಸ್ತಾಪಿಸಿರುವ ಶಾಸನ ವಿಧಿ ವಿಧಾನಗಳೆಲ್ಲ ಸರಿಯಿವೆ ಎಂಬ ಭರವಸೆ ಕೊಡುವುದಿಲ್ಲ.

    Wednesday, November 01, 2006

    ಫಾಸ್ಟ್ ಫಾರ್ವರ್ಡ್ >>


    - ಮೃಣಾಲಿನಿ ಎಸ್. ಗುಡಿ, ಹರ್ನ್‌ಡಾನ್, ವಾಷಿಂಗ್ಟನ್ ಡಿ.ಸಿ. ಯು.ಎಸ್.ಏ

    ಮೃಣಾಲಿನಿ ಅವರು ಶ್ರೀನಿವಾಸ ಗುಡಿ ಅವರ ಪತ್ನಿ ಮತ್ತು ಖ್ಯಾತ ಕನ್ನಡ ಸಾಹಿತಿ, ಕವಿ, ವಿಮರ್ಶಕರಾದ ಧಾರವಾಡದ ಶ್ರೀ ಸುಬ್ಬರಾವ ದೇಶಪಾಂಡೆ ಅವರ ಪುತ್ರಿ. ತಮ್ಮ ಪುತ್ರಿ ಮಹೀಯ ಆಟ-ಪಾಠ, ಆಫೀಸ ಕೆಲಸ ಹಾಗೂ ಮನೆಕೆಲಸ ಇವೆಲ್ಲದರ ನಡುವೆಯೂ ಸಮಯ ಉಳಿಸಿಕೊಂಡು ಒಂದು ಒಳ್ಳೆಯ ಬರಹವನ್ನು ನಮಗಾಗಿ ನೀಡಿದ್ದಾರೆ. ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿಯನ್ನು ಬೆಳೆಸಿಕೊಂಡಿರುವ ಮೃಣಾಲಿನಿ ಅವರು ಒಳ್ಳೆಯ ಗಾಯಕಿಯೂ ಹೌದು.




    ೨೫ ವರ್ಷಗಳ ಹಿಂದೆ...

    ಅದೊಂದು ಊರು, ಇತ್ತ ಶಹರವೂ ಅಲ್ಲ, ಅತ್ತ ಹಳ್ಳಿಯೂ ಅಲ್ಲದ, ಶಾಂತವಾದ ಊರು. ಅಲ್ಲೊಂದು ದೊಡ್ದ ಮನೆ. ಮನೆ ತುಂಬ ಜನ. ಅಂಗಳದಲ್ಲಿ ಒಂದು ನಾಯಿ - ಬೊಗಳಿದರೆ ಅರ್ಧ ಊರು ನಡುಗಬೇಕು. ಮನೆಗೆ ಒಂದು ಹಿತ್ತಿಲ. ಹುಣಸೆ, ತೆಂಗು, ಮಾವು, ಹಲಸು ಹೀಗೆ ಹಲವಾರು ದೊಡ್ಡ ಮರಗಳಿಂದ ತುಂಬಿದ, ತರಹೇವಾರಿ ಹೂವುಗಳು, ಅವುಗಳ ಮೇಲೆ ಹಾರಡುವ ಸಣ್ಣ-ಸಣ್ಣ, ಬಣ್ಣ-ಬಣ್ಣದ ಚಿಟ್ಟೆಗಳಿಂದ ತುಂಬಿದ ಹಿತ್ತಲು. ಪಡಸಾಲೆಯಲ್ಲಿ ಅಜ್ಜ ಇವತ್ತಿನ ಪೇಪರ್ ಓದುತಿದ್ದಾರೆ. ಅಡುಗೆ ಮನೆಯಲ್ಲಿ ಅಜ್ಜಿ ಮತ್ತು ಅಜ್ಜಿಯ ಸೊಸೆ ಅಡುಗೆ ಮಾಡುತಿದ್ದಾರೆ. ಅಜ್ಜಿಯ ಮಗಳು(ಪುಟ್ಟಿಯ ತಾಯಿ) ಪೂಜ ಸಾಮಗ್ರಿ ತೊಳೆಯುತಿದ್ದಾರೆ. ಐದು ವರ್ಷದ ಪುಟ್ಟಿ ಎಂದಿನಂತೆ ಹಿತ್ತಿಲಲ್ಲಿ ಮಣ್ಣಿನಿಂದ ಆಟದ ಪಾತ್ರೆಗಳನ್ನು ಮಾಡಿ ತನ್ನ ಗೆಳತಿಯರೊಂದಿಗೆ "ಅಡುಗೆ-ಆಟ" ಆಡುತಿದ್ದಾಳೆ.

    ಅಜ್ಜಿ : ಪುಟ್ಟಿ, ಒಳಗ ಬಾ. ಬೆಳಗ್ಗೆಯಿಂದ ಮಣ್ಣಾಗ ಆಡಲಿಕತ್ತಿ, ಊಟದ ಹೊತ್ತಾತು.
    ಪುಟ್ಟಿ : ಬಂದೆ ಅಜ್ಜಿ, ಐದ ನಿಮಿಷ...

    ಹತ್ತಾರು ಕರೆಗಳು ಮತ್ತು ಒಂದು ಕಾಲು ಗಂಟೆ ಆದಮೆಲೆ ಪುಟ್ಟಿ ಅವಸರದಿಂದ ಬಂದು ಗಬ-ಗಬನೆ ಊಟ ಮಾಡಿ, ಮತ್ತೆ ಆಟಕ್ಕೆ ಓಡುವಳು!

    ಶಕು (ಅಜ್ಜಿಗೆ) : ಅವ್ವಾ, ಈ ಪುಟ್ಟಿಗೆ ಸ್ವಲ್ಪ ಮನಿ ಕೆಲಸ ಕಲಸು. ಯಾವಗ ನೊಡಿದರೂ ಹಿತ್ತಲದಾಗ ಆಡತಿರತಾಳ, ನಾಳೆ ಕೊಟ್ಟ ಮನ್ಯಾಗ ನಮಗ ಕೆಟ್ಟ ಹೆಸರು ಬರತದ.
    ಅಜ್ಜಿ : ಶಕು, ಇನ್ನು ಸಣ್ಣಕಿ ಇದ್ದಾಳ, ಸ್ವಲ್ಪ ಆಡಲಿ ಬಿಡು.
    ಅಜ್ಜಿ: ಅದು ಹೋಗಲಿ, ಅಕಿ ಕೂದಲಕ್ಕ ಸ್ವಲ್ಪ ಎಣ್ಣಿ ಕಾಣಿಸು, ಆ ಫ್ರಾಕ್-ಗೀಕು ಬಿಟ್ಟು ಒಂದು ಲಕ್ಷಣಾಗಿ ಇರೊ ಅರಿವಿ ಹಾಕವಾ. ಆಮೇಲೆ ಅಕಿದು ಅದೇನೋ ಹಾಡಿನ ಕ್ಲಾಸ್ ಅಂದ್ಯಲ್ಲ, ಎಲ್ಲಿಗೆ ಬಂತು?
    ಶಕು: ಹೊಗಲಿಕತ್ತಾಳ, ಚಲೊ ಹಾಡತಾಳ ಅಂತ ಅವರ ಟೀಚರ್ ಹೇಳ್ಯಾರ.

