- ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ
ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಜೀವನವನ್ನು ತಮ್ಮದೇ ಆದ ಒಂದು ಕೌತುಕದ ಕಾತರದ ದೃಷ್ಟಿಯಲ್ಲಿ ನೋಡುವ ಸದ್ದಾಮ್, ಇಲ್ಲಿ ಒಂದು ಸರಳ ಹೆಸರಿನಲ್ಲಿ ಏನೆಲ್ಲ ರಹಸ್ಯ, ಹಾಸ್ಯ, ಹೆಮ್ಮೆ, ಹತಾಶ ಅಡಗಿದೆಯೆಂಬುದನ್ನು ನಮ್ಮ ಈ ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಪರದೇಸಿಗಳು ಅಲಿಯಾಸ್ ವಿದೇಶಿಗಳು ಅಲಿಯಾಸ್ ಫಾರಿನ್ ಮಂದಿ ನಮ್ಮ ಭಾರತೀಯ ಹೆಸರುಗಳನ್ನ ಉಚ್ಚಾರ ಮಾಡಾಕ ಒದ್ದಾಡೋದು ಕಟು ಸತ್ಯ. ಆದರ ನಮಗ ನಮ್ಮ ಹೆಸರುಗಳನ್ನ ಇವರು ಬರೋಬರೀ ಪ್ರೋನೌನ್ಸ್ ಮಾಡಂಗಿಲ್ಲ ಅನಸಬಹುದು. ಆದರ ಇದು ಎಲ್ಲಾ ದೇಶದವರಿಗೊ ಅನ್ವಯ ಆಗೋ ಅಂತ ವಿಚಾರ. ನಮಗ ಅವ್ರದ್ದು ಸರಿ ಅನಸಂಗಿಲ್ಲ, ಅವ್ರಿಗೆ ನಮ್ದು ಸರಿ ಅನಸಂಗಿಲ್ಲ.
ನಮ್ಮ ಹೆಸರ ಅರ್ಥ ಅಗಾಕ, ಸ್ಪೆಲ್-ಔಟ್ ಮಾಡಾಕ ಬೇಕು. ಎಷ್ಟೋ ಸಲ ಈ ಅಮೇರಿಕದಲ್ಲಿ ಪುರಾತನ ಕಾಲದಿಂದಲೂ ಇರುವ ಜನರ ಹೆಸರನ್ನsss ಇಲ್ಲಿಯೋರು ಸ್ಪೆಲ್-ಔಟ್ ಮಾಡಾಕ ಹೇಳತಾರ. ನನಗಂತೂ ಇಷ್ಟು ರೂಢಾ ಆಗೇತಿ ಅಂದ್ರ.. ಯಾವರ (ಅದರಾಗ ಫೋನ್‌ನ್ಯಾಗ) ಹೆಸರ ಕೇಳಿದ ಅಂದ್ರ .. ಬರೀ “ಗಿರೀಶ್” ಅಂತ ಹೇಳೋದss ಬಿಟ್ಟು ಬಿಟ್ಟೇನಿ.. ಕೇಳಿದ್ ಕೂಡ್ಲೇ ಸ್ಪೆಲ್-ಔಟ್ ಚಾಲೂ ಮಾಡೇ ಬಿಡತನಿ.. GIRISH - “G” - “I” - “R” - “I” - “S” - “H” ಅಂತ.. ಮೊನ್ನೆ ಒಮ್ಮೆ ಹಿಂಗ ಯಾವದೋ ಬ್ಯಾಂಕ್‌ಗೆ ಫೋನ್ ಹಚ್ಚಿ, ಹೆಸರು ಕೇಳಿದಾಗ, ಸ್ಪೆಲ್ ಮಾಡಾಕ ಚಾಲೂ ಮಾಡಿದೆ.. ಅವ ಅರ್ಧಕ್ಕ ನಿಂದ್ರಿಸಿ “got it sir” ಅಂದ. ನೋಡಿದ್ರ, ಆ ಕಾಲ್ ಬೆಂಗಳೂರಿಗೆ ಫಾರ್‌ವರ್ಡ್ ಆಗಿತ್ತು. ಎಲಾ ಇವನ.. ಈ ಕಾಲ್ ಸೆಂಟರ್‍ನವರ ಕೂಡ, ಅಮೆರಿಕದಿಂದ ನಮ್ಮ ಹುಬ್ಬಳ್ಳಿ ಭಾಷೆಯಲ್ಲಿ “ಏನ್ರಿ, ಹೆಂಗದೀರ್ರಿ, ಮಳಿ-ಗಿಳಿ ಹೆಂಗೈತ್ರಿ ಹುಬ್ಳ್ಯಾಗ” ಅಂತ ಮಾತಾಡಬಹುದಾದ ಕಾಲ ದೂರ ಇಲ್ಲ ಅನುಕೊಂಡೆ!!!
