ಪ್ರಿಯಾರಿಟಿಗಳು ಮತ್ತು ಸಂಬಂಧಗಳ ನಡುವೆ ನಾವು ನೀವು..
ತಾಯಿಗೆ ತನ್ನ ಮಗುವೇ ಸರ್ವಸ್ವ. ಒಂದು ಕ್ಷಣವೂ ಬಿಟ್ಟಿರಲಾರದ ಅನಿವಾರ್ಯತೆ, ಅಕ್ಕರತೆ, ಮಮತೆ, ಪ್ರೀತಿ. ಅದು ನಕ್ಕರೆ ಸಂತೋಷ ಅತ್ತರೆ ಕರುಳು ಕಿತ್ತು ಬಂದಂಥ ಅನುಭವ. ಮಗು ತಪ್ಪು ಮಾಡಿದರೆ ಹುಸಿಮುನಿಸು ತೋರಿಕೆ, ಇಲ್ಲಾ ಸ್ವಲ್ಪ ಮಾತಿನ ಗದರಿಕೆ, ಕೈಮೀರಿದರೆ ಪೆಟ್ಟು ನೀಡುವದು ಅನಿವಾರ್‍ಯ. ಮಗು ಬೆಳೆದಂತೆಲ್ಲಾ ಈ ಅಕ್ಕರತೆ, ಮಮತೆ ಸ್ವಲ್ಪ ಮಾಯವಾಗುವದು ಸಹಜ. ಚಿಕ್ಕ ಮಗು ದೇವರ ಸಮಾನ. ಏನು ಮಾಡಿದರೂ ಸರಿಯೇ. ಸಹಿಸಿಕೊಳ್ಳುತ್ತಾಳೆ ತಾಯಿ. ಆದರೆ ಬರುಬರುತ್ತಾ ಮಗುವಿನ ಅವೇ ತಪ್ಪುಗಳು ದೊಡ್ಡದಾಗಿ ಕಾಣಿಸುತ್ತವೆ. ಶಿಕ್ಷೆಗೆ ಮೂಲವಾಗುತ್ತವೆ. ಮಗುವಿಗೂ ಸಹ ಹಾಗೆಯೇ ತನ್ನ ತಾಯಿ ತಂದೆ ಇಲ್ಲವೇ ಅಜ್ಜ, ಅಜ್ಜಿ, ಅಣ್ಣ, ಅಕ್ಕ ಆದರಾಯಿತು ಬೇರೆ ಜಗತ್ತೇ ಬೇಕಾಗಿಲ್ಲ. ಬರುಬರುತ್ತಾ ಮಗು ದೊಡ್ಡದಾದಂತೆ ಇವರಿಂದ ಕ್ರಮೇಣ ದೂರವಾಗುವದು ಸಹಜ ಮತ್ತು ಪ್ರಕೃತಿ ನಿಯಮ.
ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?
ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?
ಪ್ರೀತಿಸುವ ಹುಡುಗ ಅಥವಾ ಹುಡುಗಿಗೆ ಸಂಗಾತಿಯೇ ಸರ್ವಸ್ವ. ಒಂದು ಕ್ಷಣವೂ ಅಗಲಿರಲಾರದ ಭಾವುಕತೆ. ವಿಷಯಗಳನ್ನು ಹುಡುಕಿ ಹುಡುಕಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಪತ್ರ, ಫೋನು, ಈ-ಮೇಲು ಬಾರದೆ ಇದ್ದರೆ ಜಗತ್ತೇ ಮುಳುಗಿ ಹೋದ ಅನುಭವ. ಒಂದು ನಲುಮೆಯ ಮಾತಿಗೆ, ದೂರದ ಫೋನಿಗೆ, ಪ್ರೀತಿಯ ಮುತ್ತಿಗೆ, ಬರ್ತ್‌ಡೇ ಗ್ರೀಟಿಂಗ್ ಕಾರ್ಡಿಗೆ, ಭಾವನೆಗಳನ್ನು ಹೊತ್ತು ತರುವ ಪತ್ರಕ್ಕೆ, ಸಮಕ್ಷಮ ಭೇಟಿಗೆ ಅದೇನು ತಹತಹಿಕೆ, ಯಾತನೆ, ಕಾಯುವಿಕೆ ಅನುಭವಿಸಿದವರೇ ಬಲ್ಲರು. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳು, ಹಲವಾರು ರೀತಿಯಲ್ಲಿ ಸಹಕರಿಸಿದ ಸಂಬಂಧಿಗಳು, ಹೊಗಳಿ-ಬೈದು ಬುದ್ಧಿ ಹೇಳಿದ ಹಿತೈಷಿಗಳು, ಸುಖ ದುಃಖಗಳಲ್ಲಿ ಸಹಭಾಗಿಯಾದ ಮಿತ್ರರು ಎಲ್ಲರೂ ಗೌಣ. ಪ್ರೀತಿಯ ಬಿಸಿ ತಣ್ಣಗಾಗುವವರೆಗೆ ಎಲ್ಲವೂ ಇದೆ ತರಹ. "ಪ್ಯಾರ್ ಕಿಯಾ ತೊ ಡರನಾ ಕ್ಯೊಂ" ಅನ್ನೋ ರೀತಿ. ಮನೆ ನಡೆಸುವ ಜವಾಬ್ದಾರಿ, ಮಕ್ಕಳನ್ನು ಸಾಕುವ ಜವಾಬ್ದಾರಿ ಶುರುವಾಗುವವರೆಗೆ ಇದರ ಮುಂದುವರಿಕೆ.