    ಹೀಗೆ ಸಂಭಾಷಣೆ ಸಾಗುವುದು...ಅಜ್ಜಿ ಹಲವಾರು ಸಲಹೆ-ಸೂಚನೆ ಕೊಡುತ್ತ ಅಡುಗೆ ಮುಂದುವರೆಸುವರು. ಶಕು ತಮ್ಮ ಅಮ್ಮನ ಮಾತಿಗೆ ಹೂಗುಡುತ್ತ ಕೆಲಸ ಮುಂದುವರೆಸುವಳು. ಸಂಜೆ. ಅಜ್ಜಿ ದೇವರ ಮುಂದೆ ದೀಪ ಹಚ್ಚಿ, ಕೈ ಮುಗಿಯುವ ಹೊತ್ತಿಗೆ ಪುಟ್ಟಿ ಮೈ-ಕೈ ಎಲ್ಲ ಮಣ್ಣು ಮಾಡಿಕೊಂಡು ಒಳಗೆ ಬರುವಳು. ಅಜ್ಜಿ ಅವಳಿಗೆ ಸ್ವಲ್ಪ ಪ್ರೀತಿಯಿಂದ ಗದ್ದರಿಸಿದಂತೆ ಮಾಡಿ, ಅವಳನ್ನು ಶುಭ್ರ ಮಾಡಿ, ಪುಟ್ಟಿಗೆ ಇಷ್ಟವಾದ "ಅರಳಿಟ್ಟು" ಕಲಿಸಿ ಕೊಡುವರು. ಆಮೇಲೆ, ಎಂದಿನಂತೆ ಪುಟ್ಟಿ ಅಜ್ಜನ ಹತ್ತಿರ ಐದರ ಮಗ್ಗಿ ಕಲಿಯುವಳು....ಅಜ್ಜಿ ತಮ್ಮ ಮನೆ ಸುತ್ತು-ಮುತ್ತಲಿನ ಜನರ ಜೊತೆ ಕುಳಿತು ದೇವರ ನಾಮ ಹೇಳುತ್ತ ಹತ್ತಿ ಬಸೆಯುವರು. ಅಜ್ಜಿಯ ಸೊಸೆ ಮತ್ತು ಶಕು ಅವರ ಜೊತೆ ಹಾಡುತ್ತ, ಇತ್ತ ಹರಟೆಯೂ ಹೊಡೆಯುತ್ತ ರಾತ್ರಿ ಅಡುಗೆಯ ತಯಾರಿ ಮಾಡುವರು....

    ಅಂದು ರಾತ್ರಿ, ತುಂಬಿದ ಮನೆಯಲ್ಲಿ, ಸೋದರ ಮಾವಂದಿರು, ಚಿಕ್ಕಮ್ಮರ ಒಡನಾಟದಲಿ, ಅಜ್ಜ-ಅಜ್ಜಿಯರಿಂದ ಕತೆ ಹೇಳಿಸಿಕೊಳ್ಳುತ್ತ, ಅಲ್ಲಿಂದ ಇಲ್ಲಿ ಓಡುತ್ತ ತೊದಲು ಮಾತನಾಡುತ್ತ, ಎಲ್ಲರನು ನಗಿಸುತ್ತ, ಮಧ್ಯ-ರಾತ್ರಿ ಆದರೂ ಪುಟ್ಟಿ ಮಲಗಲು ತಯಾರಿಲ್ಲ. ಎಲ್ಲರ ಕಣ್ಮಣಿಯಾಗಿ, ಮೊದಲ ಮೊಮ್ಮಗುವಿಗೆ ಸಿಕ್ಕಿರುವ ಅಪೂರ್ವವಾದ ಪ್ರೀತಿಯ ಸವಿಯನ್ನು ನಿದ್ದೆಯಿಂದ ಹಾಳು ಮಾಡಿಕೊಳ್ಳಲು ಪುಟ್ಟಿ ತಯಾರಿಲ್ಲ.

    ಶಕು(ಪುಟ್ಟಿಗೆ) :ಪುಟ್ಟಿ, ಎಲ್ಲಾರಿಗು ಸಾಕಗೇದ, ನಿದ್ದಿ ಬಂದದ, ನಡಿ ಇನ್ನ ಮಲಕೋಳೋಣ.
    ಪುಟ್ಟಿ : ಊಹೂಂ, ನನಗ ಇನ್ನು ನಿದ್ದಿ ಬಂದಿಲ್ಲ, ನೀ ಬೇಕಾರ ಮಲಕೊ
    ಶಕು : ಒಣಾ ಅಛ್ಚಾ ಭಾಳ ಆಗೇದ ನಿನಗ, ಮಲಕೋತಿಯೊ ಇಲ್ಲ ಒಂದು ಕಡಬು ಬೇಕೊ?

    ಗದರಿಕೆಗೆ ಪುಟ್ಟಿ, ಹೊಯ್ಯ್ ಅಂತ ಅಳಲು ಶುರು ಮಾಡುವಳು.

    (ರಮಿಸುವ ದನಿಯಲ್ಲಿ) ಅಜ್ಜಿ : ಪುಟ್ಟಿ ಅಳಬ್ಯಾಡಾ. ಏನು ಬೇಕು ಹೇಳು ನಿನಗ?
    ಪುಟ್ಟಿ : ನನಗ ಕಡಬು ಬೇಕು, ಕಡಬು ಬೇಕು, ಅಂತ ಅಳುವ ದನಿಯ ತಾರಕಕ್ಕೇರಿಸುವಳು.
    ಶಕು : ಸುಮ್ಮನ ಮಲಕೊ ಈಗ ರಾತ್ರಿಯಾಗೇದ, ಈಗ ಎಂತ ಕಡಬು ನಿನಗ?

    ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿದ್ದರೂ ಅಜ್ಜಿ : ಅಯ್ಯ, ಸುಮ್ಮನಿರು ನೀನು, ಕೂಸು ಕೇಳತದ, ಮಾಡಿಕೊಟ್ಟರಾತು ಅಂತ ಹೂರಣದ ಕಡಬು ಮಾಡುವ ಸಿದ್ಧತೆ ನಡೆಸಿದರು. ಅಜ್ಜಿ ಕಷ್ಟ-ಪಟ್ಟು ಮಾಡಿದ ಕಡಬನ್ನು, ಒಂದರ್ಧ ಮುಟ್ಟಿದ ಶಾಸ್ತ್ರ ಮಾಡಿ, ಪುಟ್ಟಿ ಮಲಗಿಬಿಡುವಳು.
    ಸರಿ ತಿನ್ನದೆ ಮಲಗಿದ ಪುಟ್ಟಿ ಕಂಡು ಮರುಗಿದ -

    ಅಜ್ಜಿ: ಅಯ್ಯೊ, ಕೂಸು ಆಶಾಪಟ್ಟು ತಿನ್ನಲೇ ಇಲ್ಲ ನೋಡ ಪಾಪ!
    ೨ ತಿಂಗಳ ರಜೆ ಮುಗಿದು ಪುಟ್ಟಿ ತನ್ನ ಊರಿಗೆ ತಿರುಗಿ ಹೋಗುವ ಮುನ್ನ, ಅಜ್ಜಿ ಕಣ್ಣೀರು ಸೆರಗಿನ ತುದಿಯಿಂದ ಒರೆಸುತ್ತ ಹೇಳುವರು, "ಪುಟ್ಟಿ ಇದ್ದಷ್ಟು ದಿನಾ ಮನಿ ತುಂಬಿದಂಗ ಇತ್ತು, ಈಗ ಎಷ್ಟು ಭಣಾ-ಭಣಾ..."


    ಫಾಸ್ಟ ಫಾರವರ್ಡ್ - ೧೦ ವರ್ಷಗಳ ಬಳಿಕ :


    ಅಜ್ಜಿಗೆ ಸ್ವಲ್ಪ ವಯಸ್ಸಾಗಿದೆ. ಮೊದಲಿನಂತೆ ಸರ-ಸರನೆ ಕೆಲಸ ಸಾಗದು. ಅಜ್ಜ ತೀರ ಹಣ್ಣಾಗಿದ್ದಾರೆ. ನಾಯಿ ತನ್ನ ಸ್ಥಳ ಬಿಟ್ಟು ಸರಿಯಲಾರದಷ್ಟು ಹಣ್ಣಾಗಿದೆ. ಬೊಗಳಲು ಶಕ್ತಿ ಇಲ್ಲದೆ ಕುಂಯಿ-ಕುಂಯಿ ಎನ್ನುತ್ತ ಒಂದು ಮೂಲೆಯಲ್ಲಿ ಬಿದ್ದಿದೆ. ಪುಟ್ಟಿ ಈಗ ೧೫ ವರ್ಷದ ಹುಡುಗಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ಬಂದಿದ್ದಾಳೆ. ಇನ್ನೆರಡು ತಿಂಗಳಲ್ಲಿ ಕಾಲೇಜ್ ಮೆಟ್ಟಲು ಹತ್ತುವೆ ಅನ್ನುವ ಉತ್ಸಾಹದಲ್ಲಿದ್ದಾಳೆ. ಅಜ್ಜಿಗೆ ಮೊಮ್ಮಗಳು ಬಂದಿರುವ ಸಂಭ್ರಮ.