ನನಗ ನನ್ನ ಹೆಸರು ಸ್ಪೆಲ್ ಮಾಡಿ ಮಾಡಿ ಸಾಕಾಗಿ ಹೋಗೇತಿ. ಈ ತೆಲಗೂ ಮಂದೀದು ಇಷ್ಟಿಟ್ಟು ಉದ್ದಾ ಹೆಸರು ಇರತಾವ, ಅವರು ಹೆಂಗ ಮ್ಯಾನೇಜ್ ಮಾಡ್ತಾರೋ ಅನ್ನಿಸ್‌ತೈತಿ. ನಮ್ಮ ಕಂಪನ್ಯಾಗ ನಮ್ಮ ಕೆಲ ತೆಲುಗು ಮಿತ್ರರಿದ್ದರು.. ಒಬ್ಬವಾ.. “ನುನ್ನಾ ಸತ್ಯಶಂಕರ ವೆಂಕಟೇಶ್ವರ ದುರ್ಗಾ ಪ್ರಸಾದ್”.. ಇನ್ನೊಬ್ಬವ.. “ಕೊಲ್ಲೂರು ವೆಂಕಟಸಾಯಿ ಲಕ್ಷ್ಮಿ ನರಸಿಂಹ ರಾವ್”. ಇವರು ಅದು ಹೆಂಗ ಸ್ಪೆಲ್ ಮಾಡತಿದ್ರೋ ದೇವರಿಗೇ ಗೊತ್ತು.
ಅದಕ್ಕ ಯಾರೋ ಒಂದು ಜೇಮ್ಸ್ ಬಾಂಡ್ ಜೋಕ್ ಬರದಾರ ಇದರ ಬಗ್ಗೆ : ಜೇಮ್ಸ್ ಬಾಂಡ್ ಮತ್ತ ಒಬ್ಬ ತೆಲಗು ಮನಷ್ಯಾ ವಿಮಾನದಾಗ ಹೊಂಟಿದ್ರಂತ. ತೆಲಗು ಮನಷ್ಯಾ ಬಾಂಡ್‌ಗ ನಿನ್ನ ಹೆಸರೇನು ಅಂತ ಕೇಳಿದನಂತ.. ಅದಕ್ಕ ಬಾಂಡ್, ತನ್ನ ಮಾಮೂಲಿ ಸಿನಿಮಾ ಶೈಲಿಯಲ್ಲಿ “ಬಾಂಡ್” - “ಜೇಮ್ಸ್ ಬಾಂಡ್” ಅಂದನಂತ. ಆಮ್ಯಾಲ ಬಾಂಡ್ ತಿರುಗಿ ನಿನ್ನ ಹೆಸರೇನು ಅಂತ ತೆಲುಗು ಮನಷ್ಯಾಗ ಕೇಳಿದನಂತ.. ತೆಲುಗು ಮನಷ್ಯಾ ಬಾಂಡ್‌ನ ಶೈಲಿಯಲ್ಲೇ ಹೇಳೋಣ ಅಂತೇಳಿ : “ಪ್ರಸಾದ್” - “ದುರ್ಗಾ ಪ್ರಸಾದ್” - “ನರಸಿಂಹಲು ದುರ್ಗಾ ಪ್ರಸಾದ್” - “ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್” - “ಕೋದಂಡರಾಮುಲು ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್”. . . ಬಾಂಡ್ ಮಾಮೂಲಿ ಫಿಲ್ಮೀ ಸ್ಟೈಲ್‌ನ್ಯಾಗ ಮಂಗಮಾಯ ಆದನಂತ.