ಮದುವೆಯಾದ ಹೊಸದರಲ್ಲಿ ಗಂಡನಿಗೆ ಹೆಂಡತಿ ಅಥವಾ ಹೆಂಡತಿಗೆ ಗಂಡ ಜೀವ, ಜೀವನ, ಜಗತ್ತು ಎಲ್ಲಾ. ಒಬ್ಬರನ್ನೊಬ್ಬರು ಬಿಟ್ಟಿರಲಾರರು ಎನ್ನುವ ಅನಿವಾರ್ಯತೆ, ಅನ್ಯೋನ್ಯತೆ, ಅನುರಾಗ, ಆತ್ಮೀಯತೆ. ಕಾಲ ಕ್ರಮೇಣ ಇದೇ ಅನ್ಯೋನ್ಯತೆ ಇರುತ್ತದೆ ಎಂದು ಹೇಳಲು ಬಾರದು. ಮದುವೆಯ ಹೊಸದರಲ್ಲಿ ಗಂಡನಿಗೆ ಹೆಂಡತಿ ಮಾಡಿದ ಉಪ್ಪಿಲ್ಲದ ಉಪ್ಪಿಟ್ಟು ಅಪ್ಯಾಯಮಾನ. ಅರೆಬೆಂದ ಪಲ್ಲೆಯೂ ಅಮೃತಕ್ಕೆ ಸಮಾನ. ಹೊತ್ತಿದ ಚಪಾತಿಯೂ "ಇಟ್ಸ್ ಓಕೆ". ಮುಂದೆ ಹೆಂಡತಿ ಪಾಕಪ್ರವೀಣೆಯಾದರೂ "ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು" ಎಂಬಂತೆ ಏನಾದರೂ ಒಂದು ತಪ್ಪು ಕಾಣಸಿಗುತ್ತದೆ. ಬಯ್ಯಲು ಒಂದು ದಾರಿ ಸಿಗುವದೇ ತಡ ಬಾಯಿಗೆ ಬ್ರೇಕೇ ಇಲ್ಲ.
ಮದುವೆಯ ಆರಂಭದಲ್ಲಿ ಗಂಡ ತಂದ ಯಾವುದೇ ಉಡುಗೊರೆಯೂ ಅದೆಷ್ಟು ಇಷ್ಟ ಹೆಂಡತಿಗೆ. ಅದೆಷ್ಟು ಹೊಗಳುವದು, ಬೇರೆಯವರಲ್ಲಿ ಹೇಳಿಕೊಳ್ಳುವದು. ನನ್ನ ಗಂಡನಂಥವರು ಬೇರಾರಿಲ್ಲ ಎಂದು ಬೀಗುತ್ತಾಳೆ. ಕಾಲಕ್ರಮೇಣ ಗಂಡ, ಹೆಂಡತಿಯ ಎದುರು ರೇಷ್ಮೆ ಸೀರೆಗಳ ರಾಶಿ ಹಾಕಿದರೂ, ಬಂಗಾರದ ಅಂಗಡಿಯನ್ನೇ ತಂದು ಅಡುಗೆ ಮನೆಯಲ್ಲಿಟ್ಟರೂ "ನೀವೂ ಇದೀರ ದಂಡಕ್ಕೆ, ಏನೂ ಕೊಡಿಸುವದೇ ಇಲ್ಲ" ಎನ್ನುವ ತಗಾದೆಗಳಿಗೆ ಕೊರತೆಯೇನಿಲ್ಲ. ಈ ಮೂದಲಿಕೆಗಳಿಗೆ ಕೊನೆ ಮೊದಲಿಲ್ಲ.