    ಅಜ್ಜಿ : ಪುಟ್ಟಿ...
    ಪುಟ್ಟಿ : ಅಜ್ಜಿ, ಪುಟ್ಟಿ ಅಂತೆಲ್ಲ ಕರೀಬ್ಯಾಡ. ನನ್ನ ಫ್ರೆಂಡ್ಸ್ ನಗತಾರ. ನನ್ನ ಹೆಸರು ಕರೀ...ದೇವಯಾನಿ ಅಂತ

    ಅಜ್ಜಿ : ಹೋಗ, ನಿಮ್ಮಪ್ಪಗ ಬ್ಯಾರೆ ಹೆಸರು ಸಿಗಲಿಲ್ಲೇನು, ಎಂಥಾ ಅಪದ್ಧ ಹೆಸರು ಇಟ್ಟಾನ. ಅದನ್ನೇನು ಕರಿಯೋದ..
    ಪುಟ್ಟಿ : ಒಟ್ಟ, ನನ್ನ ಪುಟ್ಟಿ ಅಂತ ಕರೀಬ್ಯಾಡ

    ಅಜ್ಜಿ: ಆತು ತೊಗೋವಾ, ಅರಳಿಟ್ಟು ಕಲಿಸೇನಿ
    ಪುಟ್ಟಿ (ಅರಳಿಟ್ಟು ತಿನ್ನುತ್ತ): ಅಜ್ಜಿ, ನೀನು ಎಷ್ಟು ಚಲೊ ಅರಳಿಟ್ಟು ಮಾಡತಿ. ಅಮ್ಮಗ ಹಿಂಗ ಬರಂಗಿಲ್ಲ. ನಿನ್ನ ಹಂಗ ಯಾರೂ ಅರಳಿಟ್ಟು ಮಾಡಂಗಿಲ್ಲ ನೋಡು

    ಅಜ್ಜಿ: ಹೋಗ ಹುಚ್ಚಿ, ಅದರಗೇನು ಅದ ಮಹಾ, ಬ್ರಹ್ಮ ವಿದ್ಯಾ ..ಅಂದಂಗ ನಿನ್ನ ಹಾಡಿನ ಕ್ಲಾಸ್ ಹೆಂಗ ನಡದದ ಪುಟ್ಟಿ?
    ಪುಟ್ಟಿ : ಹಾಡು ಬಿಟ್ಟೆ ಅಜ್ಜಿ, ಎಸ್.ಎಸ್.ಎಲ್.ಸಿಗೆ ಓದಬೇಕಿತ್ತಲ್ಲಾ...

    ಅಜ್ಜಿ : ಎಂಥಾ ಕೆಲಸಾ ಮಾಡಿದ್ಯವ್ವಾ, ಹುಡುಗೀಗೆ ಒಂದು ನಾಲ್ಕು ಛಲೊ ಹಾಡು-ಹಸಿ ಬರಬೇಕು
    ಪುಟ್ಟಿ : ಅಜ್ಜಿ, ಈಗಿನ ಕಾಲದಾಗ ಅವನೆಲ್ಲಾ ಯಾರು ಕೇಳತಾರ?

    ಅಜ್ಜಿ : ನಮಗೇನು ಗೊತ್ತು ಬಿಡವಾ, ನಾವು ಹಳೇ ಕಾಲದವರು.

    ಪುಟ್ಟಿ ೧ ತಿಂಗಳು ಅಜ್ಜಿ ಮನೆಯಲ್ಲಿ ಇದ್ದು ತಿರುಗಿ ತನ್ನ ಊರಿಗೆ ಹೊಗುವಳು. ಅಜ್ಜಿ ದುಖ-ಹೆಮ್ಮೆ ಮಿಶ್ರಿತ ಧ್ವನಿಯಲ್ಲಿ ಅಜ್ಜನ ಮುಂದೆ ಹೇಳುವರು," ನಮ್ಮ ಪುಟ್ಟಿ ಎಷ್ಟು ಚಂದ ಆಗ್ಯಾಳ್ರಿ, ಎಷ್ಟು ತಿಳುವಳಿಕಿ. ಅಕಿ ಇರೊ ಅಷ್ಟು ದಿನ ಹೆಂಗ ಕಳೀತೋ ಗೊತ್ತ ಆಗಲಿಲ್ಲ....."

    ಫಾಸ್ಟ ಫಾರವರ್ಡ್ - ೮ ವರ್ಷದ ಬಳಿಕ:


    ಅಜ್ಜ ತೀರಿಕೊಂಡು ವರ್ಷಗಳಾಗಿವೆ. ನಾಯಿಯೂ ಅಜ್ಜನ ಕಾವಲು ಕಾಯಲು ಅವರ ಹಿಂದೆ ಹೊಗಿದೆ. ಅಜ್ಜಿ ಈಗ ಏಕಾಂಗಿ,
    ಆರೋಗ್ಯ ಕೆಟ್ಟಿದೆ. ಆದರೂ ನಗು-ನಗುತ್ತ ಎಲ್ಲರೊಂದಿಗೆ ಹರಟೆ ಹೊಡೆಯುತ್ತ, ಸೊಸೆಯರೊಂದಿಗೆ ಸಮಯ ಕಳೆಯುತ್ತಾರೆ.
    ಪುಟ್ಟಿಯ ಮದುವೆ. ಮದುವೆ ಮನೆಯ ಗದ್ದಲ ತಾಳುವ ಶಕ್ತಿ ಇಲ್ಲದಿದ್ದರೂ ಅಜ್ಜಿ ಸಂಭ್ರಮದಿಂದ ಪುಟ್ಟಿಯ ಮದುವೆಗೆ ೧ ತಿಂಗಳು ಮುಂಚೆ ಬಂದಿರುವರು.

    ಅಜ್ಜಿ : ಪುಟ್ಟಿ, ಈ ಸರ ಹಾಕಿಕೊಳ್ಳ, ನಮ್ಮ ಅವ್ವಂದು..
    ಪುಟ್ಟಿ : ಅಜ್ಜಿ, ಅಷ್ಟು ಹಳೆ ಸ್ಟೈಲ್ ಯಾರು ಹಾಕ್ಕೋತಾರ?

    ಅಜ್ಜಿ : ನಮಗೇನು ಗೊತ್ತಾಗಬೇಕವಾ, ನಾವು ಹಳೇ ಕಾಲದವರು. ಆತು, ನಿನಗ ಹೆಂಗ ಬೇಕೋ ಹಂಗ ಇದನ್ನ ಮುರಿಸಿ ಮಾಡಿಸಿಕೋ. ಅಂದಂಗ, ನಿನಗಂತ ಅರಳಿಟ್ಟು ತಂದೇನಿ, ನಿನ್ನ ಗಂಡನ ಮನಿಗೆ ತೊಗೊಂಡು ಹೋಗು...
    ಪುಟ್ಟಿ : ಥ್ಯಾಂಕ್ಸ್ ಅಜ್ಜಿ!

    ಅಜ್ಜಿ : ಹೋಗ, ನನಗ್ಯಕ ಥ್ಯಾಂಕ್ಸ್-ಪೀಂಕ್ಸ್ ಹೇಳತಿ..


    ಪುಟ್ಟಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಳು. ಅಜ್ಜಿ ಅವಳ ಕಾರಿನ ಹಿಂದೆ ಹೋಗುತ್ತ ಅಳುವರು ಮತ್ತು ತಮ್ಮ ಮಗಳಿಗೆ ಸಮಾಧಾನ ಮಾಡುವರು, "ಅಳಬ್ಯಾಡ ಶಕು, ಹೆಣ್ಣು ಮಕ್ಕಳು ಅಂದರೆ ಹಿಂಗನವ, ಹಿಂಗ ಒಂದಲ್ಲ ಒಂದು ದಿನ ಗಂಡನ ಮನಿಗೆ ಹೋಗವರ, ನೀನೂ ಹಿಂಗ ಹೋಗಿದ್ದ್ಯವಾ ..."

    ಫಾಸ್ಟ್ ಫಾರವರ್ಡ್ - ೧೦ ವರ್ಷದ ಬಳಿಕ:

    ದೇವಯಾನಿ ಈಗ ತನ್ನ ಗಂಡ ಸೌರಭನೊಂದಿಗೆ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾಳೆ. ಅವಳಿಗೀಗ ಕಂಪ್ಯುಟರಿನ ಉದ್ಯೋಗ. ಬೆಳೆಸಿಕೊಂಡ ಹತ್ತಾರು ಹವ್ಯಾಸ, ವೀಕೇಂಡ ಟ್ರೆಕ್ಕಿಂಗ್/ಕ್ಯಾಂಪಿಂಗ್, ಕನ್ನಡ ಸಂಘ, ಜಿಮ್, ಕಿಟ್ಟಿ ಕ್ಲಬ್, ಮಗಳು ಸಮುದ್ಯತಾಳ ಹೋಮ್ ವರ್ಕ್, ಇತ್ಯಾದಿಗಳ ನಡುವೆ ಒಮ್ಮೊಮ್ಮೆ ಉಸಿರು ಬಿಡಲೂ ಆಗದಷ್ಟು ಕೆಲಸ, ಒಟ್ಟಿನಲ್ಲಿ ಬಿಡುವಿಲ್ಲದ ಓಟದ ಬದುಕು.
    ಒಂದು ಮುಂಜಾನೆ. ಸೌರಭ ತನ್ನ ಬೊಜ್ಜು ಕರಗಿಸಲು ಜಿಮ್ಮಿಗೆ ಹೋಗಿದ್ದಾನೆ. ದೇವಯಾನಿ (ಗಡಿಬಿಡಿಯಿಂದ ಸೀರಿಯಲ್ ಮತ್ತು ಹಾಲು ಕಲೆಸುತ್ತ ತನ್ನ ೪ ವರ್ಷದ ಮಗಳಿಗೆ) -

    Devyani : Samu, it's time for school, have your breakfast
    Samu : I don't want it mommy, I want uttappa

    Devyani : Samu, I am late for work. I have to pick up dry cleaning on my way. Eat this now, I will make uttappas over the weekend.


    ಸಮು (ಗಂಟು ಮುಖ ಹಾಕಿಕೊಂಡು ) ಸೀರಿಯಲ್ ನೋಡುವಳು. ಫೋನ್ ಬಾರಿಸಿದ ಸದ್ದು.

    ದೇವಯಾನಿ ಫೋನ್ ಎತ್ತಿ, "ದೇವಯಾನಿ ಹಿಯರ್". ಅತ್ತ ಕಡೆಯಿಂದ ಒಂದು ಕ್ಷಣ ಮೌನ, ಆಮೇಲೆ ಒಂದು ಕ್ಷೀಣ ಧ್ವನಿ, "ಪುಟ್ಟಿ, ನೀನ ಎನ?"
    ದೇವಯಾನಿ "wrong number" ಅನ್ನಬೇಕೆಂದವಳು ಒಂದು ಕ್ಷಣ ತಡೆದು, "ಯಾರು?" ಅತ್ತ ಕಡೆಯಿಂದ,"ದೇವಯಾನಿ ಬೇಕಾಗಿತ್ತು"

    ದೇವಯಾನಿ : "ಅಜ್ಜಿ?!!!"
    ಅಜ್ಜಿ : "ಪುಟ್ಟಿ, ಹೆಂಗಿದ್ದಿಯವ್ವಾ? ನಿನ್ನ ನೆನಪು ಭಾಳ ಆಗಿತ್ತವಾ.ಅದಕ್ಕ ನಿಮ್ಮ ಮಾಮಾಗ ಫೋನ್ ಹಚ್ಚಿ ಕೊಡಪ ಅಂದೆ.."

    ದೇವಯಾನಿ : ಅಜ್ಜಿ, ನಾನು ವಾಪಸ್ ಫೋನ್ ಮಾಡತೇನಿ, ನೀನು ಫೋನ್ ಇಡು
    ಅಜ್ಜಿ : ಇರಲಿ, ಮಾತಾಡು

    ದೇವಯಾನಿ : ಹೆಂಗಿದ್ದಿ ಅಜ್ಜಿ?
    ಅಜ್ಜಿ : ಅರಾಮಿದ್ದೇನವ ಪುಟ್ಟಿ, ಸಮು ಹೆಂಗಿದ್ದಾಳ?

    ದೇವಯಾನಿ : ಭಾಳ ತಿರಕಚ್ಛ ಆಗೇದ ಅಜ್ಜಿ ಅಕಿಗೆ, ನನ್ನ ಮಾತು ಒಟ್ಟ ಕೇಳಂಗಿಲ್ಲ
    ಅಜ್ಜಿ : ಮಕ್ಕಳು ಹಂಗನವಾ. ನೊಡು ಪುಟ್ಟಿ, ಅಕಿನ್ನ ಬೈಯ್ಯಬ್ಯಾಡ ನೀನು

    ದೇವಯಾನಿ : ಇಲ್ಲ ಅಜ್ಜಿ, ಆದರ ಭಾಳ ಹಟಾ ಮಾಡತಾಳ
    ಅಜ್ಜಿ : ಪುಟ್ಟಿ..

    ದೇವಯಾನಿ : ಹೇಳು ಅಜ್ಜಿ
    ಅಜ್ಜಿ : ಯಾಕೋ ನಿನ್ನ ನೆನಪು ಭಾಳ ಆಗೇದವಾ, ಒಂದು ಸರ್ತಿ ಬಂದು ಹೋಗು

    ದೇವಯಾನಿ : ಹೆಂಗ ಬರಲಿ ಅಜ್ಜಿ? ಈಗ ಸಮುನ್ನ ಸ್ಕೂಲ್ ಹಾಕಬೇಕು, ಸೌರಭಗ ಮತ್ತ ನನಗ ರಜಾ ಇಲ್ಲ
    ಅಜ್ಜಿ : ಇರಲಿ ಬಿಡು. ನಿಮ್ಮದು ಮೊದಲು ನೊಡ್ರಿ. ಪುಟ್ಟಿ, ನಿನಗಂತ ಅರಳಿಟ್ಟು ಮಾಡೇನಿ, ಯಾರರ ಬರುವವರು ಇದ್ದರ ಹೇಳವಾ...


    ದೇವಯಾನಿಗೆ ಮಾತೆ ಹೊರಡದು, ಕಣ್ಣಲ್ಲಿ ನೀರು. ಕೈಯಲ್ಲಿ ಫೋನ್ ಹಿಡಿದು ಸಮುನ್ನ ನೊಡುವಳು. ಸಮು ಇನ್ನು ಗಂಟು ಮುಖ ಹಾಕಿಕೊಂಡು ಸೀರಿಯಲ್ ತಿನ್ನುವ ಪ್ರಯತ್ನದಲ್ಲಿದಾಳೆ.

    ದೇವಯಾನಿ : ಅಜ್ಜಿ, ಹೇಳತೇನಿ ತೊಗೋ
    ಅಜ್ಜಿ : ಆತು, ನಾನು ಫೋನ್ ಇಡತೇನವಾ....


    ಫೋನ್ ಇಟ್ಟ ತಕ್ಷಣ ದೇವಯಾನಿಯ ಮನಸು, ಹೇಳದೆ-ಕೇಳದೆ ವೇಗದಿಂದ ಫಾಸ್ಟ್-ಫಾರ್ವರ್ಡ್ ಅಗುತ್ತಿರುವ ಜೀವನದ ರೀಲನ್ನು ಸ್ವಲ್ಪ ಸ್ವಲ್ಪ ರಿವೈಂಡ್ ಮಾಡತೊಡಗಿತು. ಯಾವುದೇ ಆಧುನಿಕ ಅನುಕೂಲತೆ-ಸೌಲಭ್ಯಗಳೂ ಇಲ್ಲದ ಅಜ್ಜಿಯ ಮನೆ ಥಟ್ಟನೆ ನೆನಪಿಗೆ ಬಂತು. ಸುಣ್ಣ ಬಣ್ಣ ಕಾಣದ ಮನೆಯನ್ನು ಇನ್ನಷ್ಟು ಅಂದಗೊಳಿಸಲೆಂದೇ, ಭೋರೆಂದು ಸುರಿವ ಮಳೆ, ಆ ಮಳೆಗೆ ಅಲ್ಲಲ್ಲಿ ಸೋರುವ ಮನೆ, ಸೋರಿದಾಗ ನೀರು ಹರಿಯದಿರಲೆಂದು ಇಟ್ಟ ಕೊಡ, ಬಕೆಟ್ಟುಗಳು, ಸೋರಿಕೆಯ ಹಸಿ ಕಟ್ಟಿಗೆಯ ಉರಿಹಚ್ಚಿ, ಹೊಗೆ ಎಬ್ಬಿಸಿಕೊಂಡು, ಕೆಮ್ಮುತ್ತ, ಊದುಗೊಳವೆಯಿಂದ ಊದುತ್ತ ಮಾಡುವ ಅಜ್ಜಿಯ ಕಸರತ್ತು, ಆ ಹೊಗೆಗೆ ಕಪ್ಪಾಗಿ ಮಸಿ ಹಿಡಿದ ಕಟ್ಟಿಗೆ/ಇದ್ದಿಲು ಒಲೆಗಳು, ಪಕ್ಕದಲ್ಲಿಯೆ ಇರುವ ರುಬ್ಬಲು ಇರುವ ಕಲ್ಲಿನ ಕರಿ ಒಳ್ಳು, ಅದರ ಸಂಗಾತಿಗಳಾದ ಭಾರವಾದ ರುಬ್ಬು-ಗುಂಡು, ಹಾರೆ, ಕುಡಿವ ನೀರಿನ ತಾಮ್ರದ ದೊಡ್ದ ಹಂಡೆಗಳು ಮತ್ತು ಆ ಹಂಡೆಗಳ ತುಂಬಲು ಬೆಳಿಗ್ಗೆಯಿಂದಲೇ ಪಕ್ಕದ ಓಣಿಯ ಬಾವಿಯ ಸೇದುವ, ಸೋದರ ಮಾವಂದಿರು ಮತ್ತು ಚಿಕ್ಕಮ್ಮಂದಿರು!
    ಬಡತನವಿದ್ದರೂ ವಿದ್ಯೆ-ದಾನ, ಅನ್ನ-ದಾನಕ್ಕೆ ಇಟ್ಟುಕೊಂಡ ವಾರಾನ್ನದ ಹುಡುಗರು, ಸಾಲದ್ದಕ್ಕೆ ಯಾವಗಲೂ ಇರುವ ಅತಿಥಿಗಳು, ಎಲ್ಲರಿಗು ಭಕ್ಕರಿ ಬಡಿಯುವಾಗ, ಹಬ್ಬ-ಹರಿದಿನಗಳಲ್ಲಿ ನಾನಾ ವಿಧದ ಪಂಚ-ಪಕ್ವಾನ್ನ ಮಾಡುವದರಲ್ಲಿ ಅಜ್ಜಿ ಎಂದೂ ಬೇಸರಗೊಂಡಿದ್ದೇ ಇಲ್ಲ, ಕೆಲಸ ಜಾಸ್ತಿಯಾಯಿತು ಅಂತ ಗೊಣಗಿದ್ದೇ ಇಲ್ಲ, ಮುಖ ಸಿಂಡರಿಸಿದ್ದಿಲ್ಲ. ಸದಾ ಕೆಲಸ ಮಾಡುತ್ತ, ದಣಿವಾದಾಗ ದೇವರ ನಾಮ-ಸ್ಮರಣೆ ಮಾಡುತ್ತ, 'ಅನ್ನ-ಪೂರ್ಣೇಶ್ವರಿ'ಯಾಗಿ ಜನರಿಗೆ ಉಣ-ಬಡಿಸುವದರಲ್ಲಿಯೆ ಸಂತೃಪ್ತಿ ಕಾಣುತ್ತಿದ್ದ ಅಜ್ಜಿ, ಅಜ್ಜ ಕೊನೆಕಾಲದಲ್ಲಿ ಅಸ್ಥಮಾ ಕಾಯಿಲೆಯಿಂದ ನರಳುತ್ತಿರುವಾಗ ಹಗಲಿರುಳು ಅಜ್ಜಿ ಮಾಡಿದ ಸೇವೆ, ಮನೆಯಲ್ಲಿ ಕೆಲಸ-ಕಾರ್ಪಣ್ಯಗಳನ್ನ ಬೇಸರಿಸಿದೆ ಮಾಡಿ, ಅಕ್ಕ-ಪಕ್ಕದವರಿಗೂ ಸಹಾಯವಾಗುತ್ತಿದ್ದ ಸೋದರಮಾವಂದಿರು, ಚಿಕ್ಕಮ್ಮಂದಿರು, ಇಷ್ಟಾಗಿಯು, ಮನೆಯಲ್ಲಿ ಯಾವಗಲು ಹರಟೆ, ನಗೆ-ಚಾಟಿಗೆ, ನಗೆಯ ಹೊಳೆ!

    ಮತ್ತೆ ದೇವಯಾನಿಯ ಮನಸು ಇಂದಿನ ಬದುಕಿನತ್ತ ಇಣುಕಿತು. ಇಂದು ಎಲ್ಲ ಆಧುನಿಕ ಸೌಲಭ್ಯಗಳನ್ನ ಹೊಂದಿರುವ ಮನೆ, ಏರ್-ಕಂಡಿಷನರ್, ವಾಶರ್-ಡ್ರಾಯರ್, ಡಿಶ್-ವಾಶರ್, ಗ್ಯಾಸ್ ಸ್ಟೋವ್, ಮೈಕ್ರೊ-ವೇವ್, ರೆಫ್ರಿಜರೇಟರ್, ಮಿಕ್ಸಿ-ಗ್ರೈಂಡರ್, ಸಾಲದ್ದಕ್ಕೆ ಕಷ್ಟ ಆಗಬರದೆಂದೇ ಬಂದಿರುವ ಇನಸ್ಟಂಟ್-ಮಿಕ್ಸ್ ಗಳು. ಆದರೂ ಈ ಆರಾಮಗಳನ್ನ ಅನುಭವಿಸುವ ವ್ಯವಧಾನವಾಗಲಿ, ಸಂಯಮವಾಗಲಿ ಇಲ್ಲ. ನೀರು ತುಂಬುವದಿಲ್ಲ, ವಿದ್ಯುತ್ ಹೋಗುವದಿಲ್ಲ, ಬಸ್ಸಿಗೆ ಕಾಯುವ ಪ್ರಮೇಯವಿಲ್ಲ ಇತ್ಯಾದಿಗಳಿಂದ ಬದುಕು ಎಷ್ಟೇ ಸರಳಗೊಂಡಿದ್ದರೂ, ಏನೊ ಬದುಕಿನಲ್ಲಿ ಒಂದು ಬಿಗುಮಾನ, ಯಾಕೋ ಒಂದು ಟೆನ್ಷನ್, ನಗುವನಂತೂ ಹುಡುಕಿಕೊಂಡು ಹೋಗಬೇಕು! ಕೊರತೆಗಳಿದ್ದರೂ ಕೊರತೆಗಳಿಲ್ಲದಂತೆ ಬದುಕುತ್ತಿದ್ದ ಅಜ್ಜ-ಅಜ್ಜಿಯ ದಿನಗಳನ್ನ, ಕೊರತೆಗಳಿಲ್ಲದಿದ್ದರೂ ತೀವ್ರ ಕೊರತೆಯಿರುವಂತೆ ಬದುಕುತ್ತಿರುವ ಇಂದಿನ ದಿನಗಳನ್ನ ತುಲನೆಮಾಡಿ, ದೇವಯಾನಿಗೆ ಪಿಚ್ಚೆನಿಸಿತು. ಯಾವುದನು 'ಹಳೆಯದೆಂದು', 'ಓಲ್ಡ್-ಫ್ಯಾಶನ್' ಎಂದು ತಾತ್ಸಾರ ಮಾಡುತ್ತಿದ್ದಳೊ, ಅದರಿಂದ ಕಲಿಯಲು ಇರುವ ವಿಷಯಗಳೆಷ್ಟು ಅಂತ ಅಚ್ಚರಿ ಪಡುತ್ತ, ಅದರ ಬಗ್ಗೆ ಗೌರವಾದರಗಳನ್ನ ಹೆಚ್ಚಿಸಿಕೊಂಡು, ಸಮುನ್ನ ಹತ್ತಿರ ಬಂದು,

    "samu, you don't have to eat that. Let me make uttapas for you.." ಅನ್ನುತ್ತ ಸೀರಿಯಲ್ ತೆಗೆದುಕೊಂಡು ಹೋಗುವಳು. ಫೋನ್ ಎತ್ತಿ ದೇವಯಾನಿ, , "Chris, I will be late to work. "

    ಅನ್ನುತ್ತ ಫೋನ್ ಇಡುವಳು. ಸಮುವಿನ ಮುಖದ ಮೇಲೆ ದೊಡ್ಡ ಮುಗುಳ್ನಗೆ...