ನಮ್ಮ ಪಾಯಿಂಟನ ಸಂಬಂಧಿ ಅಜಿತ್ ಪೂಜಾರ್ ಅವರು ಹೇಳಿದ ಒಂದು ಸತ್ಯ ಘಟನೆ. ಅವರ ಮಿತ್ರ “ಅಪ್ಪಾ ಪಿಳ್ಳೈ” ಅನ್ನೋ ಅಮೇರಿಕದಲ್ಲಿರುವರೊಬ್ಬರು, ಫೋನ್‌ನ್ಯಾಗ ತಮ್ಮ ಡೀಟೈಲ್ಸ್ ಕೊಡಾಕತ್ತಿದ್ರಂತ. ಫೋನ್‌ನ್ಯಾಗ ಆಕಡೆ ಇದ್ದsಕಿ ಇವರ ಹೆಸರು ಕೇಳಿರಬೇಕು. ಅದಕ್ಕ ಇವರು “ಅಪ್ಪಾ ಪಿಳ್ಳೈ” ಅಂತ ಒಂದ ಪಟಿಗೆ ಹೇಳಿದ್ರಂತ. ಆಕಿಗೆ ಏನೂ ತಿಳಿದಿಲ್ಲ ಅನ್ನಸ್ತೈತಿ, “ಸ್ಪೆಲ್-ಔಟ್” ಮಾಡ್ರಿ ಅಂದಿರಬೇಕು. ಅದಕ್ಕ ಇವರು A for Apple, P for Pineapple, P for Pineapple, A for Apple, P for Pineapple ಅಂತ ಒಂದ ಸಮನೆ ಬಡಬಡಿಸಿದರಂತ. ಆಕಿ ನಗುತ್ತಾ ನಡಕ ಅವರನ್ನ ನಿಂದ್ರಿಸಿ, wait .. wait.. wait.. first tell me, how many apples and pineapples are there in your name??!!! ಅಂದಳಂತ.
ನಮ್ಮ ಮತ್ತೊಬ್ಬ ಸಹದ್ಯೋಗಿ ಗಗನ್ .. ಸ್ಪೆಲ್-ಔಟ್ ಮಾಡು ಅಂದಾಗ “G for Gagan” ಅಂದು.. ಸುತ್ತಮುತ್ತ ಇರೋರ್ನೆಲ್ಲ ಘೊಳ್ ಅಂತ ನಗೋ ಹಂಗ ಮಾಡಿದ್ದ.
ಮಂದಿ ಇಷ್ಟೆಲ್ಲಾ ಕಷ್ಟಪಟ್ಟು ಹೆಸರು ಹೇಳಿ, ಬರಸಿ, ಆಮ್ಯಾಲ ಬರೋ ಪೊಸ್ಟ್‌ಗಳಲ್ಲಿ ಪ್ರಿಂಟ್ ಆದ ತಮ್ಮ ಹೆಸರನ್ನು ನೋಡಿ ಬೆಚ್ಚಿ ಬೀಳೋ ಘಟನೆಗಳೆಷ್ಟೋ. ಅಜಿತ್ ಪೂಜಾರರ ಹೆಸರು Ajit Uja ಅಂತ ಪ್ರಿಂಟ್ ಆಗಿತ್ತಂತ. ಅದು ಹೆಂಗ ಅಷ್ಟೊಂದು ಅಕ್ಷರಗಳನ್ನ ನುಂಗಿದರೋ ಗೊತ್ತಿಲ್ಲ. ನನ್ನ ಮನೆಯವಳ ಅಣ್ಣ - ಶ್ರೀರಾಮ.. ಈ ಹೆಸರನ್ನ ಫ್ರೀರಾಮ ಮಾಡಿದ್ದರು. ಇನ್ನು “M” ಇದ್ದಿದ್ದು “N” ಆಗುವದು, “B” ಇದ್ದಿದ್ದು “P” ಆಗುವದು ಭಾಳ ಮಾಮೂಲಿ, ನಾವು ಹೇಳೋ “A” ಅವರಿಗೆ ಅರ್ಥ ಆಗೋದsss ಇಲ್ಲ, “A for Apple” is compulsory!!
ನಾನು ಸೌತ್ ಆಫ್ರಿಕಾದಲ್ಲಿದ್ದಾಗ ನಮ್ಮೊಂದಿಗಿದ್ದ ಮನೋಜ್, ರಾಜ್, ಬಾಲಾಜಿ ಮುಂತಾದವರನ್ನು ಅಲ್ಲಿಯವರು ಮನೋಯ್, ರಾಯ್, ಬಾಲಾಯಿ ಅಂತ ಕರೀತಿದ್ರು. ನಿಮಗೆಲ್ಲಾ ಗೊತ್ತಿರ ಬೇಕು, Kronje ಅನ್ನೊ ಅಲ್ಲಿನ ಮಾಜಿ ಕ್ಯಾಪ್ಟನ್‌ನನ್ನು “ಕ್ರೋನಿಯೆ”, Boje ಅನ್ನೊ ಒಬ್ಬ ಬೌಲರನನ್ನು “ಬೋಯೆ” ಅಂತ ಅವರು ಕರೀತಾರ. ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “Y” ಇರೋ ಗತೆ ಪ್ರೊನೌನ್ಸ್ ಮಾಡತಾರ ಅವರು!!
ಹಿಂಗs ಸ್ಪಾನಿಶ್ ಪ್ರಭಾವ ಇರುವ ಜಾಗಗಳಲ್ಲಿ, ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “H” ಹಾಕತಾರ ಅವರು!! ಮಂಜ ಅನ್ನುವವರನ್ನ ಮನ್‌ಹ ಅಂತ ಹೇಳಿದ್ದು ಕೇಳೇನಿ. ಅದಕ್ಕ ಇನ್ನೊಂದು ಜೋಕ್ ಬರದಾರ.. (ಹಿಂದಿನ ಬಾಂಡ್ ಜೋಕ್ ಮುಂದುರಿಸಿ..) ತೆಲುಗೂ ನಾಮಾವಳಿ ಕೇಳಿ ಮಾಯವಾದ ಬಾಂಡ್ ಎಷ್ಟು ಹೊತ್ತು ಟಾಯಿಲೆಟ್‌ನ್ಯಾಗ ಕುಂತಾನು..!? ತಿರುಗಿ ಸೀಟಿಗೆ ಬಂದನಂತ. ಬಂದಕೂಡಲೇ ತೆಲುಗ ಮಾತು ಮುಂದುವರಿಸಿದನಂತ. ಮಾತಿನ ನಡುವೆ ಬಾಂಡ್ ಕೇಳಿದನಂತ.. ಎಲ್ಲಿಗೆ ಹೊಂಟಿ ಅಂತ.. ಅದಕ್ಕ ತೆಲಗೂ ಹೇಳಿದನಂತ.. “ಆಯ್ ಯಾಮ್ ಗೋಯಿಂಗ್ ಟು ಸ್ಯಾನ್ ಜೋಸ್ (San Jose)”. ಜಗತ್ತೆಲ್ಲಾ ತಿರುಗಾಡಿದ ಬಾಂಡ್‌ಗ ಗೊತ್ತಾತಂತ ಇವ ಏನ್ ಹೇಳಾಕತ್ತಾನು ಅಂತ.. ಅದಕ್ಕ ಅವ ನಕ್ಕೊಂತ ಹೇಳಿದನಂತ.. ಅದು ಸ್ಯಾನ್ ಜೋಸ್ ಅಲ್ಲ ಸ್ಯಾನ್ ಹೋಸೆ.. ಹೋಸೆ ಅಂತ ಪ್ರೊನೌನ್ಸ್ ಮಾಡಬೇಕು ಅಂದನಂತ. ಹಂಗ ಮಾತು ಮುಂದುವರೀತಂತ.. ಅಮ್ಯಾಲ ಬಾಂಡ್, ಯಾವಾಗ ವಾಪಸ್ ಇಂಡಿಯಾಕ್ಕ ಹೊಂಟಿ ಅಂತ ತೆಲುಗೂನ ಕೇಳಿದನಂತ.. ಅದಕ್ಕ ತೆಲುಗು ಸ್ವಲ್ಪ ಯೋಚನಿ ಮಾಡಿ.. “ಹೂನ್ ಆರ್ ಹುಲೈ” (June or July) ಅಂದನಂತ!!!!
ನನ್ನ ಸುತ್ತಮುತ್ತ ಕೆಲಸ ಮಾಡುವ ಚೈನಾ, ಕೊರಿಯಾದ ಮಂದಿಗಳ ಹೆಸರೋ - ಸಿನ್, ಜುನ್, ಟ್ಯಾಂಗ್, ಪಿಂಗ್, ಪೆಂಗ್.. ಇನ್ನೂ ವಿಚಿತ್ರ ವಿಚಿತ್ರ ಇರತಾವ. ನನ್ನ ಸಂಬಂಧಿ ಈ ಹೆಸರುಗಳ ಬಗ್ಗೆ ಒಂದು ಜೋಕ್ ಹೇಳತಿದ್ದ.
ಮಗು ಹುಟ್ಟಿದ ಕೂಡಲೇ ಅಡುಗಿ ಮನೆಯಾಗ ಯಾವ್‌ದಾರ ಬಾಂಡೆ-ಸಾಮಾನ ಎತ್ತಿ ಒಗಿತಾರಂತ.. ಅದು ಯಾವ ಸೌಂಡ್ ಬರತೈತೊ ಆ ಹೆಸರು ಇಡತಾರಂತ!! ನಮಗೋ ಇವರ ಹೆಸರುಗಳು ವಿಚಿತ್ರ ಅನ್ನಿಸ್ತಾವ ಆದ್ರ ಅವರಿಗದು ಸಹಜ!!
ಈ ಹೆಸರಿನಲ್ಲಿ ಹಾಸ್ಯಕ್ಕ ಚೈನಾಕ್ಕ ಹೋಗೋದು ಬ್ಯಾಡ... ಚೆನ್ನೈನಿಂದ ಬಂದ ನಮ್ಮ ಕಂಪನಿಯ ಒಬ್ಬಕಿ ಹೆಸರು Rathika. ಏನಪ ಇದು “ರಥಿಕ” ಅಂದ್ರ ಅಂತ ನನಗ ವಿಚಿತ್ರ ಅನಿಸಿತ್ತು. ನೋಡಿದರ ಅದು “ರಾಧಿಕಾ”. ತಮಿಳಿನಲ್ಲಿ ಭಾಳ ಅಕ್ಷರಗಳsssಇಲ್ಲಂತ. ಅವರು “ದ” ಮತ್ತ “ತ” ಕ್ಕ ಒಂದ ಅಕ್ಷರ ಬಳಸ್ತಾರಂತ. ಹಿಂಗ ಕ, ಗ, ಹ ಕ್ಕೆಲ್ಲಾ ಒಂದsss ಅಕ್ಷರ ಅನ್ನಿಸ್ತೈತಿ. ಮಗೇಶ್ ಅಥವಾ ಮಕೇಶ್ ಅಂದ್ರ ಮಹೇಶ್!! ರಾಗುಲ್ ಅಥವಾ ರಾಕುಲ್ ಅಂದ್ರ ರಾಹುಲ್!!! ವಿಚಿತ್ರ ಆದರೂ ಸತ್ಯ. ನಮ್ಮಣ್ಣ ಒಂದು ಘಟನೆ ಹೇಳತಿದ್ದ. ಒಬ್ಬವ ಮದ್ರಾಸಿ ಅವನ ಹತ್ರ “ಕಾಂತಿ ನಗರ್” ಎಲ್ಲೈತಿ ಅಂತ ಕೇಳಿಕೊಂಡು ಬಂದಿದ್ದನಂತ. ಎಲಾ ಇವನ.. ಇಷ್ಟು ವರುಷದಿಂದ ಶಿಮೊಗ್ಗಾದಾಗ ಅದನಿ.. ಕಾಂತಿ ನಗರ್ ಅಂತ ಕೇಳಿಲ್ಲಲ ಅಂತ ತೆಲಿಕೆಡಿಸಿಕೊಂಡ.. ಸುತ್ತಿ ಬಳಸಿ ಕೇಳಿದಮ್ಯಾಲ ಗೊತ್ತಾತಂತ.. ಅವಾ ಕೇಳಾಕತ್ತಿದ್ದು “ಕಾಂತಿ ನಗರ್” ಅಲ್ಲ, “ಗಾಂಧಿ ನಗರ್”!