ಇನ್ನು ವಾನಪ್ರಸ್ಥದ ಕಡೆ ಮುಖ ಮಾಡಿರುವ ವೃದ್ಧರಿಗೆ ಜಗತ್ತೇ ನೀರಸ, ಶೂನ್ಯ. ಕಾಲ ಕೆಟ್ಟು ಹೋಗುತ್ತಿದೆ ತಾವು ಚಿಕ್ಕವರಿದ್ದಾಗ ಕಾಲ ಎಷ್ಟು ಛುಲೋ ಇತ್ತು ಎನ್ನುವ ಹಳಹಳಿ. ತಮ್ಮವರೇ ತಮ್ಮನ್ನು ನೋಡಿಕೊಳ್ಳದಾದಾಗ "ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ" "ನಮ್ಮದೇನು ಬಿಡ್ರಿ ಇಂದು ಮನ್ಯಾಗ ನಾಳೆ ಕುಣ್ಯಾಗ" ಎನ್ನುತ್ತಾ ತಾವು ಇದುವರೆಗೆ ಬದುಕಿ ಬಾಳಿದ್ದೇ ಅಟ್ಟರ್ ವೇಸ್ಟು ಎನ್ನುವಂತೆ ಮಾತನಾಡುತ್ತಾರೆ. ತಮ್ಮೊಡನೆ ಬಾಳು ಸವೆಸಿದ, ಕಷ್ಟ ಸುಖಗಳಲ್ಲಿ ಸಹಭಾಗಿಗಳಾದ ಜೀವನ ಸಂಗಾತಿಗಳೇ ಹಳೆ ರದ್ದಿ ಪೇಪರುಗಳು!!!!!!!! ಕೆಲಸಕ್ಕೆ ಬಾರದ, ಊಟಕ್ಕೆ ದಂಡವಾದ, ಭೂಮಿಗೆ ಭಾರವಾದ ಜೀವಗಳು!!!!!!!!!
ಇದು ಹೀಗೇಕಾಗುತ್ತದೆ? ಎಲ್ಲರೂ ಇವನ್ನೆಲ್ಲಾ ಅನುಭವಿಸಲೇಬೇಕಾ? ಇದು ಅನಿವಾರ್ಯವೆ? ಅಂತ ನಾವೆಲ್ಲ ವಿಚಾರಿಸಿ ನೋಡಿದರೆ ಉತ್ತರ ನಮಗೇ ಹೊಳೆಯುತ್ತದೆ. ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ನಮಗೆ ಪ್ರಿಯಾರಿಟಿಗಳು ಬದಲಾದಂತೆ ಸಂಬಂಧಗಳು ಸಹ ಬದಲಾಗುತ್ತವೆ. ಈ ಪ್ರಿಯಾರಿಟಿಗಳೆಂಬ ಜೇಡರ ಬಲೆಯಲ್ಲಿ ಸಿಲುಕಿದ ನಾವು-ನೀವು ಬದಲಾಗಲೇ ಬೇಕಾಗುವ ಅನಿವಾರ್‍ಯತೆಗೆ ಒಳಗಾಗುತ್ತೇವೆ. "ಸಣ್ಣಾಂವಿದ್ದಾಗ ಎಷ್ಟು ಶ್ಯಾಣ್ಯಾ ಇದ್ದ ಈಗ ನೋಡು ಹೆಂಗ ಆಗ್ಯಾನ" "ಯಾ ಹುಡುಗಿ ಹಿಂದ ಬಿದ್ದಾನೋ ಗೊತ್ತಿಲ್ಲಾ ಅಪ್ಪ ಬ್ಯಾಡಾ ಅವ್ವ ಬ್ಯಾಡಾ" "ತಾನು ತನ್ನ ಗಂಡ ಮಕ್ಕಳು ಆದರ ಆತು ಆಕಿಗೆ ಅತ್ತಿ ಮಾಂವ ಯಾಕ ಬೇಕು" "ಮೊದಲ ತಂದಿ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅಂತಿದ್ದ ಈಗ ನೋಡ್ರಿ ಮದುವಿ ಆದಮ್ಯಾಲ ಹೆಂತಿ ಒಬ್ಬಾಕಿ ಆದ್ರ ಆತು ಜಗತ್ತ ಬ್ಯಾಡ" ಇತ್ಯಾದಿ ಇತ್ಯಾದಿ ಮಾತುಗಳನ್ನು ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೇವೆ ಇಲ್ಲವೆ ಕೇಳಲಿದ್ದೇವೆ!!!!!
