Sunday, October 22, 2006

ಅಮೇರಿಕಾ.. ಅಮೇರಿಕಾ ..! - ಭಾಗ-೧


ಅರುಣ ಆರ್. ಯಾದವಾಡ, ಜೆ.ಪಿ. ನಗರ ೯ನೇ ಹಂತ, ಬೆಂಗಳೂರು

ಚಿಕ್ಕಂದಿನಿಂದಲೂ ಬೆಳಗಾವಿ ಜಿಲ್ಹೆಯ ಯಮಕನಮರಡಿಯ ತಮ್ಮ ಅಜ್ಜನವರ ನ್ಯೂಜ್ ಪೇಪರ್ ಅಂಗಡಿಯಲ್ಲಿ ಸುಧಾ, ಪ್ರಜಾಮತ, ತರಂಗ, ವಿಜಯಚಿತ್ರ, ಲಂಕೇಶ್, ವನಿತಾ, ಚಂದಮಾಮ, ಮಯೂರ, ಮಲ್ಲಿಗೆ, ಪ್ರಪಂಚ, ಬಾಲಮಿತ್ರ, ಬೊಂಬೆಮನೆ ಇತ್ಯಾದಿಗಳ ನಡುವೆ ಬೆಳೆದ ಅರುಣ ಅವರಿಗೆ ಪತ್ರಿಕೆಗಳೆಂದರೆ ತುಂಬ ಹುಚ್ಚು. ಆ ಹುಚ್ಚು ಎಂಥದ್ದು ಅಂದರೆ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಜಾಮತದಲ್ಲಿ ಬರುತ್ತಿದ್ದ ‘ಪೌಲಸ್ತ್ಯನ ಪ್ರಣಯ ಕಥೆಗಳು’ ಎಂಬ ಧಾರಾವಾಹಿಯನ್ನು ಓದಿ ದೊಡ್ಡವರಿಂದ ಬೈಸಿಕೊಂಡದ್ದೂ ಇದೆ.. ! ಹೈಸ್ಕೂಲ್ ದಿನಗಳಿಂದಲೂ ಬರೆಯುವ ಹವ್ಯಾಸ ಇದೆ, ಆದರೆ ವೃತ್ತಿಪರ ಬರಹಗಾರರಲ್ಲ. ವೃತ್ತಿಯಿಂದ ಸಾಫ್ಟವೇರ್ ಎಂಜಿನಿಯರ್ ಆಗಿರುವ ಅರುಣ್, ಬೆಳಗಾವಿ ಜಿಲ್ಹೆಯ ಯರಗಟ್ಟಿಯಲ್ಲಿ ಹುಟ್ಟಿ, ಯಮಕನಮರಡಿಯಲ್ಲಿ ಹೈಸ್ಕೂಲ್‌ವರೆಗೆ ವಿದ್ಯಾಭ್ಯಾಸ, ಧಾರವಾಡದಲ್ಲಿ ಪಿಯುಸಿ, ಹುಬ್ಬಳ್ಳಿಯಲ್ಲಿ ಬಿ.ಇ. ಮುಗಿಸಿ, ಕೆಲ ವರ್ಷ ಮುಂಬೈಯಲ್ಲಿ ನೌಕರಿ ಮಾಡಿ ಇದೀಗ ತಮ್ಮ ಪತ್ನಿ ತೇಜಸ್ವಿನಿ, ಮಗಳು ಅನುಶ್ರೀ ಹಾಗೂ ಮಗ ಚಿರಾಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.



ಅಮೇರಿಕಾಕ್ಕೆ ಅಥವಾ ಯಾವುದೇ ವಿದೇಶಕ್ಕೆ ಹೋಗೋದು ಅಂದ್ರೆ ಯಾರೇ ಆಗಲಿ ಸ್ವಲ್ಪ ಸರಿಯಾಗಿ ಪ್ಲ್ಯಾನ್ ಮಾಡಿಕೊಂಡೇ ಹೋಗಬೇಕು. ಇಲ್ಲವಾದಲ್ಲಿ ಅನವಶ್ಯಕವಾಗಿ ತೊಂದರೆಗೆ ಈಡಾಗುವ ಸಾಧ್ಯತೆ ಇರುತ್ತದೆ.ಈಗ ಮೊದಲಿನ ಹಾಗೇ ಇಲ್ಲ.ಎಲ್ಲಾ ಮಾಹಿತಿ ಇಂಟರ್ನೆಟ್‍ನಲ್ಲಿ ಲಬ್ಯವಿದೆ. ಆದರೆ ನಾನು ಗಮನಿಸಿದ ಸಂಗತಿ ಏನೆಂದರೆ, ನಮ್ಮ ಕನ್ನಡ ಬಾಷೆಯಲ್ಲಿ ಸಾಕಷ್ಟು ಮಾಹಿತಿಯಿಲ್ಲ. ಆ ದಿಸೆಯಲ್ಲಿ ನಮ್ಮ ಜನರಿಗೆ ಈ ಕನ್ನಡದಲ್ಲೇ ಮಾಹಿತಿ ನೀಡಲು ಇದು ನಮ್ಮ ಒಂದು ಪುಟ್ಟ ಪ್ರಯತ್ನ.