ಹಿಂಗ ನಾನಾ ಕಡೆಗಳಲ್ಲಿ ನಾನಾ ತರಹದ ಅನುಭವ ಆಗತೈತಿ. ಈ ಗ್ಲೋಬಲೈಸೇಷನ್ ಗಾಳಿಯಲ್ಲಿ, ದೇಶ ವಿದೇಶಗಳಲ್ಲಿ ಪಸರಿಸಿರುವ ನಮ್ಮ ಜನ ತಮ್ಮ ಮೂಲ ಹೆಸರುಗಳ ಬಗ್ಗೆ ಹೆಮ್ಮೆ, ಹಾಸ್ಯ, ಹತಾಶ ಈ ಎಲ್ಲಾ ಭಾವನೆ ಹೊಂದುವುದು ಸಹಜ. ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಹೆಸರನ್ನ ಚೇಂಜ್ ಮಾಡ್ಕೋತಾರ. ಇಲ್ಲಿ ನಾನು ಕೆಲಸ ಮಾಡೋ ಕಡೆ, “ಜಾನ್ ಕಾರವಾರ್” ಅನ್ನೋ ಹೆಸರನ್ನ ಭಾಳಕಡೆ - ಮೀಟಿಂಗ್‌ನ್ಯಾಗ, ಅಲ್ಲಿ, ಇಲ್ಲಿ ಕೇಳಿದ್ದೆ. ಯಾರಪಾ ಇವರು “ಕಾರವಾರ್”, ನಮ್ಮ ಕಡೆ ಹೆಸರು ಅನ್ನಿಸತೈತಲ್ಲಾ ಅಂತಾ ವಿಚಾರ ಮಾಡಿದ್ದೆ. ಕೊನೆಗೆ ಗೊತ್ತಾತು.. ಜನಾರ್ಧನ, ಜಾನ್ ಆಗ್ಯಾರ. ಭಾರೀ "ಜಾಣ್" ಅದಾರ ಬಿಡು ಅನುಕೊಂಡೆ!!
ಹೆಸರಿನ ಬಗ್ಗೆ ಕಾಂಟ್ರಾವರ್ಸಿ ಆಗಾಗ ಕೇಳ್ತನsss ಇರ್ತವಿ. ಲವಪುರ ಲಾಹೋರ್ ಆದಾಗಿನದ್ದರಿಂದ ಹಿಡಿದು, ಮದ್ರಾಸ್‌ನ್ನು ಚೆನ್ನೈ ಅಂತ ತಿದ್ದಿದ್ದು, ಬಾಂಬೆಯನ್ನು ಮುಂಬೈ ಅಂತ ತಿದ್ದಿದ್ದು, ಕಲ್ಕತ್ತಾವನ್ನು ಕೊಲ್‌ಕೋಟಾ ಅಂತ ತಿದ್ದಿದ್ದು, ಇತ್ತೀಚೆಗೆ ಬ್ಯಾಂಗಲೋರನ್ನು ಬೆಂಗಳೂರು ಅಂತ ಮಾಡಾಕ ಹೊರಟ ರಾಜಕಾರಣಿಗಳ ಮಾತು ಕೇಳೇವಿ. ಬಂಡೋಪಾಧ್ಯಾಯ -ಬ್ಯಾನರ್ಜಿ, ಚಟ್ಟೋಪಾಧ್ಯಾಯ - ಚಟರ್ಜಿ, ಮುಖ್ಯೋಪಾಧ್ಯಾಯ - ಮುಖರ್ಜಿ, ಧಾರವಾಡ - ಧಾರ್ವಾರ್, ಮಡಿಕೇರಿ ಮರಕೆರಾ (ಕೆರಾ ಅಂದ್ರ ಗೊತ್ತಲ!!!) ಅರ್ಥವೇ ಇಲ್ಲದ ಹೆಸರುಗಳು ಚಾಲ್ತಿಯಲ್ಲಿ ಬಂದುಬಿಟ್ಟಾವು. ಜೂಹೀ ಚಾವ್ಲಾ, ಕನ್ನಡಿಗರಿಗೆ ತನ್ನ ಹೆಸರು ಹೇಳಾಕ ಬರಂಗಿಲ್ಲ ಅಂತ “ಜೂಲಿ” ಅಂತ ಹೆಸರು ಚೇಂಜ್ ಮಾಡಿಕೊಂಡೇನಿ ಅಂದು ಕನ್ನಡಿಗರನ್ನ ಕೆಣಕಿದ ಬಗ್ಗೆ ಕೇಳೇವಿ. ಈಗಿನ ಕಾಲದ ಯುವ ಪೀಳಿಗೆಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಹುಡುಗರು ಹೆಸರನ್ನ ಬದಲಾಯಿಕೊಂಡಿದ್ದನ್ನ ಕೇಳ್ತವಿ.
ಇದು ಖರೆ ಅಂದ್ರೂನೂ ಭಾಳ ಸೀರಿಯಸ್ಸಾಗಿ ತಾಸುಗಟ್ಲೆ ಡಿಬೇಟ್ ಮಾಡೋ ಅಂತಾ ವಿಚಾರ. ವಿದ್ಯಾನಂದ ಶೆಣೈ ಅವರ “ಭಾರತ ದರ್ಶನ” ಕೇಳಿದೋರಿದ್ರ ಡಿಬೇಟಿಗೆ ರೆಡಿ ಆಗಿ ನಿಲ್ಲಬಹುದು. ನಾವು ಕಾಲೇಜ್‌ನ್ಯಾಗ ಇದ್ದಿದ್ರ, ಅದು ಸರಿ ಇದು ಸರಿ ಅಂತ, ರೆಡ್ಡಿ ಕ್ಯಾಂಟೀನ್ ಇಲ್ಲಾ ಹಾಸ್ಟೆಲ್‌ನ್ಯಾಗ ತಾಸುಗಟ್ಲೆ ಗದ್ಲ ಮಾಡಿ, ಲಾಸ್ಟಿಗೆ ಚಪ್-ಚಪ್ಪಲ್‌ಲೆ ಹೊಡದಾಡೋ ಮಟ್ಟಕ್ಕ ಬರತಿದ್ವಿ!!! ಈಗ ನಮ್ಮ ಬಳಗದಾಗ ಭಾಳ ಮಂದಿಗೆ ಈ-ಮೈಲ್ ಬರಿಯಾಕsss ಟಾಯಮ್ಮ ಇಲ್ಲ. ಇನ್ನು ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಮೂಲ ಅಭಿಮತನss ಬದಲಾಯಿಸಿರಬಹುದು. ಇನ್ನು ಕೆಲವರು, ಹೊಡದಾಡಿ ಏನೂ ಉಪಯೋಗ ಇಲ್ಲ ಅಂತ ಸುಮ್ಮನಿರಬಹುದು.
ಅದಕ್ಕ ಈ ಲೇಖನನ ನಿಮಗ ಹೆಂಗ ಬೇಕೋ ಹಂಗ ತೊಗೋರಿ.. ಹೆಮ್ಮೆಯಾಗಿ.. ಇಲ್ಲಾ ಹಾಸ್ಯವಾಗಿ.. ಇಲ್ಲಾ ಹಗುರವಾಗಿ ಇಲ್ಲಾ ಹತಾಶೆಯಾಗಿ!!!!