    (ಪ್ರೇರಣೆ - ನಮ್ಮ ಅಜ್ಜಿ (ತಾಯಿಯ ತಾಯಿ) ಮತ್ತು ಆಪ್ತ ಸ್ನೇಹಿತೆ ರಾಜಿ ಮೋಹನ್ )

    ಮರೆಯಾಗುತ್ತಿರುವ ವಡಪು ಹೇಳುವ ಕಲೆ


    ಶ್ರೀಮತಿ ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ

    ನಮ್ಮ ಬಳಗದ ರಾಜ್‌ಪ್ರಕಾಶ್ ಅಲಿಯಾಸ್ ಪ್ರಕಾಶ ರಾಜಗೋಳಿ ಅವರ ತಾಯಿಯಾದ ಶಾಂತಾ ಅವರು ಟಿಪಿಬಳಗ ಬ್ಲಾಗ್‍ಗಾಗಿ ಉತ್ತರಕರ್ನಾಟಕದ ಗ್ರಾಮೀಣ ಸೊಗಡಿನ ಪರಿಚಯವನ್ನು ಜಾನಪದ ಗೀತೆಗಳ ಮೂಲಕ ಮಾಡಿ ಕೊಟ್ಟಿದ್ದಾರೆ. ಮೊಮ್ಮಕ್ಕಳಾದ ದರ್ಶನ್ ಹಾಗೂ ಅಂಕಿತಾ ಅವರ ಆಗಮನದ ಸಡಗರದಲ್ಲಿರುವ ಇವರು ಇನ್ನೂ ಅನೇಕ ಜಾನಪದ ಗೀತೆಗಳನ್ನು ಕೊಡಲಿಚ್ಚಿಸಿದ್ದರು. ಆದರೆ ನಾವೇ ಮುಂದಿನ ದಿನಗಳಿಗೆ ಅಂತಾ ಸ್ವಲ್ಪಾ ಮೀಸಲಿಟ್ಟಿದ್ದೇವೆ. ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ದಾಳಿಗೆ ತತ್ತರಿಸಿ ತಾಲೂಕು ಸ್ಥಾನವನ್ನು ಬೈಲಹೊಂಗಲಕ್ಕೆ ಬಿಟ್ಟುಕೊಟ್ಟ ಸಂಪಗಾವಿ ಊರಿನವರಾದ ಇವರು ಯರಡಾಲದ ಸೋದರಮಾವ ಶ್ರೀಯುತ ಚಂದ್ರಶೇಖರ ರಾಜಗೋಳಿಯವರನ್ನು ವರಿಸಿ ೪೦+ ವರ್ಷಗಳ ತುಂಬು ಸಂಸಾರ ಜೀವನ ನಡೆಸುತ್ತಿದ್ದಾರೆ.



    ಉತ್ತರ ಕರ್ನಾಟಕದ ಕಡೆ ಶುಭ ಸಮಾರಂಭಗಳಲ್ಲಿ ಆರತಿ ಮಾಡುವ ಸಂದರ್ಭಗಳಲ್ಲಿ ಮುತ್ತೈದೆಯರು ತಮ್ಮ ಗಂಡನ ಹೆಸರು ಹೇಳುವಾಗ ಬಳಸುವ ಚುಟುಕುಗಳಿಗೆ ವಡಪುಗಳು ಎಂದು ಕರೆಯುತ್ತಾರೆ. ಈಗಿನವರಿಗೆ ಈ ರೀತಿ ವಡಪುಗಳನ್ನು ಹೇಳಲೂ ಬರುವದಿಲ್ಲ ಮತ್ತು ಅಷ್ಟೊಂದು ಸಮಯವೂ ಇರುವುದಿಲ್ಲ. ಆದರೆ ನಮ್ಮ ಕಾಲದಲ್ಲಿ ತುಂಬಾ ಬಳಕೆಯಲ್ಲಿದ್ದ ಮತ್ತು ಸಧ್ಯಕ್ಕೆ ನಶಿಸುತ್ತಿದೆ ಎನ್ನಬಹುದಾದ ವಡಪುಗಳ ಬಗ್ಗೆ ಒಂದು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ.

    ಗಂಡನ ಯೋಗಕ್ಷೇಮವೇ ಹೆಂಡತಿಯ ಆದ್ಯ ಕರ್ತವ್ಯ ಆಗಿರುವದರಿಂದ ವಡಪುಗಳಲ್ಲಿ ಈ ರೀತಿ ಹೇಳಬಹುದು.

    "ಅರಗಿಳಿಗೆ ಸೇರುವದು ಆಲದ ಹಣ್ಣು
    ...........ಅವರ ಕೈಯಲ್ಲಿ ಕೊಡುವೆನು ಬಾಳೆಹಣ್ಣು"

    ( ಸೂಚನೆ : ............ ಇದ್ದಲ್ಲಿ ಗಂಡನ ಹೆಸರನ್ನು ಸೇರಿಸಿಕೊಳ್ಳುವದು)

    "ಆಕಾಶದಲ್ಲಿ ಇರುವದು ಹಾಲಕ್ಕಿ
    ಅಂಗಡಿಯಲ್ಲಿ ಇರುವದು ಏಲಕ್ಕಿ
    ...........ಅವರ ಕೈಯಲ್ಲಿ ಕೊಡುವೆನು ಚಹಾ ಅವಲಕ್ಕಿ"
    "ಶಕುಂತಲೆ ಅತ್ತೆಯ ಮನೆಗೆ ಹೋಗುವಾಗ
    ಸಖಿಯರಿಗೆ ಆಗುವದು ಚಡಪಡಿಕೆ
    ........ಅವರ ಕೈಯಲ್ಲಿ ಕೊಡುವೆನು ಎಲೆಅಡಿಕೆ"


    ಆಂಗ್ಲರು ನಮ್ಮನ್ನು ಆಳುತ್ತಿದ್ದಾಗ ಮತ್ತು ಇಂಗ್ಲೀಷ್ ಪ್ರಾಮುಖ್ಯತೆ ಪಡೆದಿದ್ದಾಗ ಅದನ್ನೇ ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಂಡಿರುವ ಬಗೆ ಹೇಗಿದೆ ನೋಡಿ . . . !

    "ಅತ್ತಿಯವರಿಗೆ ಬೇಕು ಅತ್ತಿ ಹೂವಿನ ಮಡಿ
    ಮಾವನವರಿಗೆ ಬೇಕು ಮಲ್ಲಿಗೆ ಹೂವಿನ ಮಡಿ
    ನನಗೆ ಬೇಕು ಕ್ಯಾದಿಗೆ ಮಡಿ
    ..........ಅವರಿಗೆ ಬೇಕು ಇಂಗ್ಲೀಷ್ ನುಡಿ"


    ತನ್ನ ಗಂಡನ ಕೆಲಸದ ಬಗ್ಗೆ ಮುತ್ತೈದೆ ಮೆಚ್ಚುಕೆ ವ್ಯಕ್ತಪಡಿಸಿದ್ದು ಹೀಗೆ.

    "ಮಲ್ಲಿಗೆ ಹೂವಿನ ಮಂದಾರ
    ಶ್ರೀಗಂಧದ ಬಾಜೀದಾರ
    ಕಂಪನಿ ಕಾರಬಾರದಾಗ ಇಂಗ್ಲೀಷ್ ದರಬಾರ್ ನಡಸ್ತಾರ್......"
    "ಗೋಟು ಪಾಟ್ಲಿ ಹಿಂದ
    ರಾಜ ವರ್ಕಿ ಮುಂದ
    .......ರು ಬರುವ ತನಕ ಕಛೇರಿಯಲ್ಲ ಬಂದ್"



    ತನ್ನ ಗಂಡ ತನ್ನ ಸುತ್ತ ಸುತ್ತುತ್ತಾನೆ ಮತ್ತು ತನ್ನ ಹೂವಿನ ಮೇಲಿನ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅಂತ ಕಾವ್ಯಮಯವಾಗಿ ವಡಪುಗಳಲ್ಲಿ ಗರತಿ ಹೇಳುವದು ಹೀಗೆ.

    "ಅತ್ತಿ ಹೆಸರು ಅತ್ತಿಗೆ ಹೂವು
    ಮಾವನ ಹೆಸರು ಮಲ್ಲಿಗೆ ಹೂವ
    ನನ್ನ ಹೆಸರು ಸುಗಂಧಿ ಹೂವ
    ಸುಗಂಧಿ ಹೂವಿನ ಮುಂದ ಸುಳಿದಾಡತಾರ......."
    "ತಾಜ ಮಲ್ಲಿಗಿ ಜೂಜ ಮಲ್ಲಿಗಿ ಮಧ್ಯಾಹ್ನ ಮಲ್ಲಿಗಿ
    ತುಗೊಂಡ ಇದ್ದಲ್ಲಿಗೆ ಬರತಾರ ............."


    ಸ್ವಲ್ಪ ಆಧುನಿಕತೆಯನ್ನು ಒಳಗೊಂಡು ತಯಾರಾದ ಒಂದು ವಡಪು.
    "ಆಗ್ರಾದಲ್ಲಿರುವದು ತಾಜಮಹಲ್
    ........ರ ತೇಜವಿರುವದು ನನ್ನ ಕುಂಕುಮದ ಮೇಲ್"


    ದೇಶದ ಆಗುಹೋಗುಗಳನ್ನು ಗರತಿ ಗಂಡನ ಹೆಸರು ಹೇಳುವಾಗ ಬಳಸಿಕೊಳ್ಳುವದು ಹೇಗಿದೆ ನೋಡಿ....
    "ಆಂಗ್ಲರಿರುವದು ಇಂಗ್ಲಂಡಿನಲ್ಲಿ
    ಕಾಂಗ್ರೆಸ್ಸಿನವರಿರುವದು ಭಾರತದಲ್ಲಿ
    ..........ರು ಕಟ್ಟಿದ ಮಂಗಳಸೂತ್ರವಿರುವದು ನನ್ನ ಕೊರಳಲ್ಲಿ"

    (ಕಾಂಗ್ರೆಸ್ಸಿನವರಿರುವದು ಎನ್ನುವ ಜಾಗದಲ್ಲಿ ಬೇರೆ ಪಕ್ಷಗಳ ಹೆಸರು ಸಹ ಬಳಸಿಕೊಳ್ಳಬಹುದು)


    ಪತಿಯೇ ಪರದೈವ ಪತಿಯ ಪಾದಸೇವೆಯೆ ಪರಮ ಭಾಗ್ಯ ಎಂದು ನಂಬಿದ ಗೃಹಿಣಿ ಗಂಡನ ಹೆಸರನ್ನು ಹೀಗೆ ಹೇಳುತ್ತಾಳೆ.

    "ನೀರಲ್ಲಿ ಕಾಣುವದು ನೆರಳು
    ನಾರಿ ಹಾಕುವಳು ಹೆರಳು
    ........ರ ಪಾದವೆ ನನಗೆ ವಜ್ರದ ಹರಳು"


    ವಡಪು ಹೇಳುವಾಗ ನೆರೆದ ಎಲ್ಲರಿಗೂ ತನ್ನ ಹೆಸರೂ ಗೊತ್ತಾಗಲಿ ಎಂಬ ಉದ್ದೇಶದಿಂದ ಪೌರಾಣಿಕ ಸನ್ನಿವೇಶವೊಂದನ್ನು ಬಳಸಿಕೊಂಡು ವಡಪು ನಿರ್ಮಾಣ ಮಾಡಿದ ರೀತಿ ಹೇಗಿದೆ ನೋಡಿ.

    "ವಿಶ್ವಾಮಿತ್ರನ ತಪಸ್ಸನ್ನು ಭಂಗ ಮಾಡಿದವಳು ಮೇನಕೆ ಎಂಬ ವಾರಾಂಗಿನಿ
    .........ರ ಹೆಸರು ಹೇಳುವೆನು.......ಎಂಬ ಅರ್ಧಾಂಗಿನಿ"


    ತನ್ನ ಗಂಡ ತನ್ನನ್ನು ಬಹಳ ಪ್ರೀತಿಸುತ್ತಾನೆ ಎಂದು ವಡಪಿನಲ್ಲಿ ಹೇಳುವಾಗ ಸತಿಗೆ ಮಹದಾನಂದ.

    "ಹಾವಿಗೆ ಹುತ್ತ ಚೆಂದ
    ಕೊರಳಿಗೆ ಮುತ್ತ ಚೆಂದ
    ..........ರಿಗೆ ನಾನೇ ಚೆಂದ"

    ತನ್ನ ಮೆಚ್ಚಿನ ಗಂಡನ ಹಡೆದವಳ(ತಾಯಿ) ಬಗ್ಗೆ ಪ್ರೀತಿ ವ್ಯಕ್ತ ಮಾಡುವಾಗ ಹುಟ್ಟಿದ ಒಂದು ವಡಪು.

    "ರತ್ನದ ವೃಂದಾವನ ಮುತ್ತಿನ ತುಳಸಿಕಟ್ಟೆ
    ಅತ್ತಿಯವರ ಹೊಟ್ಟಿಲಿ ಮುತ್ತಿನಂತವ್ರು ಹುಟ್ಟ್ಯಾರ....."


    ನಮ್ಮಲ್ಲಿ ಸೋಬಾನೆ, ಬಳೆ ಇಡಿಸುವದು, ಉಡಿ ತುಂಬುವದು, ಸೀರೆ ಮಾಡುವದು, ನಾಮಕರಣ ಮುಂತಾದ ಕೆಲಸಗಳು ನಡೆಯುವದು ಹೆಚ್ಚಾಗಿ ಸಾಯಂಕಾಲದಲ್ಲಿ ಅದನ್ನೇ ತನ್ನ ವಡಪಿನಲ್ಲಿ ಗರತಿ ಬಳಸಿಕೊಂಡಿದ್ದು ಹೀಗೆ.

    "ಕಿತ್ತೂರು ಚೆನ್ನಮ್ಮನ ಮೂಗಿನಲ್ಲಿ ಇರುವದು ವಜ್ರದ ಹರಳಿನ ನತ್ತು
    .........ರ ಹೆಸರು ಹೇಳುವೆನು ಮೂರುಸಂಜಿ ಹೊತ್ತು"


    (ಮೂರುಸಂಜಿ- ಇದು ಮುಸ್ಸಂಜೆಯ ಗ್ರಾಮೀಣ ರೂಪ)

    ಹೆಣ್ಣು ಮಕ್ಕಳಿಗೆ ತವರೆಂದರೆ ಪಂಚ ಪ್ರಾಣ ಹೀಗಾಗಿ ತನ್ನ ತವರಿನ ಬಗ್ಗೆ ಮತ್ತು ತನ್ನ ತವರಿನವರ ಬಗ್ಗೆ ಆಕೆ ವಡಪು ಹೇಗೆ ತಯಾರಿಸುತ್ತಾಳೆ ನೋಡಿ.