ಜೀವನ ಅನ್ನೊದು ಹಗ್ಗದ ಮೇಲಿನ ನಡುಗೆಯ ಹಾಗೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅಡಕೊತ್ತಿನಲ್ಲಿ ಸಿಕ್ಕ ಅಡಕೆಯ ಹಾಗೆ. ಜೀವನವೆಂಬ ರಥದ ಎರಡು ಗಾಲಿಗಳಾದ ಗಂಡ ಹೆಂಡರಿಗೆ ಎದುರಾಗುವ ಸಂದರ್ಭಗಳು, ಸಮಸ್ಯೆಗಳು "ಅತ್ತ ದರಿ ಇತ್ತ ಪುಲಿ" ಎನ್ನುವಂತಿರುತ್ತವೆ. ಎಲ್ಲವನ್ನು, ಎಲ್ಲರನ್ನು ಸಂಭಾಳಿಸಿಕೊಂಡು ಹೋಗಬೇಕು. ಇದು ಎಷ್ಟೊಂದು ಕಷ್ಟ ಅನ್ನೋದು ಅನುಭವಿಸಿದವರಿಗೇ ಗೊತ್ತು. ಹಾಗಾದರೆ ಈ ಹಾಳು ಸಂಸಾರವೇ ಸಾಕು ಎಂದು ಸಂಬಂಧಗಳಿಗೆಲ್ಲಾ ರಿಸೈನ್ ಮಾಡಿ ಸನ್ಯಾಸ ದೀಕ್ಷೆ ತೊಟ್ಟು ಹಿಮಾಲಯಕ್ಕೆ ಹೋಗಿ ಬಿಡುವದೇ ಸೂಕ್ತ ಎಂದು ಹಲವಾರು ಬಾರಿ ಅನ್ನಿಸುತ್ತಲ್ಲವೆ? ಆದರೆ ಉತ್ತರ ಅದಲ್ಲಾ. ಶರಣರು ಹೇಳಿದಂತೆ "ಸಂಗದೊಳಿದ್ದು ಸಾಧಿಸಬೇಕು" ದಾಸರು ಹೇಳಿದಂತೆ "ಈಸಬೇಕು ಇದ್ದು ಜಯಿಸಬೇಕು".
ಈ ಬದಲಾಗುವ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ನಡುವೆ ಸತತವಾಗಿ ಹತ್ತಕ್ಕೂ ಹೆಚ್ಚು ವರ್ಷಗಳಷ್ಟು ನಾವು ಟಿಪಿ ಬಳಗದ ಸದಸ್ಯರು ನಡೆದುಕೊಂಡು ಬಂದಿರುವ ರೀತಿ ಒಂದು ಮಾದರಿಯೇ ಸರಿ. ಹಾಗೆಂದ ಮಾತ್ರಕ್ಕೆ ನಮ್ಮಲ್ಲಿ ಮನಸ್ತಾಪಗಳು, ಕಿತ್ತಾಟಗಳು, ಜಗಳಗಳು, ಝಟಾಪಟಿಗಳು ಆಗಿಯೇ ಇಲ್ಲ ಎಂದರೆ ತಪ್ಪಾದೀತು. ಆದರೆ ಅಂತಹ ಯಾವುದೇ ಸಂದರ್ಭದಲ್ಲಿ ನಾವೇ ಫಿರ್ಯಾದಿದಾರರು! ನಾವೇ ವಕೀಲರು!! ಮತ್ತು ನಾವೇ ನ್ಯಾಯಾಧೀಶರು!!! ನಾವು ಬಳಗ ಸ್ಥಾಪಿಸಿದಾಗ ಹೆಚ್ಚಿನವರು ಬ್ರಹ್ಮಚಾರಿಗಳೇ! ಈಗ ಬಳಗದಲ್ಲಿ ಇಬ್ಬರನ್ನುಳಿದು ಎಲ್ಲರೂ ಚತುರ್ಭುಜರೇ (ಮದುವೆಯಾದವರು)!! ಅಷ್ಟೇ ಏಕೆ ಬಹುಪಾಲು ಸದಸ್ಯರು ಡ್ಯಾಡಿ ಮಮ್ಮಿಗಳೇ!!! ನಾವೆಲ್ಲ ನಮ್ಮ ನಮ್ಮ ಸಂಸಾರ ಸಾಗರದಲ್ಲಿ ಸಿಗಿಬಿದ್ದಿದ್ದರೂ, ಬದಲಾದ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ಮಧ್ಯೆ ಬದಲಾಗಿದ್ದರೂ ನಾವೆಲ್ಲ ಬದಲಾಗಿಲ್ಲ. ನಮ್ಮಲ್ಲಿನ ಒಗ್ಗಟ್ಟು, ಅಂತಃಸತ್ವ ಅಡಗಿಲ್ಲ. ಅದು ಶುಕ್ಲಪಕ್ಷದ ಚಂದಿರನಂತೆ ಬೆಳಗುತ್ತಲೇ ಇರಲಿ. ಇದನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗೋಣ.
No comments:
Post a Comment