ನೀವು ಅಮೇರಿಕೆಗೆ ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದರೆ, ನಿಮ್ಮ ಸಿದ್ಧತೆಗೆ ಹಲವಾರು ಹಂತಗಳಿವೆ.
ಈ ಲೇಖನದಲ್ಲಿ ಮೊದಲಿಗೆ ಹೋಗುವ ಮೊದಲು ಏನೇನು ಸಾಮಾನು-ಸರಂಜಾಮು ತೆಗೆದುಕೊಳ್ಳಬೇಕು, ಸೂಕ್ತ ಸೂಚನೆಗಳು ಹಾಗೂ ಏನೇನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಒಂದು ಪಟ್ಟಿ ಇಲ್ಲಿದೆ.

ಮೊದಲಿಗೆ ನೀವು ತೆಗೆದಿಟ್ಟುಕೊಳ್ಳಬೇಕಾದ/ಖರೀದಿ ಮಾಡಬೇಕಾದ ವಸ್ತುಗಳ ಪಟ್ಟಿ:

ದಾಖಲೆಗಳು:
೧.ಪಾಸ್‍ಪೋರ್ಟ್
೨.ವೀಸಾ ದಾಖಲೆಗಳು
೩.ಏರ್ ಟಿಕೇಟ್‍ಗಳು (ಹೋಗುವ ಮತ್ತು ಬರುವ ಪ್ರಯಾಣಕ್ಕೆ. ಬರುವ ಪ್ರಯಾಣಕ್ಕೆ ಟಿಕೇಟ್‍ಗಳನ್ನು ಕೆಲವೊಮ್ಮೆ ನಂತರವೂ ಬುಕ್ ಮಾಡಬಹುದು.)
೪.ಇನ್ಸುರೆನ್ಸ್ ದಾಖಲೆಗಳು
೫.ಟ್ರಾವೆಲರ್ಸ್ ಚೆಕ್ಕುಗಳು
೬.ಖರ್ಚಿಗೆ ಡಾಲರ್ ಹಣ
೭.ಏರ್‍ಪೋರ್ಟ್ನಲ್ಲಿ ಅಗತ್ಯಕ್ಕೆ ಸ್ವಲ್ಪ ಹಣ (ರೂಪಾಯಿಗಳಲ್ಲಿ)
೮.ಇಂಟರ್‍ನ್ಯಾಶನಲ್ ಕ್ರೆಡಿಟ್ /ಡೆಬಿಟ್ ಕಾರ್ಡ್‍ಗಳು (ನೀವು ಉದ್ಯೋಗಿಯಾಗಿದ್ದರೆ)
೯.ನಿಮ್ಮ ಕಂಪನಿಯ ಇನ್ನಿತರ ಮುಖ್ಯ ದಾಖಲೆಗಳು


