(ನಮ್ಮ ಅಮೇರಿಕಾ ಜೀವನದ ಮೇಲೊಂದು ಇಣುಕು ನೋಟ )
ನನ್ ಗಂಡ ಸವೀತಿದ್ದಾನೆ ಬ್ಯೂಟಿಫುಲ್ ಅಮೇರಿಕನ್ ಲೈಫು
ಜೊತೇಲ್ ಕಟ್ಕೊಂಡ್ ಏಗ್ತಿದ್ದಾನೆ ಒಂದು ಇಂಡಿಯನ್ ವೈಫು
ಮನೇಲೊಂದು ಕುಣೀತಿದೆ ಇಂಡಿಯನ್ ಅಮೇರಿಕನ್ ಕೂಸು
ಅವನ್ಗದಾಗಿದೆ ಆಟದ್ ಗೊಂಬೆ ಮುಗುದ್ ಮೇಲ್ ಆಫೀಸು
ದಿನಾ ಕೆಲ್ಸಕ್ ಹೋಗಿ ಹೋಗಿ ಸವೆಸ್ತಾನೆ ಕಾರಿನ್ ಟೈರು
ಕಂಪ್ಯೂಟರ್ ಮುಂದೆ ಕೂತು ಬೆಳಸ್ತಾನೆ ಕ್ಲೈಂಟಿನ ಪೈರು
ಬೆಳ್ದಿದ್ ಬೆಳೆ ಸರಿ ಇಲ್ದಿದ್ರೆ ಸಿಗೋದಿಲ್ಲ ಪಗಾರ
ಪಾಪ ಇವ್ನೂ ಮಾಡ್ಬೇಕಲ್ಲ ಹೆಂಡ್ತಿ ಮಕ್ಳ ಉದ್ಧಾರ
ಹಗ್ಲೂ ರಾತ್ರಿ ದುಡೀತಾನೆ ಗಾಣದ್ ಎತ್ತಿನ್ ಹಾಗೆ
ಬುದ್ಧಿ ಎಲ್ಲಾ ಖರ್ಚ್ ಮಾಡ್ತಾನೆ ಕುಡೀತಾ ಎಸಿ ಹೊಗೆ
ಹೀಗೇ ದಿನಾ ಕಳೀತಾನೆ ವೀಕೆಂಡನ್ನೇ ಕಾಯ್ತಾ
ಅದಕ್ಕಾಗೆ ಕಾಯ್ತಾ ಇರೋ ಎರ್ಡು ಜೀವಾನ ನೆನೀತಾ
ಇದೇ ಸ್ವರ್ಗ ಅನ್ಕೊಂಡ್ರೂನು ಒಂದೊಂದ್ ಸಲ ಇಣ್ಕುತ್ತೆ ದುಃಖ
ಆವಾಗೆಲ್ಲ ನೆನ್ಪಾಗುತ್ತೆ ಅಲ್ಲಿ ಅನುಭವಿಸಿದ್ ಸುಖ
ಮನಸ್ಸಿನ್ ತುಂಬಾ ಹರಿದಾಡ್ತಾವೆ ಅಲ್ಲಿರೋರ ಮುಖ
ಯಾಕೋ ಅನ್ಸಕ್ ಶುರುವಾಗುತ್ತೆ ಇಲ್ಲೂ ಇದೆ ನರಕ
ಯಾವತ್ತಿದ್ರೂ ಹೋಗ್ಲೇಬೇಕು ಈ ದೇಶಾನ ಬಿಟ್ಟು
ಇಲ್ಲಿರೋ ಸ್ವರ್ಗಾನ ಇಲ್ಲಿಯವ್ರಿಗೇ ಬಿಟ್ ಕೊಟ್ಟು
ಮುಗ್ಯೋ ತನ್ಕಾ ಇರ್ಲೇಬೇಕು ಇಲ್ಲಿಯ ಅನ್ನದ್ ಋಣ
ಆಮೇಲ್ ಹೋಗಿ ತೀರಿಸ್ಬೇಕು ಆ ತಾಯಿಯ ಋಣ