    "ಗಾಂಧೀಯವರು ಉಡುವದು ಮೂರು ಮಳದ ಪಂಜಿ
    .............ರ ಹೆಸರು ಹೇಳುವೆನು.........ಅವರ ತಂಗಿ"
    "ಈಶ್ವರನಿಗೆ ಏರಿಸುವರು ಮೂರುದಳದ ಪತ್ರಿ
    ...........ರ ಹೆಸರು ಹೇಳುವೆನು.......... ಅವರ ಪುತ್ರಿ"


    ೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ವಚನ ಕ್ರಾಂತಿ ಅನೇಕ ಗೃಹಿಣಿಯರಿಗೆ ವಚನ ಬರೆಯಲು ಪ್ರೇರೆಪಿಸಿತಲ್ಲದೆ ಅವರ ಜೀವನದ ಅನುಭವಾಮೃತಗಳು ನಮ್ಮ ನಾಡಿಗೆ ಅಪೂರ್ವ ಕೊಡುಗೆ ನೀಡಿವೆ. ಹೀಗಿರುವ ಶಿವಶರಣರ ಬಗ್ಗೆ ಅವರ ಬೋಧನೆಗಳ ಬಗ್ಗೆ ತನಗಿರುವ ಅರಿವನ್ನು ಗರತಿ ವಡಪಿನಲ್ಲಿ ಹೇಗೆ ಬಳಸಿಕೊಂಡಿದ್ದಾಳೆ ನೋಡಿ.. !

    "ಅಂಗಕ್ಕೆ ಲಿಂಗವು ಶ್ರೇಷ್ಠ
    ಲಿಂಗಕ್ಕೆ ಜಂಗಮ ಶ್ರೇಷ್ಠ
    ಜಂಗಮಕ್ಕೆ ವಿಭೂತಿ ಶ್ರೇಷ್ಠ
    ವಿಭೂತಿಗೆ ರುದ್ರಾಕ್ಷಿ ಶ್ರೇಷ್ಠ
    ನನಗೆ ನಮ್ಮ.......ರೆ ಶ್ರೇಷ್ಠ"


    ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ವಿನಯ ವಿಧೇಯತೆಗಳನ್ನು ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಳ್ಳುವಾಗ ನಳದಮಯಂತಿಯರ ಪೌರಾಣಿಕ ಕಥೆಯ ಸಹಾಯ ಪಡೆಯುತ್ತಾಳೆ.

    "ನಂದನವನದಲ್ಲಿ ಹಂಸ ಪಕ್ಷಿಯ ಕೂಡ ಮಾತಾಡಿದವಳು ದಮಯಂತಿ
    .......ರ ಹೆಸರು ಹೇಳುವೆನು ನಿಮಗೆ ಮಾಡಿಕೊಳ್ಳುತ್ತ ವಿನಂತಿ"


    ಗಂಡನ ಮನೆ ಬೆಳಗಲು ಬಂದ ಸೊಸೆ ತನ್ನ ಗಂಡನ ಮನೆಯ ಹೆಸರನ್ನು ಶಾಶ್ವತವಾಗಿಡಲು ವಡಪಿನ ಮೊರೆ ಹೋಗಿದ್ದಾಳೆ.
    "ರುಕ್ಮಿಣಿಯು ಶೀಕೃಷ್ಣನಿಗೆ ಓಲೆ ಬರೆಯಲು ಮುತ್ತು ಸುಟ್ಟು ಮಾಡಿದಳು ಮಸಿ
    ................ರ ಹೆಸರು ಹೇಳುವೆನು ............... ಅವರ ಸೊಸಿ"


    ಹೆಂಗಳೆಯರೇ ತುಂಬಿರುವ ಸಮಾರಂಭಗಳಲ್ಲಿ ತಿಳಿ ಹಾಸ್ಯಗಳಿಗೆ ಎನು ಕೊರತೆಯಿಲ್ಲ. ಗಂಡನ ಮನೆಯವರನ್ನು ಚುಡಾಯಿಸಲು ವಡಪಿನ ಸಹಾಯ ಹೇಗೆ ಪಡೆಯಬಹುದು ನೋಡಿ.

    "ಆರ ಹೇರ ಎಳ್ಳ
    ಮೂರ ಹೇರ ಜೊಳ್ಳ
    .............ಅವರ ಮಾತೆಲ್ಲ ಬರೀ ಸುಳ್ಳ"

    (ಹೇರ ಎಂದರೆ ಹಳ್ಳಿಗಳಲ್ಲಿ ಧಾನ್ಯಗಳನ್ನು ಅಳೆಯಲು ಬಳಸುವ ಮಾಪಕ)

    "ಹಳ್ಳದ ಅಚೀಕ ಅವರು
    ಹಳ್ಳದ ಇಚೀಕ ನಾವು
    ಹಳ್ಳದಾಗ ಇಳೀಲಿಲ್ಲ ಮಾರಿ ತೊಳೀಲಿಲ್ಲ
    ...............ಅವರ ನೆಲಿ ನನಗ ತಿಳೀಲಿಲ್ಲ"


    (ನೆಲಿ ಎನ್ನುವದು ನೆಲೆ ಎಂಬುದರ ಗ್ರಾಮ್ಯ ರೂಪ)

    ಕೆಲವೊಬ್ಬರ ಮನೆಗಳಲ್ಲಿ ಕೆಲವೊಂದು ಶುಭಕಾರ್ಯಗಳನ್ನು ಮಾಡುವ ಪದ್ಧತಿ ಇರುವದಿಲ್ಲ ಹೀಗಾಗಿ ಅವರು ತಮ್ಮ ಸಂಬಂಧಿಕರ ನೆರವು ಪಡೆಯಬೇಕಾಗುತ್ತದೆ ಆಗ ಅವರ ಸಹಾಯವನ್ನು ಸ್ಮರಿಸಲೋಸುಗ ಜಾಣ ಗರತಿ ವಡಪಿನಲ್ಲೆ ಅವರ ಉಪಕಾರ ಸ್ಮರಣೆ ಮಾಡುತ್ತಾಳೆ.

    "ಅಕ್ಕಮಹಾದೇವಿ ಐಕ್ಯ ಆದದ್ದು ಕದಳಿ ಬನದಲ್ಲಿ
    ......ರ ಹೆಸರು ಹೇಳುವೆನು.............ಅವರ ಮನೆಯಲ್ಲಿ"


    ತನ್ನ ಗಂಡನ ಮನೆಯವರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಮಾಡಲು ವಡಪಿಗಿಂತ ಬೇರೆ ಸಾಧನ ಇನ್ನೊಂದಿಲ್ಲ ಎಂದರಿತಾಗ ಹುಟ್ಟಿದ ವಡಪು ಇದು.

    "ಶಿವಶರಣೆ ನಮ್ಮತ್ತಿ
    ಶಿವಶರಣ ನಮ್ಮಾವ
    ಲಸಗುನ್ನಿ ಕಾಯಿಯಂತ ನಮ್ಮ ನಾದಿನಿ
    ಲಸ್ಕರದಂತ ನಮ್ಮ ಮೈದುನ
    ಚಂದ್ರಹಾರದಂತ ನಮ್ಮ ರಾಯರು........."


    (ಲಸಗುನ್ನಿ ಕಾಯಿ=ವಿಪರೀತ ಕೆರೆತ ಉಂಟುಮಾಡುವ ಗುಣ ಹೊಂದಿರುವ ಒಂದು ಬಗೆಯ ಗಿಡದ ಕಾಯಿ)
    (ಲಸ್ಕರ=ಒಳ್ಳೆಯವ)

    ತನ್ನ ಗಂಡನ ಸದ್ಗುಣಗಳ ಬಗ್ಗೆ ವಡಪಿನಲ್ಲೆ ಗರತಿ ಹ್ಯಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ ನೋಡಿ.

    "ಸೆರಗಿನ ಸಿಂಬಿ ಅರಗಿನ ಕೊಡ
    ಶೀಲವಂತರ ಮನಿ ಸೀತಾದೇವಿ ಬರತಾಳಂತ
    ಮಾರಿ ನೋಡಿ ದಾರಿ ಬಿಡತಾರ ನಮ್ಮ ರಾಯರು..............."


    ಹೀಗೆ ಹಲವಾರು ವಿಧದಿಂದ ಗಂಡನ ಹೆಸರನ್ನು ಹೇಳುವ ವಡಪು ಹೇಳುವ ಕಲೆಯನ್ನು ಅಳಿಯದಂತೆ ಉಳಿಸಬೇಕಲ್ಲವೆ?
    ಎಲ್ಲರಿಗೂ ಒಳ್ಳೆಯದಾಗಲಿ.