ಬಟ್ಟೆ/ಬರೆ:
೧. ಆಫೀಸಿನಲ್ಲಿ ಧರಿಸುವ ಫಾರ್ಮಲ್ ಬಟ್ಟೆಗಳು (೫-೬ ಜೊತೆ)
೨. ಹೊರಗೆ ಅಡ್ಡಾಡವಾಗ ಧರಿಸುವ ಬಟ್ಟೆ ಬರೆ (೩-೪ ಜೊತೆ)
೩. ಮನೆಯಲ್ಲಿ ಇರುವಾಗ ಧರಿಸುವ ಬಟ್ಟೆಗಳು (೩-೪ ಜೊತೆ)
೪. ಒಳ ವಸ್ತ್ರಗಳು (೫-೬ ಜೊತೆ)
೫. ಚಳಿಗಾಲದ ಬಟ್ಟೆಗಳು (ಸ್ವೆಟರ್/ಜರ್ಕಿನ್/ಹ್ಯಾಂಡ್ ಗ್ಲೌಸ್‍ಗಳು/ಥರ್ಮಲ್ ಬಟ್ಟೆಗಳು/ಓವರ್ ಕೋಟ್/ಕ್ಯಾಪ್ ಇತ್ಯಾದಿ)
೬. ಚರ್ಮದ ಶೂಗಳು/ಸಾಕ್ಸ್ (ಆಫೀಸಿಗಾಗಿ)
೭. ಸ್ಪೋರ್ಟ್ಸ್ ಶೂಗಳು/ಸಾಕ್ಸ್(ಮಹಿಳೆಯರು, ಪುರುಷರು ಯಾರೇ ಆಗಲಿ, ಮನೆಯಲ್ಲೇ ಇರಲಿ/ಆಫೀಸಿಗೆ ಹೋಗುತ್ತಿರಲಿ ಒಂದು ಜೊತೆ ಸ್ಪೊರ್ಟ್ಸ್ ಶೂಗಳು ಇರಲೇಬೇಕು.)
೮. ಚಪ್ಪಲಿಗಳು (೧ ಜೊತೆ)
೯. ನಿಮ್ಮ ಚಿಕ್ಕ ಮಕ್ಕಳ ಎಲ್ಲಾ ಬಟ್ಟೆ ಬರೆ (ಅಲ್ಲಿ ತುಂಬಾ ದುಬಾರಿ ಇರುತ್ತವೆ. ಯಾವುದನ್ನು ಬಿಟ್ಟು ಹೋಗಬೇದಿ. ಅಲ್ಲದೇ ಅಲ್ಲಿ ಸಿಗುವ ಬಟ್ಟೆ ಇಲ್ಲೇ ನಮ್ಮ ದೇಶದಿಂದಲೇ ರಫ್ತಾಗಿರುತ್ತವೆ..!)


ನಿಮ್ಮ ಒಟ್ಟು ಲಗ್ಗೇಜುಗಳು:
ನಾವು ಯಾವುದೇ ವೀಸಾದ ಮೂಲಕ ಪ್ರಯಾಣಿಸುತ್ತಿರಲಿ, ತಲಾ ಒಬ್ಬರಿಗೆ ೮ ಕೆ.ಜಿ. ಹ್ಯಾಂಡ್ ಬ್ಯಾಗೇಜ್ ಹಾಗೂ ೨೩ ಕೆ.ಜಿ.ಯ ೨ ದೊಡ್ಡ ಲಗ್ಗೇಜ್‍ಗಳಂತೆ (ಮುಖ್ಯ ಬ್ಯಾಗೇಜ್) ತೆಗೆದುಕೊಂಡು ಹೋಗಬಹುದು.ಆದರೆ ಹೊರಡುವ ಮುಂಚೆ ನೀವು ಪ್ರಯಾಣಿಸುತ್ತಿರುವ ವಿಮಾನದ ಮಾಹಿತಿ ಕೇಂದ್ರವನ್ನು ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ , ಅಥವಾ ಅವರ ವೆಬ್‍ಸೈಟ್‍ನ್ನು ನೋಡಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವದು ಒಳಿತು. ಹ್ಯಾಂಡ್ ಬ್ಯಾಗ್ಗೇಜ್ ಪ್ರಯಾಣದ ಸಮಯದಲ್ಲಿ ಯಾವಾಗಲೂ ನಿಮ್ಮ ಹತ್ತಿರವೇ ಇರುತ್ತದೆ. ಆದ್ದರಿಂದ ಅದರಲ್ಲಿ ನಿಮಗೆ ಬೇಕಾದ ಅತ್ಯಂತ ಅತ್ಯಗತ್ಯ ವಸ್ತುಗಳನ್ನು ಇಟ್ಟುಕೊಳ್ಳಿ.

ಅ.ಪಾಸ್‍ಪೋರ್ಟ್
ಆ.ಏರ್ ಟಿಕೇಟ್‍ಗಳು
ಇ. ಪೆನ್
ಈ.ನಿಮ್ಮ ಮುಖ್ಯ ದಾಖಲೆಗಳು, ಆಭರಣಗಳು
ಉ.ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್‍ಗಳ ಪಟ್ಟಿ
(ಈ ಪಟ್ಟಿಯಲ್ಲಿ ಅಮೇರಿಕೆಯಲ್ಲಿರುವ ನಿಮ್ಮ ಎಲ್ಲಾ ಪರಿಚಯದವರ ಹಾಗೂ ಮಿತ್ರರ ನಂಬರ್‍ಗಳನ್ನು ಬರೆದಿಟ್ಟುಕೊಳ್ಳಿ.)
ಊ. ಮೊಬೈಲ್ ಫೋನ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ)
ಋ. ಲ್ಯಾಪ್‍ಟಾಪ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ) ನಿಮ್ಮ ಹತ್ತಿರ ಇದಲ್ಲದೇ ಒಂದು ಚಿಕ್ಕ ಪಾಸ್‍ಪೋರ್ಟ್/ಹಣದ ಪೌಚ್ (ಪುರುಷರಿಗೆ) ಅಥವಾ ವ್ಯಾನಿಟಿ ಬ್ಯಾಗ್(ಮಹಿಳೆಯರಿಗೆ) ಇರಲಿ. ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಕೆಲವು ಏರ್‍ಲೈನ್ಸ್ ಸಂಸ್ಥೆಯವರು ಕ್ಯಾಬಿನಿನಲ್ಲಿ ಒಂದೇ ಬ್ಯಾಗ್‍ಗೆ ಅನುಮತಿ ಕೊಡುತ್ತಾರೆ. ಅಂಥ ಸಮಯದಲ್ಲಿ ಈ ಬ್ಯಾಗನ್ನು ಹ್ಯಾಂಡಬ್ಯಾಗಿನಲ್ಲೇ ಹಾಕಿ , ಒಂದೇ ಬ್ಯಾಗು ಅಂತಾ ತೋರಿಸಿ. ವಿಮಾನದ ಒಳಗೆ ಹತ್ತಿದ ನಂತರ ಈ ಪಾಸ್‍ಪೋರ್ಟ್/ಹಣದ ಪೌಚ್ ಅಥವಾ ವ್ಯಾನಿಟಿ ಬ್ಯಾಗ್‍ನ್ನು ನಿಮ್ಮ ಹತ್ತಿರವೇ ಯಾವಾಗಲೂ ಭದ್ರವಾಗಿ ಇಟ್ಟುಕೊಳ್ಳಿ. ಟಾಯಲೆಟ್‍ಗೆ ಹೋಗುವಾಗಲೂ ತೆಗೆದುಕೊಂಡೇ ಹೋಗಿ. ಮತ್ತು ನಿಮ್ಮ ಹ್ಯಾಂಡ್ ಬ್ಯಾಗೇಜ್‍ನ್ನು ನಿಮ್ಮ ಸೀಟಿನ ಮೇಲೆ ಇರುವ ಲಗ್ಗೇಜ್ ಬಾಕ್ಸಗಳಲ್ಲಿ ಇಡಿ. ಒಂದು ಬಾಕ್ಸನಲ್ಲಿ ಸುಮಾರು ೧೦ರಿಂದ ೧೨ ಕೆ.ಜಿ ಯ ಒಟ್ಟು ೪ ಬ್ಯಾಗೇಜಗಳನ್ನು ಇಡಬಹುದು.


ಲಗ್ಗೇಜ್ ಪ್ಯಾಕ್ ಮಾಡುವ ರೀತಿ:
ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸದ ಕಂಪ್ಯೂಟ‍ರ್ ಪ್ರಿಂಟ್‍ಔಟ್‍ಗಳ ೫-೬ ಕಾಪಿಗಳನ್ನು ತೆಗೆದುಕೊಂಡು, ಮುಖ್ಯ ಬ್ಯಾಗೇಜ್‍ನ ಎಲ್ಲ ಬ್ಯಾಗ್‍ಗಳ ಒಳಗಡೆ ಹಾಗು ಹೊರಗಡೆ ಅಂಟಿಸಿ.ಈ ತರಹ ಲೇಬಲ್‍ಗಳನ್ನು ಅಂಟಿಸುವದರಿಂದ ಮುಖ್ಯವಾಗಿ ನೀವು ಏರ್‍ಪೋರ್ಟ್‍ನಲ್ಲಿ ಇಳಿದ ನಂತರ ನಿಮ್ಮ ಲಗ್ಗೇಜ್ ಗುರ್ತಿಸುವಲ್ಲಿ ಸಹಾಯವಾಗುತ್ತದೆ. ಯಾಕೆಂದರೆ ಕೆಲವೊಂದು ಸಲ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಷ್ಟೋ ಪ್ರಯಾಣಿಕರ ಲಗ್ಗೇಜ್ ನೋಡಲು ಒಂದೇ ಬಣ್ಣದವು, ಸೈಜಿನವು ಇರುತ್ತವೆ. ಅಲ್ಲದೇ ನಿಮ್ಮ ಲಗ್ಗೇಜ್ ಅಲ್ಲಿಗೆ ತಲುಪಿರದೇ ಇದ್ದಲ್ಲಿ, ನಿಮ್ಮ ಏರ್‍ಲೈನ್ ಸಂಸ್ಥೆಗೆ ಅದನ್ನು ಬೇಗನೆ ಹುಡುಕಿ ನಿಮಗೆ ತಲುಪಿಸಲು ಸಹಾಯವಾಗುತ್ತದೆ.


(ಮುಂದುವರೆಯುತ್ತದೆ...)

No comments: